ಹತ್ಯೆಗಳಲ್ಲಿ ನಮ್ಮ ಕೈವಾಡವಿಲ್ಲ, ನೀವು ಬಿತ್ತಿದ್ದನ್ನೇ ಬೆಳೆಯುತ್ತಿದ್ದೀರಿ: ಪಾಕಿಸ್ತಾನಕ್ಕೆ ಭಾರತದ ತಿರುಗೇಟು

Most read

“ನಿಮ್ಮ ದುಷ್ಕೃತ್ಯಗಳಿಗೆ ಬೇರೆಯವರನ್ನು ಹೊಣೆ ಮಾಡುವುದು ಸಮರ್ಥನೆಯೂ ಅಲ್ಲ, ಪರಿಹಾರವೂ ಅಲ್ಲ. ನೀವು ಬಿತ್ತಿದ್ದನ್ನೇ ಬೆಳೆಯುತ್ತಿದ್ದೀರಿ” ಎಂದು ಪಾಕಿಸ್ತಾನಕ್ಕೆ ಭಾರತ ತಿರುಗೇಟು ನೀಡಿದೆ. ಭಾರತ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಹತ್ಯೆಗಳ ಹಿಂದಿದೆ ಎಂಬ ಆರೋಪಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಭಾರತ, ಇದು ಭಾರತ ವಿರೋಧಿ ದುರುದ್ದೇಶಪೂರಿತ ಪ್ರೊಪಗಂಡ ಹರಡುವ ಹೊಸ ಪ್ರಯತ್ನ ಎಂದು ಬಣ್ಣಿಸಿದೆ.

ನಿನ್ನೆ ವಿದೇಶಾಂಗ ಇಲಾಖೆ ವಕ್ತಾರ ರಣಧೀರ್ ಜೈಸ್ವಾಲ್ ಹೇಳಿಕೆಯೊಂದನ್ನು ನೀಡಿದ್ದು, ಪಾಕಿಸ್ತಾನವು ಭಯೋತ್ಪಾದನೆಯ, ಸಂಘಟಿತ ಅಪರಾಧಗಳ, ಅಂತಾರಾಷ್ಟ್ರೀಯ ಅಕ್ರಮ ಚಟುವಟಿಕೆಗಳ ಕೇಂದ್ರಬಿಂದು ಎಂಬುದು ಜಗತ್ತಿಗೇ ತಿಳಿದಿದೆ. ಭಯೋತ್ಪಾದನೆ ಮತ್ತು ಹಿಂಸೆಯನ್ನು ಬೆಳೆಸಿದರೆ ಅದರ ಫಲವನ್ನು ಮುಂದೆ ನೀವೇ ಉಣ್ಣಬೇಕಾಗುತ್ತದೆ ಭಾರತ ಸೇರಿದಂತೆ ಹಲವು ರಾಷ್ಟ್ರಗಳು ಈ ಹಿಂದೆಯೇ ಪಾಕಿಸ್ತಾನಕ್ಕೆ ಎಚ್ಚರಿಕೆ ನೀಡಿದ್ದವು ಎಂದು ಅವರು ಹೇಳಿದ್ದಾರೆ.

ಭಯತ್ಪಾದಕ ಸಂಘಟನೆಗಳ ಜೊತೆ ಸಂಬಂಧವಿದ್ದ ಪಾಕಿಸ್ತಾನದ ಇಬ್ಬರು ವ್ಯಕ್ತಿಗಳ ಹತ್ಯೆ ಪ್ರಕರಣಗಳಲ್ಲಿ ಭಾರತದ ಏಜೆಂಟರ (RAW) ಕೈವಾಡವಿದೆ ಎಂದು ನಿನ್ನೆ ಬೆಳಿಗ್ಗೆ ಪಾಕಿಸ್ತಾನ ಆರೋಪಿಸಿತ್ತು. ಭಾರತದ ಕೈವಾಡ ಇರುವುದಕ್ಕೆ ತಮ್ಮ ಬಳಿ ಖಚಿತ ಸಾಕ್ಷಿ ಕೂಡ ಇರುವುದಾಗಿ ಹೇಳಿತ್ತು‌. ಜೈಶ್ – ಎ- ಮಹಮದ್ ಮತ್ತು ಲಷ್ಕರ್-ಇ- ತೊಯ್ಬಾ ಸಂಘಟನೆಗಳಿಗೆ ಸೇರಿದ ಇಬ್ಬರು ವ್ಯಕ್ತಿಗಳನ್ನು ಕಳೆದ ವರ್ಷ ಸಿಯಾಲ್ ಕೋಟ್ ಮತ್ತು ರಾವಲ್ ಕೋಟ್ ಗಳಲ್ಲಿ ನಡೆದ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಕೊಂದುಹಾಕಲಾಗಿತ್ತು. ಭಾರತ ಈ ಪ್ರಕರಣಗಳ ಹಿಂದಿದೆ ಎಂಬುದು ಪಾಕಿಸ್ತಾನದ ಆರೋಪವಾಗಿದೆ.

ಕಳೆದ ವರ್ಷ ಸೆಪ್ಟೆಂಬರ್ 8ರರಂದು ಲಷ್ಕರ್ ಸಂಘಟನೆಯ ರಿಯಾಜ್ ಅಹ್ಮದ್ ಅಲಿಯಾಸ್ ಅಬು ಖಾಸಿಂ ನನ್ನು ಅಪರಿಚಿತ ಬಂಧೂಕುಧಾರಿಗಳು ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶದ ರಾವಲ್ ಕೋಟ್ ನ ಮಸೀದಿಯೊಂದರ ಬಳಿ ಗುಂಡಿಟ್ಟು ಕೊಂದಿದ್ದರು. ಈತ ಜಮ್ಮು ಕಾಶ್ಮೀರದ ಧಾಂಗ್ರಿಯಲ್ಲಿ 2023ರ ಜನವರಿ 1 ರಂದು ನಡೆದ ಭಯೋತ್ಪಾದಕ ದಾಳಿಯ ಪ್ರಮುಖ ಸಂಚುಕೋರ.

ಅದೇ ರೀತಿ ಜೈಷ್ ಎ ಮಹಮದ್ ನ ಮುಖ್ಯಸ್ಥ ಅಜರ್ ಮಸೂದ್ ನಿಕಟವರ್ತಿ ಶಾಹಿದ್ ಲತೀಫ್ ಕಳೆದ ವರ್ಷ ಅಕ್ಟೋಬರ್ 11ರಂದು ಸಿಯಾಲ್ ಕೋಟ್ ನಲ್ಲಿ ಹತ್ಯೆಗೀಡಾಗಿದ್ದ. 2016ರಲ್ಲಿ ಪಠಾಣ್ ಕೋಟ್ ನ ಭಾರತದ ವಾಯುನೆಲೆಯ ಮೇಲೆ ನಡೆದ ಭಯೋತ್ಪಾದಕ ದಾಳಿಯ ಸೂತ್ರದಾರದಲ್ಲಿ ಒಬ್ಬನಾಗಿದ್ದ.

More articles

Latest article