ಬೆಂಗಳೂರು: ಮಾಜಿ ಮುಖ್ಯಮಂತ್ರಿ ಎಚ್.ಡಿ
ಕುಮಾರಸ್ವಾಮಿಯವರ ‘ಗ್ಯಾರೆಂಟಿಗಳಿಂದ ಹಳ್ಳಿ ಹೆಣ್ಣುಮಕ್ಕಳು ದಾರಿ ತಪ್ಪಿದ್ದಾರೆ’ ಎಂಬ ಹೇಳಿಕೆ ವ್ಯಾಪಕ ಖಂಡನೆ, ಆಕ್ರೋಶಕ್ಕೆ ಕಾರಣವಾಗಿದ್ದು, ಕಂದಾಯ ಸಚಿವ ಕೃಷ್ಣ ಭೈರೇಗೌಡ ಮನುವಾದದ ಅಸಮಾನತೆ ಕುಮಾರಸ್ವಾಮಿ ಮನಸಿಂದ ಇನ್ನೂ ಹೋಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು ಹಿಂದೆ ಸ್ವತಃ ಕುಮಾರಸ್ವಾಮಿಯವರೇ ಹೇಳಿಕೊಂಡಿದ್ದ ‘ನಾನು ದಾರಿ ತಪ್ಪಿದ ಮಗ’ ಎಂಬ ಹೇಳಿಕೆಯನ್ನು ನೆನಪಿಸಿಕೊಂಡರು.
ಬಾಬಾ ಸಾಹೇಬ್ ಡಾ.ಬಿ. ಆರ್. ಅಂಬೇಡ್ಕರ್ ಎಲ್ಲರಲ್ಲೂ ಸಮಾನತೆ ಇರಬೇಕೆಂದು ಪ್ರತಿಪಾದಿಸಿದರು. ಹೆಂಗಸರಿರಲಿ, ಗಂಡಸರಿರಲಿ ಎಲ್ಲ ಸಮಾನರೇ. ನಮ್ಮ ಸಮಾಜದಲ್ಲಿ ಅಸಮಾನತೆ ಕಾಲಾನುಕಾಲದಿಂದ ಒಂದಲ್ಲ ಒಂದು ರೂಪದಲ್ಲಿ ನಡೆದುಕೊಂಡು ಬಂದಿದೆ. ಮನುವಾದದ ಅಸಮಾನತೆ ನಮ್ಮ ಮನಸ್ಸಿನಿಂದ ಹೋಗಿಲ್ಲ ಎನ್ನುವುದಕ್ಕೆ. ಕುಮಾರಸ್ವಾಮಿ ಹೇಳಿಕೆ ಸಾಕ್ಷಿ ಎಂದು ಅವರು ನುಡಿದರು.
ಕುಮಾರಸ್ವಾಮಿ ಎರಡು ಬಾರಿ ಸಿಎಂ ಆದವರು. ಒಕ್ಕೂಟ ವ್ಯವಸ್ಥೆಯ ನೀತಿ ನಿರ್ವಹಣೆ ಕೇಂದ್ರ ಸರ್ಕಾರದ ಕೈಯ್ಯಲ್ಲಿ ಇರುತ್ತದೆ. 10 ವರ್ಷಗಳ ಬಿಜೆಪಿ ಕೈಯ್ಯಲ್ಲಿ ದೇಶದ ಆರ್ಥಿಕ ದಿಕ್ಕು ಬದಲಾಗಿದೆ. ಬ್ರಿಟಿಷ್ ರಾಜ್ ತರಹ ಬಿಲಿಯನೇರ್ ರಾಜ್ ಆಗಿದೆ ಈಗ ಸರ್ಕಾರದ ಆಡಳಿತ. ಕುಬೇರರ ಸರ್ಕಾರ ಆಗಿಬಿಟ್ಟಿದೆ. ಎಲ್ಲ ಆರ್ಥಿಕ ಹೊರೆ ಬರೆ ಸಾಮಾನ್ಯ ಜನರ ಮೇಲೆ ಹಾಕಲಾಗುತ್ತಿದೆ. ಸಾಮಾನ್ಯ ಭಾರತೀಯರು ಬಡವರು ರೈತರು ಜೀವನ ನಡೆಸುವುದು ಕಷ್ಟ ಆಗಿದೆ. ಶ್ರೀಮಂತರ ಪರವಾದ ನೀತಿಗಳಿಂದ ಸಾಮಾನ್ಯ ವರ್ಗದ ಜೀವನ ಕಷ್ಟವಾಗಿದೆ. ಸಾಮಾನ್ಯ ಜನರ ಜೀವನ ಸ್ವಲ್ಪ ಸುಧಾರಿಸಬೇಕು ಅಂತ ಪಂಚ ಗ್ಯಾರಂಟಿ ನಾವು ಕೊಟ್ಟಿದ್ದೇವೆ ಎಂದು ಅವರು ವಿವರಿಸಿದರು.
ಅಧಿಕಾರದ ದರ್ಪದಿಂದ ಮಾಡಬಾರದ ತಪ್ಪನ್ನು ಮಾಡಿ ಮಹಿಳೆಯರನ್ನು ಅವಮಾನ ಮಾಡೋದು ಸರಿಯಾ? ನಾನು ದಾರಿ ತಪ್ಪಿದ ಮಗ ಅಂತ ಅಸೆಂಬ್ಲಿ ಒಳಗಡೆ ಇದೇ ಕುಮಾರಸ್ವಾಮಿ ಹೇಳಿದ್ದರು. ನಾನು ತಪ್ಪಾಗಿ ಹೇಳಿದ್ದರೆ ಕರೆಕ್ಟ್ ಮಾಡಿ. ಇವರ ಪಕ್ಷದ ಗುರುತು ಮಹಿಳೆ. ತೆನೆ ಹೊತ್ತ ಮಹಿಳೆಗೆ ಕಮಲ ಅಂತ ಹೆಸರು ಕೊಟ್ಟಿದ್ದಾರೆ. ತೆನೆ ಹೊತ್ತ ಮಹಿಳೆಯ ದುಡಿಮೆಗೆ ಕಾಂಗ್ರೆಸ್ ಸಂಬಳ ಕೊಡ್ತಾ ಇದೆ ಎಂದರು.
ಜೆಡಿಎಸ್ ನವರು ಮಹಿಳೆಯನ್ನು ಬರೀ ದುಡಿಸಿಕೊಳ್ತಾರೆ, ಓಟು ಹಾಕಿಸಿಕೊಳ್ತಾರೆ. ಪ್ರಾದೇಶಿಕ ಪಕ್ಷ ಅಂತ ಹೇಳಿಕೊಂಡವರು ಬಿಜೆಪಿಗೆ ತಮ್ಮನ್ನು ತಾವು ಮಾರಾಟ ಮಾಡಿಕೊಂಡಿದ್ದಾರೆ. ಕೋಮುವಾದಿ ಪಕ್ಷದ ಕೈ ಜೋಡಿಸಿ ತುತ್ತೂರಿ ಊದ್ತಾ ಇದ್ದಾರೆ.
ಮಹಿಳೆಯರನ್ನು ಹೀಯಾಳಿಸುವ ಎಚ್ಡಿಕೆ ಹೇಳಿಕೆಯನ್ನು ಖಂಡಿಸುತ್ತೇವೆ. ಮಹಿಳೆಯರಿಗೆ ಮಾಡಿದ ಅವಮಾನ ಇದು. ಮಹಿಳೆಯರ ದುಡಿಮೆಯ ಲಾಭದಿಂದ ನಾವು ಇಲ್ಲಿ ನಿಂತಿದ್ದೇವೆ. ಕುಮಾರಣ್ಣನವರೇ, ಮಹಿಳೆಯರು ದಾರಿ ತಪ್ಪಿದ್ದಾರೆ ಅಂತಿದ್ದೀರಿ. ನಾಳೆ ಎನ್ ಡಿಎ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಸ್ಕೀಂ ಗಳನ್ನು ಕಿತ್ತು ಎಸೆಯುತ್ತೇವೆ ಅಂತ ಹೇಳಿ ನೋಡೋಣ ಎಂದು ಅವರು ಸವಾಲೆಸೆದರು.