ಬೆಂಗಳೂರು: ಮುಂದಿನ 4ವರ್ಷಗಳಲ್ಲಿ ವಿಶ್ವಬ್ಯಾಂಕ್ ನೆರವಿನಿಂದ ಸರ್ಕಾರಿ ಕಾಲೇಜುಗಳ ಮೂಲಸೌಕರ್ಯ ಅಭಿವೃದ್ಧಿ ಮಾಡಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ. ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ಮಹತ್ವದ ನಿರ್ಧಾರವನ್ನು ಕೈಗೊಳ್ಳಲಾಗಿದೆ. ಸಚಿವ ಸಂಪುಟ ಸಭೆ ಬಳಿಕ ಕಾನೂನು ಸಚಿವ ಎಚ್.ಕೆ ಪಾಟೀಲ್ ಮಾಹಿತಿ ನೀಡಿದ್ದಾರೆ.
ಜುಲೈ 2025, ಜೂನ್ ನಿಂದ ಮುಂದಿನ 4 ವರ್ಷಗಳಲ್ಲಿ ರೂ.250೦ ಕೋಟಿಗಳ (ರೂ.1750 ಕೋಟಿ ವಿಶ್ವ ಬ್ಯಾಂಕ್ನಿಂದ ಮತ್ತು ರೂ.750 ಕೋಟಿ ರಾಜ್ಯ ಸರ್ಕಾರದಿಂದ) ಬಾಹ್ಯ ನಿಧಿ ಸಹಯೋಗದೊಂದಿಗೆ ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವ ಯೋಜನೆಯನ್ನು ಅನುಷ್ಠಾನಗೊಳಿಸಲು ತೀರ್ಮಾನಿಸಲಾಗಿದೆ. ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಇಲಾಖೆಯ ಮೂಲಕ ಪ್ರಾಥಮಿಕ ಯೋಜನೆಯ ವರದಿಯನ್ನು ವಿಶ್ವಬ್ಯಾಂಕ್ಗೆ ಸಲ್ಲಿಸಲು ಸಚಿವ ಸಂಪುಟ ನಿರ್ಣಯಿಸಿದೆ.
ಸುಧಾರಿತ ಕೌಶಲ್ಯಗಳೊಂದಿಗೆ ಉತ್ಕೃಷ್ಟತೆ ಹೊಂದಿರುವ ವಿಭಾಗಗಳ ಸ್ಥಾಪನೆ, ಪಠ್ಯಕ್ರಮದ ಉನ್ನತೀಕರಣ, ಶಿಕ್ಷಕರ ತರಬೇತಿ, ಇಂಟರ್ನ್ ಶಿಪ್ ಮತ್ತು ಡಿಜಿಟಲ್ ಅಪ್ರೇಂಟಿಶಿಪ್ಗಳ ಮೂಲಕ ಸುಧಾರಿತ ಉದ್ಯೋಗಾವಕಾಶ ಒದಗಿಸುವುದು. ಸಮಾನ ಪ್ರವೇಶ ಹೆಚ್ಚಿಸುವುದು. ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಹಿಂದುಳಿದ ವರ್ಗಗಳ ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವುದು ಪ್ರಮುಖ ಉದ್ದೇಶವಾಗಿದೆ.
ಎಸ್.ಸಿ / ಎಸ್.ಟಿ ಹಾಸ್ಟೆಲ್ಗಳಿಗೆ ಮಂಚ-ಹಾಸಿಗೆ ಪೂರೈಕೆಗೆ ಒಪ್ಪಿಗೆ.
ಕಲ್ಯಾಣ ಕರ್ನಾಟಕ ಹಿಂದುಳಿದ ಪ್ರದೇಶ ಅಭಿವೃದ್ಧಿಪಡಿಸುವ ಸಲುವಾಗಿ ಕಲ್ಯಾಣ ಕರ್ನಾಟಕದ ಎಸ್.ಸಿ/ ಎಸ್.ಟಿ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಸರ್ಕಾರಿ ವಸತಿ ಶಾಲೆಗಳು ಮತ್ತು ಮೆಟ್ರಿಕ್ ಪೂರ್ವ ಮತ್ತು ಮೆಟ್ರಿಕ್ ನಂತರದ ವಸತಿ ನಿಲಯಗಳಿಗೆ ಟೂ ಟಯರ್ ಕಾಟ್, ಕಾಯರ್ ಮ್ಯಾಟ್ರಸ್ ಹಾಗೂ ಎಲೆಕ್ಟ್ರಿಕ್ ಹೀಟರ್ ಪಂಪ್ಗಳನ್ನು ಪೂರೈಸಲು ಪ್ರಸ್ತಾಪಿಸಲಾಗಿದೆ. ಇದಕ್ಕಾಗಿ 436 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತದೆ.
ಮೆಟ್ರಿಕ್ ನಂತರದ ವಿದ್ಯಾರ್ಥಿಗಳಿಗೆ ಪೌಷ್ಠಿಕ ಆಹಾರ:
2024-25 ಸಾಲಿನಲ್ಲಿ ಪ್ರತಿ ವಿದ್ಯಾರ್ಥಿಗೆ ಪ್ರತಿ ತಿಂಗಳು ರೂ.100 ಗಳ ವೆಚ್ಚದಲ್ಲಿ ವಿದ್ಯಾರ್ಥಿಗಳ ಪೌಷ್ಠಿಕಾಂಶ ಹೆಚ್ಚಿಸಲು ಮತ್ತು ಆರೋಗ್ಯ ಬಲವರ್ಧನೆಗಾಗಿ ಪೌಷ್ಠಿಕಾಂಶದ ಪುಡಿ, ಮೊಟ್ಟೆ ಮತ್ತು ಶೇಂಗಾ ಚೆಕ್ಕಿಯನ್ನು ಖರೀದಿಸಿ ಒದಗಿಸಲು ಪ್ರಸ್ತಾಪಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ವಿದ್ಯಾರ್ಥಿನಿಲಯಗಳ ವಿದ್ಯಾರ್ಥಿಗಳಿಗೆ ಒಟ್ಟು ರೂ. 11 ಕೋಟಿಗಳ ವೆಚ್ಚದಲ್ಲಿ ಕೋಟಿ ಮೊಟ್ಟೆಯನ್ನು ಪ್ರಸ್ತುತ ಜಾರಿಯಲ್ಲಿರುವ ಆಹಾರ ಟೆಂಡರ್ ಪ್ರಕ್ರಿಯೆ ಮೂಲಕ ಖರೀದಿಸಿ ಒದಗಿಸಲು ನಿರ್ಣಯಿಸಿದೆ.