ಮಧ್ಯಪ್ರಾಚ್ಯದಲ್ಲಿ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಇರಾನ್-ಇಸ್ರೇಲ್ ಯುದ್ಧದ ಬಿಸಿ ಈಗ ಅರಬ್ ರಾಷ್ಟ್ರಗಳಿಗೂ ಮುಟ್ಟಿದೆ. ಕತಾರ್ನ ಮುಖ್ಯ ನೈಸರ್ಗಿಕ ಕೇಂದ್ರವಾದ ರಾಸ್ ಲಫಾನ್ (Ras Laffan) ಮೇಲೆ ಇರಾನ್ ಕ್ಷಿಪಣಿ ದಾಳಿ ನಡೆಸಿದೆ. ಈ ದಾಳಿಯಿಂದ ಅಲ್ಲಿನ ಸೌಲಭ್ಯಗಳಿಗೆ ಭಾರಿ ಹಾನಿ ಉಂಟಾಗಿದೆ ಎಂದು ಕತಾರ್ ದೃಢಪಡಿಸಿದೆ. ಈ ಹಿನ್ನೆಲೆಯಲ್ಲಿ ಕತಾರ್ ಸರ್ಕಾರವು ತನ್ನ ದೇಶದಲ್ಲಿರುವ ಇರಾನ್ ಮಿಲಿಟರಿ ಮತ್ತು ಭದ್ರತಾ ಅಧಿಕಾರಿಗಳನ್ನು 24 ಗಂಟೆಗಳ ಒಳಗೆ ದೇಶ ಬಿಟ್ಟು ಹೋಗುವಂತೆ ಆದೇಶಿಸಿದೆ.
ಯುಎಇಯ ಅಬುಧಾಬಿಯ ಹಬ್ಶಾನ್ (Habshan) ಅನಿಲ ಕೇಂದ್ರದ ಮೇಲೂ ಇರಾನ್ ದಾಳಿ ನಡೆಸಿದ ಕಾರಣ, ಮುನ್ನೆಚ್ಚರಿಕಾ ಕ್ರಮವಾಗಿ ಯುಎಇ ತನ್ನ ಅನಿಲ ಸೌಲಭ್ಯಗಳನ್ನು ಸ್ಥಗಿತಗೊಳಿಸಿದೆ.

ಸೌದಿ ಅರೇಬಿಯಾದ ಎರಡು ತೈಲ ಸಂಸ್ಕರಣಾ ಕೇಂದ್ರಗಳ ಮೇಲೆ ಇರಾನ್ ದಾಳಿ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಿಯಾದ್ ಸರ್ಕಾರ, ಇರಾನ್ ಮೇಲೆ ನಮಗಿದ್ದ ಅಲ್ಪ ನಂಬಿಕೆಯೂ ಈಗ ಸಂಪೂರ್ಣವಾಗಿ ನಶಿಸಿ ಹೋಗಿದೆ ಎಂದು ಗುಡುಗಿದೆ. ಸೌದಿ ಅರೇಬಿಯಾ ಇರಾನ್ ವಿರುದ್ಧ ಕಠಿಣ ಮಿಲಿಟರಿ ಕ್ರಮ ಕೈಗೊಳ್ಳುವುದಾಗಿ ಹೇಳಿದೆ.
ಇಸ್ರೇಲ್ ಇರಾನ್ ಮೇಲೆ ದಾಳಿ ಮುಂದುವರಿಸಿದ್ದು, ಇರಾನ್ನ ಉತ್ತರ ಭಾಗದ ಬಂದರ್ ಅಂಜಲಿ (Bandar Anzali) ನೌಕಾ ನೆಲೆ ಮತ್ತು ವಿಶ್ವದ ಅತಿ ದೊಡ್ಡ ಅನಿಲ ಕ್ಷೇತ್ರವಾದ ಸೌತ್ ಪಾರ್ಸ್ (South Pars) ಮೇಲೆ ದಾಳಿ ನಡೆಸಿತು. ಇದಕ್ಕೆ ಪ್ರತಿಕ್ರಿಯಿಸಿರುವ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್, “ಇದರ ಪರಿಣಾಮ ಬರಿ ಇರಾನ್ಗೆ ಮಾತ್ರವಲ್ಲ, ಇಡೀ ಜಗತ್ತನ್ನು ಆವರಿಸಲಿದೆ” ಎಂದು ಎಚ್ಚರಿಸಿದ್ದಾರೆ.

ಇಸ್ರೇಲ್ ಮೇಲೆ ಇರಾನ್ ನಡೆಸಿದ ಪ್ರತಿದಾಳಿಯಲ್ಲಿ ತೆಲ್ ಅವಿವ್ ಮತ್ತು ಆಕ್ರಮಿತ ವೆಸ್ಟ್ ಬ್ಯಾಂಕ್ನಲ್ಲಿ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಇಸ್ರೇಲ್ ವರದಿ ಮಾಡಿದೆ.
ಇರಾನ್ ಹೇಳಿಕೆಗಳಿಗೆ ಪ್ರತಿಕ್ರಿಯಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಇರಾನ್ ಏನಾದರೂ ಮತ್ತೊಮ್ಮೆ ಕತಾರ್ನ ಅನಿಲ ಕೇಂದ್ರಗಳ ಮೇಲೆ ದಾಳಿ ನಡೆಸಿದರೆ ಇರಾನ್ನ ಇಡೀ ‘ಸೌತ್ ಪಾರ್ಸ್’ ಅನಿಲ ಕ್ಷೇತ್ರವನ್ನು ನಾಶಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.

