ಈ ನಮ್ಮ ಪುಣ್ಯಭೂಮಿ ಭಾರತದಲ್ಲಿ ಎಂತೆಂತಾ ಅದ್ಭುತ ಸಂಶೋಧನೆಗಳು ಹುಟ್ಟುತ್ತವೆ. ಅದೆಂತಹ ಸ್ವಯಂಭು ಸಂಶೋಧಕರು ಇದ್ದಕ್ಕಿದ್ದಂತೆ ಸುದ್ದಿಯಾಗುತ್ತಾರೆ ಎಂದು ಹೇಳುವುದು ಕಷ್ಟಸಾಧ್ಯ. ಹಾಗೆಯೇ ಉತ್ತರಪ್ರದೇಶದ ಸಂಜಯ್ ಸಿಂಗ್ ಗಂಗ್ವಾರ್ ನಾಮಾಂಕಿತ ಸಚಿವರೊಬ್ಬರು ತಮ್ಮ ಲೇಟೆಸ್ಟ್ ಸಂಶೋಧನೆಯೊಂದನ್ನು ಮನುಕುಲಕ್ಕೆ ಉಚಿತ ಕೊಡುಗೆಯಾಗಿ ಕೊಟ್ಟಿದ್ದಾರೆ. ಗೋಶಾಲೆಯೊಂದನ್ನು ಉದ್ಘಾಟಿಸುತ್ತಾ ಕ್ಯಾನ್ಸರ್ ಪೀಡಿತರಿಗೆ ಸಂತಸದ ಸಂಗತಿಯನ್ನು ಹೇಳಿದ್ದಾರೆ.
ಮಾರಣಾಂತಿಕ ಕ್ಯಾನ್ಸರ್ ರೋಗಕ್ಕೆ ಖರ್ಚೇ ಇಲ್ಲದ ಸುಲಭ ಸರಳ ಚಿಕಿತ್ಸಾ ವಿಧಾನವೊಂದನ್ನು ಕಂಡುಹಿಡಿದು ಅರ್ಬುದ ರೋಗಿಗಳ ಪಾಲಿಗೆ ಈ ಮಂತ್ರಿ ಮಹೋದಯರು ದೇವರಾಗಿದ್ದಾರೆ.
ಇನ್ನು ಮೇಲೆ ಕ್ಯಾನ್ಸರ್ ಖಾಯಿಲೆ ಬಾಧಿತರು ಗೋಶಾಲೆಗಳನ್ನು ಸ್ವಚ್ಚಗೊಳಿಸಿ ಅಲ್ಲೇ ಮಲಗಿದರೆ ಸಾಕು ಕ್ಯಾನ್ಸರ್ ಗಡ್ಡೆ ಮಾಯವಾಗಿ ರೋಗಿ ಗುಣಮುಖವಾಗುವುದು ಖಾತ್ರಿಯಂತೆ. ಬಹುತೇಕರಿಗೆ ಬಿಪಿ ಅಂದ್ರೆ ಅಧಿಕ ರಕ್ತದೊತ್ತಡ ಇದ್ದೇ ಇರುತ್ತದಲ್ವಾ. ಅಂತವರಿಗೂ ಸಹ ಈ ಸಚಿವರ ಸಂಶೋಧನೆ ವರದಾನವಾಗಿದೆ. ಬಿಪಿ ಇದ್ದವರು ಹಸುಗಳನ್ನು ಸಾಕಿ ಅವುಗಳ ಸೇವೆ ಮಾಡಿದರೆ ಸಾಕು ರಕ್ತದೊತ್ತಡ ಅರ್ಧಕ್ಕರ್ಧ ನಿವಾರಣೆಯಾಗುತ್ತದಂತೆ.
ಸೂಪರ್ ಸಂಶೋಧನೆ. ಯುಪಿ ರಾಜ್ಯದಲ್ಲಿರುವ ಎಲ್ಲಾ ಸರಕಾರಿ ಹಾಗೂ ಖಾಸಗಿ ಕ್ಯಾನ್ಸರ್ ಆಸ್ಪತ್ರೆಗಳನ್ನು ಗೋಶಾಲೆಯಾಗಿ ಪರಿವರ್ತಿಸಲು ಈ ಸಚಿವರು ತಮ್ಮ ಸಿಎಂ ಯೋಗಿ ಆದಿತ್ಯನಾಥರವರಿಗೆ ಹೇಳಬೇಕಿದೆ. ಹಾಗೂ ಇಡೀ ರಾಜ್ಯದಲ್ಲಿ ಬಿಪಿ ಇದ್ದವರೆಲ್ಲಾ ಹಸುಪಾಲನೆಯನ್ನು ಕಡ್ಡಾಯವಾಗಿ ಮಾಡುತ್ತಾ ಗೋಸೇವೆಯ ಮೂಲಕ ರಕ್ತದೊತ್ತಡಕ್ಕೆ ಪರಿಹಾರ ಕಂಡುಕೊಳ್ಳಬೇಕೆಂದು ಸರಕಾರ ಆದೇಶಿಸಬೇಕೆಂದೂ ಒತ್ತಾಯಿಸಬೇಕಿದೆ.
ಖರ್ಚೇ ಇಲ್ಲದ ಈ ಚಿಕಿತ್ಸಾ ಪದ್ಧತಿ ಕುರಿತು ಪ್ರಧಾನಿಗಳಿಗೆ ಹೇಳಿ ದೇಶಾದ್ಯಂತ ಗೋಶಾಲೆಗಳನ್ನು ಕ್ಯಾನ್ಸರ್ ಚಿಕಿತ್ಸಾ ಕೇಂದ್ರಗಳನ್ನಾಗಿ ಪರಿವರ್ತಿಸಲು ಸಂಶೋಧನಾ ಪಂಡಿತ ಸಚಿವ ಒತ್ತಾಯಿಸಬೇಕಿದೆ. ಕ್ಯಾನ್ಸರ್ ಆಸ್ಪತ್ರೆಗಳನ್ನೆಲ್ಲಾ ಗೋಶಾಲೆಗಳನ್ನಾಗಿಸಬೇಕೆಂದೂ ಪ್ರಧಾನಿಗಳಿಗೆ ಮನದಟ್ಟು ಮಾಡಿಕೊಡಬೇಕಿದೆ.
ಕ್ಯಾನ್ಸರ್ ಇದ್ದವರು ತಮ್ಮ ಮಲಗುವ ಜಾಗವನ್ನು ದನದ ಕೊಟ್ಟಿಗೆಗೆ ಸ್ಥಳಾಂತರಿಸಬೇಕು ಇಲ್ಲವೇ ತಮ್ಮ ಬೆಡ್ ರೂಂನಲ್ಲೇ ನಾಲ್ಕಾರು ದನಗಳನ್ನು ಸಾಕಬೇಕು. ಗೋಮಾತೆಯಲ್ಲಿರುವ ಮುಕ್ಕೋಟಿ ದೇವರಲ್ಲಿ ಯಾವುದೋ ಒಂದು ದೇವರು ಬಂದು ಕ್ಯಾನ್ಸರ್ ಕಾಯಿಲೆ ಗುಣಪಡಿಸುವುದಂತೂ ಗ್ಯಾರಂಟಿ.
ಈ ಸಂಘಿ ಸರಕಾರದ ಆದೇಶದಂತೆ ಬರಡಾದ ಹಸುಗಳನ್ನು ಮಾರುವಂತಿಲ್ಲ ಹಾಗೂ ಹತ್ಯೆ ಮಾಡುವಂತಿಲ್ಲ. ಹೀಗಾಗಿ ಮುದಿಯಾದ ಗೋಮಾತೆಗಳನ್ನೆಲ್ಲಾ ಗೋಶಾಲೆಗಳಲ್ಲಿ ಸರಕಾರವೇ ಸಾಕಿ, ಅಲ್ಲಿ ಚಾಪೆ ದಿಂಬು ಕೊಟ್ಟು ಕ್ಯಾನ್ಸರ್ ಬಾಧಿತರನ್ನು ಮಲಗಿಸುವ ವ್ಯವಸ್ಥೆ ಮಾಡಿದರೆ ಸಾಕು. ಈ ಆಸ್ಪತ್ರೆಯ ಖರ್ಚು ಉಳಿಯುತ್ತದೆ, ಕಿಮೋಥೆರೋಪಿಯ ನರಕ ಯಾತನೆ ತಪ್ಪುತ್ತದೆ, ಡಾಕ್ಟರ್ ಗಳ ಸಹವಾಸದಿಂದ ಮುಕ್ತಿಸಿಗುತ್ತದೆ ಹಾಗೂ ಮೆಡಿಕಲ್ ಮಾಫಿಯಾದಿಂದ ದೂರವಿದ್ದಂತೆಯೂ ಆಗುತ್ತದೆ.
ಇಷ್ಟೊಂದು ಸರಳವಾದ ಗೋಶಾಲಾ ಚಿಕಿತ್ಸೆ ಕುರಿತು ಯಾವ ವೈದ್ಯರಿಗೂ ಹಾಗೂ ಜೀವ ವಿಜ್ಞಾನಿಗಳಿಗೂ ಮತ್ತು ಸಂಶೋಧಕರಿಗೂ ಇಲ್ಲಿವರೆಗೂ ಗೊತ್ತಾಗಲಿಲ್ಲ ಯಾಕೆ ಎಂಬುದೇ ಪ್ರಶ್ನೆ? ಇಂತಹ ಅತ್ಯದ್ಭುತ ಅಮೋಘ ಸಂಶೋಧನೆ ಮಾಡಿದ ಸಂಘಿ ಸಚಿವರನ್ನು ಕಬ್ಬು ಅಭಿವೃದ್ದಿ ಇಲಾಖೆಯಿಂದ ಆರೋಗ್ಯ ಇಲಾಖೆಯ ಸಚಿವರನ್ನಾಗಿ ಮಾಡಬೇಕಿದೆ. ಕೇಂದ್ರ ಸರಕಾರದ ಆರೋಗ್ಯ ಇಲಾಖೆ ಸಚಿವರನ್ನಾಗಿ ಮಾಡಿದರೂ ಇನ್ನೂ ಉತ್ತಮ. ಬೇರೆ ಬೇರೆ ಖಾಯಿಲೆಗಳ ಚಿಕಿತ್ಸೆಗೆ ಹಸುವಿನ ಗಂಜಲ, ಸಗಣಿ ಮುಂತಾದ ತ್ಯಾಜ್ಯಗಳನ್ನು ಹೇಗೆ ಬಳಸಬೇಕು ಎಂಬುದನ್ನು ಸಂಶೋಧನೆ ಮಾಡಿ ರೋಗಮುಕ್ತ ದೇಶವನ್ನಾಗಿ ಪರಿವರ್ತಿಸುವ ಸಾಧ್ಯತೆ ಈ ಸಚಿವರದ್ದಾಗಿದೆ.
ಇಲ್ಲಿವರೆಗೂ ಕೆಲವು ಸನಾತನಿ ಸಂಶೋಧಕರುಗಳು ಗೋಮೂತ್ರದಲ್ಲಿ ಇರುವ ಔಷಧೀಯ ಗುಣಗಳನ್ನು ಕಂಡು ಹಿಡಿದು ಆಗಾಗ ಪ್ರಚಾರ ಪಡಿಸುತ್ತಲೇ ಇರುತ್ತಾರೆ. ಪರಮ ಪವಿತ್ರ ಸಗ ಣಿಯಲ್ಲಿ ಇರಬಹುದಾದ ರೋಗ ನಿರೋಧಕತೆಯ ಬಗ್ಗೆಯೂ ಸುದ್ದಿ ಹರಡುತ್ತಲೇ ಇರುತ್ತಾರೆ. ಆದರೆ ಈ ಮೆಡಿಕಲ್ ಲಾಬಿ ಇದೆಯಲ್ಲಾ ಅದು ಗೋತ್ಯಾಜ್ಯಗಳ ಚಿಕಿತ್ಸೆಗೆ ಒಪ್ಪುತ್ತಿಲ್ಲ. ಏನೇನೋ ಓದಿಕೊಂಡಿರುವ ಡಾಕ್ಟರ್ ಗಳಿಗೆ ಎಷ್ಟೇ ಹೇಳಿದರೂ ಗೋಮಯ ಚಿಕಿತ್ಸೆಗೆ ಅವರು ಮುಂದಾಗುತ್ತಿಲ್ಲ. ಗೋಮೂತ್ರಕ್ಕೆ ಹೆದರಿ ಕರೋನಾದಂತಹ ಕರೋನಾವೇ ಓಡಿಹೋಗುತ್ತದೆಂದು ಸಗಣಿ ಪಂಡಿತರು ಎಷ್ಟು ಹೇಳಿದರೂ ಕೇಳದೇ ಸರಕಾರ ದೇಶವಾಸಿಗಳಿಗೆಲ್ಲಾ ಚುಚ್ಚುಮದ್ದು ನೀಡಿತು. ಅದರಿಂದ ಆಗಿದ್ದೇನು, ಬರೀ ಸೈಡ್ ಎಫೆಕ್ಟ್. ಆ ಕೋವಿಡ್ ಡೋಸ್ ತಗೊಂಡವರು ಹಾರ್ಟ್ ಅಟ್ಯಾಕ್ ಆಗಿ ಸಾಯುತ್ತಿದ್ದಾರೆ. ಅದೇ ನಮ್ಮ ಗೋಮಯ ಕುಡಿಸಿದ್ದರೆ, ಸಗಣಿ ಮಾತ್ರೆ ತಿನ್ನಿಸಿದ್ದರೆ ಯಾವ ಅಡ್ಡಪರಿಣಾಮಗಳೂ ಇರ್ತಾನೇ ಇರಲಿಲ್ಲ.
ಈಗಲಾದರೂ ಭಾರತ ಮಾತೆಯ ಪುಣ್ಯ ಶೇಷದಿಂದಾಗಿ ಸಂಜಯ್ ಸಿಂಗ್ ರಂತಹ ಒಬ್ಬರಾದರೂ ಸಂಶೋಧಕ ಸಚಿವ ಅವತಾರ ಎತ್ತಿ ಬಂದನಲ್ಲಾ. ಕ್ಯಾನ್ಸರ್ ಎನ್ನುವ ಭಯಂಕರ ರೋಗಕ್ಕೆ ಗೋಶಾಲಾ ಚಿಕಿತ್ಸಾ ಪದ್ಧತಿ ಕಂಡು ಹಿಡಿದನಲ್ಲಾ. ಈಗಲಾದರೂ ಸರಕಾರ ಎಚ್ಚೆತ್ತು ಕೊಳ್ಳಬೇಕಿದೆ. “ಆಸ್ಪತ್ರೆ ಬಿಡಿ, ಗೋಶಾಲೆ ಇಡಿ” ಎಂದು ಘೋಷಿಸಬೇಕಿದೆ. ಗೋಮಾತೆಯ ಕೃಪಾ ಕಟಾಕ್ಷದಿಂದ ಎಲ್ಲರೂ ಆರೋಗ್ಯವಂತರಾಗಬೇಕಿದೆ.
ಗೋಮಾತಾ.. ಎಲ್ಲರನೂ ಕಾಪಾಡು ದೇವತಾ… ಗೋಮಾತೆಗೆ ಜೈ, ಗೋಶಾಲೆಗೆ ಜೈ. ಗೋಮಯಕೆ ಜೈ ಜೈ.
ಶಶಿಕಾಂತ ಯಡಹಳ್ಳಿ
ಪತ್ರಕರ್ತರು, ರಂಗಕರ್ಮಿಗಳು
ಇದನ್ನೂ ಓದಿ- ರಂಗಭೂಮಿ | ರಕ್ತ ವಿಲಾಪ ನಾಟಕ ಪ್ರದರ್ಶನ