ಶ್ರೀನಗರ: ಭಾರತ ಮತ್ತು ಪಾಕಿಸ್ತಾನದ ನಡುವಿನ ಯುದ್ಧ ಭವಿಷ್ಯದಲ್ಲಿ ಒಂದು ಆಯ್ಕೆಯಾಗಿ ಉಳಿಯದೆ ಎರಡೂ ದೇಶಗಳಿಗೆ ಆಪತ್ತಾಗಲಿದೆ ಎಂದು ಜಮ್ಮು ಮತ್ತು ಕಾಶ್ಮೀರದ ಪೀಪಲ್ಸ್ ಡೆಮಾಕ್ರೆಟಿಕ್ ಪಕ್ಷ (ಪಿಡಿಪಿ) ಅಭಿಪ್ರಾಯಪಪಟ್ಟಿದೆ.
ಪಕ್ಷದ ಪತ್ರಿಕೆ ‘ಸ್ಪೀಕ್ ಅಪ್’ ನಲ್ಲಿ ಭಾರತ ಮತ್ತು ಪಾಕಿಸ್ತಾನ ನಡುವಿನ ಸಂಘರ್ಷದ ಕುರಿತು ಲೇಖನ ಪ್ರಕಟವಾಗಿದ್ದು, ಇದು ಪ್ರತಿಪಕ್ಷಗಳು ಸಂಯಮವನ್ನು ತೋರಿಸುವ, ಉದ್ವಿಗ್ನತೆಯನ್ನು ಕಡಿಮೆ ಮಾಡುವ ಮತ್ತು ಸಂವಾದ ನಡೆಸುವ ಸಮಯ ಎಂದು ತಿಳಿಸಿದೆ.
ಯುದ್ಧ ಇನ್ನು ಮುಂದೆ ಒಂದು ಆಯ್ಕೆಯಲ್ಲ, ನಾಯಕತ್ವವು ಸಂದರ್ಭಕ್ಕೆ ತಕ್ಕಂತೆ ಕಾರ್ಯನಿರ್ವಹಿಸದಿದ್ದರೆ ಅದು ನೆರೆಹೊರೆಯ ಉಭಯ ದೇಶಗಳಿಗೆ ವಿಪತ್ತಾಗಿ ಪರಿಣಮಿಸಲಿದೆ. ಇದು ವಿಜಯೋತ್ಸವ ಆಚರಿಸುವ ಸಮಯವೂ ಅಲ್ಲ. ಸಂಯಮ ವಹಿಸಬೇಕಾದ ಸಮಯ ಎಂದು ಅಭಿಪ್ರಾಯಪಟ್ಟಿದೆ.
ಕಳೆದ ಹದಿನೈದು ದಿನಗಳ ಘಟನಾವಳಿಗಳನ್ನು ಉಲ್ಲೇಖಿಸಿ, ಈ ತಿಂಗಳು ಭಯಾನಕ ವಾರಗಳನ್ನು ಕಂಡಿದ್ದೇವೆ. ಕ್ಷಿಪಣಿಗಳ ಹಾರಾಟ, ಗಡಿ ಪ್ರದೇಶಗಳಲ್ಲಿ ಡ್ರೋಣ್ ಗಳ ಸದ್ದು ಗಡಿ ನಿಯಂತ್ರಣಾ ರೇಖೆಯಲ್ಲಿರುವ ಹಳ್ಳಿಗಳ ಮೇಲೆ ದುಷ್ಪಪರಿಣಾಮ ಬೀರಿದೆ. ಅದು ಕೇವಲ ಎರಡು ದೇಶಗಳ ನಡುವಿನ ಹೋರಾಟವಾಗಿರಲಿಲ್ಲ. ಎರಡೂ ಕಡೆಯ ನಾಗರಿಕರು ಬೆಲೆ ತೆತ್ತಿದ್ದಾರೆ. ಮಕ್ಕಳು ಸಾವಿಗೀಡಾಗಿದ್ದಾರೆ. ಅನೇಕ ಕುಟುಂಬಗಳು ಗ್ರಾಮ, ಮನೆಗಳನ್ನು ತೊರೆದಿವೆ. ಕೃಷಿ ಭೂಮಿ ರಾತ್ರೋರಾತ್ರಿ ಮಿಲಿಟರಿ ಹೋರಾಟದ ಪ್ರದೇಶಗಳಾಗಿ ಮಾರ್ಪಟ್ಟಿದೆ ಎಂದು ಪಿಡಿಪಿ ವಿಷಾದಿಸಿದೆ.
ಈ ಸಂಘರ್ಷದ ಉದ್ದೇಶ ಭಯೋತ್ಪಾದನೆಗೆ ಸೇಡು ತೀರಿಸಿಕೊಳ್ಳುವುದು ಮತ್ತು ಸಾರ್ವಭೌಮತ್ವವನ್ನು ರಕ್ಷಿಸುವುದೇ ಆಗಿದೆ. ಜಮ್ಮು ಮತ್ತು ಕಾಶ್ಮೀರದ ಜನರು ಮತ್ತೊಮ್ಮೆ ಗುಂಡಿನ ಸದ್ದಿಗೆ ಸಾಕ್ಷಿಯಾಗಿದ್ದಾರೆ. ಯುದ್ಧದ ಸೈರನ್ ಗಳು ಜೋರಾದಂತೆ ತಪ್ಪು, ಸುಳ್ಳು ಮಾಹಿತಿಗಳೂ ಹೆಚ್ಚಾಗಿವೆ. ಟಿವಿ ಮಾಧ್ಯಮಗಳು ಬ್ಯಾರಕ್ ಗಳಾಗಿ, ಸಾಮಾಜಿಕ ಮಾಧ್ಯಮಗಳು ಯುದ್ಧಭೂಮಿಯಾಗಿ ಮಾರ್ಪಟ್ಟಿವೆ. ನಕಲಿ ವಿಡಿಯೊಗಳು, ದೇಶದ್ರೋಹಿ ಹ್ಯಾಶ್ ಟ್ಯಾಗ್ ಗಳು ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಹರಡಿವೆ ಎಂದು ಪಕ್ಷ ಬರೆದುಕೊಂಡಿದೆ.