ದೇಶದ ಮೂಲೆಮೂಲೆಗಳಲ್ಲಿ ನಿತ್ಯ ನಡೆಯುತ್ತಿರುವ ಹತ್ಯೆಗಳಲ್ಲಿ ಮೋದಿಯವರು ನೇಹಾ ಹತ್ಯೆಯನ್ನೇ ಯಾಕೆ ಎತ್ತಿ ಮಾತಾಡಿದರು? ಮೋದಿ ಸರ್ಕಾರದ ಅಡಿಯಲ್ಲೇ ಕಾರ್ಯನಿರ್ವಹಿಸುವ ರಾಷ್ಟ್ರೀಯ ಕ್ರೈಂ ರೆಕಾರ್ಡ್ಸ್ ಬ್ಯೂರೋ ( NCRB ) ನೀಡಿದ ಅಂಕಿಅಂಶದ ಪ್ರಕಾರ 2022ರಲ್ಲಿ ಭಾರತದಲ್ಲಿ ಮಹಿಳೆಯರ ಮೇಲಿನ ದೌರ್ಜನ್ಯಗಳಿಗೆ ಸಂಬಂಧಿಸಿದಂತೆ ಒಟ್ಟು 4.45 ಲಕ್ಷ ಪ್ರಕರಣಗಳು ವರದಿಯಾಗಿವೆ. ಪ್ರತಿ ಗಂಟೆಗೆ 51 ಎಫ್ ಐ ಆರ್ ಗಳು ದಾಖಲಾಗಿವೆ. 4.45 ಲಕ್ಷ ಪ್ರಕರಣಗಳಲ್ಲಿ ಮೊದಲನೇ ಸ್ಥಾನದಲ್ಲಿರುವ ರಾಜ್ಯ ಯೋಗಿ ಆದಿತ್ಯನಾಥ್ ಆಡಳಿತದಲ್ಲಿರುವ, ಭಾರತೀಯ ಜನತಾ ಪಕ್ಷದ ಸರ್ಕಾರವಿರುವ ಉತ್ತರಪ್ರದೇಶ. ಕೇವಲ ಇದೊಂದೇ ರಾಜ್ಯದಲ್ಲಿ 65,743 ಪ್ರಕರಣಗಳು ಒಂದೇ ವರ್ಷದಲ್ಲಿ ದಾಖಲಾಗಿವೆ. ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ಸಂಬಂಧಿಸಿದಂತೆ ಉತ್ತರ ಪ್ರದೇಶದ ಬೆನ್ನ ಹಿಂದೆಯೇ ಇರುವ ರಾಜ್ಯಗಳು ಮಹಾರಾಷ್ಟ್ರ (45,331), ರಾಜಸ್ತಾನ (45,058), ಪಶ್ಚಿಮ ಬಂಗಾಳ (34,738), ಮಧ್ಯಪ್ರದೇಶ (32,765). ಈ ಪೈಕಿ ಪಶ್ಚಿಮ ಬಂಗಾಳ ಬಿಟ್ಟರೆ ಉಳಿದೆಲ್ಲ ಕಡೆ ಇರುವುದು ಮೋದಿಯವರ ಬಿಜೆಪಿ ಸರ್ಕಾರವೇ.
ಇಷ್ಟೆಲ್ಲ ಇಟ್ಟುಕೊಂಡು ನರೇಂದ್ರ ಮೋದಿ ಯಾವ ಧೈರ್ಯದಲ್ಲಿ ಕರ್ನಾಟಕದಲ್ಲಿ ಮಾತ್ರ ನಮ್ಮ ಹೆಣ್ಣುಮಕ್ಕಳ ಮೇಲೆ ಹಲ್ಲೆಗಳಾಗುತ್ತಿವೆ ಎಂದು ಮಾತನಾಡುತ್ತಾರೆ? ADR (Association for Democratic Reforms) ಸಂಸ್ಥೆ ನಡೆಸಿದ ಅಧ್ಯಯನದ ಪ್ರಕಾರ ಲೋಕಸಭಾ ಸದಸ್ಯರು ಮತ್ತು ವಿಧಾನಸಭಾ ಸದಸ್ಯರುಗಳ ಪೈಕಿ ಶೇ. 33ರಷ್ಟು ಮಂದಿ ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಅವರಲ್ಲಿ 48 ಮಂದಿ ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಇದರಲ್ಲಿ ಶೇ. 25ರಷ್ಟು ಸಿಂಹಪಾಲು ಬಿಜೆಪಿಯದ್ದು. 12 ಮಂದಿ ಬಿಜೆಪಿಯ ಜನಪ್ರತಿನಿಧಿಗಳು ಹೆಣ್ಣುಮಕ್ಕಳ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ಹೀಗಿರುವಾಗ ಯಾವ ಬಾಯಿಯಲ್ಲಿ ಅವರು ಹೆಣ್ಣುಮಕ್ಕಳ ಸುರಕ್ಷತೆಯ ಬಗ್ಗೆ ಮಾತನಾಡುತ್ತಾರೆ?
ಕೇಂದ್ರ ಗೃಹ ಸಚಿವಾಲಯ ರಾಜ್ಯಸಭೆಯಲ್ಲಿ ನೀಡಿದ ಮಾಹಿತಿಯಂತೆ 2019-20ರ ಅವಧಿಯಲ್ಲಿ ದೇಶದಲ್ಲಿ ಕಾಣೆಯಾದ ಬಾಲಕಿಯರು ಮತ್ತು ಮಹಿಳೆಯರ ಸಂಖ್ಯೆ 13 ಲಕ್ಷ! ಅದಾದ ನಂತರದ ವರ್ಷಗಳ ದಾಖಲೆಗಳನ್ನು ಸರ್ಕಾರ ಇನ್ನೂ ಬಿಡುಗಡೆ ಮಾಡಿಲ್ಲ. ಮೋದಿ ಯಾವತ್ತಾದರೂ ಈ ಕಾಣೆಯಾದ ಹೆಣ್ಣುಮಕ್ಕಳ ಕುರಿತು ಧ್ವನಿ ಎತ್ತಿ ಮಾತನಾಡಿದ್ದಾರೆಯೇ?
ಇನ್ನೂ ಒಂದು ಅಂಕಿ-ಅಂಶವನ್ನು ಗಮನಿಸೋಣ. ರಾಷ್ಟ್ರೀಯ ಮಹಿಳಾ ಆಯೋಗಕ್ಕೆ 2023ರಲ್ಲಿ ಬಂದ ದೂರುಗಳ ಸಂಖ್ಯೆ ಒಟ್ಟು 28,811. ಇದರಲ್ಲಿ ಸಿಂಹಪಾಲು ಮತ್ತದೇ ಯೋಗಿ ಆದಿತ್ಯನಾಥ್ ಆಡಳಿತದ ಬಿಜೆಪಿ ಸರ್ಕಾರವಿರುವ ಉತ್ತರಪ್ರದೇಶಕ್ಕೆ ಸಲ್ಲುತ್ತದೆ. ಶೇ. 55 ರಷ್ಟು ದೂರುಗಳು ಉತ್ತರಪ್ರದೇಶದಿಂದಲೇ ಬಂದಿವೆ. ಇದರಲ್ಲಿ ಅತ್ಯಾಚಾರದ ಪ್ರಕರಣಗಳು 1618 ಆದರೆ ಅತ್ಯಾಚಾರ ಯತ್ನದ ದೂರುಗಳು 1537. ಮೋದಿ ಇದರ ಕುರಿತು ಯಾಕೆ ಮಾತನಾಡುವುದಿಲ್ಲ. ಉತ್ತರ ಪ್ರದೇಶ ಹೆಣ್ಣುಮಕ್ಕಳ ಪಾಲಿಗೆ ನರಕ ಆಗಿದೆ ಎಂದು ಯಾಕೆ ಯಾವತ್ತೂ ಅವರು ಹೇಳುವುದಿಲ್ಲ?
ಅನೇಕ ಅಂತಾರಾಷ್ಟ್ರೀಯ ಸ್ಪರ್ಧಾ ಕೂಟಗಳಲ್ಲಿ ದೇಶವನ್ನು ಪ್ರತಿನಿಧಿಸಿ ಪದಕಗಳನ್ನು ತಂದು ಹೆಮ್ಮೆ ಮೂಡಿಸಿದ ಮಹಿಳಾ ಕುಸ್ತಿಪಟುಗಳನ್ನು ಇದೇ ಮೋದಿ ಸರ್ಕಾರ ಹೇಗೆ ನಡೆಸಿಕೊಂಡಿತು ಎಂಬುದನ್ನು ದೇಶದ ಜನತೆ ನೋಡಿದ್ದಾರೆ. ಒಬ್ಬ ಕಾಮುಕ ವ್ಯಾಘ್ರನ ಕೈಗೆ ಕುಸ್ತಿ ಫೆಡರೇಷನ್ ಕೊಟ್ಟು ಮಹಿಳೆಯರ ಬೇಟೆಯಾಡಲು ಅವಕಾಶ ಕೊಟ್ಟಿದ್ದು ಯಾರು ಎಂಬುದನ್ನು ದೇಶ ಮರೆಯಲು ಸಾಧ್ಯವೇ? ಗುಜರಾತ್ ನಲ್ಲಿ ಹೆಣ್ಣುಮಕ್ಕಳನ್ನು ಸಾಮೂಹಿಕ ಅತ್ಯಾಚಾರ ಮಾಡಿ, ಅವರ ಮಕ್ಕಳನ್ನೂ ಕೊಂದು ಹೂಂಕರಿಸಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಪಾತಕಿಗಳ ಬಿಡುಗಡೆ ಮಾಡಿದ್ದು ಯಾರು? ಇದೇ ಮೋದಿ ರಾಜ್ಯ ಗುಜರಾತ್ ನ ಬಿಜೆಪಿ ಸರ್ಕಾರವಲ್ಲವೇ? ಬಿಡುಗಡೆಯಾದ ಈ ರೇಪಿಸ್ಟ್ ಗಳನ್ನು ಹಾರ ಹಾಕಿ ಸ್ವಾಗತಿಸಿದ್ದು ಇದೇ ಬಿಜೆಪಿ ನಾಯಕರುಗಳಲ್ಲವೇ? ಕೋರ್ಟು ಮಧ್ಯೆ ಪ್ರವೇಶಿಸದೇ ಹೋಗಿದ್ದಲ್ಲಿ ಈ ಪಾಪಿಗಳೆಲ್ಲ ಜೈಲಿನಿಂದ ಹೊರಗೇ ಇರುತ್ತಿದ್ದರು ಎಂಬುದನ್ನು ಮೋದಿ ಮರೆತುಹೋದರೆ? ಇದೇ ರೀತಿ ದೇಶದ ಹಲವೆಡೆ ಬಿಜೆಪಿ ಮುಖಂಡರು, ಶಾಸಕರುಗಳು ಕೊಲೆ, ರೇಪ್ ಕೇಸುಗಳಲ್ಲಿ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾದಾಗ ಹಾರ ಹಾಕಿ ಸ್ವಾಗತ ಮಾಡಿ ಮೆರವಣಿಗೆ ಮಾಡಿದ್ದು ಯಾರು? ಇದೆಲ್ಲವನ್ನೂ ಮೋದಿಯವರಿಗೆ ನೆನಪಿಸಬೇಕೆ?
ಮಣಿಪುರದಲ್ಲಿ ಏನಾಗುತ್ತಿದೆ? ಯಾರು ಇದಕ್ಕೆ ಹೊಣೆ? ʻʻಮೋದಿಜಿ ದಯವಿಟ್ಟು ಮಣಿಪುರಕ್ಕೆ ಬನ್ನಿ, ನಮ್ಮ ಜೀವಗಳನ್ನು ರಕ್ಷಿಸಿʼʼ ಎಂದು ಅಲ್ಲಿನ ಹೆಣ್ಣುಮಕ್ಕಳು ಮೊರೆ ಇಟ್ಟರೂ ಅದು ಮೋದಿಯವರ ಕಿವಿಗಳಿಗೆ ಕೇಳಿಸಲೇ ಇಲ್ಲ. ಇಬ್ಬರು ಮಣಿಪುರಿ ಹೆಣ್ಣುಮಕ್ಕಳನ್ನು ಸಂಪೂರ್ಣ ಬೆತ್ತಲುಗೊಳಿಸಿ, ಬೀದಿಯಲ್ಲಿ ಓಡಾಡಿಸಿ ಅವರ ಮೇಲೆ ಲೈಂಗಿಕ ದೌರ್ಜನ್ಯಗಳನ್ನು ಎಸಗಲಾಯಿತು. ಮಣಿಪುರ ಸರ್ಕಾರ ಒಂದು ಎಫ್ ಐ ಆರ್ ಕೂಡ ದಾಖಲಿಸಿರಲಿಲ್ಲ. ಈ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ನಂತರ, ಘಟನೆ ನಡೆದ ಹದಿನೈದು ದಿನಗಳ ನಂತರ ಎಫ್ ಐ ಆರ್ ದಾಖಲಿಸಲಾಯಿತು. ಮಣಿಪುರದಲ್ಲಿ ಯಾವ ಸರ್ಕಾರವಿದೆ? ಇದೇ ನರೇಂದ್ರ ಮೋದಿಯವರ ಬಿಜೆಪಿ ಸರ್ಕಾರವಲ್ಲವೇ? ನಮ್ಮ ಹೆಣ್ಣುಮಕ್ಕಳನ್ನು ನಡುರಸ್ತೆಯಲ್ಲಿ ಬೆತ್ತಲುಗೊಳಿಸಿ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಆಗ ಯಾಕೆ ಇದೇ ನರೇಂದ್ರ ಮೋದಿ ಹೇಳಲಿಲ್ಲ?
ನರೇಂದ್ರ ಮೋದಿಯವರಿಗೆ ಭಾಷಣ ಬರೆದುಕೊಟ್ಟವರು ಉದ್ದೇಶಪೂರ್ವಕವಾಗಿ ರುಕ್ಸಾನಾ ಹತ್ಯೆ ವಿಷಯವನ್ನು ಸೇರಿಸಲಿಲ್ಲ. ರುಕ್ಸಾನಾ ಎಂಬ ಇಪ್ಪತ್ತೊಂದು ವರ್ಷದ ಹೆಣ್ಣುಮಗಳನ್ನು ದೈಹಿಕವಾಗಿ ಬಳಸಿಕೊಂಡ ಪ್ರದೀಪ್ ಎಂಬ ನೀಚ ಆಕೆಯನ್ನು ತುಮಕೂರಿನಲ್ಲಿ ಕೊಂದು ಸುಟ್ಟು ಹಾಕಿ, ಆಕೆಯ ಮಗುವನ್ನು ತಳ್ಳುಗಾಡಿಯೊಂದರಲ್ಲಿ ಇಟ್ಟು ಹೋಗಿದ್ದ. ನೇಹಾ ಪ್ರಕರಣದಷ್ಟೇ ಬರ್ಬರವಾದ ಘಟನೆ ಇದು. ಮೋದಿಯವರಿಗೆ ನಿಜವಾಗಿಯೂ ಹೆಣ್ಣುಮಕ್ಕಳ ಕುರಿತು ಕಾಳಜಿಯಿದ್ದರೆ ಈ ಘಟನೆಯನ್ನೂ ಪ್ರಸ್ತಾಪಿಸ ಬೇಕಿತ್ತಲ್ಲವೇ? ರುಕ್ಸಾನಾಗೆ ನ್ಯಾಯ ಸಿಗಬೇಕು ಎಂದು ಹೇಳಬೇಕಿತ್ತಲ್ಲವೇ? ಅವರು ಹಾಗೆ ಹೇಳುವುದಿಲ್ಲ, ರುಕ್ಸಾನಾ ಹೆಸರು ಹೇಳಿದರೆ ಅವರಿಗೆ ಓಟು ಗಿಟ್ಟುವುದಿಲ್ಲ. ಓಟು ಗಿಟ್ಟುವುರಲಿ, ಇರುವ ಓಟುಗಳೂ ಉಳಿದುಕೊಳ್ಳುವುದಿಲ್ಲ. ಅದಕ್ಕಾಗಿ ಅವರು ಸೆಲೆಕ್ಟಿವ್ ಆಗಿಯೇ ಮಾತನಾಡುತ್ತಾರೆ. ಇದು ಆತ್ಮವಂಚನೆಯಲ್ಲವೇ ಮೋದಿಯವರೇ?
ನರೇಂದ್ರ ಮೋದಿ ಚುನಾವಣೆಗಳ ಸಂದರ್ಭದಲ್ಲಿ ಹಲವಾರು ಬಾರಿ ಕರ್ನಾಟಕಕ್ಕೆ ಬರುತ್ತಾರೆ. ಕಳೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಯಾವ ಸ್ಥಳೀಯ ನಾಯಕನೂ ಮಾಡದಷ್ಟು ಪ್ರಚಾರವನ್ನು ನರೇಂದ್ರ ಮೋದಿ ಕರ್ನಾಟಕದಲ್ಲಿ ಮಾಡಿದರು. ಸಣ್ಣಸಣ್ಣ ಪಟ್ಟಣಗಳನ್ನು ಬಿಡದೆ ಬೀದಿ ಬೀದಿ ಸುತ್ತಿದರು. ಆದರೆ ಅವರ ದುರದೃಷ್ಟಕ್ಕೆ ಮೋದಿ ಪ್ರಚಾರಕ್ಕೆ ಹೋದ ಬಹುತೇಕ ಕಡೆಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಸೋತು ಹೋದರು. ಈ ಬಾರಿಯೂ ಮೋದಿ ಕರ್ನಾಟಕಕ್ಕೆ ಮೇಲಿಂದ ಮೇಲೆ ಬರುತ್ತಿದ್ದಾರೆ. ಮೊದಲಿನ ವರ್ಚಸ್ಸು ಈಗ ಕಾಣುತ್ತಿಲ್ಲ. ಆ ಆತ್ಮವಿಶ್ವಾಸವೂ ಕಾಣುತ್ತಿಲ್ಲ.
ಮೋದಿಯ ಒಂದು ಭಾಷಣ ಹಿಡಿದುಕೊಂಡು ಬಿಜೆಪಿ ಥಿಂಕ್ ಟ್ಯಾಂಕ್ ಮತ್ತು ಅವರ ಪರವಾದ ಮೀಡಿಯಾಗಳು ಒಂದೊಂದು ನರೇಟಿವ್ ಸೃಷ್ಟಿಸುವುದರಲ್ಲಿ ಯಶಸ್ವಿಯಾಗುತ್ತಿದ್ದ ಕಾಲವೊಂದಿತ್ತು. ಆದರೆ ಮೋದಿಯವರ ಭಾಷಣವೂ ಸಾರ ಕಳೆದುಕೊಂಡಿದೆ. ಹತ್ತು ವರ್ಷಗಳಲ್ಲಿ ಏನನ್ನು ಮಾಡಿದ್ದೇವೆ ಎಂದು ಹೇಳಿಕೊಳ್ಳಲು ಅವರಿಂದ ಆಗುತ್ತಿಲ್ಲ. ಮುಂದೇನು ಮಾಡುತ್ತೇವೆ ಎಂದು ಹೇಳುವ ಶಕ್ತಿಯೂ ಅವರಲ್ಲಿ ಉಳಿದು ಕೊಂಡಂತಿಲ್ಲ. ಮೋದಿ ಹತಾಶರಾದಂತೆ ಕಾಣುತ್ತಿದ್ದಾರೆ, NCRB ಅಧ್ಯಯನದ ಪ್ರಕಾರವೇ ದಿನಕ್ಕೆ 82 ಕೊಲೆಗಳು ದೇಶದಲ್ಲಿ ನಡೆಯುತ್ತವೆ. ಅದರಲ್ಲಿ ಒಂದು ಕೊಲೆಯನ್ನು ಇಟ್ಟುಕೊಂಡು ಮೋದಿ ಮಾತನಾಡುತ್ತಿದ್ದಾರೆ. ಸೋಲಿನ ಭೀತಿಯ ಹತಾಶೆ ಅವರನ್ನು ಹೀಗೆ ಮಾತಾಡಿಸುತ್ತಿದೆಯೇ?
ಲೋಕಸಭಾ ಚುನಾವಣೆ ಪ್ರಚಾರ ಆರಂಭವಾಗುತ್ತಿದ್ದಂತೆ ನರೇಂದ್ರ ಮೋದಿ ಈ ಬಾರಿ 400 ಕ್ಕೂ ಹೆಚ್ಚು ಸ್ಥಾನ ಗೆಲ್ಲುವುದು ನಮ್ಮ ಗುರಿ ಎಂದರು. ಆದರೆ ಮೊದಲ ಹಂತದ ಚುನಾವಣೆ ನಡೆದ ಮೇಲೆ ಈ ಆತ್ಮವಿಶ್ವಾಸ ಕುಸಿದುಹೋದಂತೆ ಕಾಣುತ್ತಿದೆ. ಬಿಜೆಪಿ ಸಿಕ್ಕಾಪಟ್ಟೆ ನೆಚ್ಚಿಕೊಂಡಿರುವ ಉತ್ತರ ಪ್ರದೇಶ, ರಾಜಸ್ತಾನ, ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲೂ ಈ ಬಾರಿ ಅವರಿಗೆ ಅನುಕೂಲಕರ ಸನ್ನಿವೇಶವಿಲ್ಲ. ಅತ್ಯಂತ ಕರಾರುವಕ್ಕಾದ ಮತಗಟ್ಟೆ ಸಮೀಕ್ಷೆ ನಡೆಸುವ ಖ್ಯಾತಿ ಹೊಂದಿರುವ ಆಕ್ಸಿಸ್ – ಮೈ ಇಂಡಿಯಾದ ಪ್ರದೀಪ್ ಗುಪ್ತ ಬಿಜೆಪಿ ಹದಿಮೂರು ರಾಜ್ಯಗಳಲ್ಲಿ ತನ್ನ ಹಿಡಿತ ಕಳೆದುಕೊಂಡಿದೆ ಎಂದು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದರು. ನಂತರ ಅವರ ಮೇಲೆ ಒತ್ತಡ ಹೇರಿ ಅದನ್ನು ಡಿಲೀಟ್ ಮಾಡಿಸಲಾಯಿತು.
ದೇಶದಲ್ಲಿ ಮೋದಿ ಅಲೆ ಇಲ್ಲ ಎಂದು ವಿರೋಧಪಕ್ಷಗಳು ಹೇಳುವುದು ಸಾಮಾನ್ಯದ ವಿಷಯ. ಆದರೆ ಈ ಬಾರಿ ಬಿಜೆಪಿ ಅಭ್ಯರ್ಥಿಗಳೇ ಬಹಿರಂಗವಾಗಿ ಆ ಮಾತನ್ನು ಹೇಳುತ್ತಿದ್ದಾರೆ. 2014, 2019ರ ಚುನಾವಣೆಗಳ ಸಂದರ್ಭದಲ್ಲಿ ನರೇಂದ್ರ ಮೋದಿಯವರನ್ನು ಬುದ್ಧಿಜೀವಿಗಳು, ಸಾಹಿತಿಗಳು ವಿರೋಧಿಸುತ್ತಿದ್ದರು. ಈಗ ಸಾಮಾನ್ಯ ಜನರೂ ಟೀಕಿಸಲು ಆರಂಭಿಸಿದ್ದಾರೆ. ದೇಶದಲ್ಲಿ ಹೆಚ್ಚಿರುವ ನಿರುದ್ಯೋಗ ಸಮಸ್ಯೆ, ಬೆಲೆ ಏರಿಕೆಯನ್ನು ಮುಂದಿಟ್ಟುಕೊಂಡು ಮೋದಿ ಮಾಡಿದ್ದೇನು ಎಂದು ಪ್ರಶ್ನಿಸುತ್ತಿದ್ದಾರೆ.
ರಾಮಮಂದಿರದ ಹೆಸರಲ್ಲಿ ಈ ಬಾರಿ ಚುನಾವಣೆ ಗೆದ್ದುಬಿಡಬಹುದು ಎಂದು ಬಿಜೆಪಿ-ಸಂಘ ಪರಿವಾರದ ಥಿಂಕ್ ಟ್ಯಾಂಕ್ ಭಾವಿಸಿತ್ತು. ಇದಕ್ಕಾಗಿ ಚುನಾವಣೆ ಹತ್ತಿರವಾದ ಸಂದರ್ಭದಲ್ಲಿ ಇನ್ನೂ ಅರ್ಧದಷ್ಟು ಕೂಡ ಸಿದ್ಧವಾಗದ ರಾಮಮಂದಿರವನ್ನು ಮೋದಿ ಉದ್ಘಾಟಿಸಿದರು. ಆದರೆ ಈ ಯೋಜನೆ ತಲೆಕೆಳಕಾಗಿ ಬಿದ್ದಿದೆ. ರಾಮಮಂದಿರ ಆಗಿದ್ದೇನೋ ಒಳ್ಳೆಯದು, ಆದರೆ ಅದರಿಂದ ನಮ್ಮ ಹೊಟ್ಟೆ ತುಂಬುತ್ತದೆಯೇ ಎಂದು ಜನಸಾಮಾನ್ಯರು ಪ್ರಶ್ನಿಸುತ್ತಿದ್ದಾರೆ.
ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಲು ಉತ್ತರದ ರಾಜ್ಯಗಳಲ್ಲಿ ತಮ್ಮ ಹಿಡಿತವನ್ನು ಗಟ್ಟಿಗೊಳಿಸಿಕೊಂಡು, ದಕ್ಷಿಣದ ರಾಜ್ಯದಲ್ಲಿ ಗಣನೀಯ ಸಾಧನೆ ಮಾಡಬೇಕಾಗಿತ್ತು. ಆದರೆ ಅವರ ದುರದೃಷ್ಟಕ್ಕೆ ದಕ್ಷಿಣದ ರಾಜ್ಯಗಳಲ್ಲಿ ಮೋದಿ ವಿರೋಧಿ ಅಲೆಗೆ ಬಿಜೆಪಿ ತರಗೆಲೆಯಂತೆ ಕೊಚ್ಚಿ ಹೋಗುತ್ತಿದ್ದರೆ, ಉತ್ತರದ ರಾಜ್ಯಗಳಲ್ಲಿ ದಿನೇದಿನೇ ತನ್ನ ಹಿಡಿತವನ್ನು ಕಳೆದುಕೊಳ್ಳುತ್ತಿದೆ. ಇದು ಮೋದಿಯವರ ಭಾಷಣ, ಹಾವಭಾವಗಳಲ್ಲಿ ಪ್ರತಿಧ್ವನಿಸುತ್ತಿದೆ. ಹೀಗಾಗಿಯೇ ದೇಶದ ಪ್ರಧಾನಿಯಂಥ ಉನ್ನತ ಸ್ಥಾನದಲ್ಲಿರುವ ಅವರು ಒಂದು ಹೆಣ್ಣುಮಗಳ ಕೊಲೆಯನ್ನು ರಾಜಕೀಯಕ್ಕೆ ಎಳೆತಂದು ಮಾತನಾಡುವ ಕೀಳುಮಟ್ಟಕ್ಕೆ ಇಳಿದಿದ್ದಾರೆ.
ದಿನೇಶ್ ಕುಮಾರ್ ಎಸ್.ಸಿ