ಈಗಿರುವ ಭಾರತದ ಸಂಸ್ಕೃತಿ ಬೌದ್ಧ ಸಂಸ್ಕೃತಿಯಿಂದ ಪ್ರೇರಣೆಗೊಂಡು ಹಲವಾರು ಮಾರ್ಪಾಡುಗಳೊಂದಿಗೆ ನಮ್ಮ ಮುಂದಿದೆ. ಬುದ್ಧನ ತತ್ವಗಳು ಈ ನೆಲವನ್ನು ಸಮೃದ್ಧಿಗೊಳಿಸಿದೆ. ಇದನ್ನ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ –ನಾಗೇಶ್ ಮೌರ್ಯ, ಬೌದ್ಧ ಚಿಂತಕರು.
ಭಾರತದ ಗಣ್ಯರು ಇಂದಿಗೂ ವಿದೇಶಗಳಿಗೆ ಹೋದಾಗ “ನಾವು ಬುದ್ಧನ ನಾಡಿನಿಂದ ಬಂದಿದ್ದೇವೆ” ಎಂದು ಬಹಳ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ವಿದೇಶಿಗರ ದೃಷ್ಟಿಯಲ್ಲಿ ಭಾರತವೆಂದರೆ ಅದು ಬುದ್ಧನ ನಾಡು ಎಂದೇ ಚಿರಪರಿಚಿತ. ಭಾರತದ ಮೊದಲ ಪ್ರಧಾನಿಗಳಾದ ಜವಾಹರ್ ಲಾಲ್ ನೆಹರು ರವರು ಬೌದ್ಧ ಧರ್ಮದಿಂದ ಎಷ್ಟು ಪ್ರೇರಿತರಾಗಿದ್ದರೆಂದರೆ ಚೀನಾದೊಂದಿಗೆ “ಪಂಚಶೀಲ” ಒಪ್ಪಂದವನ್ನು ಮಾಡಿಕೊಂಡಿದ್ದರು. ಮುಂದೆ ಪಂಚವಾರ್ಷಿಕ ಯೋಜನೆ ಎಂಬ ಮಹತ್ತರ ಯೋಜನೆಗಳನ್ನು ಜಾರಿಗೆ ತಂದರು. ತಮ್ಮ ಮಗಳಿಗೆ ಇಂದಿರಾ ಪ್ರಿಯದರ್ಶಿನಿ ಎಂದು ಹೆಸರಿಟ್ಟರು. ತಮ್ಮ ಆತ್ಮಕಥೆ Discovery of India ಎಂಬ ಗ್ರಂಥದಲ್ಲಿ ಭಾರತದ ಬೌದ್ಧ ಸಂಸ್ಕೃತಿಯ ಬಗ್ಗೆ ಸಾಕಷ್ಟು ಬರೆದಿದ್ದಾರೆ. ಇಂದಿರಾ ಮುಂದೆ ತಮ್ಮ ಮೊಮ್ಮಕ್ಕಳಿಗೆ ರಾಹುಲ್ ಪ್ರಿಯಾಂಕ ಎಂಬ ಬೌದ್ಧ ಹೆಸರನ್ನಿಟ್ಟು ತಂದೆಯ ಸಂಪ್ರದಾಯವನ್ನು ಪಾಲಿಸುತ್ತಾರೆ.
ಅಟಲ್ ಬಿಹಾರಿ ವಾಜಪೇಯಿಯವರು ಪೋಖ್ರಾನ್ ನಲ್ಲಿ ಅಣು ಪರೀಕ್ಷೆ ನಡೆಸಿದಾಗ ಅದಕ್ಕೆ ವಿದೇಶಗಳಿಂದ ವಿರೋಧ ಬರಬಾರದೆಂದು “ Buddha Smilling “ ಬುದ್ಧ ನಗುತ್ತಿದ್ದಾನೆ ಎಂಬ ಹೆಸರಲ್ಲಿ ಯಶಸ್ವಿಯಾಗಿ ಅಣು ಪರೀಕ್ಷೆ ಮಾಡುತ್ತಾರೆ. ಒಬ್ಬ ಕಟ್ಟರ್ ಹಿಂದೂ ಆಗಿದ್ದರೂ ಬುದ್ಧನ ಹೆಸರನ್ನು ಬಳಸಿಕೊಂಡರು. ಇದೆಲ್ಲರ ಹಿಂದಿನ ಪ್ರೇರಕ ಶಕ್ತಿ ಬುದ್ಧ ಎಂದು ಹೇಳಲು ಇಷ್ಟೆಲ್ಲ ಹೇಳಬೇಕಾಯಿತು.

ಈಗಿರುವ ಭಾರತದ ಸಂಸ್ಕೃತಿ ಬೌದ್ಧ ಸಂಸ್ಕೃತಿಯಿಂದ ಪ್ರೇರಣೆಗೊಂಡು ಹಲವಾರು ಮಾರ್ಪಾಡುಗಳೊಂದಿಗೆ ನಮ್ಮ ಮುಂದಿದೆ. ಬುದ್ಧನ ತತ್ವಗಳು ಈ ನೆಲವನ್ನು ಸಮೃದ್ಧಿಗೊಳಿಸಿದೆ. ಇದನ್ನ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ. ಬಾಬಾಸಾಹೇಬ್ ಅಂಬೇಡ್ಕರ್ ರವರು ಒಂದು ಗಂಭೀರವಾದ ಮಾತನ್ನು ಹೇಳಿದ್ದಾರೆ, “ಭಾರತದ ಚರಿತ್ರೆಯೆಂದರೆ ಅದು ಕೇವಲ ಮಹಿಳೆಯರನ್ನು ಮಕ್ಕಳನ್ನು ರಂಜಿಸುವ ಪುರಾಣ ಕಥೆಗಳನ್ನಾಗಿಸಿದ್ದಾರೆ, ಹಾಗೆಂದ ಮಾತ್ರಕ್ಕೆ ಭಾರತಕ್ಕೆ ಚರಿತ್ರೆ ಇಲ್ಲ ಎಂಬುದಲ್ಲ, ಭಾರತದ ಚರಿತ್ರೆಯನ್ನು ಬೌದ್ಧ ಸಾಹಿತ್ಯದ ಸಹಾಯದೊಂದಿಗೆ ಮರಳಿ ರಚಿಸಬೇಕಾಗಿದೆ”. ಇನ್ನೊಂದು ಕಡೆ “ಭಾರತದ ಇತಿಹಾಸವೆಂದರೆ ಅದು ಬ್ರಾಹ್ಮಣ ಧರ್ಮಕ್ಕೂ ಬೌದ್ಧ ಧರ್ಮಕ್ಕೂ ನಡೆದ ಘನಘೋರ ಸಂಘರ್ಷವಾಗಿದೆ“ ಎಂದಿದ್ದಾರೆ. ಈ ಮಾತುಗಳನ್ನು ಚರಿತ್ರೆಕಾರರು, ಸಂಶೋಧಕರು ಇಲ್ಲಿಯವರೆಗೆ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ, ಕಾರಣ ಅವರಾರಿಗೂ ಭಾರತವನ್ನು ಬೌದ್ಧ ಭಾರತವೆಂದು ಗುರುತಿಸಲು ಅಥವಾ ಕರೆಯಲು ಇಷ್ಟವಿಲ್ಲವೇನೊ ?!. ಆದರೆ ವಾಸ್ತವ ಸತ್ಯ ಏನೆಂದರೆ ಭಾರತ ಹಿಂದೆ ಬೌದ್ಧ ಭಾರತವಾಗಿತ್ತು ಇವತ್ತೂ ಬೌದ್ಧ ಭಾರತವಾಗಿದೆ ಮುಂದೆಯೂ ಬೌದ್ಧ ಭಾರತವಾಗಿಯೇ ಉಳಿಯುತ್ತದೆ. ಇದಕ್ಕೆ ಕಾಲವೇ ಉತ್ತರ ನೀಡುತ್ತದೆ.
ಭಾರತದ ಭವ್ಯ ಪರಂಪರೆಯನ್ನು ವಿದೇಶಿ ಪ್ರವಾಸಿಗರು ಹೇಗೆ ನೋಡಿದ್ದಾರೆ?
ಈಗ ಭಾರತದ ಇಂತಹ ಭವ್ಯ ಪರಂಪರೆಯನ್ನು ವಿದೇಶಿ ಪ್ರವಾಸಿಗರು ಹೇಗೆ ನೋಡಿದ್ದಾರೆ? ಹೇಗೆ ದಾಖಲಿಸಿದ್ದಾರೆ ಎಂದು ನೋಡೋಣ. ಇದು ಬಹಳ ಸುದೀರ್ಘವಾಗಿರುವ ಚರಿತ್ರೆಯಾಗಿರುವುದರಿಂದ ಸರಣಿಯ ಕಂತುಗಳಲ್ಲಿ ನೋಡುತ್ತ ಹೋಗೋಣ. ಬಹಳ ಪ್ರಮುಖವಾಗಿ ಫಾಹಿಯನ್, ಹ್ಯೂಯೆನ್ ತ್ಸಾಂಗ್ ಮತ್ತು ಇ-ತ್ಸಿಂಗ್ ರವರ ಆಕರಗಳನ್ನು ಬಳಸಿಕೊಂಡು ಹೇಳುವ ಪ್ರಯತ್ನ ಮಾಡಲಾಗಿದೆ . ಇವರುಗಳು ಭಾರತಕ್ಕೆ ಭೇಟಿ ನೀಡಿದಾಗ ಅವರು ಕಂಡುಂಡ ಬೌದ್ಧ ಸಂಸ್ಕೃತಿಯನ್ನು, ಜನ ಸಾಮಾನ್ಯರ ಜೀವನ ಶೈಲಿಯ ಮೇಲೆ ಪ್ರಭಾವ ಬೀರಿದ ಅಂಶಗಳನ್ನು ಆ ಕಾಲಘಟ್ಟದ ಸಂಗತಿಗಳನ್ನಷ್ಟೇ ಇಲ್ಲಿ ಪ್ರಮುಖವಾಗಿ ಚರ್ಚಿಸಲಾಗುತ್ತದೆ. ಇವರು ಚೀನಾ ದೇಶದ ಯಾತ್ರಿಕರು ಇದು ತಮ್ಮ ಗಮನದಲ್ಲಿರಲಿ, ಇವರು ಭೇಟಿ ನೀಡಿದ ಕಾಲ ಕ್ರಿ ಶ 350 ರಿಂದ 635 ರ ವರೆಗೆ. ಅಂದರೆ ಬೌದ್ಧ ಧರ್ಮ ಉದಯವಾಗಿ ಸುಮಾರು 900 ವರ್ಷಗಳ ನಂತರದ ಕಾಲಘಟ್ಟ. ಈ ಸಮಯದಲ್ಲಿ ಭಾರತದ ಸಂಸ್ಕೃತಿ ಹೇಗಿತ್ತು? ಇಲ್ಲಿನ ಜನರ ಧಾರ್ಮಿಕ ನಂಬಿಕೆಗಳು ಏನಾಗಿದ್ದವು? ಸಾಮಾನ್ಯ ಜನರ ಜೀವನ ಕ್ರಮ ಹೇಗಿತ್ತು? ರಾಜ ಮಹಾರಾಜರು, ಪಂಡಿತರು ವಿದ್ವಾಂಸರು ಹೇಗೆ ತಮ್ಮ ಪಾಂಡಿತ್ಯವನ್ನು ತೋರಿಸುತ್ತಿದ್ದರು ಎಂದು ನೋಡುವ ಪ್ರಯತ್ನ ಇದಾಗಿದೆ.

ಫಾಹಿಯಾನ್: ಕ್ರಿ ಶ 350 ರಿಂದ 440 ರ ವರೆಗೆ ಅಂದರೆ ಸುಮಾರು 90 ವರ್ಷಗಳ ಕಾಲ ಜೀವಿಸಿದ್ದ. ಇವನು ಭಾರತಕ್ಕೆ ಬಂದಿದ್ದು ಕ್ರಿ ಶ 399 ರಲ್ಲಿ. ನಾಲ್ಕು ಜನ ಬೌದ್ಧ ಭಿಕ್ಷುಗಳೊಂದಿಗೆ ಈತ ಯಾತ್ರೆಯನ್ನು ಪ್ರಾರಂಭಿಸುತ್ತಾನೆ. ಇವನು ಟಿಬೆಟ್ ಹಾದು ಗೋಭಿ ಮರುಭೂಮಿಯ ಮೂಲಕ ಈಗಿನ ಹಿಂದೂ ಕುಶ್ ಪರ್ವತವನ್ನು ಹತ್ತಿ ಉತ್ತರ ಭಾರತವನ್ನು ತಲುಪಿದನು. ಫಾಹಿಯನ್ ಸುಮಾರು ಹತ್ತು ವರ್ಷಗಳಕ್ಕಿಂತಲೂ ಹೆಚ್ಚು ಕಾಲ ಈ ದೇಶದಲ್ಲಿ ಸಂಚರಿಸಿದನು ಅಂದರೆ ಕ್ರಿ ಶ 400 ರಿಂದ 411 ರ ವರೆಗೆ ಪ್ರವಾಸದಲ್ಲಿದ್ದನು. ಇವನು ಇಡೀ ಪ್ರವಾಸವನ್ನು ಬಹುಪಾಲು ಕಾಲು ನಡಿಗೆಯಲ್ಲೇ ಮಾಡಿದನು. ಇವನು ದಾಖಲಿಸಿದ ಪುಸ್ತಕದ ಹೆಸರು “ ಫೋ ಘೋ ಝಿ “ ಚೀನಾ ಭಾಷೆಯಲ್ಲಿದೆ. ಇದರ ಅರ್ಥ “ಬೌದ್ಧ ಸಾಮ್ರಾಜ್ಯಗಳ ದಾಖಲೆಗಳು“ ಎಂಬುದಾಗಿದೆ. “ದಿ ರೆಕಾರ್ಡ್ಸ್ ಆಫ್ ಬುದ್ಧಿಸ್ಟಿಕ್ ಕಿಂಗ್ಡಮ್ಸ್ “ ಎಂದು ಇಂಗ್ಲಿಷ್‌ನಲ್ಲಿ ಕರೆಯಲಾಗಿದೆ.
ಹಿಂದೂ ಕುಶ್ ಪರ್ವತ ಶ್ರೇಣಿಯನ್ನು ದಾಟಿ ಉತ್ತರ ಭಾರತಕ್ಕೆ ಬಂದಾಗ ಆ ಗಡಿಯಲ್ಲಿ “ಡೇರೆಲ್ “ ಎಂಬ ಒಂದು ಸಣ್ಣ ನಾಡಿತ್ತು. ಇಲ್ಲಿ ನೂರಾರು ಬೌದ್ಧ ಭಿಕ್ಷುಗಳಿದ್ದರು. ಇವರೆಲ್ಲರೂ ಹೀನಯಾನ ಪಂಥಕ್ಕೆ ಸೇರಿದವರು. ಇವರಲ್ಲಿ ಒಬ್ಬ ಅರ್ಹಂತನಿದ್ದ ಅವನ ಹೆಸರು “ಬೋಧಿಸತ್ವ ಮೈತ್ರೇಯನ್”. ಮುಂದೆ ಫಾಹಿಯನ್ ಮತ್ತು ಅವನ ಸಂಗಡಿಗರು ಇಂಡಸ್ ನದಿಯ ತಪ್ಪಲಿಗೆ ಬಂದರು. ಈ ನದಿಯನ್ನು ದಾಟಿ ಮುಂದೆ ಹೋಗಿ “ಉದ್ಯಾನ “ ಎಂಬ ನಾಡನ್ನು ತಲುಪಿದರು. ಇದು ಉತ್ತರ ಭಾರತದ ಒಂದು ಪ್ರದೇಶವಾಗಿತ್ತು. ಇಲ್ಲಿ ಬೌದ್ಧ ಧರ್ಮವು ಬಹಳ ಪ್ರವರ್ಧಮಾನದಲ್ಲಿತ್ತು. ಇಲ್ಲಿ ಹೀನಯಾನಕ್ಕೆ ಸೇರಿದ ಐನೂರು ಭಿಕ್ಷುಗಳಿದ್ದರು. ಪರನಾಡಿನಿಂದ ಬಂದವರನ್ನು ಎಲ್ಲಾ ರೀತಿಯ ಸೌಕರ್ಯಗಳನ್ನು ನೀಡಿ ಸತ್ಕರಿಸುತ್ತಿದ್ದರು. ಈ ಸ್ಥಳದ ಐತಿಹ್ಯದಂತೆ ಬುದ್ಧರು ಈ ಉದ್ಯಾನ ಪ್ರದೇಶಕ್ಕೆ ಬಂದಿದ್ದರು, ಹಾಗೆ ಬಂದಿದ್ದಾಗ ಅವರು ತನ್ನ ಪಾದಚಿಹ್ನೆಯನ್ನು ಇಲ್ಲಿ ಇಟ್ಟು ಹೋದರೆಂದು ಹೇಳುತ್ತಾರೆ ಎಂಬುದನ್ನು ಫಾಹಿಯನ್ ದಾಖಲಿಸಿದ್ದಾನೆ.

ಹಾಗೆಯೇ ಮುಂದೆ ಒಂದು ಕಡೆ “ಬುದ್ಧರು ತನ್ನ ಬಟ್ಟೆಗಳನ್ನು ಒಣಗಲು ಹಾಕಿದ ಕಲ್ಲು ಗುಡ್ಡವನ್ನು, ಒಂದು ಭಯಂಕರ ನಾಗ ಮನುಷ್ಯನನ್ನು ಪರಿವರ್ತಿಸಿದ ಸ್ಥಳವನ್ನು ನೋಡಿದೆವು. ಈ ಕಲ್ಲು ಹದಿನಾರು ಅಡಿ ಎತ್ತರವಾಗಿದೆ, ಇಪ್ಪತ್ತು ಅಡಿ ಅಗಲವಾಗಿದೆ” ಎಂದು ದಾಖಲಿಸಿದ್ದಾನೆ.
ಉದ್ಯಾನದಿಂದ ದಕ್ಷಿಣ ದಿಕ್ಕಿಗೆ ಪ್ರಯಾಣ ಬೆಳೆಸಿದೆವು ಈ ನಾಡಿನಲ್ಲಿಯೂ ಬೌದ್ಧ ಧರ್ಮ ಬಹಳ ಉಚ್ಛ್ರಾಯ ಸ್ಥಿತಿಯಲ್ಲಿತ್ತು. “ಪಾರಿವಾಳವನ್ನು ಅಟ್ಟಿಸಿಕೊಂಡು ಹೋಗುತ್ತಿದ್ದ ಗಿಡುಗನಿಗೆ ಬೋಧಿಸತ್ವನಾದ ಶಕ್ರನು ತನ್ನ ಶರೀರದ ಮಾಂಸವನ್ನು ಕೊಯ್ದುಕೊಟ್ಟ ಸ್ಥಳವಿದೆ”. ಮುಂದೆ ಪ್ರಯಾಣಿಸಿ ಗಾಂಧಾರ ದೇಶ ತಲುಪಿದೆವು, ಈ ದೇಶವನ್ನು ಹಿಂದೆ ಅಶೋಕ ಚಕ್ರವರ್ತಿಯ ಮಗ “ಧರ್ಮ ವರ್ಧನ” ಆಳುತಿದ್ದನು. “ಬುದ್ಧನು ಬೋಧಿಸತ್ವನಾಗದಿದ್ದಾಗ ತನ್ನ ಕಣ್ಣನ್ನು ಇನ್ನೊಬ್ಬನಿಗೆ ದಾನ ಮಾಡಿದ್ದು ಇದೇ ಸ್ಥಳದಲ್ಲಿಯೇ” ಎಂದು ಇಲ್ಲಿನ ಜನರು ಹೇಳುತ್ತಾರೆ. ಇಲ್ಲಿ ಚಿನ್ನ ಬೆಳ್ಳಿ ತಗಡುಗಳಿಂದ ಅಲಂಕೃತವಾದ ಸ್ತೂಪವೊಂದು ನಿರ್ಮಾಣವಾಗಿತ್ತು. ಈ ನಾಡಿನ ಜನರು ಹೆಚ್ಚಾಗಿ ಹೀನಯಾನ ಸಂಪ್ರದಾಯಕ್ಕೆ ಸೇರಿದವರಾಗಿದ್ದರು ಎಂದು ಬರೆದುಕೊಂಡಿದ್ದಾನೆ.
ಇಲ್ಲಿಂದ ಪೂರ್ವ ದಿಕ್ಕಿಗೆ ಪ್ರಯಾಣ ಮಾಡಿ “ತಕ್ಷಶಿಲಾ” ಎಂಬ ನಗರವನ್ನು ತಲುಪಿದೆವು. ಬುದ್ಧನು ಬೋಧಿಸತ್ವನಾಗಿದ್ದಾಗ ತನ್ನ ತಲೆಯನ್ನು ತನ್ನ ಸಹಪಾಠಿಯೊಬ್ಬನಿಗೆ ದಾನ ಮಾಡಿದ್ದನು. ಆದ್ದರಿಂದ ಈ ನಗರಕ್ಕೆ ಈ ಹೆಸರು ಬಂದಿದೆ. ಚೀನಾ ಭಾಷೆಯಲ್ಲಿಯೂ ತಕ್ಷಶಿಲ ಎಂದರೆ ಕತ್ತರಿಸಿದ ತಲೆ ಎಂಬ ಅರ್ಥವಿದೆ. ಇಲ್ಲಿಂದ ಪೂರ್ವ ದಿಕ್ಕಿಗೆ ಹೊರೆಟೆವು. ಬುದ್ಧನು ತನ್ನ ದೇಹವನ್ನು ಹಸಿದ ಹುಲಿಗೆ ಅರ್ಪಣೆ ಮಾಡಿದ ಸ್ಥಳವಿದೆ ಎಂಬುದನ್ನು ಕಂಡುಕೊಂಡೆವು. ರಾಜ ಮಹಾರಾಜರು, ಸಚಿವರು, ಸಾಮಾನ್ಯ ಜನರು ಒಬ್ಬರ ಮೇಲೊಬ್ಬರು ಸ್ಪರ್ಧಿಸಿ ಫಲಪುಷ್ಪ ಧೂಪ ದೀಪಗಳಿಂದ ಬುದ್ಧನನ್ನು ಪ್ರಾರ್ಥಿಸುತ್ತಾರೆ. ಮೇಲೆ ಉಲ್ಲೇಖಿಸಿದ ಸ್ತೂಪಗಳನ್ನು ನಾಲ್ಕು ಮಹಾಸ್ತೂಪಗಳೆಂದು ಕರೆಯುತ್ತಾರೆ. ಜನರು ಬಹಳ ಶ್ರದ್ಧೆಯಿಂದ ಇವುಗಳನ್ನು ಕಾಣುತ್ತಾರೆ.
ಫಾಹಿಯನ್ ಯಾತ್ರೆ ಮುಂದುವರೆಯುತ್ತದೆ………
ಡಾ ನಾಗೇಶ ಮೌರ್ಯ
ಬೌದ್ಧ ಚಿಂತಕರು
ಇದನ್ನೂ ಓದಿ-ನುಡಿ ನಮನ | ಪಶ್ಚಿಮಘಟ್ಟಗಳ ಸಾಕ್ಷಿಪ್ರಜ್ಞೆ ಇನ್ನಿಲ್ಲ


