ಚಿತ್ರವಿಮರ್ಶೆ
ಇಡೀ ಚಿತ್ರದಲ್ಲಿ ಕಾಮಿಡಿ ಸೀನ್ಗಳು ಸೀರಿಯಸ್ ಆಗಿಯೂ ಸೀರಿಯಸ್ ಸೀನುಗಳು ಕಾಮಿಡಿಯಾಗಿಯೂ ಪ್ರೇಕ್ಷಕರನ್ನು ಕನ್ಫ್ಯೂಸ್ ಮಾಡಿದ ಅತಿ ದೊಡ್ಡ ಸಾಧನೆಗೆ ಡೈರೆಕ್ಟರ್ ಶಂಕರ್ ಮತ್ತು ಕಮಲಹಾಸನ್ ಜೋಡಿ ಕಾರಣರು ಎಂದರೆ ಯಾವ ಲೆಕ್ಕದಲ್ಲೂ ತಪ್ಪಿಲ್ಲ. 3 ಗಂಟೆ ಟಾರ್ಚರ್ ಸಹಿಸಿಕೊಂಡು ಎರಡು ಮೂರು ಸಲ ನಿದ್ದೆ ಮಾಡಲು ಇಷ್ಟಪಡುವ ಯಾರೇ ಆದರೂ ಈ ಚಿತ್ರಕ್ಕೆ ಈಗಲೇ ಟಿಕೆಟ್ ಬುಕ್ ಮಾಡಿಕೊಳ್ಳಿ -ಜಗದೀಶ್ ಬೋನಾವಿ, ಬೆಂಗಳೂರು
ನಿರ್ದೇಶಕ ಶಂಕರ್ ಮತ್ತು ಕಮಲಹಾಸನ್ ಕಾಂಬಿನೇಷನ್ನಲ್ಲಿ ತೆರೆಕಂಡಿರುವ 3:00 ಗಂಟೆ ಅವಧಿಯ ಇಂಡಿಯನ್ 2 ಚಿತ್ರ ನೋಡಿ ಹೊರ ಬರುತ್ತಿರುವಾಗ ಆಡಿಯನ್ಸ್ ಒಬ್ಬರು ಶಂಕರ್ ತಲೆ ಕಂಪ್ಲೀಟ್ ಆಗಿ ಖಾಲಿಯಾಗಿದೆ ಎಂದು ಬೈದುಕೊಂಡು ಬರುತ್ತಿರುವುದು ಕಾಣಿಸಿತು. ಖಾಲಿಯಾಗಲು ಶಂಕರ್ ತಲೆಯಲ್ಲಿ ಮೊದಲು ಇದ್ದಿದ್ದಾದರೂ ಏನು ಎಂದು ಯೋಚಿಸುತ್ತ ಹೊರ ಬಂದೆ.
ಶಂಕರ್ ಅದ್ದೂರಿತನವೇ ತುಂಬಿಕೊಂಡ ಹಿಟ್ ಸಿನಿಮಾಗಳ ಡೈರೆಕ್ಟರ್ ಎಂದೇ ಖ್ಯಾತಿ ಪಡೆದವರು. ಅವರ 90 ಪರ್ಸೆಂಟ್ ಚಿತ್ರಗಳ ವಸ್ತುವೇ ವಿಜಿಲ್ಯಾಂಟಿಸಂ ( ಕಾನೂನು ಕೈಗೆತ್ತಿಕೊಂಡು ಪೊಲೀಸ್ ಕೋರ್ಟು ಸರ್ಕಾರದ ಮೇಲೆ ನಂಬಿಕೆ ಇಲ್ಲದೆ ಕಂಡ ಕಂಡವರನ್ನೆಲ್ಲ ಕೊಂದು ನ್ಯಾಯ ಪಡೆಯುವ ಗೋರಕ್ಷಕರ ತರದ ಹಿಂಸಾತ್ಮಕ ಪುಂಡತನ). ಎರಡನೇ ಚಿತ್ರ ಜೆಂಟಲ್ ಮ್ಯಾನ್ ಮೂಲಕ ಶುರುವಾಯಿತು ನಿರ್ದೇಶಕ ಶಂಕರ್ ವಿಜಿಲೆಂಟಿಸಂ ವ್ಯಾಮೋಹ. ಮೀಸಲಾತಿ ಪದ್ಧತಿಯನ್ನು ರದ್ದು ಮಾಡಬೇಕೆಂಬ ಅಪಾಯಕಾರಿ ವಾದವಿಟ್ಟುಕೊಂಡು ಕೊಳ್ಳೆ- ಕಳ್ಳತನ ಮಾಡುವ ಬ್ರಾಹ್ಮಣ ನಾಯಕನ ಚಿತ್ರವೇ ಜಂಟಲ್ ಮ್ಯಾನ್. ಒಂದು ದಿನದ ಮುಖ್ಯಮಂತ್ರಿ ಪದವಿಯಲ್ಲಿ ಕುಳಿತು ರಾಜ್ಯವನ್ನು ರಾಮ ರಾಜ್ಯ ಮಾಡುವ ಕಥೆಯೇ ‘ಮುದಲ್ವನ್’, ನ್ಯಾಯ ಪಡೆಯಲು ಹಿಂಸೆಯೊಂದೇ ದಾರಿ ಎಂದು ಲೋ ಲೆವೆಲ್ ಭ್ರಷ್ಟರ ಪ್ರಾಣ ತೆಗೆಯುವ ಮಾನಸಿಕ ಅಸ್ವಸ್ಥ ಪುರೋಹಿತನೊಬ್ಬನ ಕಥೆಯೇ ‘ಅನ್ನಿಯನ್’, ಸ್ವಾತಂತ್ರ್ಯ ಹೋರಾಟಗಾರನಾಗಿ ಮತ್ತದೇ ಲೋ ಲೆವೆಲ್ ಭ್ರಷ್ಟರ ಜೀವ ತೆಗೆಯುವ ವೃದ್ಧನೊಬ್ಬನ ಕಥೆ ಆಧರಿಸಿದ ‘ಇಂಡಿಯನ್’ ಇವು ಶಂಕರ್ ನಿರ್ದೇಶನದ ಕೆಲ ಚಿತ್ರಗಳ ಸ್ಯಾಂಪಲ್ ಗಳು. ಇವೆಲ್ಲ ಚಿತ್ರಗಳಲ್ಲೂ ಶಂಕರ್ ಪ್ರಯೋಗಿಸಿದ್ದು ಮತ್ತದೇ ವಿಜಿಲಾಂಟಿಸಂ ಮೆರೆದಾಟ.
ಹೆಸರಿಗೆ ಭ್ರಷ್ಟರ ವಿರುದ್ಧ ಹೋರಾಟ ಎಂಬ ಮುಖವಾಡ ಧರಿಸಿದ ಶಂಕರ್ ಸಿನಿಮಾಗಳ ಹೀರೋಗಳು ಹೋರಾಡುವುದು ಮಾತ್ರ, ಲೈಟ್ ಕಂಬ ರಿಪೇರಿ ಮಾಡುವ ಲೈನ್ ಮ್ಯಾನ್, ರೈಲ್ವೆ ಕ್ಯಾಂಟೀನ್ ನಡೆಸುವ ಗುತ್ತಿಗೆದಾರ, ರೇಷನ್ ಅಂಗಡಿಯಲ್ಲಿ ಕಲಬೆರಕೆ ಧಾನ್ಯ ಮಾರುವ ಡಿಪೋದವ, ಇಂಥ ಬಡಪಾಯಿ ಭ್ರಷ್ಟರ ವಿರುದ್ಧವೇ ಹೊರತು ಸಾವಿರಾರು ಕೋಟಿ ಭ್ರಷ್ಟಾಚಾರದಲ್ಲಿ ಮುಳುಗಿದ ರಾಜಕಾರಣಿಗಳು ಕಾರ್ಪೊರೇಟ್ ಕಂಪನಿಗಳ ಸಹವಾಸಕ್ಕೆ ಶಂಕರ್ ಸಿನಿಮಾ ಹೀರೋಗಳು ಹೋಗುವುದಿಲ್ಲ. ಯಾಕೆಂದರೆ ಈ ಲೋ ಲೆವೆಲ್ ಭ್ರಷ್ಟರ ಹೊರತಾಗಿ ಶಂಕರ್ ತಲೆಯೊಳಗೆ ಈ ದೇಶ ಕಂಡ ಬ್ರಹ್ಮಾಂಡ ಭ್ರಷ್ಟಾಚಾರಗಳ ಬಗ್ಗೆಯಾಗಲಿ, ಪನಾಮ ಪೇಪರ್ಸ್, ವರ್ಜಿನ್ ಐಲ್ಯಾಂಡ್, ರಫೆಲ್ ಜೆಟ್ ತರದ ಹೈ ಪ್ರೊಫೈಲ್ ಕರಪ್ಶನ್ ಬಗ್ಗೆ ರವೆ ಕಾಳಿನಷ್ಟು ಮಾಹಿತಿ ಇಲ್ಲ.
ತಮ್ಮ ಟ್ರೇಡ್ ಮಾರ್ಕ್ ಕರಪ್ಶನ್ ಆಧರಿತ ಕಥೆಯನ್ನೇ ಇಟ್ಟುಕೊಂಡು ಈ ಬಾರಿ ಇಂಡಿಯನ್ 2 ಚಿತ್ರ ಮಾಡಿದ್ದಾರೆ ಶಂಕರ್. ದೇಶಾದ್ಯಂತ ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ನಿಲ್ಲಿಸಿ ತಮ್ಮನ್ನು ಕಾಪಾಡಲು ನೂರು ವರ್ಷ ದಾಟಿದ, ದೈಹಿಕವಾಗಿ ದುರ್ಬಲನಾಗಿರುವ, ಒಂದು ಕಾಲನ್ನು ಸಮಾಧಿ ಒಳಗೆ ಇಟ್ಟ ಮುದುಕನೊಬ್ಬ ಬರಬೇಕು ಎಂದು ದೇಶದ ನಾನಾ ರಾಜ್ಯಗಳ ಯುವಜನರು ಸೋಶಿಯಲ್ ಮೀಡಿಯಾ ಕ್ಯಾಂಪೇನ್ ಮಾಡುವುದು, ಇದನ್ನು ಕಂಡು ಆ ನೂರು ವರ್ಷ ದಾಟಿದ ಮುದುಕ ಇಂಡಿಯಾಗೆ ಬಂದು ದೇಶವನ್ನು ಕಾಪಾಡುವುದು ಇಂಡಿಯನ್ 2 ಚಿತ್ರದ ಒನ್ ಲೈನ್ ಸ್ಟೋರಿ. ಇಲ್ಲಿಯೂ ಶಂಕರ್’ರ ಹಿಂದಿನ ಚಿತ್ರಗಳ ತಲೆ ಬುಡವಿಲ್ಲದ ವಿಜಿಲಾಂಟಿಸಂ ಹುಚ್ಚಾಟ ರಭಸದಿಂದ ಮುಂದುವರಿದಿದೆ. ಈ ಚಿತ್ರದಲ್ಲಿ ಶಂಕರ್ ತಮ್ಮ ಹಿಂದಿನ ಚಿತ್ರಗಳಿಗಿಂತಲೂ ಹೆಚ್ಚಿನದಾದ ಕಳಪೆ ಕಥೆಯ ಕಂದಕದೊಳಗೆ ಕಮಲ ಹಾಸನ್ ರನ್ನು ಎಳೆದುಕೊಂಡು ಅನಾಮತ್ತಾಗಿ ಬಿದ್ದಿರುವುದು ಎದ್ದು ಕಾಣುತ್ತದೆ.
ನಾಟಿ ಗಿಡಮೂಲಿಕೆ ಔಷಧಿ ಮಾರುವ ಟೆಂಟ್ ವ್ಯಾಪಾರಿಗಳಂತೆ ಹಾಸ್ಯಸ್ಪದ ಶೈಲಿಯಲ್ಲಿ ಉದ್ದ ಕೂದಲು ಬಿಟ್ಟುಕೊಂಡು ಇಂಡಿಯನ್ ತಾತ ತೆರೆಯ ಮೇಲೆ ಕಾಣಿಸುತ್ತದೆ. ಬಂದಿದ್ದೆ ತನ್ನ ಬೆರಳಲ್ಲಿ ನಾಲ್ಕು ಜನರಿಗೆ ಹೊಡೆದು ಒಬ್ಬನನ್ನು ಮುಗಿಸಿ ಹೋಗುವ ಮೂಲಕ ಇಂಡಿಯನ್ ತಾತ ಪಾತ್ರ ಪರಿಚಯವಾಗುತ್ತದೆ. ನಂತರ ತಾತ ನಮ್ಮನ್ನು ಕಾಪಾಡು ಬಾ, ತಾತ ಕಾಪಾಡು ಬಾ ಎಂದು ಗೋಳಾಡುತ್ತಿರುವ ಭಾರತದ ಯುವಜನರ ಮಾತಿಗೆ ಬೆಲೆ ಕೊಟ್ಟು ಇಂಡಿಯಾ ತಾತ ಭಾರತಕ್ಕೆ ಬಂದು ನೀವ್ಯಾರು ಹೆಲ್ಮೆಟ್ ಹಾಕುವುದಿಲ್ಲ ಸಿಗ್ನಲ್ ಜಂಪ್ ಮಾಡುತ್ತೀರಾ, ಕರಪ್ಶನ್ ಅನ್ನು ಸಹಿಸಿಕೊಳ್ಳುತ್ತೀರ, ನೀವೇ ದೊಡ್ಡ ಭ್ರಷ್ಟರು ಎಂದು ಜನರನ್ನೇ ಉಗಿದು ಬಿಸಾಕುತ್ತದೆ. ಒಬ್ಬ ಭ್ರಷ್ಟನನ್ನು ಚೇರಲ್ಲಿ ಕಟ್ಟಿ ಹಾಕಿ ಅವನ ಕತ್ತಿಗೆ ಬೆರಳಿನಿಂದ ತಿವಿದು ಅವನಿಗೆ ದೇವರ ನಾಮ ಹಾಡುತ್ತಲೇ ಇರುವ ಹೊಸ ಕಾಯಿಲೆ ಒಂದನ್ನು ಕೊಡುತ್ತದೆ. ಇದಕ್ಕೆ ಮರ್ಮಕಲೆ ಎಂದು ಹೆಸರು ಎಂದು ಹೇಳಿ ಜನರನ್ನು ನಗೆಗಡಲಿನಲ್ಲಿ ತೇಲಿಸುತ್ತದೆ. ಸರ್ಕಾರ ಕೊಡುವ ಉಚಿತ ಯೋಜನೆಗಳ ಲೇವಡಿ, ಕಸದ ಲಾರಿಯಲ್ಲಿ ದಾರಿ ತುಂಬ ಕಸ ಉದುರಿಸಿಕೊಂಡು ಹೋಗುವ ವಾಹನ, ಪ್ರೈವೇಟ್ ಕಾಲೇಜಿನಲ್ಲಿ ಟೀಚರ್ ಕೆಲಸಕ್ಕೆ ಲಂಚ, ಪ್ರಜಾಪ್ರಭುತ್ವ ಚುನಾವಣೆ ಎಲ್ಲವೂ ವೇಸ್ಟ್ ತಪ್ಪು ಮಾಡಿದವರನ್ನು ವಿಜಿಲಾಂಟಿಸಮ್ ಮೂಲಕ ಕೊಲ್ಲುವ ಮಧ್ಯಯುಗೀನ ಹಿಂಸಾಚಾರದ ಆಡಳಿತವನ್ನು ಈ ಚಿತ್ರ ಬೆಂಬಲಿಸುತ್ತದೆ.
ಶಂಕರ್ ಇಂಡಿಯಾವನ್ನು ಡೆಮಾಕ್ರಸಿ ತನಿಖಾ ಸಂಸ್ಥೆಗಳ ಸುಳಿವಿಲ್ಲದ ಜಂಗಲ್ ಕಾನೂನಿನ ತಾಲಿಬಾನಿಗಳ ಆಡಳಿತದಲ್ಲಿದೆ ಎಂದುಕೊಂಡಿದ್ದಾರೋ ಹೇಗೆ ಎಂಬ ಅನುಮಾನ ಇಡೀ ಸಿನಿಮಾ ನೋಡುವಾಗ ಮೂಡುತ್ತದೆ. ಸಣ್ಣ ಮಕ್ಕಳಿಗೆ ಮರ್ಮಕಲೆ ಮೂಲಕ ಇನ್ನೊಬ್ಬರ ಪ್ರಾಣ ತೆಗೆಯುವುದು ಹೇಗೆ ಎಂದು ವಿದೇಶದಲ್ಲಿ ಹೇಳಿಕೊಡುವ ಇಂಡಿಯನ್ ತಾತ ಭಾರತಕ್ಕೆ ಬಂದು ದೇಶದ ನಾನಾ ರಾಜ್ಯಗಳಲ್ಲೂ ಅದನ್ನೇ ಮಾಡುತ್ತದೆ. ಭ್ರಷ್ಟಾಚಾರಿಗಳನ್ನು ಕೊಂದು ಬಿಸಾಕಿದರೆ ಅವರ ಮಕ್ಕಳು ಮರಿಗಳಿಗೆ ಅವರ ಆಸ್ತಿ ವರ್ಗಾವಣೆ ಯಾಗುತ್ತದೆ, ಭ್ರಷ್ಟಾಚಾರ ನಿಲ್ಲುವುದೂ ಇಲ್ಲ ಎಂಬ ಕಾಮನ್ ಸೆನ್ಸ್ ಸಹ ಇಂಡಿಯನ್ ತಾತನಿಗೆ ಇಲ್ಲ. ಆ ಮಟ್ಟಿಗೆ ಇಂಡಿಯನ್ ತಾತಾಗೆ ಅರಳು ಮರಳು ಕಾಯಿಲೆ ಇದೆ. ಕೇರಳದ ಮರ್ಮಕಲೈ ಮೂಲಕ ಬೆರಳಲ್ಲಿ ಒಂದು ಏಟು ಬಾರಿಸಿ ಪುರುಷರನ್ನು ಟ್ರಾನ್ಸ್ ಜೆಂಡರ್ ಗಳಾಗಿ ಮಾಡಬಹುದು ಎಂಬ ನಗೆ ಪಾಟಲು ಸಂಶೋಧನೆಯನ್ನು ಈ ಚಿತ್ರದಲ್ಲಿ ತಲೆಕೆಟ್ಟ ನಿರ್ದೇಶಕ ಮಾಡಿದ್ದಾನೆ. ಮಲ್ಟಿ ಮಿಲಿನಿಯರ್ ಕಾರ್ಪೊರೇಟ್ ಒಬ್ಬನನ್ನು ಕೊಂದ ಇಂಡಿಯನ್ ತಾತನ ಬಗ್ಗೆ ಸಿಬಿಐ ಆಫೀಸರ್ ಒಬ್ಬ ಒಂದಿಷ್ಟು ಫೀಲ್ಡ್ ಸ್ಟಡಿ ಮಾಡದೆ ಗೂಗಲ್ ಸರ್ಚ್ ಮಾಡಿ ಇದು ಇಂಡಿಯನ್ ತಾತನೇ ಮಾಡಿರುವುದು ಎಂದು ಪತ್ತೆ ಹಚ್ಚುವ ಭಯಾನಕ ಕಾಮಿಡಿ ಥಿಯೇಟರ್‌ನಲ್ಲಿ ಜನ ಬಿದ್ದು ಬಿದ್ದು ನಗುವಂತಿತ್ತು.
ಇಡೀ ಚಿತ್ರದಲ್ಲಿ ಕಾಮಿಡಿ ಸೀನ್ಗಳು ಸೀರಿಯಸ್ ಆಗಿಯೂ ಸೀರಿಯಸ್ ಸೀನುಗಳು ಕಾಮಿಡಿಯಾಗಿಯೂ ಪ್ರೇಕ್ಷಕರನ್ನು ಕನ್ಫ್ಯೂಸ್ ಮಾಡಿದ ಅತಿ ದೊಡ್ಡ ಸಾಧನೆಗೆ ಡೈರೆಕ್ಟರ್ ಶಂಕರ್ ಮತ್ತು ಕಮಲಹಾಸನ್ ಜೋಡಿ ಕಾರಣರು ಎಂದರೆ ಯಾವ ಲೆಕ್ಕದಲ್ಲೂ ತಪ್ಪಿಲ್ಲ.
ದೇವರ ಅವತಾರಗಳ ತರದಲ್ಲಿ ಈ ಕಾಲದಲ್ಲೂ ಜನರನ್ನು ಕಾಪಾಡಲು ಒಬ್ಬ ವಿಜಿಲಾಂಟೆ ಹಿಂಸಾ ಮಾದರಿಗಳನ್ನು ಹಿಡಿದು ಬರಬೇಕು ಎಂದು ತಲೆ ಖಾಲಿಯಾದ ಡೈರೆಕ್ಟರ್ ಶಂಕರ್ ಇಡೀ ಚಿತ್ರದ ತುಂಬಾ ಹೇಳುತ್ತಾರೆ.
ದೇಶ ಎಂದರೇನು, ಸರ್ಕಾರ ಎಂದರೇನು,ಬ್ಯೂರೋಕ್ರಸಿ ಹೇಗೆ ವರ್ಕ್ ಆಗುತ್ತದೆ, ಭ್ರಷ್ಟತೆಯ ಸ್ವರೂಪ 2024ರಲ್ಲಿ ಎಷ್ಟೆಲ್ಲಾ ಹೊಸ ಡೈಮೆನ್ಷನ್ ಗೆ ತಿರುಗಿ ಕೊಂಡಿದೆ ಎಂಬ ಬಗ್ಗೆ ಮೂರು ಕಾಸಿನ ಜ್ಞಾನವಿಲ್ಲದವರು ಮಾತ್ರ ಇಂಥ ದರಿದ್ರದ ಸಿನಿಮಾ ಮಾಡಲು ಸಾಧ್ಯ. 3 ಗಂಟೆ ಟಾರ್ಚರ್ ಸಹಿಸಿಕೊಂಡು ಎರಡು ಮೂರು ಸಲ ನಿದ್ದೆ ಮಾಡಲು ಇಷ್ಟಪಡುವ ಯಾರೇ ಆದರೂ ಈ ಚಿತ್ರಕ್ಕೆ ಈಗಲೇ ಟಿಕೆಟ್ ಬುಕ್ ಮಾಡಿಕೊಳ್ಳಿ.
ಜಗದೀಶ್ ಬೋನಾವಿ
ಬೆಂಗಳೂರು