ಹರೇನ್ ಪಾಂಡ್ಯರವರ ಹತ್ಯೆಗಾಗಿ ನಿಜವಾಗಿ ಸಂಚು ರೂಪಿಸಿದವರು ಯಾರು? ಪಾಂಡ್ಯರವರು ಗುಜರಾತ್ ನರಹತ್ಯೆ ಬಹಿರಂಗಪಡಿಸಿದ್ದಕ್ಕಾಗಿ ನಡೆದ ಪೂರ್ವಯೋಜಿತ ಹತ್ಯೆಯೇ ಎಂಬುದಕ್ಕೆ ಇಲ್ಲಿಯವರೆಗೂ ಉತ್ತರ ಸಿಕ್ಕಿಲ್ಲ. ಅದರೂ ಇಂದಿಲ್ಲ ನಾಳೆ ಮತ್ತೊಮ್ಮೆ ತನಿಖೆ ನಡೆದು ಸಂಚುಕೋರರಿಗೆ ಶಿಕ್ಷೆ ಆಗಬಹುದು ಎಂದು ಸುಬ್ರಮಣಿಯನ್ ಸ್ವಾಮಿಯವರು ನಂಬಿದ್ದಾರೆ. ಹರೇನ್ ಪಾಂಡ್ಯ ಹತ್ಯೆಯಲ್ಲಿ ಅಮಿತ್ ಶಾ ಏನು ಮಾಡಿದ್ದಾರೋ ಅದು ಒಂದು ದಿನ ಸಾರ್ವಜನಿಕವಾಗಿ ಬಯಲಾಗುತ್ತದೆ ಎಂದೂ ಹೇಳಿದ್ದಾರೆ. ತಮಗೂ ಪಾಂಡ್ಯರವರಂತೆ ಸಾವು ಬರಬಹುದು ಎಂದು ಭೀತಿಗೊಳಗಾಗಿದ್ದಾರೆ -ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಈ ದೇಶದ ಗೃಹ ಮಂತ್ರಿಗೆ ಹೀಗೆ ಯಾರಾದರೂ ಗೂಂಡಾ ಎಂದು ಹೇಳಿದ್ದರೆ ಇಷ್ಟೊತ್ತಿಗೆ ಸಂಘಿ ಅಂಧಭಕ್ತರು ಟ್ರೋಲ್ ಯುದ್ಧವನ್ನೇ ಆರಂಭಿಸಿ ಅವಾಚ್ಯ ಬೈಗುಳಗಳ ಮಿಸೈಲ್ ಗಳನ್ನು ಪ್ರಯೋಗ ಮಾಡುತ್ತಿದ್ದರು. ಬಿಜೆಪಿಯ ನಾಯಕರುಗಳು ಗೂಂಡಾ ಅಂದವನ ಜಾತಕವನ್ನೇ ಜಾಲಾಡಿಸಿ ನಿಂದಿಸುತ್ತಿದ್ದರು. ಹಲವಾರು ಪೊಲೀಸ್ ಠಾಣೆಗಳಲ್ಲಿ ದೂರುಗಳು ದಾಖಲಾಗುತ್ತಿದ್ದವು. ಕೆಲವಾರು ಭಕ್ತರು ಕೋರ್ಟ್ ಮೆಟ್ಟಲೇರುತ್ತಿದ್ದರು.
ಆದರೆ ಗೂಂಡಾ ಎಂದು ಕರೆದಿದ್ದು ಒಂದು ಕಾಲದಲ್ಲಿ ಪ್ರಭಾವಿ ಧ್ವನಿಯಾಗಿದ್ದ ಬಿಜೆಪಿ ಪಕ್ಷದ ಹಿರಿಯ ನಾಯಕ, ಮಾಜಿ ಸಂಸದ ಸುಬ್ರಮಣಿಯನ್ ಸ್ವಾಮಿಯವರು. ಎಫ್‌ಸ್ಟೀನ್ ಫೈಲಲ್ಲಿ ಮೋದಿ ಹೆಸರಿರುವ ಬಗ್ಗೆ, ಮೋದಿಯವರೊಂದಿಗೆ ಹಾಸಿಗೆ ಹಂಚಿಕೊಂಡು ಸಂಸದರಾದ ಮಹಿಳೆಯರ ಬಗ್ಗೆ ಪ್ರಶ್ನೆಗಳನ್ನು ಎತ್ತಿದ ಸ್ವಾಮಿಯವರು ಈಗ ಅಮಿತ್ ಶಾ ರವರ ಪೂರ್ವಾಶ್ರಮದ ಚರಿತ್ರೆಗೆ ಬಾಯಿ ಹಾಕಿದ್ದಾರೆ, ಗೂಂಡಾ ಎಂದು ನಿಂದಿಸಿದ್ದಾರೆ. ಸಮಸ್ತ ಬಿಜೆಪಿಗರಿಗೆ ಅತ್ತ ಉಗುಳಲೂ ಆಗದ, ಇತ್ತ ನುಂಗಲೂ ಆಗದ ಕುದಿಯುವ ತುಪ್ಪವಾಗಿ ಪರಿಗಣಿತರಾಗಿದ್ದಾರೆ. ಅಂಧಭಕ್ತ ಟ್ರೋಲಿಗರು ಬಾಲ ಮುದುರಿಕೊಂಡು ಗುರಾಯಿಸುತ್ತಿದ್ದಾರೆ.

ಹೀಗೆ ಸ್ವಾಮಿಯವರು ಗೃಹಮಂತ್ರಿಗೆ ಗೂಂಡಾ ಎನ್ನುವಂತಹ ಆರೋಪ ಮಾಡಿದ್ದಾದರೂ ಯಾಕೆ? ಅದಕ್ಕೆ ಮೂಲ ಕಾರಣ ಹರೇನ್ ಪಾಂಡ್ಯಾ ಹತ್ಯಾ ಪ್ರಕರಣ. ಅದೂ 23 ವರ್ಷಗಳ ಹಿಂದೆ ನಡೆದ ರಾಜಕೀಯ ಕೊಲೆ ಕೇಸ್. 2003 ಮಾರ್ಚ್ 26 ರ ಬೆಳಿಗ್ಗೆ ಸುಮಾರು 7.40 ರ ಸಮಯ. ಅಹಮದಾಬಾದ್ ನಲ್ಲಿರುವ ಲಾ ಗಾರ್ಡನ್ ಪ್ರದೇಶದಲ್ಲಿ ತಮ್ಮ ದೈನಂದಿನ ವಾಕಿಂಗ್ ಮುಗಿಸಿ ಮಾರುತಿ 800 ಕಾರಿನಲ್ಲಿ ಹರೇನ್ ಪಾಂಡ್ಯರವರು ಕುಳಿತಿದ್ದರು. ಆಗ ಪ್ರತ್ಯಕ್ಷವಾದ ಅಪರಿಚಿತ ಆಗುಂತುಕರು ಪಾಂಡ್ಯರವರ ಮೇಲೆ ಐದು ಗುಂಡುಗಳನ್ನು ಹಾರಿಸಿ ಹತ್ಯೆ ಮಾಡಿದ್ದರು. ಅವರ ಮೃತ ದೇಹವು ಎರಡು ಗಂಟೆಗಳ ಕಾಲ ಕಾರಲ್ಲೇ ಬಿದ್ದಿದ್ದರೂ ಯಾರೂ ಸಹಾಯಕ್ಕೆ ಬರಲಿಲ್ಲ. ಯಾಕೆಂದರೆ ಇದೊಂದು ಪ್ರಿ ಪ್ಲಾನ್ಡ್ ಮರ್ಡರ್ ಆಗಿತ್ತು. ಪಾಂಡ್ಯರವರ ಮೇಲೆ ತಿಂಗಳುಗಳ ಕಾಲ ನಿಗಾ ಇಡಲಾಗಿತ್ತು. ಅವತ್ತು ಆ ಬೀದಿಯಲ್ಲಿದ್ದ ಬೀದಿ ವ್ಯಾಪಾರಿಗಳನ್ನು ಮೊದಲೇ ತೆರವುಗೊಳಿಸಲಾಗಿತ್ತು. ಬ್ರಿಜ್ ಪೊಲೀಸ್ ಠಾಣೆಯ ಪೊಲೀಸರನ್ನು ಬೇರೊಂದು ಉದ್ಯಾನವನಕ್ಕೆ ಹೋಗುವಂತೆ ಮಾಡಿ ಬೇರೆ ಪೊಲೀಸರನ್ನ ಕರೆಸಿಕೊಳ್ಳಲಾಗಿತ್ತು ಎಂದು ದಾಖಲೆಗಳು ಹೇಳ್ತಿವೆ. ಹತ್ಯೆಯ ಸಮಯದಲ್ಲಿ ಪಾಂಡ್ಯ ಅವರಿಗಿದ್ದ ಭದ್ರತಾ ವ್ಯವಸ್ಥೆಯನ್ನು ತೆಗೆದುಹಾಕಲಾಗಿತ್ತು. ಗುಜರಾತ್ ಪೊಲೀಸ್ ಅಧಿಕಾರಿ ಶ್ರೀಕುಮಾರರವರೂ ಇದನ್ನು ಬಹಿರಂಗಪಡಿಸಿದ್ದಾರೆ.
ಇಷ್ಟಕ್ಕೂ ಹೀಗೆ ಕೊಲೆಯಾಗಿ ಬೀದಿ ಹೆಣವಾದವರು ಯಾವ ಗ್ಯಾಂಗ್ ಸ್ಟಾರ್ ಆಗಲಿ ಇಲ್ಲವೇ ನೋಟೆಡ್ ರೌಡಿಯಾಗಲಿ ಆಗಿರಲಿಲ್ಲ. ಸತ್ತವರು ಸಾಮಾನ್ಯ ವ್ಯಕ್ತಿಯೂ ಅಲ್ಲಾ. ಹರೇನ್ ಪಾಂಡ್ಯ ಗುಜರಾತ್ ರಾಜಕೀಯದಲ್ಲಿ ಬಲು ದೊಡ್ಡ ಹೆಸರು. ಬಿಜೆಪಿ ಪಕ್ಷದ ಪ್ರಮುಖ ನಾಯಕ. ಕೇಶುಭಾಯಿ ಪಟೇಲ್ ಸರಕಾರದಲ್ಲಿ 1998 ರಲ್ಲಿ ಗೃಹ ಸಚಿವರಾಗಿದ್ದವರು. ನರೇಂದ್ರ ಮೋದಿ ಸರಕಾರದಲ್ಲಿ 2001 ರಲ್ಲಿ ಕಂದಾಯ ಸಚಿವರಾಗಿದ್ದರು. ಪಾಂಡ್ಯರವರು ಆರೆಸ್ಸೆಸ್ ಬೆಂಬಲಿಗ ಕುಟುಂಬದಿಂದ ಬಂದವರಾಗಿದ್ದರು. ಅವರ ತಂದೆ ವಿಠಲ್ ಬಾಯಿ ಪಾಂಡೆ ಹಿಂದುತ್ವ ಸಿದ್ಧಾಂತದ ಪ್ರತಿಪಾದಕರಾಗಿದ್ದರು. ಹರೇನ್ ಪಾಂಡ್ಯರವರು ಬಿಜೆಪಿ ಪಕ್ಷದಿಂದ ಅಹಮದಾಬಾದಿನ ಎಲ್ಲಿಸ್ ಬ್ರಿಜ್ ಕ್ಷೇತ್ರದಿಂದ ಸತತವಾಗಿ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.
ಇಷ್ಟೆಲ್ಲಾ ಆಗಿದ್ದವರು ಬಿಜೆಪಿ ಸರಕಾರ ಅಸ್ತಿತ್ವದಲ್ಲಿದ್ದಾಗಲೇ ಹೀಗೆ ಕೊಲೆಯಾಗಿದ್ದಾದರೂ ಯಾಕೆ? ಯಾಕೆಂದರೆ ಪಾಂಡ್ಯರವರ ಬದಲಾದ ನಿಲುವು. ಕೊಲೆಯ ಹಿಂದೆ ಯಾರ ಕೈವಾಡವಿತ್ತು? ಮೋದಿಯವರ ಕುಮ್ಮಕ್ಕು ಹಾಗೂ ಅಮಿತ್ ಶಾ ರವರ ತಾಕತ್ತು ಇತ್ತೆಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಅದನ್ನೇ ಸುಬ್ರಮಣಿಯನ್ ಸ್ವಾಮಿಯವರು ಈಗ ಮತ್ತೆ ಆರೋಪಿಸಿದ್ದಾರೆ. ಅಮಿತ್ ಶಾರವರನ್ನು ಗೂಂಡಾ ಎಂದಿದ್ದಾರೆ.
ಆರೆಸ್ಸೆಸ್ ಸಿದ್ಧಾಂತದ, ಬಿಜೆಪಿಯ ಪ್ರಬಲ ನಾಯಕನನ್ನು ಬಿಜೆಪಿಯವರೇ ಯಾಕೆ ಹತ್ಯೆ ಮಾಡಿಸುತ್ತಾರೆ? ಇದಕ್ಕೂ ಪ್ರಬಲ ಕಾರಣವಿದೆ. ಅದೇನೆಂದರೆ 2002 ರಲ್ಲಿ ಗುಜರಾತ್ ನಲ್ಲಿ ಹಿಂದೂ ಕೋಮುವಾದಿ ಮತಾಂಧರಿಂದ ಮುಸ್ಲಿಂ ಸಮುದಾಯದವರ ಸಾಮೂಹಿಕ ನರಹತ್ಯಾಕಾಂಡ ನಡೆಯಿತು. ಹರೇನ್ ಪಾಂಡ್ಯರವರ ಮತಕ್ಷೇತ್ರದ ಪಾಲ್ಡಿ ಪ್ರದೇಶದಲ್ಲೂ ಕೊಲೆ ಸುಲಿಗೆ ಆಸ್ತಿಹಾನಿಗಳಾದವು. ಆಗ ಈ ಗಲಭೆಯಲ್ಲಿ ಹರೇನ್ ಪಾಂಡ್ಯರವರ ಕೈವಾಡ ಇದೆಯೆಂದು ಆರೋಪಿಸಲಾಯ್ತು. ಆದರೆ ಈ ಜನಾಂಗೀಯ ಹತ್ಯೆಯಲ್ಲಿ ಪಾಂಡ್ಯರವರ ಕೈವಾಡ ಇರಲಿಲ್ಲ. ಗಲಭೆಯಲ್ಲಿ ತೊಡಗಿದ ಗುಂಪುಗಳನ್ನು ತಡೆಯಲು ಅವರು ಪ್ರಯತ್ನಿಸಿದ್ದರು. ಪ್ರಾಣಹತ್ಯೆ ಮಾಡಬೇಡಿ, ಕೇವಲ ಆಸ್ತಿ ನಾಶ ಮಾಡುವಂತೆ ಕೆಲವು ಮತಾಂಧರ ಮನವೊಲಿಸಿದ್ದರು. ಮುಸ್ಲಿಂ ಧಾರ್ಮಿಕ ನಾಯಕರನ್ನು ತಮ್ಮ ಸೆಕ್ಯೂರಿಟಿ ಬಳಸಿ ಸುರಕ್ಷಿತವಾಗಿ ವಿಮಾನ ನಿಲ್ದಾಣಕ್ಕೆ ತಲುಪಿಸಿ ಮುಂಬೈಗೆ ಕಳುಹಿಸಿಕೊಟ್ಟಿದ್ದರು. ಆದರೂ ಹತ್ಯಾಕಾಂಡದ ರೂವಾರಿ ಎನ್ನುವ ಆರೋಪದಿಂದ ನೊಂದ ಪಾಂಡ್ಯರವರು ಕನ್ಸರ್ನ್ಡ್ ಸಿಟಿಜನ್ಸ್ ಟ್ರಿಬ್ಯೂನಲ್ ಎನ್ನುವ ಸಂಸ್ಥೆಗೆ ಹೋಗಿ ಹತ್ಯಾಕಾಂಡದ ವಿವರ ಕೊಟ್ಟರು. “ಅದು ಉದ್ವಿಗ್ನ ಕೃತ್ಯವಲ್ಲ ಪಕ್ಕಾ ಯೋಜಿತ ಸಂಚು, ಪೊಲೀಸ್ ಹಾಗೂ ಇತರ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನಿಷ್ಕ್ರಿಯರಾಗಿದ್ದರು” ಎಂದು ಆರೋಪಿಸುತ್ತಾರೆ. “ಹಿಂದೂಗಳು ತಮ್ಮ ಆಕ್ರೋಶವನ್ನು ಹೊರಗೆ ಹಾಕಲು ಅವಕಾಶ ಮಾಡಿಕೊಡಿ, ಅವರನ್ನು ತಡೀಬೇಡಿ” ಎಂದು ಒಂದು ಸಭೆಯಲ್ಲಿ ಮೋದಿಯವರು ಪೊಲೀಸರಿಗೆ ಹೇಳಿದ್ದರು ಎಂಬುದನ್ನೂ ಪಾಂಡ್ಯರವರು ಟ್ರಿಬ್ಯುನಲ್ ಮುಂದೆ ಹೇಳುತ್ತಾರೆ. ಮುಂದೆ ಪಾಂಡ್ಯರವರ ಹತ್ಯೆಯಾದಾಗ ಟ್ರಿಬ್ಯುನಲ್ ಸಂಚಾಲಕಿ ಹಾಗೂ ಮಾನವ ಹಕ್ಕು ಹೋರಾಟಗಾರ್ತಿಯಾಗಿದ್ದ ತೀಸ್ತಾ ಸೆಟಲ್ವಾಡ್ ರವರು “ದಿ ಮಾಡರ್ನ್ ಮೋಸ್ಟ್ ಪಾಲ್, ಹೌ ಹರೇನ್ ಪಾಂಡ್ಯ ವಾಸ್ ಸೈಲನ್ಸ್ಡ್” ಎನ್ನುವ ಲೇಖನ ಬರೆದು ಪಾಂಡ್ಯರವರ ಹತ್ಯೆಯ ಹಿಂದಿನ ಸಂಚನ್ನು ಹೊರಹಾಕುತ್ತಾರೆ. ಪಾಂಡ್ಯರವರು ನ್ಯಾ. ವಿ.ಆರ್.ಕೃಷ್ಣ ಅಯ್ಯರ್ ನೇತೃತ್ವದ “Concerned Citizens Tribunal” ಎನ್ನುವ ಸ್ವತಂತ್ರ ತನಿಖಾ ಸಂಸ್ಥೆಯ ಮುಂದೆ ರಹಸ್ಯ ಸಾಕ್ಷಿ ನೀಡಿದ್ದರು.

ನರಹತ್ಯೆ ತಡೆಯಲು ಪ್ರಯತ್ನಿಸಿದ್ದಕ್ಕಾಗಿ, ಮುಸ್ಲಿಂ ಮುಖಂಡರನ್ನು ಪಾರು ಮಾಡಿದ್ದಕ್ಕಾಗಿ ಹಾಗೂ ಟ್ರಿಬ್ಯೂನಲ್ ಗೆ ಹೋಗಿ ಸತ್ಯ ಹೇಳಿದ್ದಕ್ಕಾಗಿ ಮೋದಿಯವರು ಆಕ್ರೋಶಕ್ಕೊಳಗಾದರು. ಅಮಿತ್ ಶಾ ರವರು ಕೊತಕೊತನೆ ಕುದಿಯತೊಡಗಿದರು. ಪಾಂಡ್ಯರವರನ್ನು ಟಾರ್ಗೆಟ್ ಮಾಡಲಾಯಿತು. ಬಿಜೆಪಿಯಲ್ಲಿಯೇ ಅವರು ಬಹಿಷ್ಕೃತರಾದರು. 2002 ರ ಜೂನ್ ನಲ್ಲಿ ಸಚಿವ ಸ್ಥಾನದಿಂದಲೂ ತೆಗೆದು ಹಾಕಲ್ಪಟ್ಟರು. ಮುಂದೆ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಟಿಕೆಟ್ ನಿರಾಕರಿಸಲ್ಪಟ್ಟಿತು. ಆ ಚುನಾವಣೆಯಲ್ಲಿ ಮತ್ತೆ ಮೋದಿ ಅಧಿಕಾರಕ್ಕೆ ಬಂದಾಗ ಪಾಂಡ್ಯರವರನ್ನು ಮೂಲೆ ಗುಂಪು ಮಾಡಲಾಯಿತು. ಮೂರು ತಿಂಗಳ ನಂತರ 2003 ಮಾರ್ಚ್ 26 ರಂದು ಗುಂಡಿಟ್ಟು ಕೊಲ್ಲಿಸಲಾಯ್ತು. ಈ ಎಲ್ಲಾ ಘಟನೆಗಳ ಹಿಂದೆ ಯಾರಿದ್ದರು ಎಂಬುದು ಎಲ್ಲರಿಗೂ ಗೊತ್ತಿರುವ ಬಹಿರಂಗ ರಹಸ್ಯ. ಇದರಿಂದಾಗಿ ಬಿಜೆಪಿಯಲ್ಲಿ ರೆಬೆಲ್ ಆಗಿದ್ದ ಸುಬ್ರಮಣಿಯನ್ ಸ್ವಾಮಿಯವರಿಗೆ ಭಯ ಕಾಡತೊಡಗಿತ್ತು. ಪಾಂಡ್ಯರವರಿಗೆ ಬಂದ ಗತಿ ತಮಗೂ ಆಗಬಹುದು ಎನ್ನುವ ಆತಂಕವಾಗಿತ್ತು. ಹೀಗಾಗಿ 2020 ರಲ್ಲಿ ಸ್ವಾಮಿಯವರು “ಮೋದಿ ಮತ್ತು ಶಾ ರವರು ನನ್ನ ಮೇಲೆ ಹರೇನ್ ಪಾಂಡ್ಯಗೆ ಮಾಡಿದಂತೆ ಮಾಡಬಹುದು, ಹೀಗಾಗಿ ನಾನು ನನ್ನ ಸ್ನೇಹಿತರನ್ನು ಎಚ್ಚರಿಸುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದರು. ಈಗ ಮತ್ತೆ ಆ ಹಳೆಯ ಪ್ರಕರಣವನ್ನು ಮುನ್ನೆಲೆಗೆ ತಂದಿದ್ದಾರೆ.
ಮುಂದೆ ಪಾಂಡ್ಯರವರ ಹತ್ಯಾ ಪ್ರಕರಣವನ್ನು ಸಿಬಿಐ ತನಿಖೆ ಮಾಡುತ್ತದೆ. “ಪಾಂಡ್ಯರವರ ಹತ್ಯೆಯು ಗುಜರಾತ್ ದಂಗೆಗಳಲ್ಲಿ ಮುಸಲ್ಮಾನರ ವಿರುದ್ಧ ನಡೆದ ಹಿಂಸಾಚಾರಕ್ಕೆ ಪ್ರತೀಕಾರವಾಗಿ ನಡೆದಿದೆ ಹಾಗೂ ಈ ಹತ್ಯೆಯ ಹಿಂದೆ ಪಾಕಿಸ್ತಾನದ ISI, ಲಷ್ಕರ್ – ಎ-ತೈಬಾ ಹಾಗೂ ದಾವೂದ್ ಇಬ್ರಾಹಿಂನಂತಹ ಅಂತಾರಾಷ್ಟ್ರೀಯ ಭಯೋತ್ಪಾದಕರ ಷಡ್ಯಂತ್ರ ಇದೆ” ಎಂದು ಸಿಬಿಐ ಆರೋಪಿಸಿತು. ಇದೇ ಆರೋಪದ ಮೇಲೆ 15 ಜನರ ಮೇಲೆ ಚಾರ್ಜ್ ಶೀಟ್ ಸಲ್ಲಿಕೆಯಾಗುತ್ತದೆ. ಇದರಲ್ಲಿ ಹೆಚ್ಚಿನವರು ಮುಸ್ಲಿಂ ಸಮುದಾಯದವರು.
2007 ರಲ್ಲಿ ವಿಶೇಷ ಪೋಟಾ ನ್ಯಾಯಾಲಯವು ಭಯೋತ್ಪಾದನಾ ಕಾಯ್ದೆ ಅಡಿಯಲ್ಲಿ ವಿಚಾರಣೆ ನಡೆಸಿ 12 ಆರೋಪಿಗಳಲ್ಲಿ 9 ಜನರಿಗೆ ಜೀವಾವಧಿ ಹಾಗೂ ಬಾಕಿಯವರಿಗೆ ಕಡಿಮೆ ಶಿಕ್ಷೆ ವಿಧಿಸುತ್ತದೆ. ಆದರೆ 2011 ರಲ್ಲಿ ಗುಜರಾತ್ ಹೈಕೋರ್ಟ್ ‘ತನಿಖೆಯಲ್ಲಿ ಲೋಪಗಳಿವೆ’ ಎಂದು ಹೇಳಿ ಎಲ್ಲಾ ಆರೋಪಿತರನ್ನು ಬಿಡುಗಡೆ ಗೊಳಿಸಲಾಗುತ್ತದೆ. 2019 ರಲ್ಲಿ ಸುಪ್ರೀಂಕೋರ್ಟಿನಲ್ಲಿ ನಡೆದ ವಿಚಾರಣೆಯಲ್ಲಿ ಹೈಕೋರ್ಟ್ ಆದೇಶವನ್ನು ರದ್ದುಗೊಳಿಸಿ 12 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗುತ್ತದೆ.
2002ರ ದಂಗೆಗಳ ಬಗ್ಗೆ ವಿಶೇಷ ತನಿಖಾ ತಂಡಕ್ಕೆ ಪಾಂಡ್ಯರವರು ಸಾಕ್ಷಿ ನೀಡಿದ್ದರು ಮತ್ತು ಮೋದಿ ಸರಕಾರದ ಕ್ರಮಗಳ ಬಗ್ಗೆ ಧ್ವನಿ ಎತ್ತಿದ್ದರು, ಹೀಗಾಗಿ ಅವರ ಕೊಲೆ ಮಾಡಿಸಲಾಯ್ತು ಎಂದು ಪಾಂಡ್ಯರವರ ಕುಟುಂಬದವರು ಹಾಗೂ ರಾಜಕೀಯ ವಿಮರ್ಶಕರು ಆರೋಪಿಸಿದ್ದರು. ಪಾಂಡ್ಯರವರ ಪತ್ನಿ ಜಾಗೃತಿ ಪಾಂಡ್ಯ ಹಾಗೂ ಅವರ ಕುಟುಂಬದವರು ಇದನ್ನು ರಾಜಕೀಯ ಹತ್ಯೆ ಎಂದು ಕರೆದು ಮರುತನಿಖೆಗೆ ಆಗ್ರಹಿಸಿದ್ದಾರೆ. ದಂಗೆಗಳ ಬಗ್ಗೆ ಸಾಕ್ಷಿ ನೀಡಿದ್ದಕ್ಕೆ, ಮೋದಿ ವಿರುದ್ಧ ಧ್ವನಿ ಎತ್ತಿದ್ದಕ್ಕೆ, ಪಕ್ಷದಲ್ಲಿ ಮೋದಿಯವರಿಗೆ ಪ್ರತಿಸ್ಪರ್ಧಿಯಾಗಿದ್ದಕ್ಕೆ ಹರೇನ್ ಪಾಂಡ್ಯರವರನ್ನು ಸಂಚು ಹೂಡಿ ಹತ್ಯೆ ಮಾಡಲಾಯಿತು ಎಂದೂ ಆರೋಪಿಸಿದ್ದಾರೆ.
ಆದರೆ ಪಾಂಡ್ಯರವರ ಹತ್ಯೆಗಾಗಿ ನಿಜವಾಗಿ ಸಂಚು ರೂಪಿಸಿದವರು ಯಾರು? ಪಾಂಡ್ಯರವರು ಗುಜರಾತ್ ನರಹತ್ಯೆ ಬಹಿರಂಗಪಡಿಸಿದ್ದಕ್ಕಾಗಿ ನಡೆದ ಪೂರ್ವಯೋಜಿತ ಹತ್ಯೆಯಾ? ಎಂಬುದಕ್ಕೆ ಇಲ್ಲಿವರೆಗೂ ಉತ್ತರ ಸಿಕ್ಕಿಲ್ಲ. ಅದರೂ ಇಂದಿಲ್ಲಾ ನಾಳೆ ಮತ್ತೊಮ್ಮೆ ತನಿಖೆ ನಡೆದು ಸಂಚುಕೋರರಿಗೆ ಶಿಕ್ಷೆ ಆಗಬಹುದು ಎಂದು ಸುಬ್ರಮಣಿಯನ್ ಸ್ವಾಮಿಯವರು ನಂಬಿದ್ದಾರೆ. ಹರೇನ್ ಪಾಂಡ್ಯ ಹತ್ಯೆಯಲ್ಲಿ ಅಮಿತ್ ಶಾ ಏನು ಮಾಡಿದ್ದಾರೋ ಅದು ಒಂದು ದಿನ ಸಾರ್ವಜನಿಕವಾಗಿ ಬಯಲಾಗುತ್ತದೆ ಎಂದೂ ಹೇಳಿದ್ದಾರೆ. ತಮಗೂ ಪಾಂಡ್ಯರವರಂತೆ ಸಾವು ಬರಬಹುದು ಎಂದು ಭೀತಿಗೊಳಗಾಗಿದ್ದಾರೆ. ಹೀಗಾಗಿ 2026 ರ ಮಾರ್ಚ್ ತಿಂಗಳಲ್ಲಿ ಮಾಧ್ಯಮವೊಂದಕ್ಕೆ ಕೊಟ್ಟ ಸಂದರ್ಶನದಲ್ಲಿ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದಾರೆ. ಈಗ ಅದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಈ ಸಂದರ್ಶನಕ್ಕಾಗಿ ಯೂಟ್ಯೂಬ್ ನಲ್ಲಿ “Subramanian Swamy Amit Shah gunda” ಎಂದು ಹುಡುಕಬಹುದಾಗಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- http://ಆರೆಸ್ಸೆಸ್ -ಬಿಜೆಪಿ ಎಂಬ ವಿಷಸರ್ಪಗಳು https://kannadaplanet.com/the-poisonous-snake-called-rss-bjp/


