ಬೆಂಗಳೂರು: ಒಳಮೀಸಲಾತಿ ಹಂಚಿಕೆ ಕುರಿತು ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ರಚನೆಯಾಗಿರುವ ಏಕ ಸದಸ್ಯ ಆಯೋಗದ ವರದಿ ಬರುವವರೆಗೆ ಕಾಯೋಣ ಎಂದು ಕಾಂಗ್ರೆಸ್ ಮುಖಂಡ ಮಾಜಿ ಸಚಿವ ಎಚ್. ಆಂಜನೇಯ ಕರೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಪಕ್ಷದ ಕಚೇರಿಯಲ್ಲಿ ಮಾತನಾಡಿದ ಅವರು ಈ ವರದಿ ಬರುವವರೆಗೆ ಸಮುದಾಯದ ಹೋರಾಟಗಾರರು ತಾಳ್ಮೆಯಿಂದ ಇರಬೇಕು ಎಂದು ಮನವಿ ಮಾಡುತ್ತೇವೆ. ಅಲ್ಲಲ್ಲಿ ಈ ಬಗ್ಗೆ ಹೋರಾಟ ಮಾಡಲಾಗುತ್ತಿದೆ. ಈಗಿನ ಸರ್ಕಾರ ನಮ್ಮ ಪರವಾಗಿದೆ. ಹೀಗಿರುವಾಗ ಹೋರಾಟ ಅನಗತ್ಯ. 30 ವರ್ಷ ಕಾದಿರುವ ನಾವುಗಳು ಎರಡು ತಿಂಗಳು ಕಾಯೋಣ ಎಂದರು.
ನಾವುಗಳು ನಾಗಮೋಹನ್ ದಾಸ್ ಅವರಿಗೆ ಸೂಕ್ತ ದಾಖಲೆಗಳನ್ನು ನೀಡುವ ಕೆಲಸ ಮಾಡಬೇಕು. ಪ್ರತಿ ತಾಲ್ಲೂಕು, ಜಿಲ್ಲಾವಾರು ಮುಖಂಡರು ಬಂದು ನಾಗಮೋಹನ್ ದಾಸ್ ಅವರಿಗೆ ತಮ್ಮ ಸಮುದಾಯದ ಸ್ಥಿತಿಗತಿಗಳ ಬಗ್ಗೆ ತಿಳಿಸಬೇಕು ಎಂದರು.
ಎಸ್.ಎಂ.ಕೃಷ್ಣ ಅವರು ಈ ಅನ್ಯಾಯವನ್ನು ಸರಿಪಡಿಸಲು ಸದಾಶಿವ ಆಯೋಗವನ್ನು ರಚನೆ ಮಾಡಿದರು. ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣ ಪರಿಶಿಷ್ಟ ಜಾತಿಯ ಎಲ್ಲಾ ಸಮುದಾಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸದಾಶಿವ ಆಯೋಗದ ವರದಿಯನ್ನು ಪಾಲಿಸಿ ಒಳಮೀಸಲಾತಿ ಜಾರಿಗೆ ತರಲಾಗುವುದು ಎಂದು ಚುನಾವಣಾ ಪ್ರಣಾಳಿಕೆಯಲ್ಲಿ ಭರವಸೆ ಕೊಡಲಾಗಿತ್ತು. ಆರನೇ ಗ್ಯಾರಂಟಿಯಾದ ಒಳಮೀಸಲಾತಿಯನ್ನು ಕಾರ್ಯರೂಪಕ್ಕೆ ತರಲು ನಮ್ಮ ಸರ್ಕಾರ ತಯಾರಾಗಿದೆ. ಇದಕ್ಕೆ ಇಂಬು ನೀಡುವಂತೆ ಸುಪ್ರೀಂ ಕೋರ್ಟ್ ಸಹ ಒಳಮೀಸಲಾತಿಯನ್ನು ಹಂಚಿಕೆ ಮಾಡುವ ಅಧಿಕಾರ ರಾಜ್ಯ ಸರ್ಕಾರಗಳಿಗಿದೆ ಎನ್ನುವ ತೀರ್ಪನ್ನು ಎತ್ತಿಹಿಡಿದು ನಮ್ಮ ಸಮುದಾಯಗಳ ದನಿಗೆ ಶಕ್ತಿ ನೀಡಿದೆ. ನಮ್ಮ ಸರ್ಕಾರವೂ ಇದಕ್ಕೆ ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ತಿಳಿಸಿದರು.
ಈ ಒಳಮೀಸಲಾತಿ ಜಾರಿ ಮಾಡಲು ಎಂಪಿರಿಕಲ್ ಡೇಟಾ ಲಭ್ಯವಿಲ್ಲ ಎಂದು ಒಂದಿಷ್ಟು ಮಂದಿ ಹಾದಿ ತಪ್ಪಿಸುತ್ತಿದ್ದಾರೆ. ಆದರೆ ಸರ್ಕಾರದ ಬಳಿ ಈ ದತ್ತಾಂಶವಿದೆ. 2011 ರ ಜನಗಣತಿಯ ಅಂಶಗಳನ್ನು ಪರಿಗಣನೆ ಮಾಡಬೇಕು ಎಂದು ಹೇಳಲಾಗಿದೆ. ಜೊತೆಗೆ ಸದಾಶಿವ ಆಯೋಗ ಕಲೆಹಾಕಿರುವ ಮಾಹಿತಿಗಳನ್ನೂ ಸಹ ಬಳಸಿಕೊಳ್ಳಬಹುದು ಎಂದು ಹೇಳಲಾಗಿದೆ ಎಂದು ರಾಜ್ಯಸಭಾ ಮಾಜಿ ಸದಸ್ಯ ಎಲ್.ಹನುಮಂತಯ್ಯ ಹೇಳಿದ್ದಾರೆ.
ಈ ಹಿಂದಿನ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ಶಿಫಾರಸ್ಸುಗಳನ್ನು ತಿರಸ್ಕಾರ ಮಾಡಿತ್ತು. ಅಲ್ಲದೇ ಕಾಂತರಾಜು ವರದಿಯಲ್ಲಿಯೂ ಅಂಕಿಅಂಶಗಳು ಸಿಗುತ್ತವೆ. ಸರ್ಕಾರ ಈ ವರದಿಯನ್ನು ಒಪ್ಪಿದರೆ ಅದನ್ನೂ ಸಹ ಬಳಸಿಕೊಳ್ಳಬಹುದು. ಆದ ಕಾರಣ ಸರ್ಕಾರದ ಬಳಿ ದತ್ತಾಂಶಗಳು ಇಲ್ಲ ಎನ್ನುವುದು ಸುಳ್ಳು. ನಾಗಮೋಹನ್ ದಾಸ್ ಅವರ ಆಯೋಗವೇ ಬೇಡ ಎಂದು ಅನೇಕರು ವಾದ ಮಾಡುತ್ತಿದ್ದಾರೆ. ಇದು ಸರಿಯಲ್ಲ ಎಂದು ಹೇಳಿದರು.
101 ಜಾತಿಗಳಲ್ಲಿ ಪ್ರಮಖವಾಗಿ 4 ಜಾತಿಗಳಿವೆ. ಇದರಲ್ಲಿ ಭೋವಿ ಹಾಗೂ ಲಂಬಾಣಿ ಜಾತಿಗಳನ್ನು ಪರಿಶಿಷ್ಟರ ಪಟ್ಟಿಯಿಂದ ತೆಗೆದು ಹಾಕಲಾಗುತ್ತದೆ ಎನ್ನುವ ಅಪಪ್ರಚಾರ ಮಾಡಲಾಗುತ್ತಿದೆ. ಯಾವುದೇ ಜಾತಿಗಳನ್ನು ಇದರಿಂದ ತೆಗೆಯುವುದಿಲ್ಲ. ಒಳ ಮೀಸಲಾತಿ ಹೋರಾಟಗಾರರಿಂದ ಯಾವುದೇ ಕಾರಣಕ್ಕೂ ಈ ಬೇಡಿಕೆ ಬಂದಿಲ್ಲ. ಈ ವಿಚಾರ ಅಪ್ಪಿತಪ್ಪಿಯೂ ಈ ವಿಚಾರ ಬಂದಿಲ್ಲ. ಆದರೆ ಕೆಲವರು ಹೋರಾಟವನ್ನು ಹಾಳು ಮಾಡಬೇಕು ಎಂದು ಇದನ್ನು ಮಾಡಲಾಗುತ್ತಿದೆ. ನಾವು ನೀವು ಎಲ್ಲರೂ ಒಂದೇ ಆದ ಕಾರಣ ನಿಮ್ಮ ಅನುಕೂಲಗಳನ್ನು ಇಲ್ಲಿ ಯಾರೂ ಕಿತ್ತುಕೊಳ್ಳುವುದಿಲ್ಲ ಎಂದು ಕೆಪಿಸಿಸಿ ಮಾಜಿ ಕಾರ್ಯಾಧ್ಯಕ್ಷ ಚಂದ್ರಪ್ಪ ತಿಳಿಸಿದರು.