Sunday, September 8, 2024

INDIA ಸೋತಿದೆ ಆದರೆ ಭಾರತ ಗೆದ್ದಿದೆ

Most read

2024ರ ಲೋಕಸಭಾ ಚುನಾವಣೆಗಳು ಎರಡು ಕಾರಣಗಳಿಗಾಗಿ ನಿರ್ಣಾಯಕವಾಗಿದ್ದವು. ಮೊದಲನೆಯದು ನರೇಂದ್ರ ಮೋದಿ ನೇತೃತ್ವದ ಬಿಜೆಪಿ-ಎನ್‌ಡಿಎ ಒಕ್ಕೂಟ 350 ರಿಂದ 400 ಸ್ಥಾನಗಳನ್ನು ಗಳಿಸುವ ಮೂಲಕ ತನ್ನ ಹಿಂದುತ್ವ ರಾಜಕಾರಣದ ಬಾಕಿ ಉಳಿದಿರುವ ಕಾರ್ಯಸೂಚಿಗಳನ್ನು ಪೂರ್ಣಗೊಳಿಸುವ ಮಹತ್ವಾಕಾಂಕ್ಷೆಯನ್ನು ಹೊಂದಿತ್ತು. ಈ ಬಹುಸಂಖ್ಯಾವಾದವನ್ನು ತಡೆಗಟ್ಟಲೆಂದೇ ರಚಿಸಲಾದ INDIA ಒಕ್ಕೂಟವು ಕಾಂಗ್ರೆಸ್‌ ನಾಯಕತ್ವದಲ್ಲಿ ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಗಣತಂತ್ರದ ಆಶಯಗಳನ್ನು ಹೇಗಾದರೂ ಮಾಡಿ ಕಾಪಾಡಲು ಪಣತೊಟ್ಟಿತ್ತು. ಭಾರತವನ್ನು ಕಾಂಗ್ರೆಸ್‌ ಮುಕ್ತವಾಗಿಸುವ, ಅರ್ಥಾತ್‌ ವಿರೋಧ ಪಕ್ಷ ಮುಕ್ತವಾಗಿಸುವ ಬಿಜೆಪಿಯ ಮಹತ್ವಾಕಾಂಕ್ಷೆಯ ಹಿಂದೆ ಪ್ರಾದೇಶಿಕ ಪಕ್ಷಗಳ ಅಸ್ತಿತ್ವವನ್ನೂ ಭಂಗಗೊಳಿಸುವ ಉದ್ದೇಶವೂ ಸ್ಪಷ್ಟವಾಗಿತ್ತು. ಹಾಗಾಗಿಯೇ ಆರಂಭದಿಂದಲೂ ಬಿಜೆಪಿ ಸ್ವತಃ 370 ಸ್ಥಾನಗಳನ್ನು ಗಳಿಸುವ ತನ್ನ ಆಶಯವನ್ನು ಬಹಿರಂಗವಾಗಿಯೇ ಹೇಳತೊಡಗಿತ್ತು.

ಆದರೆ ಭಾರತದ ಮತದಾರರು ರಾಜಕೀಯ ಪಕ್ಷಗಳ ಎಲ್ಲ ಎಣಿಕೆಗಳನ್ನೂ ಪಲ್ಲಟಗೊಳಿಸಿದ್ದಾರೆ. ಅಂತಿಮವಾಗಿ ಸಂಸತ್ತಿನಲ್ಲಿ ದಾಖಲಾಗುವುದು ತನ್ನ ಧ್ವನಿ ಮಾತ್ರ ಎನ್ನುವುದನ್ನು ಸಾರ್ವಭೌಮ ಮತದಾರರು ಮತ್ತೊಮ್ಮೆ ನಿರೂಪಿಸಿದ್ದಾರೆ. INDIA ಒಕ್ಕೂಟಕ್ಕೆ ಭವಿಷ್ಯ ಇದೆ ಎನ್ನುವುದನ್ನು ನಿರೂಪಿಸುತ್ತಲೇ ಸದ್ಯಕ್ಕೆ ಸೋಲುಣಿಸಿದ್ದಾರೆ. ಅದೇ ವೇಳೆ ನಮ್ಮ ಭಾರತಕ್ಕೂ ಉಜ್ವಲ ಭವಿಷ್ಯವಿದೆ ಎಂದು ನಿರೂಪಿಸುವಂತೆ ಭಾರತವನ್ನು ಗೆಲ್ಲಿಸಿದ್ದಾರೆ. ಶೇ 50ರಷ್ಟು ಅಂದರೆ 271 ಸ್ಥಾನಗಳನ್ನು ಗಳಿಸಲಾಗದ ಬಿಜೆಪಿ 250 ತಲುಪಲೂ ಸಾಧ್ಯವಾಗದಿರುವುದು ಪಕ್ಷದ ಸೋಲು ಎಂದೇ ಹೇಳಬಹುದು. ಮತ್ತೊಂದೆಡೆ 2019ರಲ್ಲಿ ಗಳಿಸಿದ್ದ 47 ಸ್ಥಾನಗಳಿಂದ 99 ಸ್ಥಾನಗಳಿಗೆ ಏರಿರುವುದು ಕಾಂಗ್ರೆಸ್‌ ಪಕ್ಷದ ಪುನರುತ್ಥಾನದ ಸಂಕೇತ ಎಂದೂ ಹೇಳಬಹುದು. ಈ ಎರಡೂ ವಿದ್ಯಮಾನಗಳ ನಡುವೆ ಗುರುತಿಸಬೇಕಿರುವುದು, ಗೆದ್ದರೆ ದೇಶದ ಭೂಪಟವನ್ನೇ ಬದಲಿಸಿಬಿಡುತ್ತೇವೆ ಎಂದು ಮೆರೆಯುತ್ತಿದ್ದ ರಾಜಕೀಯ ನಾಯಕರ ಗರ್ವಭಂಗ.

ಕಾರ್ಪೋರೇಟ್‌ ಮಾರುಕಟ್ಟೆಯ ಆರ್ಥಿಕತೆ, ಹಿಂದುತ್ವದ ಬಹುಸಂಖ್ಯಾವಾದ, ಅಲ್ಪಸಂಖ್ಯಾತ ವಿರೋಧಿ (ವಿಶೇಷವಾಗಿ ಮುಸ್ಲಿಂ ವಿರೋಧಿ) ಆಡಳಿತ ನೀತಿಗಳು ಹಾಗೂ ಮೂಲ ಸೌಕರ್ಯಗಳನ್ನೇ ಆಧರಿಸಿದ ನವ ಉದಾರವಾದಿ ಆರ್ಥಿಕ ನೀತಿಯನ್ನು ಅನುಮೋದಿಸಿದ ಹಿಂದಿನ ಬಿಜೆಪಿ ಸರ್ಕಾರಕ್ಕೆ ಮತದಾರನು ಸಣ್ಣ ಎಚ್ಚರಿಕೆ ನೀಡಿದ್ದಾನೆ. ಅದೇ ವೇಳೆ ದೇಶದ ತಳಸಮುದಾಯಗಳನ್ನು, ಸಾಮಾನ್ಯ ಜನತೆಯನ್ನು, ದಲಿತರು ಮಹಿಳೆಯರು ಆದಿವಾಸಿಗಳನ್ನು ಕಾಡುತ್ತಿರುವ ಬೆಲೆ ಏರಿಕೆ, ನಿರುದ್ಯೋಗ, ಅಸ್ಥಿರತೆ ಹಾಗೂ ಮತೀಯ ರಾಜಕಾರಣದ ಭೀತಿಯನ್ನು ಶಮನ ಮಾಡುವ ಭರವಸೆ ನೀಡಿದ ಕಾಂಗ್ರೆಸ್‌ ಪಕ್ಷದ ಭಾರತ್‌ ಜೋಡೋ ಕರೆಗೆ ಮತದಾರನು ಓಗೊಟ್ಟಿದ್ದಾನೆ. ಅಂಕಿ ಸಂಖ್ಯೆಗಳಿಂದಾಚೆಗೆ ನೋಡಿದಾಗ 2024ರ ಚುನಾವಣೆಗಳಿಂದ ಪಡೆದುಕೊಳ್ಳಬೇಕಾದ ಕೆಲವು ಪ್ರಮುಖ ಅಂಶಗಳನ್ನು (Take aways) ಹೀಗೆ ಪಟ್ಟಿಮಾಡಬಹುದು.

1. ಪ್ರಜಾಪ್ರಭುತ್ವದಲ್ಲಿ ಅಧಿಕಾರ ಶಾಶ್ವತವಲ್ಲ.

    2. ಎಲ್ಲ ವಿರೋಧ ಪಕ್ಷಗಳನ್ನೂ ಮಣಿಸಿ ಒಂದೇ ಪಕ್ಷ ಹಲವು ವರ್ಷಗಳ ಕಾಲ ಆಳುತ್ತದೆ ಎನ್ನುವುದು ಭ್ರಮೆ. 24 ವರ್ಷಗಳ ರಾಜ್ಯಭಾರ ಮಾಡಿದ ನವೀನ್‌ ಪಟ್ನಾಯಕ್‌ ಒಂದು ನಿದರ್ಶನ. ಇದಕ್ಕೂ ಮುನ್ನ ಪಶ್ಚಿಮ ಬಂಗಾಲದಲ್ಲಿ ಎಡಪಕ್ಷಗಳು 30 ವರ್ಷಗಳ ಆಳ್ವಿಕೆಯ ನಂತರ ಪದಚ್ಯುತವಾಗಿದ್ದನ್ನು ಸ್ಮರಿಸಬಹುದು.

    3. ಭಾರತದ ಸಂವಿಧಾನಕ್ಕೆ ಧಕ್ಕೆ ಉಂಟುಮಾಡುವ ಯಾವುದೇ ಧ್ವನಿಯನ್ನು ಈ ದೇಶದ ದಲಿತರು, ಶೋಷಿತರು, ಮಹಿಳೆಯರು ಒಪ್ಪುವುದಿಲ್ಲ.

    4. ಒಂದು ದೇಶ-ಒಂದು ಭಾಷೆ-ಒಂದು ಚುನಾವಣೆ ಮತ್ತು ಏಕಸಂಸ್ಕೃತಿಯ ಹೇರಿಕೆಗೆ ಭಾರತದ ಸಾಧಾರಣ ಮತದಾರರು ಮಣಿಯುವುದಿಲ್ಲ. ಉತ್ತರ ಪ್ರದೇಶದಲ್ಲಿ ಎನ್‌ಡಿಎ ಸೋಲು ಇದನ್ನು ನಿರೂಪಿಸುತ್ತದೆ.

    5. ದಾರ್ಷ್ಟ್ಯಕ್ಕೆ ಭಾರತದ ಮತದಾರ ಸೊಪ್ಪು ಹಾಕುವುದಿಲ್ಲ. ಎಂದಾದರೂ ಸೋಲಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ನೀಡುತ್ತಲೇ ಇರುತ್ತಾನೆ. 1977ರಲ್ಲೇ  ಭಾರತ ಇದನ್ನು ನಿರೂಪಿಸಿದೆ.

    6. ಸಾಂವಿಧಾನಿಕ ಆಶಯಗಳನ್ನು ಬದಿಗೊತ್ತಿ ಸಾರ್ವಭೌಮ ಪ್ರಜೆಗಳ ಹಕ್ಕುಗಳನ್ನು ಹತ್ತಿಕ್ಕುವ ಯಾವುದೇ ಆಳ್ವಿಕೆಯನ್ನು ಜನಸಾಮಾನ್ಯರು ಒಂದು ಹಂತದಲ್ಲಿ ತಿರಸ್ಕರಿಸಿಯೇ ತೀರುತ್ತಾರೆ. 1977 ಮರುಕಳಿಸುತ್ತಲೇ ಇರುತ್ತದೆ.

    7. ಒಬ್ಬ ವ್ಯಕ್ತಿಯ ಪೋಷಿತ ವ್ಯಕ್ತಿತ್ವ ಹಾಗೂ ಕಲ್ಪಿತ ಮಹತ್ವ ಪ್ರಜಾಸತ್ತಾತ್ಮಕ ಚುನಾವಣಾ ಕಣದಲ್ಲಿ ಸದಾ ಕಾಲವೂ ಯಶಸ್ವಿಯಾಗುವುದಿಲ್ಲ. ತನ್ನಿಂದಲೇ ಎಲ್ಲವೂ ಅಥವಾ ತಾನೇ ಸರ್ವಸ್ವ ಎನ್ನುವ ನಾಯಕತ್ವವನ್ನು ಭಾರತದ ಮತದಾರ ತಿರಸ್ಕರಿಸುತ್ತಲೇ ಬಂದಿದ್ದಾನೆ. 1977, 2004 ಮತ್ತು 2024 ಇದನ್ನೇ ನಿರೂಪಿಸಿದೆ.

    8. ಜಾತಿ, ಮತ ಮತ್ತು ಧರ್ಮಗಳ ಅಸ್ಮಿತೆಯ ರಾಜಕಾರಣ ಎಷ್ಟೇ ಪ್ರಭಾವಶಾಲಿಯಾಗಿದ್ದರೂ ಈ ಅಸ್ಮಿತೆಗಳಿಂದಲೇ ಸಾಮಾನ್ಯ ಜನರು ತೃಪ್ತರಾಗುವುದಿಲ್ಲ, ಅವರು ಉದ್ಯೋಗ ಕೇಳುತ್ತಾರೆ, ಅನ್ನ ಕೇಳುತ್ತಾರೆ, ಸೂರು ಕೇಳುತ್ತಾರೆ, ಘನತೆಯನ್ನು ಅಪೇಕ್ಷಿಸುತ್ತಾರೆ ಎನ್ನುವುದಕ್ಕೆ 2024 ಸಾಕ್ಷಿಯಾಗಿದೆ.

    9. ಕಾಂಗ್ರೆಸ್‌ ಪಕ್ಷ ತನ್ನ ಭಾರತ್‌ ಜೋಡೋ ಮೂಲಕ ಕಂಡುಕೊಂಡ ಸುಡುವಾಸ್ತವಗಳನ್ನು ಗಂಭೀರವಾಗಿ ಅಧ್ಯಯನ ಮಾಡಿ ತಳಮಟ್ಟದ ಭಾರತದ ನಾಡಿಮಿಡಿತವನ್ನು ಅರಿತುಕೊಳ್ಳಲು ಬಹುದೂರ ಸಾಗಬೇಕಿದೆ.

    10. ಎಡಪಕ್ಷಗಳು ತಮ್ಮೊಳಗಿನ ಭೇದಭಾವಗಳನ್ನು ಬದಿಗಿಟ್ಟು, ಭಿನ್ನಾಭಿಪ್ರಾಯಗಳನ್ನು, ಸಾಂಘಿಕ-ವ್ಯಕ್ತಿಗತ-ಸಾಂಸ್ಥಿಕ ಪ್ರತಿಷ್ಠೆಗಳನ್ನು ಸಮಾಧಿ ಮಾಡಿ, ಐಕ್ಯತೆಯ ಬಗ್ಗೆ ಗಂಭೀರವಾಗಿ ಆಲೋಚಿಸುವಂತೆ ಮತದಾರರು ಸೂಚನೆ ನೀಡಿದ್ದಾರೆ.

    11. ದಲಿತ ರಾಜಕಾರಣದ ಉದಾತ್ತ ಆಶಯಗಳನ್ನು ಹೊತ್ತ ಬಿಎಸ್‌ಪಿ ಮುಂತಾದ ಪಕ್ಷಗಳು ತಳಮಟ್ಟದ ಸಮಾಜದಲ್ಲಿರುವ ಜಾತಿ ಶೋಷಣೆ, ವರ್ಗ ಶೋಷಣೆ ಹಾಗೂ ಇವೆರಡರ ಸಮನ್ವಯದೊಂದಿಗೆ ನವ ಉದಾರವಾದವು ಸೃಷ್ಟಿಸುತ್ತಿರುವ ಅಸ್ಥಿರತೆಯ ಬಗ್ಗೆ ಗಂಭೀರ ಅಧ್ಯಯನ ನಡೆಸಬೇಕಿದೆ. ಈ ನಿಟ್ಟಿನಲ್ಲಿ ಅಂಬೇಡ್ಕರ್‌ ವಿಚಾರ ಧಾರೆ ಮರು ಅಧ್ಯಯನಕ್ಕೊಳಗಾಗಬೇಕಿದೆ. ಮಾರ್ಕ್ಸ್‌ ಮತ್ತು ಅಂಬೇಡ್ಕರ್‌ ಅನುಸಂಧಾನ ಅತ್ಯವಶ್ಯವಾಗಿದೆ.

    12. ಹವಾನಿಯಂತ್ರಿತ ಕೋಣೆಯಲ್ಲಿ ಕುಳಿತು ತಯಾರಿಸಿದ ಕಲ್ಪಿತ ಮತಗಟ್ಟೆ ಸಮೀಕ್ಷೆಗಳನ್ನು ಇಟ್ಟುಕೊಂಡು ಎರಡು ದಿನ, 48 ಗಂಟೆಗಳ ಕಾಲ ಪುಂಖಾನುಪುಂಖವಾಗಿ ವಿಶ್ಲೇಷಣೆ ನಡೆಸಿದ ದೇಶದ ಪ್ರಧಾನ ಸುದ್ದಿವಾಹಿನಿಗಳು, ಮಡಿಲ ಮಾಧ್ಯಮಗಳು ವಿವೇಕರಹಿತವಷ್ಟೇ ಅಲ್ಲ ವಿವೇಚನಾ ರಹಿತ ಎನ್ನುವುದನ್ನೂ ಈ ಚುನಾವಣೆ ನಿರೂಪಿಸಿದೆ.

    13. ಕೊನೆಯದಾಗಿ ವ್ಯಕ್ತಿ ಆರಾಧನೆ ಅಥವಾ ವ್ಯಕ್ತಿ ದೂಷಣೆ ಎರಡೂ ಸಹ ಪ್ರಜಾಪ್ರಭುತ್ವಕ್ಕೆ ಮಾರಕ ಎನ್ನುವ ವಾಸ್ತವವನ್ನು ಮತದಾರನು ಸ್ಪಷ್ಟಪಡಿಸಿದ್ದಾನೆ. ಪ್ರಜಾಪ್ರಭುತ್ವದಲ್ಲಿ ಜನಗಳ ದನಿಯೇ ಅಂತಿಮ ಎಂದು ನಿರೂಪಿಸಿದ್ದಾನೆ. ಇದನ್ನರಿತು ಜನರ ನಾಡಿಮಿಡಿತವನ್ನು ಗ್ರಹಿಸುವತ್ತ ರಾಜಕೀಯ ಪಕ್ಷಗಳು ಯೋಚಿಸಬೇಕಾದ ಪರಿಸ್ಥಿತಿಯನ್ನು ಮತದಾರನು ಸೃಷ್ಟಿಸಿದ್ದಾನೆ.

    ಭವಿಷ್ಯದ ಭಾರತ ಇದನ್ನು ಗಮನಿಸುತ್ತಲೇ ಇರುತ್ತದೆ. ಅಧಿಕಾರಕ್ಕೆ ಬರುವವರು ಪೀಠಾಹಂಕಾರ, ಅಧಿಕಾರದ ಮದನ್ಮೋತ್ತತೆಯಿಂದ ಹೊರಬಂದು, ʼ ಜನಪ್ರತಿನಿಧಿ ʼ ಎಂಬ ಅಮೂಲ್ಯ ಪದವನ್ನು ಅರ್ಥಪೂರ್ಣಗೊಳಿಸುವತ್ತ ಯೋಚಿಸಬೇಕಿದೆ. 2024ರ ಚುನಾವಣೆ ಈ ನಿಟ್ಟಿನಲ್ಲಿ ದಿಕ್ಸೂಚಿಯಾಗಿ ಕಾಣುತ್ತದೆ.

    ನಾ.ದಿವಾಕರ

    ಚಿಂತಕರು

    More articles

    Latest article