ಸುಪ್ರೀಂ ಕೋರ್ಟ್‌ನ ಈ ಐತಿಹಾಸಿಕ ತೀರ್ಪಿನಲ್ಲಿ ಕೆನೆಪದರ ಪ್ರಸ್ತಾಪವಿರುವುದು ಒಳಮೀಸಲಾತಿಯ ಸರಳ ಅನುಷ್ಠಾನಕ್ಕೆ ಅಡ್ಡಿಯಾಗುವ ಸಾಧ್ಯತೆಗಳನ್ನು ಅಲ್ಲೆಗೆಳೆಯುವಂತಿಲ್ಲ. ಒಟ್ಟಾರೆ ಮೀಸಲಾತಿ ಪರಿಪೂರ್ಣವಾಗಿ ಅನುಷ್ಠಾನಗೊಳ್ಳದ ಹೊರತು, ಕೆನೆ ಪದರ ಅಳವಡಿಸುವುದು ಸಾಧ್ಯವಾಗುವುದಿಲ್ಲ. ಇಲ್ಲೀಗ ಮೀಸಲಾತಿಯೇ ಪರಿಪೂರ್ಣವಾಗಿ ದಲಿತ ಸಮುದಾಯಗಳಿಗೆ ಇನ್ನೂ ತಲುಪಿಲ್ಲದಿರುವಾಗ ಒಳ ಮೀಸಲಾತಿ ಅಳವಡಿಸುವಲ್ಲಿ ಕೆನೆ ಪದರ ಅಳವಡಿಸಬೇಕೆಂಬುದು ಮಾತ್ರ ಅವೈಜ್ಞಾನಿಕ – ಎನ್ ರವಿಕುಮಾರ್ ಟೆಲೆಕ್ಸ್, ಪತ್ರಕರ್ತರು.
ವಿರೋಚಿತ ಹೋರಾಟದ ವೃಕ್ಷಕ್ಕೆ ಹಣ್ಣು ಬಿಟ್ಟಿದೆ.
ಪರಿಶಿಷ್ಟ ಜಾತಿಗಳಿಗೆ ಒಳಮೀಸಲಾತಿ ಅಗತ್ಯವನ್ನು ಎತ್ತಿ ಹಿಡಿದು ಮತ್ತು ಒಳಮೀಸಲು ಕಲ್ಪಿಸುವ ಅಧಿಕಾರವನ್ನು ರಾಜ್ಯಗಳಿಗೆ ನೀಡಿ ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ಏಳು ನ್ಯಾಯಾಧೀಶರ ಸಾಂವಿಧಾನಿಕ ಪೀಠ ತೀರ್ಪು ನೀಡಿದೆ. ಇದೊಂದು ಚಾರಿತ್ರಿಕ ತೀರ್ಪೆ ಸರಿ.
ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿ ಕಲ್ಪಿಸುವ ಮೂಲಕ ಸಾಮಾಜಿಕ ನ್ಯಾಯವನ್ನು ಅಂಚಿನ ಜನಜಾತಿಗೂ ತಲುಪಿಸಬೇಕು. ಸರ್ವರಿಗೂ ಸಮಪಾಲು-ಸಮಬಾಳು ಎಂಬ ಸಂವಿಧಾನದ ಜೀವದ್ರವ್ಯವನ್ನು ಸಾಕ್ಷಾತ್ಕಾರ ಗೊಳಿಸಬೇಕೆಂದು ನಡೆದ 45 ವರ್ಷಗಳ ಒಳಮೀಸಲು ಹೋರಾಟಕ್ಕೆ ಕೊನೆಗೂ ಜಯ ಸಿಕ್ಕಂತಾಗಿದೆ.
ಏನಿದು ಒಳಮೀಸಲು?
ಕರ್ನಾಟಕದಲ್ಲಿ ಪರಿಶಿಷ್ಟಜಾತಿಯ ಪಟ್ಟಿಯು 101 ಜಾತಿಗಳನ್ನು ಒಳಗೊಂಡಿದೆ. ಸಾಮಾಜಿಕವಾಗಿ, ಆರ್ಥಿಕವಾಗಿ, ಶೈಕ್ಷಣಿಕವಾಗಿ ಮತ್ತು ರಾಜಕೀಯವಾಗಿ ಹಿಂದುಳಿದ ಜನಜಾತಿಗಳು ಈ ಪಟ್ಟಿಯಲ್ಲಿದ್ದರೂ ಅಸ್ಪೃಶ್ಯ ಜಾತಿಗಳ ಜೊತೆಗೆ ಸ್ಪೃಶ್ಯ ಜಾತಿಗಳೂ ಸೇರಲ್ಪಟ್ಟಿವೆ. ಮೀಸಲಾತಿ ಪ್ರಮಾಣವು ಒಟ್ಟಾರೆ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ಕೆಲವೆ ಜಾತಿಗಳ ಪಾಲಾಗುತ್ತಿದ್ದು, ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲಿನ ಬಹುಸಂಖ್ಯಾತ ಅಸ್ಪೃಶ್ಯ ಜಾತಿಗಳಿಗೆ ಅನ್ಯಾಯವಾಗುತ್ತಿದೆ ಎಂಬ ಕೂಗು ಹಿಂದಿನಿಂದಲೂ ಇದೆ. ಈ ಕಾರಣದಿಂದಲೆ ಪರಿಶಿಷ್ಟ ಜಾತಿಯೊಳಗೆ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಪ್ರಮಾಣ ಹಂಚುವ ಮೂಲಕ ಎಲ್ಲರಿಗೂ ಅವರವರ ಜನಸಂಖ್ಯೆಗನುಗುಣವಾಗಿ ಪಾಲು ನೀಡಬೇಕೆಂಬ ಮತ್ತು ಸಮಾನವಾಗಿ ಹಂಚುಣ್ಣುವ ನ್ಯಾಯ ಕ್ರಮವೇ ಒಳಮೀಸಲಾತಿ ಎಂದು ಸಂಕ್ಷಿಪ್ತವಾಗಿ ಹೇಳಬಹುದು.
ಮೊಟ್ಟಮೊದಲ ಬಾರಿಗೆ ಪಂಜಾಬ್‍ನಲ್ಲಿ 1975 ರಲ್ಲಿ ಪರಿಶಿಷ್ಟ ಜಾತಿಗಳಲ್ಲಿ ಒಳಮೀಸಲಾತಿಗೆ ಕೂಗು ಕೇಳಿಬಂದಿತು. ಅದನ್ನು ಜಾರಿಗೂ ತರಲಾಯಿತು. ಅದೇ ರೀತಿ 1994ರಲ್ಲಿ ಹರಿಯಾಣದಲ್ಲಿ ಒಳಮೀಸಲಾತಿಯನ್ನು ಅಳವಡಿಸಲಾಯಿತು. ಆದರೆ ಇಡೀ ದೇಶಾದ್ಯಂತ ಒಳಮೀಸಲಾತಿಯ ನ್ಯಾಯಕ್ರಮದ ಗಮನ ಸೆಳೆದದ್ದು ಮಾತ್ರ ಆಂಧ್ರಪ್ರದೇಶ. 1997 ರಲ್ಲಿ ಪರಿಶಿಷ್ಟ ಜಾತಿಯ ಬಹುಸಂಖ್ಯಾತ ಮಾದಿಗರು ಒಳ ಮೀಸಲಾತಿಗಾಗಿ ನಿರ್ಣಾಯಕ ಹೋರಾಟಕ್ಕಿಳಿದರು. ಇದರ ಪರಿಣಾಮ ಅಂದಿನ ಸರ್ಕಾರ ಜಸ್ಟೀಸ್ ರಾಮಚಂದ್ರರಾವ್ ಆಯೋಗ ರಚಿಸಿದ್ದು, ಅದರ ಶಿಫಾರಸ್ಸುಗಳನ್ನು ಅನುಷ್ಠಾನಗೊಳಿಸಲು ಮುಂದಾಯಿತು. ಆದರೆ ಪರಿಶಿಷ್ಟ ಜಾತಿಗಳ ಪಟ್ಟಿಯಲ್ಲೆ ಇರುವ ಬಲಾಢ್ಯ ಮಾ¯ ಸಮುದಾಯ ಒಳಮೀಸಲಾತಿಯನ್ನು ಪ್ರಶ್ನಿಸಿ ನ್ಯಾಯಾಲಯದ ಮೊರೆ ಹೋಗಿದ್ದರಿಂದ ಕೆಳ ನ್ಯಾಯಾಲಯ ಮತ್ತು ಹೈ ಕೋರ್ಟುಗಳು ಒಳಮೀಸಲಾತಿಯನ್ನು ರದ್ದುಗೊಳಿಸಿದವು.
ಇದೇ ವಿಚಾರವಾಗಿ ಸುಪ್ರೀಂ ಕೋರ್ಟ್ ನ (ಇ.ವಿ ಚಿನ್ನಯ್ಯ ವರ್ಸಸ್ ಆಂಧ್ರಪ್ರದೇಶ) ಐವರು ಸದಸ್ಯರ ಪೀಠವು ಆಂಧ್ರಪ್ರದೇಶ ಸರ್ಕಾರದ ನಿರ್ಧಾರವನ್ನು ರದ್ದುಗೊಳಿಸಿ ಒಳಮೀಸಲು ಅಧಿಕಾರ ರಾಜ್ಯಗಳಿಗಿಲ್ಲ ಎಂದು ತೀರ್ಪು ನೀಡಿತು. ಇದು ಹರಿಯಾಣ, ಪಂಜಾಬ್ ರಾಜ್ಯಗಳಿಗೂ ಅನ್ವಯಿಸಿ ಒಳಮೀಸಲಾತಿ ಎಂಬ ನ್ಯಾಯದ ತುತ್ತಿಗೆ ಗ್ರಹಣ ಹಿಡಿದಂತಾಯಿತು.
ಕರ್ನಾಟಕದಲ್ಲಿ ಪರಿಶಿಷ್ಟ ಜಾತಿಗಳಲ್ಲೆ ಗರಿಷ್ಠ ಶೇ.39 ರಷ್ಟು ಪ್ರಮಾಣದಲ್ಲಿರುವ ಮಾದಿಗ ಸಮುದಾಯ ಒಳಮೀಸಲಾತಿಗಾಗಿ ಹೋರಾಟ ಆರಂಭಿಸಿತು. 2005ರಲ್ಲಿ ಅಂದಿನ ಮುಖ್ಯಮಂತ್ರಿ ಧರಂಸಿಂಗ್ ಅವರು ಜಸ್ಟೀಸ್ ಸದಾಶಿವ ಅವರ ನೇತೃತ್ವದಲ್ಲಿ ಆಯೋಗವನ್ನು ರಚಿಸಿದರು. ಅನೇಕ ತೊಡಕುಗಳ ನಡುವೆ ಆಯೋಗ 2012 ರಲ್ಲಿ ಮುಖ್ಯಮಂತ್ರಿ ಸದಾನಂದ ಗೌಡ ಅವರಿಗೆ ವರದಿ ನೀಡಿದ್ದು, ಪರಿಶಿಷ್ಟ ಜಾತಿಯಲ್ಲಿನ ಬಹುಸಂಖ್ಯಾತ ಮಾದಿಗರಿಗೆ ಶೇ. 6, ಹೊಲೆಯರಿಗೆ ಶೇ. 5, ಸ್ಪೃಶ್ಯ ಜಾತಿಗಳಿಗೆ ಶೇ. 3 ಮತ್ತು ಇತರೆ ಶೇ. 1 ರಂತೆ ಒಟ್ಟಾರೆ ಶೇ. 15 ರಷ್ಟು ಮೀಸಲಾತಿಯನ್ನು ಹಂಚಿಕೆ ಮಾಡಿ ವರದಿ ಸಲ್ಲಿಸಿತು. ಆದರೆ 2023 ಮಾರ್ಚ್ 27 ರಂದು ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಸದಾಶಿವ ಆಯೋಗದ ವರದಿಯನ್ನು ರದ್ದುಗೊಳಿಸಿದ್ದು, ಜಸ್ಟೀಸ್ ನಾಗಮೋಹನ್ ದಾಸ್ ವರದಿಯನ್ನಾಧರಿಸಿ ಶೇ. 17 ಮೀಸಲಾತಿ ಹೆಚ್ಚಳದೊಂದಿಗೆ ಹಂಚಿಕೆ ಸೂತ್ರವನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಿತ್ತು. ಆದರೆ ಪ್ರಕರಣ ಸುಪ್ರೀಂ ಕೋರ್ಟು ಮೆಟ್ಟಿಲೇರಿದ್ದು ಒಳಮೀಸಲಾತಿಯ ಅಧಿಕಾರ ರಾಜ್ಯ ಸರ್ಕಾರ ಅಥವಾ ಒಕ್ಕೂಟ(ಕೇಂದ್ರ) ಸರ್ಕಾರಕ್ಕೆ ಸೇರಿದೆಯಾ ಎನ್ನುವ ಜಿಜ್ಞಾಸೆಗೆ ಪರಿಹಾರ ನಿರೀಕ್ಷಿಸಲಾಗುತ್ತಿತ್ತು.
ಒಳಮೀಸಲಾತಿ ಕುರಿತಂತೆ ಸುಪ್ರೀಂಕೋರ್ಟ್‌ನ ಏಳು ನ್ಯಾಯಾಧೀಶರ ಪೀಠ ಇದೀಗ ಒಳಮೀಸಲಾತಿಯ ಕುರಿತು ಮಹತ್ವದ ತೀರ್ಪು ನೀಡುವ ಮೂಲಕ ಆಯಾ ರಾಜ್ಯಗಳಿಗೆ ನ್ಯಾಯಕ್ರಮವನ್ನು ಜಾರಿಗೊಳಿಸುವ ಅಧಿಕಾರವನ್ನು ಕೊಟ್ಟಿರುವುದು ಸಾಮಾಜಿಕ ನ್ಯಾಯದ ಅನುಷ್ಠಾನದ ಅಧಿಕಾರ ವಿಕೇಂದ್ರೀಕರಣವನ್ನು ಸಮರ್ಪಕವಾಗಿ ವ್ಯಾಖ್ಯಾನಿಸಿದೆ.
ನ್ಯಾಯದ ಬಾಗಿಲು
ಒಕ್ಕೂಟ ಸರ್ಕಾರಕ್ಕೆ ಇದ್ದ ಒಳಮೀಸಲು ಅಧಿಕಾರವನ್ನು ರಾಜ್ಯ ಸರ್ಕಾರಗಳ ಕೈ ಗೆ ಹಸ್ತಾಂತರಿಸುವ ಮೂಲಕ ಸುಪ್ರೀಂ ಕೋರ್ಟು ರಾಜ್ಯಗಳು ಒಕ್ಕೂಟ ಸರ್ಕಾರದ ಮರ್ಜಿಗೆ ಕಾಯುವ, ಬೇಡುವ ಸಂದರ್ಭವನ್ನು ತಪ್ಪಿಸಿದೆ. ರಾಜಕೀಯ ಹೊಯ್ದಾಟಗಳಲ್ಲಿ ಜನಜಾತಿಗಳು ಹಕ್ಕು ಮತ್ತು ನ್ಯಾಯಕ್ಕಾಗಿ ಸೊರಗದಂತೆ ಕಾಪಾಡಿದೆ.
ಸುಪ್ರೀಂಕೋರ್ಟು ತೀರ್ಪಿನಿಂದ 1975, 1994, 1997 ರಲ್ಲಿ ಪಂಜಾಬ್, ಹರಿಯಾಣ ಮತ್ತು ಆಂಧ್ರಪ್ರದೇಶ ಸರ್ಕಾರಗಳು ಕೈಗೊಂಡ ನಿರ್ಧಾರಗಳಿಗೆ ಬಲ ಬಂದಿದ್ದು, ಪ್ರಸ್ತುತ ಕರ್ನಾಟಕದಲ್ಲಿ ಸಿದ್ದರಾಮಯ್ಯ ಅವರ ನೇತೃತ್ವದ ರಾಜ್ಯ ಸರ್ಕಾರ ಚುನಾವಣೆ ಸಂದರ್ಭದಲ್ಲಿ ಕೊಟ್ಟ ಭರವಸೆಯಂತೆ ಒಳಮೀಸಲಾತಿ ಅನುಷ್ಠಾನಕ್ಕೆ ದಾರಿ ಸುಗಮವಾಗಿದೆ.
ಆದರೆ ಸುಪ್ರೀಂ ಕೋರ್ಟ್‌ನ ಈ ಐತಿಹಾಸಿಕ ತೀರ್ಪಿನಲ್ಲಿ ಕೆನೆಪದರ ಪ್ರಸ್ತಾಪವಿರುವುದು ಒಳಮೀಸಲಾತಿಯ ಸರಳ ಅನುಷ್ಠಾನಕ್ಕೆ ಅಡ್ಡಿಯಾಗುವ ಸಾಧ್ಯತೆಗಳನ್ನು ಅಲ್ಲೆಗೆಳೆಯುವಂತಿಲ್ಲ. ಒಟ್ಟಾರೆ ಮೀಸಲಾತಿ ಪರಿಪೂರ್ಣ ಅನುಷ್ಠಾನಗೊಳ್ಳದ ಹೊರತು, ಕೆನೆ ಪದರ ಅಳವಡಿಸುವುದು ಸಾಧ್ಯವಾಗುವುದಿಲ್ಲ. ಇಲ್ಲೀಗ ಮೀಸಲಾತಿಯೇ ಪರಿಪೂರ್ಣವಾಗಿ ದಲಿತ ಸಮುದಾಯಗಳಿಗೆ ಇನ್ನೂ ತಲುಪಿಲ್ಲದಿರುವಾಗ ಒಳ ಮೀಸಲಾತಿ ಅಳವಡಿಸುವಲ್ಲಿ ಕೆನೆ ಪದರ ಅಳವಡಿಸಬೇಕೆಂಬುದು ಮಾತ್ರ ಅವೈಜ್ಞಾನಿಕ.
ಒಳಮೀಸಲಾತಿ ಅಳವಡಿಸುವಾಗ ಸಮರ್ಪಕ ದತ್ತಾಂಶವಿರಬೇಕೆಂಬ ಸುಪ್ರೀಂ ಕೋರ್ಟು ನಿರ್ದೇಶನ ಈಗಿರುವ ಸಿದ್ದರಾಮಯ್ಯ ನವರ ಸರ್ಕಾರಕ್ಕೆ ಒಂದು ಸವಾಲು ಆಗಬಹುದು. ಸದಾಶಿವ ಆಯೋಗದ ವರದಿ ಒಳಮೀಸಲಾತಿಗೆ ಒಂದು ಸಮರ್ಪಕ ದತ್ತಾಂಶವನ್ನು ಒಳಗೊಂಡಿರುವುದು ಮೇಲ್ನೋಟಕ್ಕೆ ಕಾಣುತ್ತಿದ್ದರೂ ಅದು ಅಪ್ರಸ್ತುತ ಎನ್ನುವ ವಾದವನ್ನು ಸರ್ಕಾರ ಎದುರಿಸ ಬೇಕಾಗುತ್ತದೆ. ಇದಕ್ಕೆ ಪೂರಕವಾಗಿ ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರವೇ ನಡೆಸಿದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಯ ಕಾಂತರಾಜ್ ವರದಿಯನ್ನು ಒಳಮೀಸಲು ಹಂಚಿಕೆಗೆ ಬಳಸಿಕೊಳ್ಳುವ ಎಲ್ಲಾ ಅವಕಾಶಗಳೂ ಇದ್ದು ಒಳಮೀಸಲಾತಿಯನ್ನು ಅನುಷ್ಠಾನಗೊಳಿಸುವ ಬದ್ಧತೆ ತೋರಬೇಕಿದೆ.
ಒಳ ಮೀಸಲಾತಿ ಒಂದು ರಾಜಕೀಯ ಸಮಸ್ಯೆಯಲ್ಲ, ಅದೊಂದು ಸಾಮಾಜಿಕ ಸಮಸ್ಯೆ. ಇದನ್ನು ಇತ್ಯರ್ಥ ಪಡಿಸಲು ರಾಜಕೀಯ ಬದ್ಧತೆ ಬೇಕಿದೆಯಷ್ಟೆ. ರಾಜಕೀಯ ಪಕ್ಷಗಳು ಎಲ್ಲಾ ಕಾಲಕ್ಕೂ ಇಬ್ಬಗೆಯ ನೀತಿಯನ್ನು ಅನುಸರಿಸುತ್ತಲೆ ಬಂದಿವೆ. ಮೀಸಲಾತಿ ಬೇಕು ಎನ್ನುವವರು ಒಳಮೀಸಲಾತಿಯನ್ನು ವಿರೋಧಿಸುವುದರಲ್ಲಿ ಅರ್ಥವಿಲ್ಲ. ಒಳಮೀಸಲಾತಿಯನ್ನು ವಿರೋಧಿಸುವವರು ಮೀಸಲಾತಿಯಿಂದ ಮೊದಲು ಹೊರಹೋಗಬೇಕಾಗುತ್ತದೆ.
ಪರಿಶಿಷ್ಟ ಜಾತಿಯ ಮೀಸಲಾತಿ ಪಟ್ಟಿಯಲ್ಲಿರುವ 101 ಜಾತಿಗಳಲ್ಲಿ ಕಟ್ಟಕಡೆಯ ಅಲ್ಪಸಂಖ್ಯಾತ ಜಾತಿಗೂ ಅನ್ನದ ಬಟ್ಟಲು ದಕ್ಕಬೇಕು ಎಂಬುದೇ ಬಾಬಾಸಾಹೇಬ್ ಅಂಬೇಡ್ಕರ್ ಅವರ ನಿಲುವಾಗಿತ್ತು ಎಂಬುದನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ಅಂಬೇಡ್ಕರ್ ಅವರನ್ನು ಅರ್ಥಮಾಡಿಕೊಳ್ಳದವರು ಒಳಮೀಸಲಾತಿಯನ್ನು ವಿರೋಧಿಸುತ್ತಾರೆ. ಇದರಲ್ಲಿ ಸ್ವಾರ್ಥ ಮಾತ್ರ ಕಾಣುತ್ತದೆಯೇ ಹೊರತು ಸಮಷ್ಟಿಯ ಭಾವನೆ ಇರಲಾರದು.
2012 ಡಿಸೆಂಬರ್ 11ರ ಬೆಳಗಾವಿ ಅಧಿವೇಶನದ ಸಂದರ್ಭದಲ್ಲಿ ಒಳಮೀಸಲಾತಿಗಾಗಿ ಮಾದಿಗ ಮೀಸಲಾತಿ ಹೋರಾಟ ಸಮಿತಿ ನಡೆಸಿದ ಹೋರಾಟವನ್ನು ಅಂದಿನ ಬಿಜೆಪಿ ಸರ್ಕಾರ ಪೊಲೀಸ್ ಬಲದಿಂದ ನಿರ್ದಯವಾಗಿ ಹತ್ತಿಕ್ಕಿತು. ನೂರಾರು ಹೋರಾಟಗಾರರ ನೆತ್ತರು ಹರಿಯಿತು. ನೂರಾರು ಜನ ಜೈಲು ಸೇರಿದರು. ಒಳಮೀಸಲಾತಿಗಾಗಿ ಇದುವರೆಗೂ ನಡೆದ ಹೋರಾಟದಲ್ಲಿ ಹತ್ತಾರು ಹೋರಾಟಗಾರರು ಪ್ರಾಣವನ್ನು ಬಿಟ್ಟಿದ್ದಾರೆ. ಈ ಹೋರಾಟಕ್ಕೆ ಕೊನೆಗೂ ಅಂತಿಮವಾಗಿ ನ್ಯಾಯ ಸಿಕ್ಕಿದೆ
ಸುಪ್ರಿಂಕೋರ್ಟಿನ ತೀರ್ಪು ಸಮಬಾಳು -ಸಮಪಾಲಿಗೆ ಬಾಗಿಲು ತೆರೆದಂತಾಗಿದ್ದು, ಈ ತೀರ್ಪು ಒಳಮೀಸಲಾತಿಗಾಗಿ ಅವಿರತ ದುಡಿದು ದಣಿದ, ನೆತ್ತರ ಬಸಿದ ಚಳವಳಿಗೆ ಮತ್ತು ಹೋರಾಟಗಾರರಿಗೆ ಸಲ್ಲುತ್ತದೆ.
ಎನ್ ರವಿಕುಮಾರ್ ಟೆಲೆಕ್ಸ್
ಪತ್ರಕರ್ತರು
ಇದನ್ನೂ ಓದಿ- ದೇಶವನ್ನೇ ಸುಡಬಲ್ಲ ದ್ವೇಷವನ್ನು ನಿಗ್ರಹಿಸಲು ಬೇಕಿದೆ ಕಠಿಣ ಕಾನೂನು !!!