Sunday, September 8, 2024

ಯಾತ್ರೆಯಲ್ಲಿ ʻಡೂಪ್‌ʼ ಬಳಸುತ್ತಿದ್ದಾರಾ ರಾಹುಲ್‌ ಗಾಂಧಿ? ಅಸ್ಸಾಂ ಸಿಎಂ ಹೇಳಿದ್ದೇನು?

Most read

ಗುವಾಹಟಿ: ಭಾರತ್‌ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ತನ್ನನ್ನೇ ಹೋಲುವ ತದ್ರೂಪಿಯೊಬ್ಬನನ್ನು ಬಳಸುತ್ತಿದ್ದಾರೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಗಂಭೀರ ಆರೋಪ ಮಾಡಿದ್ದಾರೆ.

ಅಸ್ಸಾಂನಲ್ಲಿ ಸಾಗಿದ ಭಾರತ್‌ ಜೋಡೋ ನ್ಯಾಯ ಯಾತ್ರೆ ಸಂದರ್ಭದಲ್ಲಿ ತಮ್ಮ ವಾಹನದ ಮೇಲೆ ನಿಂತು ಕೈಬೀಸಿ ಸಾಗಿದ ವ್ಯಕ್ತಿ ರಾಹುಲ್‌ ಗಾಂಧಿಯಲ್ಲ, ಬದಲಾಗಿ ಅವರ ತದ್ರೂಪಿ. ಇದಕ್ಕೆ ತನ್ನ ಬಳಿ ಸಾಕ್ಷಿ ಇರುವುದಾಗಿ ಶರ್ಮಾ ಹೇಳಿದ್ದಾರೆ.

ನಾನು ಸುಮ್ಮನೆ ಇದನ್ನೆಲ್ಲ ಹೇಳುತ್ತಿಲ್ಲ. ಯಾತ್ರೆಯಲ್ಲಿ ಬಳಸಲಾಗುತ್ತಿರುವ ರಾಹುಲ್‌ ಗಾಂಧಿಯವರ ಡೂಪ್‌ ಯಾರು? ಅವರ ಹೆಸರೇನು? ಹೇಗೆ ಬಳಸಲಾಗುತ್ತಿದೆ ಎಲ್ಲ ವಿಷಯಗಳನ್ನು ಬಯಲಿಗೆಳೆಯುತ್ತೇನೆ. ಕೆಲವು ದಿನಗಳವರೆಗೆ ಕಾಯಿರಿ, ಎಲ್ಲ ವಿವರಗಳನ್ನು ನೀಡುತ್ತೇನೆ ಎಂದು ಅವರು ಹೇಳಿದ್ದಾರೆ.

ಭಾನುವಾರ ನಾನು ದಿಬ್ರುಗರ್‌ ನಲ್ಲಿರುತ್ತೇನೆ, ಸೋಮವಾರ ಗುವಾಹಟಿಗೆ ವಾಪಾಸ್‌ ಹೋಗುತ್ತೇನೆ. ನಂತರ ನಾನು ರಾಹುಲ್‌ ಗಾಂಧಿ ತದ್ರೂಪಿಯ ಕುರಿತು ಎಲ್ಲ ವಿವರಗಳನ್ನು ಹಂಚಿಕೊಳ್ಳುತ್ತೇನೆ ಎಂದು ಅವರು ಹೇಳಿದ್ದಾರೆ.

ಮಣಿಪುರದಿಂದ ಆರಂಭಗೊಂಡು ಮಹಾರಾಷ್ಟ್ರ ತಲುಪಲಿರುವ ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ನ್ಯಾಯ ಯಾತ್ರೆ ಜನವರಿ 18ರಿಂದ 25ರವರೆಗೆ ಅಸ್ಸಾಂನಲ್ಲಿ ಸಂಚರಿಸಿತ್ತು. ಈ ಸಂದರ್ಭದಲ್ಲಿ ಹಿಮಂತ ಬಿಸ್ವಾ ಶರ್ಮ ಕುರಿತು ಕಟುಟೀಕೆ ಮಾಡಿದ್ದ ರಾಹುಲ್‌ ಗಾಂಧಿ, ಅಸ್ಸಾಂ ಮುಖ್ಯಮಂತ್ರಿ ದೇಶದ ಅತ್ಯಂತ ಭ್ರಷ್ಟ ಮುಖ್ಯಮಂತ್ರಿ ಎಂದು ಬಣ್ಣಿಸಿದ್ದರು.

ಭಾರತ್‌ ಜೋಡೋ ನ್ಯಾಯ ಯಾತ್ರೆ ಅಸ್ಸಾಂನಲ್ಲಿ ಸಾಗುತ್ತಿದ್ದ ವೇಳೆ ಅಲ್ಲಿನ ಆಡಳಿತಾರೂಢ ಬಿಜೆಪಿ ಸರ್ಕಾರಕ್ಕೂ ಯಾತ್ರೆಯ ಸಂಘಟಕರಿಗೂ ನಡುವೆ ಜಟಾಪಟಿಗಳು ನಡೆದಿದ್ದವು. ರಾಹುಲ್‌ ಗಾಂಧಿ ಮತ್ತು ಸಂಘಟಕರ ವಿರುದ್ಧ ಎಫ್‌ಐಆರ್‌ ಗಳನ್ನು ಸಹ ದಾಖಲಿಸಲಾಗಿತ್ತು.

ಗುವಾಹಟಿಯನ್ನು ಯಾತ್ರೆ ಪ್ರವೇಶಿಸುವ ಸಂದರ್ಭದಲ್ಲಿ ಅಸ್ಸಾಂ ಪೊಲೀಸರು ತಡೆದಿದ್ದರು, ಈ ಸಂದರ್ಭದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಪೊಲೀಸರ ಬ್ಯಾರಿಕೇಡ್‌ ಗಳನ್ನು ಮುರಿದುಹಾಕಿದ್ದರು.

ರಾಹುಲ್‌ ಗಾಂಧಿಯವರನ್ನು ಈಗಲೇ ಬಂಧಿಸುವುದಿಲ್ಲ. ಲೋಕಸಭಾ ಚುನಾವಣೆಗಳವರೆಗೆ ಕಾಯುತ್ತೇನೆ ಎಂದು ಶರ್ಮಾ ಹೇಳಿದ್ದರು. ನನ್ನನ್ನು ಸೋಲಿಸಬೇಕೆಂದರೆ ಎಲ್ಲ ಗಾಂಧಿಗಳೂ ಇಲ್ಲಿಗೆ ಬರಬೇಕು, ಸೋನಿಯಾ, ರಾಹುಲ್‌, ಪ್ರಿಯಾಂಕ ಎಲ್ಲರೂ ಇಲ್ಲಿಗೆ ಬರಲಿ ಎಂದು ಶರ್ಮಾ ಪಂಥಾಹ್ವಾನ ನೀಡಿದ್ದರು.

More articles

Latest article