ಬೆಂಗಳೂರು: ನೂರಾರು ಹೆಣ್ಣುಮಕ್ಕಳೊಂದಿಗೆ ಲೈಂಗಿಕ ಚಟುವಟಿಕೆ ನಡೆಸಿ ಮೊಬೈಲ್ ನಲ್ಲಿ ರೆಕಾರ್ಡ್ ಮಾಡಿಕೊಂಡಿರುವ ಮತ್ತು ಹಲವು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣದಲ್ಲಿ ಆರೋಪಿಯಾಗಿರುವ ಸಂಸದ ಪ್ರಜ್ವಲ್ ರೇವಣ್ಣ ಮೇ.5 ಅಥವಾ 6ಕ್ಕೆ ಭಾರತಕ್ಕೆ ವಾಪಾಸಾಗಲಿದ್ದಾನೆ ಎಂದು ತಿಳಿದುಬಂದಿದೆ.
ಪ್ರಕರಣ ದಾಖಲಾಗುವ ವಿಷಯ ಗೊತ್ತಾಗುತ್ತಿದ್ದಂತೆ ಪ್ರಜ್ವಲ್ ರೇವಣ್ಣ ಜರ್ಮನಿಗೆ ಹೋಗಿದ್ದು, ಆತನನ್ನು ಕರೆಸಿಕೊಂಡು ಕಾನೂನು ಪ್ರಕ್ರಿಯೆಗೆ ಒಳಪಡಿಸಲು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರ ಕುಟುಂಬ ಸಲಹೆ ನೀಡಿದೆ ಎಂದು ತಿಳಿದುಬಂದಿದೆ.
ಈ ಸಂಬಂಧ ಇಂದು ಸಂಜೆ ಮಗನ ಜೊತೆ ಮಾತನಾಡೋದಾಗಿ ಮಾಜಿ ಸಚಿವ ಎಚ್ ಡಿ ರೇವಣ್ಣ ಹೇಳಿಕೆ ನೀಡಿದ್ದಾರೆ. ಗಂಡಾಂತರದಿಂದ ಪಾರಾಗಲು ಸಚಿವ ರೇವಣ್ಣ ಪೂಜೆ ಪುನಸ್ಕಾರದ ಮೊರೆ ಹೋಗಿದ್ದು, ಮನೆಯಲ್ಲಿಯೇ ಹೋಮಕುಂಡ ನಿರ್ಮಿಸಿ ಪೂಜೆಯಲ್ಲಿ ತೊಡಗಿದ್ದಾರೆ. ಬೆಳಿಗ್ಗೆಯಿಂದಲೇ ದೇವಸ್ಥಾನದಿಂದ ದೇವಸ್ಥಾನಕ್ಕೆ ಓಡಾಡಿದ ರೇವಣ್ಣ ಮನೆದೇವರು ದೇವೇಶ್ವರ, ಮಾವಿನಕೆರೆ ಬೆಟ್ಟದ ರಂಗನಾಥಸ್ವಾಮಿ, ಹೊಳೆನರಸೀಪುರದ ಲಕ್ಷ್ಮೀ ನರಸಿಂಹಸ್ವಾಮಿಗೆ ಪೂಜೆ ಸಲ್ಲಿಸಿದರು.
ಪ್ರಜ್ವಲ್ ರೇವಣ್ಣ ಒಂದು ವೇಳೆ ವಿಚಾರಣೆಗೆ ಬರದಿದ್ದರೆ ಕಾನೂನು ತಜ್ಞರ ಅಭಿಪ್ರಾಯ ಸಂಗ್ರಹಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು, ಆತನನ್ನು ವಿದೇಶದಿಂದ ಕರೆತರುವ ಬಗ್ಗೆ SIT ಪರಿಶೀಲನೆ ನಡೆಸಲಿದೆ ಎಂದು ಗೃಹಸಚಿವ ಜಿ.ಪರಮೇಶ್ವರ್ ಇಂದು ಹೇಳಿದ್ದಾರೆ.
ಈ ನಡುವೆ ಪ್ರಜ್ವಲ್ ರೇವಣ್ಣ ಪ್ರಕರಣ ಸಂಬಂಧ ಪ್ರತಿಕ್ರಿಯಿಸಿರುವ ಕೇಂದ್ರ ಸಂಸದೀಯ ಖಾತೆ ಸಚಿವ ಪ್ರಹ್ಲಾದ ಜೋಷಿ, ಆತ ವಿದೇಶಕ್ಕೆ ಹೋಗೋವರೆಗೂ ಕತ್ತೆ ಕಾಯುತ್ತಿದ್ರಾ? ಎಂದು ರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದಿದ್ದಾರೆ. ಈ ಘಟನೆಯನ್ನು ಕಠಿಣ ಶಬ್ದಗಳಿಂದ ಖಂಡಿಸುತ್ತೇನೆ. ಬಿಜೆಪಿ- ಜೆಡಿಎಸ್ ಮೈತ್ರಿ ಆದ್ಮೇಲೆ ಈ ಘಟನೆ ನಡೆದಿಲ್ಲ. ಕಳೆದ 1 ವರ್ಷದಲ್ಲಿ ಈ ಪ್ರಕರಣ ಆಗಿದೆ ಅನಿಸಲ್ಲ. ಟಿಕೆಟ್ ಕೊಡುವ ಮುನ್ನ ಆರೋಪಗಳು ಬರುವುದು ಸಹಜ ಎಂದು ಅವರು ಹೇಳಿದ್ದಾರೆ.
SIT ವಿಚಾರಣೆಗೆ ಹಾಜರಾಗುವಂತೆ ಪ್ರಜ್ವಲ್ ಮತ್ತು ರೇವಣ್ಣ ಅವರಿಗೆ ನೋಟೀಸ್ ನೀಡಿದ ಬೆನ್ನಲ್ಲೇ, ವಕೀಲರನ್ನು ಸಂಪರ್ಕಿಸಿರುವ ರೇವಣ್ಣ ತಮ್ಮ ಮೇಲಿನ ಪ್ರಕರಣ ರದ್ದುಪಡಿಸಲು ಕೋರಿ ಅರ್ಜಿ ಸಲ್ಲಿಸುವ ಸಾಧ್ಯತೆ ಇದೆ.
ಏತನ್ಮಧ್ಯೆ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಬಿಡುಗಡೆ ಹಿಂದೆ ಡಿ.ಕೆ.ಶಿವಕುಮಾರ್ ಪಾತ್ರವಿದೆ ಎಂಬ ಕುಮಾರಸ್ವಾಮಿಯವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ಸಂಸದ ಡಿ.ಕೆ.ಸುರೇಶ್, ಅವರಿಗೆ ಡಿ.ಕೆ.ಶಿವಕುಮಾರ್ ಹೆಸರು ಹೇಳದೇ ಇದ್ದರೆ ತಿಂದ ಊಟ ಕರಗಲ್ಲ, ನಿದ್ದೆನೂ ಬರಲ್ಲ, ಊಟನೂ ಸೇರಲ್ಲ ಎಂದು ಲೇವಡಿ ಮಾಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರಿಗೂ ಇದಕ್ಕೆ ಏನು ಸಂಬಂಧ ಎಂದ ಅವರು, ತಮ್ಮ ಮೇಲೆ ಬಂದಿರುವ ಆರೋಪಗಳಿಂದ ನುಣುಚಿಕೊಳ್ಳಲು ಅವರು ಕಂಡಕಂಡವರ ಹೆಸರು ಎಳೆದು ತರುತ್ತಿದ್ದಾರೆ ಎಂದರು.