ಬೆಂಗಳೂರು: ಭಾರತ ಪಾಕಿಸ್ತಾನ ನಡುವೆ ಉದ್ವಿಗ್ನತೆ ತಲೆದೋರಿರುವು ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ನೀಡಿರುವ ಸೂಚನೆಗಳನ್ನು ನೀಡಿದೆ. ಆ ಪ್ರಕಾರ ರಾಜ್ಯ ಸರ್ಕಾರವೂ ಕ್ರಮಗಳನ್ನು ಅನುಸರಿಸುತ್ತಿದೆ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.
ಇಂದು ತಮ್ಮನ್ನು ಭೇಟಿ ಮಾಡಿದ ಸುದ್ದಿಗಾರರ ಜತೆ ಮಾತನಾಡಿದ ಅವರು, ಜವಬ್ದಾರಿಗಳನ್ನು ಹೇಗೆ ನಿರ್ವಹಿಸಬೇಕು? ಯಾವ ರೀತಿ ತಯಾರಿ ಮಾಡಿಕೊಳ್ಳಬೇಕು? ಆಹಾರ, ನೀರು ಮೊದಲಾದ ಅಗತ್ಯ ವಸ್ತುಗಳನ್ನು ಕಾಯ್ದಿರಿಸುವುದು ಹೇಗೆ ಎಂಬ ಬಗ್ಗೆ ಚರ್ಚಿಸಲು ಗೃಹ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ಸಭೆಯನ್ನು ಮುಖ್ಯಮಂತ್ರಿಗಳು ಇಂದು ಸಂಜೆ ಸಭೆ ಕರೆದಿದ್ದಾರೆ ಎಂದರು.
ಕೇಂದ್ರ ನೀಡಿದ ಸೂಚನೆಯಂತೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಮುಂದಿನ ದಿನಗಳಲ್ಲಿ ರಾಜ್ಯದಲ್ಲಿ ಪರಿಸ್ಥಿತಿ ಹೇಗೆ ಬರುತ್ತದೆಯೆಂದು ಊಹಿಸಲು ಅಸಾಧ್ಯ. ಆದರೆ, ರಾಜ್ಯ ಸರ್ಕಾರ ಅಗತ್ಯ ತಯಾರಿ ಮಾಡಿಕೊಳ್ಳುತ್ತಿದೆ.ಪೊಲೀಸರಿಗೆ ರಜೆ ನೀಡುವುದಿಲ್ಲ. ಹೆಚ್ಚುವರಿ ರಜೆಗಳನ್ನು ಯಾರಿಗೂ ಕೊಡುವುದಿಲ್ಲ ಎಂದು ತಿಳಿಸಿದರು.
ಕಾನೂನು ಸುವ್ಯವಸ್ಥೆಗಿಂತ ಮುಖ್ಯವಾಗಿ ಇಡೀ ದೇಶದಲ್ಲಿ ಈಗ ಯುದ್ಧದ ಛಾಯೆ ಆವರಿಸಿದೆ. ಸೂಕ್ಷ್ಮ ಸನ್ನಿವೇಶ ಯಾವಾಗ ಸಾಮಾನ್ಯ ಸ್ಥಿತಿಗೆ ಬರಬಹುದೆಂದು ತಿಳಿದಿಲ್ಲ. ಕೇಂದ್ರ ಸರ್ಕಾರ ಮಾಹಿತಿ ನೀಡುವವರೆಗೆ ನಾವು ಸಿದ್ಧವಾಗಿರಬೇಕು. ಕರಾವಳಿ ಭಾಗದಲ್ಲಿ ಭದ್ರತೆ ಬಿಗಿಗೊಳಿಸಲಾಗುತ್ತದೆ. ಮಂಗಳೂರು,ಉತ್ತರ ಕನ್ನಡದಲ್ಲಿ ಭದ್ರತೆ ಹೆಚ್ಚಿಸಲಾಗಿದೆ ಎಂದರು.
ಆಂತರಿಕ ಭದ್ರತೆಗೆ ಸಂಬಂಧಿಸಿದಂತೆ ಇಂದು ಸಭೆ ಅಧಿಕಾರಿಗಳ ಸಭೆ ಕರೆಯಲಾಗಿದೆ. ಸಾಮಾಜಿಕ ಮಾಧ್ಯಮಗಳ ಮೂಲಕ ಸುಳ್ಳು ಮಾಹಿತಿ ಹರಿದಾಡುತ್ತಿದೆ. ಇದರಿಂದ ಜನಸಾಮಾನ್ಯರಿಗೆ ತಪ್ಪು ಸಂದೇಶಗಳು ಹೋಗುತ್ತವೆ. ಅದನ್ನು ನಿಯಂತ್ರಿಸುವ ಬಗ್ಗೆ ಚರ್ಚಿಸಲು ಈ ಸಭೆ ಕರೆದಿದ್ದೇನೆ ಎಂದರು.
ದೇಶದಲ್ಲಿ ಉಂಟಾಗಿರುವ ಉದ್ವಿಗ್ನ ಪರಿಸ್ಥಿತಿ ಹಿನ್ನಲೆಯಲ್ಲಿ ಸರ್ಕಾರದ ಎರಡು ವರ್ಷದ ಸಾಧನಾ ಸಮಾವೇಶವನ್ನು ಮುಂದೂಡಲಾಗಿದೆ ಎಂದೂ ತಿಳಿಸಿದರು.