ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನ | ನೆನೆಯಬೇಕಾದ ವೈರುಧ್ಯಗಳ ಮಹಿಳೆ- ಕೊರಜಾನೋ ಸಿ. ಆಕ್ವಿನೋ

Most read

ಯಾವ ಸರ್ವಾಧಿಕಾರಿಯನ್ನು ಆಕ್ವಿನೋ ಮಣಿಸಿದ್ದಳೋ ಆ  ಫರ್ಡಿನಾಂಡ್ ಮಾರ್ಕೋಸ್ ನ ಮಗನಾದ ಫರ್ಡಿನಾಂಡ್ ಭಾಂಗ್ ಬಾಂಗ್  ಮಾರ್ಕೋಸ್ ಅಧಿಕಾರಕ್ಕೆ ಬಂದಿರುವುದು ಏನನ್ನು ಸೂಚಿಸುತ್ತದೆ? ಈ ಸ್ಥಿತ್ಯಂತರವೇ ಇಂದಿನ ವರ್ತಮಾನದ ಪ್ರಜಾಪ್ರಭುತ್ವದ ಬಿಕ್ಕಟ್ಟುಗಳನ್ನು ಮುಂದಿಡುತ್ತದೆ – ಡಾ.ಅರುಣ್‌ ಜೋಳದಕೂಡ್ಲಿಗಿ, ಸಂಶೋಧಕರು.

ಜಾಗತಿಕವಾಗಿ ಕುಸಿಯುತ್ತಿರುವ ಪ್ರಜಾಪ್ರಭುತ್ವವನ್ನು ಎತ್ತಿಹಿಡಿಯಲು ಯುನೈಟೆಡ್ ನೇಷನ್ಸ್ ಜನರಲ್ ಅಸೆಂಬ್ಲಿಯು ಸೆಪ್ಟಂಬರ್ 15 ನ್ನು ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನವನ್ನಾಗಿ ಆಚರಿಸುವ ಘೋಷಣೆ ಮಾಡಿತು. ಪರಿಣಾಮ ಇಂಟರ್ ಪಾರ್ಲಿಮೆಂಟರಿ ಯೂನಿಯನ್ (ಐಪಿಯು) 2008 ರಿಂದ ಅಂತಾರಾಷ್ಟ್ರೀಯ ಪ್ರಜಾಪ್ರಭುತ್ವ ದಿನದ ಆಚರಣೆಯನ್ನು ಆರಂಭಿಸಿತು. ಫಿಲಿಫೈನ್ಸ್  ಜನಚಳವಳಿಯ ಹೋರಾಟಗಾರ್ತಿ ಕೊರಾಜನ್ ಸಿ.ಅಕ್ವಿನೋ (Corazon C. Aquino)`ಪೀಪಲ್ ಪವರ್ ರೆವಲೂಷನ್’ ಮೂಲಕ ಫರ್ಡಿನಾಂಡ್ ಮಾರ್ಕೋಸ್‌ನ 20 ವರ್ಷಗಳ ಸರ್ವಾಧಿಕಾರವನ್ನು ಕೊನೆಗೊಳಿಸಿ 1986 ರ ಸೆಪ್ಟಂಬರ್ 15 ರಂದು ಪ್ರಜಾಪ್ರಭುತ್ವವನ್ನು ಮರುಸ್ಥಾಪಿಸುತ್ತಾಳೆ. ಇದು ಗಂಡಾಳ್ವಿಕೆಯ ವಿರುದ್ಧದ ಹೆಣ್ಣಿನ ವಿಜಯದ ಸಂಕೇತವೂ ಕೂಡ. 

ಹಾಗಾದರೆ ಈ ಕೊರಾಜನ್ ಸಿ.ಆಕ್ವಿನೋ ಯಾರು? ಸರ್ವಾಧಿಕಾರವನ್ನು ಮಣಿಸಿದರೂ ಮುಂದೆ ಆಕೆಯೂ ಬಂಡವಾಳಶಾಹಿ ಮತ್ತು ಭೂಮಾಲೀಕರ ಪರವಾದದ್ದೇಕೆ?

ಯಾವ ಸರ್ವಾಧಿಕಾರಿಯನ್ನು ಆಕ್ವಿನೋ ಮಣಿಸಿದ್ದಳೋ ಆ  ಫರ್ಡಿನಾಂಡ್ ಮಾರ್ಕೋಸ್ ನ ಮಗನಾದ ಫರ್ಡಿನಾಂಡ್ ಭಾಂಗ್ ಬಾಂಗ್  ಮಾರ್ಕೋಸ್ ಅಧಿಕಾರಕ್ಕೆ ಬಂದಿರುವುದು ಏನನ್ನು ಸೂಚಿಸುತ್ತದೆ? 

ಈ ಸ್ಥಿತ್ಯಂತರವೇ ಇಂದಿನ ವರ್ತಮಾನದ ಪ್ರಜಾಪ್ರಭುತ್ವದ ಬಿಕ್ಕಟ್ಟುಗಳನ್ನು ಮುಂದಿಡುತ್ತದೆ.

ಆಗ್ನೇಯ ಏಷಿಯಾದ ದ್ವೀಪವಾದ ‘ರಿಪಬ್ಲಿಕ್ ಆಫ್ ದ ಫಿಲಿಪೈನ್ಸ್’ ನ ಫರ್ಡಿನಾಂಡ್ ಮಾರ್ಕೋಸ್  ಕ್ರೋನಿ ಕ್ಯಾಪಿಟಲ್ ಗಳ ಸಹಾಯದಿಂದ ‘ನಾನೇ ಈ ದೇಶದ ನಿಜವಾದ ಧೀರ’ ಎನ್ನುವ ನಂಬಿಕೆ ಹುಟ್ಟಿಸಿ, ವ್ಯಾಪಕ ಸುಳ್ಳು ಮತ್ತು ಹುಸಿ ಭರವಸೆಯನ್ನು ನೀಡಿ ಫಿಲಿಫೈನ್ಸ್ ನಲ್ಲಿ ಸರ್ವಾಧಿಕಾರ ಸ್ಥಾಪಿಸುತ್ತಾನೆ. 1965 ರಿಂದ 1986 ರ ತನಕ ಅಕ್ಷರಶಃ ಸರ್ವಾಧಿಕಾರಿಯಾಗಿ ಆಳುತ್ತಾನೆ. ಮಾರ್ಕೋಸ್ ನ ಆಡಳಿತವು ವ್ಯಾಪಕ ಭ್ರಷ್ಟಾಚಾರದಿಂದ ಕೂಡಿತ್ತು. ಆತನ ದುಂದುಗಾರಿಕೆ ಮತ್ತು  ಕ್ರೌರ್ಯದಿಂದ ಇಡೀ ಫಿಲಿಪೈನ್ಸ್ ಜನರು ಉಸಿರುಗಟ್ಟಿದ್ದರು. ಈತನ ಆಡಳಿತದಲ್ಲಿ ಫಿಲಿಪೈನ್ಸ್ ‌ಜನರು ತೀವ್ರ ಬಡತನದಲ್ಲಿ ನರಳಿದರು. ಮಾಧ್ಯಮಗಳ‌ ಮೇಲೆ ಹಿಂಸಾತ್ಮಕ ದಾಳಿ ಮಾಡಿದನು. ಇದರಿಂದ ಬಹುಪಾಲು ಮಾಧ್ಯಮಗಳು ಮಾರ್ಕೋಸ್ ನ ಅಡಿಯಾಳಾಗಿ ವಕಾಲತ್ತು ವಹಿಸಿದವು. 1981 ರಲ್ಲಿ ಮೂರನೆಯ ಬಾರಿಗೆ ಅಧ್ಯಕ್ಷೀಯ ಚುನಾವಣೆಯಲ್ಲಿ ವಂಚನೆ ಮಾಡಿ ಮರಳಿ ಅಧಿಕಾರ ಹಿಡಿದನು.

Corazon C. Aquino

ಆರ್ಥಿಕವಾಗಿ ತೀವ್ರ ಕುಸಿತ ಉಂಟಾಯಿತು. ವಿರೋಧ ಪಕ್ಷದ ನಾಯಕ ಆಕ್ವಿನೋ ಜೂನಿಯರ್ ಅವರ ಹತ್ಯೆ ಮಾಡಲಾಯಿತು.

ಈ ಹತ್ಯೆಯಿಂದ ಕಂಗೆಟ್ಟ ಆಕ್ವಿನೋ ಮಡದಿ ಕೊರಜಾನೋ ಜನಚಳವಳಿ ಕಟ್ಟಲು ಮುಂದಾಗುತ್ತಾಳೆ. ಈ ಹತ್ಯೆಯು ಸಾರ್ವಜನಿಕವಾಗಿ ಮಾರ್ಕೋಸ್ ಬಗ್ಗೆ ವ್ಯಾಪಕ ವಿರೋಧ ಬುಗಿಲೇಳುವಂತೆ ಮಾಡುತ್ತದೆ. ಜನರು ದಂಗೆಯೇಳಲು ಶುರುಮಾಡುತ್ತಾರೆ. ಇದನ್ನರಿತ ಮಾರ್ಕೋಸ್ 1986 ರಲ್ಲಿ ಕ್ಷಿಪ್ರ ಚುನಾವಣೆ ಘೋಷಿಸುತ್ತಾನೆ. ಹೀಗೆ ಸಾಮೂಹಿಕ ವಂಚನೆ, ರಾಜಕೀಯ ಪ್ರಕ್ಷುಬ್ಧ ವಾತಾವರಣ, ಮಾನವ ಹಕ್ಕುಗಳ ಉಲ್ಲಂಘನೆ ಎಲ್ಲವೂ ಒಟ್ಟಾಗಿ ಫಿಲಿಪೈನ್ಸ್ ನಲ್ಲಿ 1986 ರ ‘ಪೀಪಲ್ ಪವರ್ ರೆವಲ್ಯೂಷನ್’ ನಡೆಯುತ್ತದೆ. ಈ ಕ್ರಾಂತಿಯ ಮುಂದಾಳುವಾಗಿ ಕೊರಜಾನೋ ಸಿ. ಆಕ್ವಿನೋ ಮುನ್ನಲೆಗೆ ಬರುತ್ತಾಳೆ. ಈ ಕ್ರಾಂತಿಯಿಂದಾಗಿ ಮಾರ್ಕೋಸ್ ಮಡದಿ ಮಕ್ಕಳೊಂದಿಗೆ ಹವಾಯಿ ದ್ವೀಪಕ್ಕೆ ಓಡಿಹೋಗುತ್ತಾನೆ.

ಹೀಗೆ ಭೂಸುಧಾರಣೆಗಾಗಿ ಹೋರಾಡುತ್ತಿದ್ದ ಮಾವೋವಾದಿ ಕ್ರಾಂತಿಕಾರಿಗಳ ಬೆಂಬಲದಿಂದ ಆಕ್ವಿನಾ ಅಧಿಕಾರಕ್ಕೆ ಬರುತ್ತಾಳೆ.

1986 ರ ಸೆಪ್ಟೆಂಬರ್ 15 ರಂದು ಮಾರ್ಕೋಸ್ ನ ಸರ್ವಾಧಿಕಾರವನ್ನು ಮಣಿಸಿ ಫಿಲಿಫೈನ್ಸ್ ನ ಮೊದಲ ಮಹಿಳಾ ಅಧ್ಯಕ್ಷೆಯಾಗಿ ಆಕ್ವಿನೋ ಅಧಿಕಾರ ವಹಿಸಿಕೊಳ್ಳುತ್ತಾಳೆ. ಈ ಮೂಲಕ ಏಷಿಯಾದ ಮೊದಲ ಮಹಿಳಾ ಅಧ್ಯಕ್ಷೆ ಎಂದು ಗುರುತಿಸಲ್ಪಡುತ್ತಾಳೆ. ಅಧ್ಯಕ್ಷೆಯಾಗಿ ಅಧಿಕಾರ ವಹಿಸಿಕೊಂಡ ನಂತರ ಕೈಗೊಂಡ ಮೊದಲ ಕಾರ್ಯವೆಂದರೆ, ಮಾರ್ಕೋಸ್ ನ ಶತಕೋಟಿ ಡಾಲರ್ ಅಕ್ರಮ ಸಂಪತ್ತನ್ನು ವಶಪಡಿಸಿಕೊಂಡು ಜನಕಲ್ಯಾಣ ಕಾರ್ಯಗಳಿಗೆ ಯೋಜನೆ ರೂಪಿಸಿದಳು. 1973 ರಲ್ಲಿ ಜಾರಿಯಾಗಿದ್ದ ಮಾರ್ಷಲ್ ಯುಗದ ಸರ್ವಾಧಿಕಾರಿ ಸಂವಿಧಾನವನ್ನು ರದ್ದುಗೊಳಿಸುತ್ತಾಳೆ. ನ್ಯಾಯವಾದಿ ಸಿಸಿಲಿಯಾ ಮುನೋಜ್-ಪಾಲ್ಮಾ ಅವರನ್ನು ಹೊಸ ಸಂವಿಧಾನ ರಚನೆಯ ಅಧ್ಯಕ್ಷೆಯನ್ನಾಗಿ ನೇಮಿಸುತ್ತಾರೆ.

ಕರಡು ರಚನೆಯಾದ ನಂತರ ಫಿಲಿಪೈನ್ಸ್ ನ ರಾಷ್ಟ್ರವ್ಯಾಪಿ ಜನಾಭಿಪ್ರಾಯ ಸಂಗ್ರಹಿಸಿ 1987 ರ  ಫೆಬ್ರವರಿ 2 ರಂದು ಪ್ರಜಾಪ್ರಭುತ್ವದ ಸ್ವತಂತ್ರ ಸಂವಿಧಾನವನ್ನು ಜಾರಿಗೊಳಿಸಲಾಗುತ್ತದೆ. ಕ್ರೋನಿ ಕ್ಯಾಪಿಟಲ್ ಗಳನ್ನು ನಿಯಂತ್ರಿಸಿ ಮಾರುಕಟ್ಟೆಯ ಉದಾರ ನೀತಿಯನ್ನು ಜಾರಿಗೊಳಿಸಿ ಆರ್ಥಿಕ ವಿಕೇಂದ್ರೀಕರಣಕ್ಕೆ ಬೆಂಬಲ ನೀಡಿದಳು.

ಜನವರಿ 22, 1987 ರಂದು ರೈತರು ಭೂಸುಧಾರಣೆಗಾಗಿ ಶಾಂತಿಯುತ ಚಳವಳಿ ನಡೆಸಿದರು. ಆಗ ಪೋಲಿಸ್ ಮತ್ತು ನೌಕಾಪಡೆಯ ಗಡಿಮೀರಿದ ಕಾರಣಕ್ಕೆ ಗುಂಡುಹಾರಿಸಿದ ಪರಿಣಾಮ 12 ನಾಗರಿಕರು ಕೊಲ್ಲಲ್ಪಟ್ಟು 50 ಜನರು ಗಾಯಾಳುಗಳಾದರು. ಇದನ್ನೆ ಮೆಂಡಿಯೋಲಾ ಹತ್ಯಾಕಾಂಡ ಎಂದು ಗುರುತಿಸುತ್ತಾರೆ. ಆಕ್ವಿನಾ ರಾಜವಂಶದ ಪರಂಪರೆಯಿಂದ ಬಂದವಳು. ಅಪಾರ ಆಸ್ತಿಪಾಸ್ತಿ ಸಂಪತ್ತಿನ ಒಡತಿಯೂ ಆಗಿದ್ದವಳು. ಹೀಗಾಗಿ ಫಿಲಿಫೈನ್ಸ್ ಮಾವೋವಾದಿ ಕ್ರಾಂತಿಕಾರಿಗಳ ವಿರೋಧಕ್ಕೂ ಗುರಿಯಾಗುತ್ತಾಳೆ.

ತನ್ನ ಸಂಪತ್ತಿನ ಶೇರುಗಳನ್ನು ಹಂಚುವ ಮೂಲಕ ಈ ವಿರೋಧವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾಳೆ.ಜನಚಳವಳಿಯ ಒತ್ತಡ ಹೆಚ್ಚಿದಂತೆ ಕೃಷಿಯಲ್ಲಿ ಆಮೂಲಾಗ್ರ ಬದಲಾವಣೆ ತರಲು ಆಕೆ ಭೂ ಸುಧಾರಣೆಯನ್ನು ತರುತ್ತಾಳೆ. ಇದರಿಂದ ಜಮೀನ್ದಾರಿ ಬಲಾಢ್ಯರಿಂದ ಟೀಕೆಯನ್ನು ಎದುರಿಸುತ್ತಾಳೆ‌. ಇಷ್ಟಾಗಿಯೂ ಸಮಗ್ರ ಕೃಷಿ ಸುಧಾರಣ ಕಾಯ್ದೆ ಜಾರಿಗೊಳಿಸಿ ಭೂಮಾಲಿಕರಿಂದ ಭೂಮಿ ಇಲ್ಲದವರಿಗೆ ಭೂಮಿಯನ್ನು ಮರುಹಂಚಿಕೆ ಮಾಡಲು ಪ್ರಯತ್ನಿಸಿದಳು. ಈ ಕಾಯ್ದೆಯ ನಂತರ 5 ಹೆಕ್ಟೇರಿಗಿಂತ ಹೆಚ್ಚಿನ ಭೂಮಿಯನ್ನು ಯಾರೂ ಹೊಂದುವಂತಿರಲಿಲ್ಲ.

ಈ ಬಗೆಯ ಸುಧಾರಣೆಗಳಿಂದ ಸಹಜವಾಗಿ ಬಲಾಢ್ಯ ಬಂಡವಾಳಶಾಹಿಗಳಿಗೆ ತೀವ್ರ ನಷ್ಟವಾಗತೊಡಗಿತು. ಮಾರ್ಕೋಸ್ ಬೆಂಬಲದಿಂದ 1986 ರಿಂದ 1990ರ ತನಕ ಆಕ್ವಿನೋ ವಿರುದ್ಧ ಆಂತರಿಕ ದಂಗೆಗಳನ್ನು ಆಯೋಜಿಸ ತೊಡಗಿದರು. 

1990 ರಲ್ಲಿ ಸಂಭವಿಸಿದ ಲುಜಾನ್ ಭೂಕಂಪ,  1991 ರ ಜ್ವಾಲಾಮುಖಿ ಸ್ಪೋಟ, 1991 ರ ಕೊನೆಗೆ ಸಂಭವಿಸಿದ ಚಂಡಮಾರುತದಂತಹ ನೈಸರ್ಗಿಕ ವಿಕೋಪಗಳು ದೇಶದ ಆರ್ಥಿಕತೆಯನ್ನು ದುರ್ಬಲಗೊಳಿಸಿದವು. ಆಕ್ವಿನಾ ನಿಧಾನಕ್ಕೆ ಭೂಮಾಲಿಕರ ಮತ್ತು ಬಂಡವಾಳಶಾಹಿಗಳ ಪರ ವಾಲುತ್ತಾ ಕ್ರಾಂತಿಕಾರಿಗಳ ಸರಣಿ ಕೊಲೆಗಳನ್ನು ನಡೆಸತೊಡಗುತ್ತಾಳೆ.

ಪರಿಣಾಮವಾಗಿ 1992 ರ ಅಧ್ಯಕ್ಷೀಯ ಚುನಾವಣೆಯಲ್ಲಿ ತನ್ನದೇ ಪಕ್ಷದ ಫಿಡೆಲ್ ವಿ.ರಾಮೋಸ್ ಅವರನ್ನು ತನ್ನ ಉತ್ತರಾಧಿಕಾರಿಯಾಗಿ ಬೆಂಬಲಿಸುತ್ತಾಳೆ. ನಂತರ ಪಿಲಿಫೈನ್ಸ್ ನ ಸಾರ್ವಜನಿಕ ಚುನಾವಣೆಯಲ್ಲಿ ರಾಮೋಸ್ ಆಯ್ಕೆಯಾಗುತ್ತಾನೆ. ಜೂನ್ 30, 1992 ರಂದು ಅಧಿಕಾರ ಹಸ್ತಾಂತರ ಮಾಡುತ್ತಾಳೆ. ಸರಕಾರ ನೀಡಿದ ಮರ್ಸಿಡಿಸ್ ಬೆಂಜ್ ಕಾರ್ ಸರಕಾರಕ್ಕೆ ನೀಡಿ ತನ್ನ ಸಾಮಾನ್ಯವಾದ ಟೊಯೋಟಾ ಕಾರೊಂದರಲ್ಲಿ ಮನೆಗೆ ಮರಳುತ್ತಾಳೆ.  

ಮುಂದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಜಾಪ್ರಭುತ್ವ, ಮಾನವ ಹಕ್ಕುಗಳು, ಮತ್ತು ಮಹಿಳಾ ಸಬಲೀಕರಣಕ್ಕಾಗಿ ದುಡಿಯುತ್ತಾಳೆ. ಮನಿಲಾದಲ್ಲಿ UNESCO ವರ್ಲ್ಡ್ ಕಮಿಷನ್ ಆನ್ ಕಲ್ಚರ್ ಅಂಡ್ ಡೆವಲಪ್‌ಮೆಂಟ್‌ನ 1994 ರ ಸಭೆಯಲ್ಲಿ , ಬರ್ಮಾದ ಪ್ರಜಾಪ್ರಭುತ್ವ ನಾಯಕಿ ಆಂಗ್ ಸಾನ್ ಸೂಕಿಯನ್ನು ಬಂಧನದಿಂದ ಬೇಷರತ್ತಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿ ಭಾಷಣ ಮಾಡುತ್ತಾಳೆ.

ಆಕ್ವಿನೋ ತನ್ನ ಗಂಡನ ಹೆಸರಿನಲ್ಲಿ 2007 ರಲ್ಲಿ Aquino PinoyME ಫೌಂಡೇಶನ್ ಅನ್ನು ಸ್ಥಾಪಿಸಿ ಬಡವರು ಮತ್ತು ನಿರಾಶ್ರಿತರಿಗೆ ನೆರವಾಗುವ ಸಾಮಾಜಿಕ ವಸತಿ ಯೋಜನೆಯನ್ನು ಕೈಗೊಳ್ಳುತ್ತಾಳೆ‌. ಲಾಭದ ಉದ್ದೇಶವಿಲ್ಲದೆ  ಬಡವರಿಗೆ ಕಿರುಬಂಡವಾಳ ಸಾಲದ ಯೋಜನೆಗಳನ್ನು ಜನಪ್ರಿಯಗೊಳಿಸಿದರು. 

ದೀರ್ಘಕಾಲೀನ ಕ್ಯಾನ್ಸರ್ ನಿಂದ ಬಳಲಿ ಆಕ್ವಿನೊ ಅವರು 76 ನೇ ವಯಸ್ಸಿನಲ್ಲಿ ಹೃದಯಾಘಾತದಿಂದ ಆಗಸ್ಟ್ 1, 2009 ರಂದು ನಿಧನರಾದರು.

ಪ್ರಜಾಪ್ರಭುತ್ವದ ಸಂಕೇತವಾಗಿ ಆಕ್ವಿನಾ ಅವರನ್ನು ಗುರುತಿಸುತ್ತಿದ್ದರೂ ನಂತರದ ಬೆಳವಣಿಗೆಯಲ್ಲಿ ಆಕೆ ಬಂಡವಾಳಶಾಹಿಯ ಪರವಾದ ಜನಚಳವಳಿಯನ್ನು ದಮನಮಾಡುವುದು, ಇದೀಗ ಯಾವ ಸರ್ವಾಧಿಕಾರಿಯನ್ನು ಹಿಮ್ಮೆಟ್ಟಿಸಿದ್ದಳೋ ಅದೇ ಮಾರ್ಕೋಸ್ ನ ಮಗ ಫರ್ಡಿನಾಂಡ್ ಭಾಂಗ್ ಬಾಂಗ್ ಮಾರ್ಕೋಸ್ ಅಧಿಕಾರಕ್ಕೆ ಬಂದಿರುವುದು ಚಾರಿತ್ರಿಕ ವ್ಯಂಗ್ಯವಾಗಿದೆ.

ಡಾ. ಅರುಣ್ ಜೋಳದಕೂಡ್ಲಿಗಿ

ಸಂಶೋಧಕರು

ಇದನ್ನೂ ಓದಿ- ಪ್ರಜಾಪ್ರಭುತ್ವ ಆಶಯವೂ ಪುಸ್ತಕ ಲೋಕದ ನಿರ್ಲಕ್ಷ್ಯವೂ

More articles

Latest article