ಅತಿ ಹೆಚ್ಚು ಬಡವರನ್ನು ಹೊಂದಿರುವ 5 ರಾಷ್ಟ್ರಗಳಲ್ಲಿ ಭಾರತವೂ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ 234 ಮಿಲಿಯನ್ ಬಡವರಿದ್ದರೆ ಪಾಕಿಸ್ತಾನದಲ್ಲಿ 93 ಮಿಲಿಯನ್ ಬಡವರಿದ್ದಾರೆ. ನೆರೆಯ ಪಾಕಿಸ್ತಾನಕ್ಕಿಂತಲೂ ಭಾರತದಲ್ಲಿ ಬಡವರ ಸಂಖ್ಯೆ ಹೆಚ್ಚು ಎನ್ನುವುದು ನಾಚಿಕೆಗೇಡಿನ ಸಂಗತಿಯೇ ಸರಿ – ಮಾರುತಿ ಎಚ್, ಹಿರಿಯ ಪತ್ರಕರ್ತರು.
ಕಳೆದ 10 ವರ್ಷಗಳಲ್ಲಿ ಭಾರತ ಯಾವ ರೀತಿಯ ಪ್ರಗತಿ ಸಾಧಿಸಿದೆ ಎನ್ನುವುದಕ್ಕೆ ಇದಕ್ಕಿಂತ ಉತ್ತಮ ನಿದರ್ಶನ ಮತ್ತೊಂದಿರಲಿಕ್ಕಿಲ್ಲ. ಜಗತ್ತಿನಲ್ಲಿರುವ ಬಡವರಲ್ಲಿ ಅತಿ ಹೆಚ್ಚು ಬಡವರು ಭಾರತದಲ್ಲಿದ್ದಾರೆ ಎನ್ನುತ್ತದೆ ವಿಶ್ವಸಂಸ್ಥೆಯ ವರದಿ. ಭಾರತ ಪ್ರಗತಿ ಸಾಧಿಸುತ್ತಿದೆ, ಜಗತ್ತು ಭಾರತದತ್ತ ನೋಡುತ್ತಿದೆ ಎಂಬ ಹುಸಿ ಸತ್ಯಗಳನ್ನು ಬಿತ್ತುತ್ತಾ ಧರ್ಮದ ಅಮಲಿನಲ್ಲಿ ತೇಲಿಸುತ್ತಾ ಸತ್ಯವನ್ನು ಮರೆ ಮಾಚುತ್ತಾ ಬರಲಾಗಿದೆ. ಭಾರತದಲ್ಲಿರುವ ಬಡವರ ಅಂಕಿಅಂಶಗಳನ್ನು ನೋಡಿದರೆ ನಾವು ಎತ್ತ ಸಾಗುತ್ತಿದ್ದೇವೆ ಮತ್ತು ಆಳುವ ಮಂದಿ ನಮ್ಮನ್ನು ಯಾವ ದಿಕ್ಕಿನಲ್ಲಿ ಕೊಂಡೊಯ್ಯುತ್ತಿದ್ದಾರೆ ಎನ್ನುವುದು ಗೋಚರವಾಗುತ್ತದೆ.
ವಿಶ್ವಸಂಸ್ಥೆಯ ಗ್ಲೋಬಲ್ ಮಲ್ಟಿ ಮೀಡಿಯಾ ಪಾವರ್ಟಿ ಸೂಚ್ಯಂಕ(ಜಿಎಂಐ) – 2024, ವಿಶ್ವದ ಬಡವರ ಕುರಿತಾದ ವರದಿಯನ್ನು ಬಿಡುಗಡೆ ಮಾಡಿದೆ. ಈ ವರದಿಯ ಪ್ರಕಾರ ಜಗತ್ತಿನಲ್ಲಿ 1.1 ಬಿಲಿಯನ್ ಜನರು ತೀವ್ರ ಬಡತನದಲ್ಲಿದ್ದು, ಪಾಕಿಸ್ತಾನಕ್ಕಿಂತಲೂ ಹೆಚ್ಚು ಬಡವರು ಭಾರತದಲ್ಲಿದ್ದಾರೆ ಎಂದು ಹೇಳಿದೆ. ಈ ಸತ್ಯಾಂಶ ಆತಂಕಕಾರಿಯಲ್ಲದೆ ಮತ್ತೇನು?
ಆರೋಗ್ಯ, ಶಿಕ್ಷಣ ಮತ್ತು ಜೀವನದ ಗುಣಮಟ್ಟ ಈ ಮೂರೂ ಆಯಾಮಗಳಿಂದಲೂ ಅಧ್ಯಯನ ನಡೆಸಿ ವರದಿಯನ್ನು ಅದು ಸಿದ್ಧಪಡಿಸಿದೆ. ಆರೋಗ್ಯದ ವಿಷಯದಲ್ಲಿ ಪೌಷ್ಠಿಕತೆ, ಮಕ್ಕಳು ಮತ್ತು ಯುವ ಜನಾಂಗದಲ್ಲಿ ಮರಣ ಪ್ರಮಾಣ ಮತ್ತು ಗರ್ಭಿಣಿ ಆರೋಗ್ಯ ವನ್ನು ಪರಿಗಣಿಸಲಾಗಿದೆ. ಶಿಕ್ಷಣದಲ್ಲಿ ಶಾಲೆಗೆ ಹೋದ ವರ್ಷಗಳು ಮತ್ತು ಶಾಲಾ ಹಾಜರಾತಿ ಪರಿಗಣನೆಗೆ ತೆಗೆದುಕೊಂಡಿದ್ದರೆ ಜೀವನ ಗುಣಮಟ್ಟದಲ್ಲಿ ಅಡುಗೆ ಅನಿಲ, ನೈರ್ಮಲ್ಯ, ಕುಡಿಯುವ ನೀರು, ವಸತಿ, ವಿದ್ಯುತ್, ಆಸ್ತಿ ಮತ್ತು ಬ್ಯಾಂಕ್ ಖಾತೆಗಳನ್ನು ಪರಿಗಣಿಸಲಾಗಿದೆ. ಆಯಾ ದೇಶಗಳ ಅಂಕಿ ಅಂಶಗಳ ಆಧಾರದ ಮೇಲೆ ಈ ವರದಿಯನ್ನು ಸಿದ್ಧಪಡಿಸಲಾಗಿದೆ.
ಅತಿ ಹೆಚ್ಚು ಬಡವರನ್ನು ಹೊಂದಿರುವ 5 ರಾಷ್ಟ್ರಗಳಲ್ಲಿ ಭಾರತವೂ ಸ್ಥಾನ ಪಡೆದುಕೊಂಡಿದೆ. ಭಾರತದಲ್ಲಿ 234 ಮಿಲಿಯನ್ ಬಡವರಿದ್ದರೆ ಪಾಕಿಸ್ತಾನದಲ್ಲಿ 93 ಮಿಲಿಯನ್ ಬಡವರಿದ್ದಾರೆ. ನೆರೆಯ ಪಾಕಿಸ್ತಾನಕ್ಕಿಂತಲೂ ಭಾರತದಲ್ಲಿ ಬಡವರ ಸಂಖ್ಯೆ ಹೆಚ್ಚು ಎನ್ನುವುದು ನಾಚಿಕೆಗೇಡಿನ ಸಂಗತಿಯೇ ಸರಿ. ಅಷ್ಟೇ ಅಲ್ಲ, ನಾವು ಯಾವ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎನುವುದಕ್ಕೆ ಇದೊಂದು ಸ್ಪಷ್ಟ ನಿದರ್ಶನವೂ ಹೌದು. ಇಥಿಯೋಫಿಯಾದಲ್ಲಿ 86 ಮಿಲಿಯನ್, ನೈಜೀರಿಯಾದಲ್ಲಿ 74 ಮಿಲಿಯನ್, ಮತ್ತು ಕಾಂಗೊದಲ್ಲಿ 66 ಮಿಲಿಯನ್ ನಾಗರೀಕರು ಬಡತನದಿಂದ ಬಳಲುತ್ತಿದ್ದಾರೆ. 1.1 ಬಿಲಿಯನ್ ಬಡವರಲ್ಲಿ ಈ ಐದು ದೇಶಗಳಲ್ಲೇ ಅರ್ಧದಷ್ಟು ಅಂದರೆ ಶೇ.48.1 ರಷ್ಟು ಮಂದಿ ಬಡವರಿದ್ದಾರೆ.
ಮಕ್ಕಳೇ ಕಡು ಬಡವರು!
ಜಗತ್ತಿನಲ್ಲಿರುವ ಬಡವರ ಪೈಕಿ ಶೇ.ಅರ್ಧದಷ್ಟು ಮಂದಿ ಅಪ್ರಾಪ್ತ ವಯೋಮಾನದವರು ಎನ್ನುವುದು ಮತ್ತಷ್ಟು ಚಿಂತೆಗೀಡು ಮಾಡುವ ಸಂಗತಿಯೇ ಸರಿ. ಜಾಗತಿಕವಾಗಿ 18 ವರ್ಷದೊಳಗಿನ ವಯೋಮಾನದವರಲ್ಲಿ 548 ಮಿಲಿಯನ್ ಮಕ್ಕಳು ತೀವ್ರ ಬಡತನದಿಂದ ಬಳಲುತ್ತಿದ್ದಾರೆ. ತೀವ್ರ ಬಡತನದಲ್ಲಿರುವ ವಯಸ್ಕರ ಸಂಖ್ಯೆ ಶೇ.13.5ರಷ್ಟಿದ್ದರೆ 18 ವರ್ಷದೊಳಗಿನವರದು ಶೇ.27.9ರಷ್ಟಿದೆ. ಜಗತ್ತಿನ ಶೇ.83.2ರಷ್ಟು ಬಡವರು ಆಫ್ರಿಕಾ ಮತ್ತು ದಕ್ಷಿಣ ಏಷ್ಯಾದಲ್ಲಿದ್ದಾರೆ. ಅತಿ ಹೆಚ್ಚು ಬಡತನ ಹೊಂದಿರುವ ರಾಷ್ಟ್ರವಾದ ಭಾರತದಂತಹ ದೇಶಗಳಲ್ಲಿ ಮಕ್ಕಳ ಬಡತನವನ್ನು ತುರ್ತಾಗಿ ಇಳಿಮುಖ ಮಾಡಲು ಕ್ರಮಗಳನ್ನು ಅನುಸರಿಸಬೇಕಿದೆ. ಗ್ರಾಮೀಣ ಪ್ರದೇಶಗಳಲ್ಲಿ ನೆಲೆಸಿರುವ ಬಡವರ ಪೈಕಿ ಶೇ.83.7ರಷ್ಟು ಬಡವರು ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ ಎನ್ನುವುದು ಮತ್ತಷ್ಟು ಆತಂಕಕಾರಿಯಾಗಿದೆ.
ಕಡಿಮೆ ಆದಾಯ ಹೊಂದಿರುವ ರಾಷ್ಟ್ರಗಳು ಶೇ.10.2ರಷ್ಟು ಜನಸಂಖ್ಯೆ ಹೊಂದಿದ್ದು, ಈ ರಾಷ್ಟ್ರಗಳ ಶೇ.34.5ರಷ್ಟು ಅಂದರೆ 400 ಮಿಲಿಯನ್ ಬಡವರಿದ್ದಾರೆ. ಶೇ.65.2ರಷ್ಟು ಅಂದರೆ 749 ಮಿಲಿಯನ್ ಜನಸಂಖ್ಯೆ ಮಧ್ಯಮ ವರ್ಗದ ಆದಾಯ ಹೊಂದಿರುವ ರಾಷ್ಟ್ರಗಳಲ್ಲಿ ವಾಸಿಸುತ್ತಿದ್ದಾರೆ.
ಸಂಘರ್ಷ ನಡೆಯುತ್ತಿರುವ ದೇಶಗಳಲ್ಲೇ ಬಡವರು ಹೆಚ್ಚು!
ಎರಡನೇ ಮಹಾಯುದ್ದ ನಡೆದ ನಂತರ ಇದೇ ಮೊದಲ ಬಾರಿಗೆ 2023ರಲ್ಲಿ ಸಾಕಷ್ಟು ಸಂಘರ್ಷ ನಡೆದಿದ್ದು, ವಿವಿಧ ಕಾರಣಗಳಿಗಾಗಿ 117 ಮಿಲಿಯನ್ ನಾಗರೀಕರು ಸ್ಥಳಾಂತರಗೊಂಡಿದ್ದಾರೆ. ಎರಡನೇ ವಿಶ್ವ ಯುದ್ಧದ ನಂತರ ಮೊದಲ ಬಾರಿಗೆ 2023ರಲ್ಲಿ ನಿರಂತರವಾಗಿ ಸಂಘರ್ಷಗಳು ನಡೆಯುತ್ತಲೇ ಬಂದಿವೆ. ಸಾಕಷ್ಟು ಸಂಖ್ಯೆಯ ನಾಗರೀಕರು ಸಂಘರ್ಷ, ಹಿಂಸಾಚಾರ, ವಿಕೋಪ ಮೊದಲಾದ ಕಾರಣಗಳಿಗಾಗಿ ಈ ಪ್ರಮಾಣದಲ್ಲಿ ಸ್ಥಳಾಂತರಗೊಂಡಿರುವುದು ಆಶ್ಚರ್ಯ ಮೂಡಿಸಿದೆ ಎಂದು ವರದಿ ತಿಳಿಸಿದೆ.
ಸಂಘರ್ಷದ ಕಾರಣಗಳಿಗಾಗಿ ಯಾವ ಯಾವ ಭಾಗಗಳಲ್ಲಿ ಎಷ್ಟೆಷ್ಟು ಪ್ರಮಾಣದ ನಾಗರೀಕರು ಸ್ಥಳಾಂತರಗೊಂಡಿದ್ದಾರೆ ಎಂದೂ ವಿಶ್ವಸಂಸ್ಥೆ ಅಧ್ಯಯನ ನಡೆಸಿದೆ. 1.1 ಬಿಲಿಯನ್ ಬಡವರ ಪೈಕಿ ಸಂಘರ್ಷ ನಡೆಸಿದ ರಾಷ್ಟ್ರಗಳಲ್ಲೇ ಶೇ.40ರಷ್ಟು ಅಂದರೆ 455 ಮಿಲಿಯನ್ ಜನರು ವಾಸಿಸುತ್ತಿದ್ದಾರೆ. ಇವರಲ್ಲಿ 218 ಮಿಲಿಯನ್ ಜನತೆ ಪದೇ ಪದೇ ಸಂಘರ್ಷಗಳನ್ನು ಕಾಣುತ್ತಲೇ ಇರುವ ರಾಷ್ಟ್ರಗಳಲ್ಲಿ ನೆಲೆಸಿದ್ದಾರೆ. 335 ಮಿಲಿಯನ್ ಜನರು ಸಂಘರ್ಷಗಳಿಂದ ಸಂತ್ರಸ್ತರಾದ ದೇಶಗಳಲ್ಲಿ ಮತ್ತು ಶಾಂತಿಯೇ ನೆಲಸದ ಅಥವಾ ಕಡಿಮೆ ಶಾಂತ ವಾತಾವರಣವಿರುವ ದೇಶಗಳಲ್ಲಿ 375ಮಿಲಿಯನ್ ಜನರು ವಾಸವಾಗಿದ್ದಾರೆ.
ಶಾಂತಿ ಎನ್ನುವುದು ಮರೀಚಿಕೆಯಾಗಿರುವ ಗಾಜಾದಲ್ಲಿ ಶೇ.83ರಷ್ಟು ಪ್ರಜೆಗಳು ಆಂತರಿಕವಾಗಿ ಸ್ಥಳಾಂತರಗೊಂಡಿದ್ದು, ಶೇ.60ರಷ್ಟು ಮನೆಗಳು ನಾಶಗೊಂಡಿವೆ ಎಂಬುದನ್ನು ವರದಿ ಹೇಳುತ್ತದೆ.
ವಿಶ್ವದ 1.1 ಬಿಲಿಯನ್ ಬಡವರಲ್ಲಿ 828 ಮಿಲಿಯನ್ ಜನರಿಗೆ ಸ್ವಚ್ಛತೆ ಇಲ್ಲ. 886 ಜನರಿಗೆ ವಸತಿ ಇಲ್ಲ, 998 ಮಿಲಿಯನ್ ಜನರಿಗೆ ಅಡುಗೆ ಅನಿಲ ಇಲ್ಲ.ಅಪೌಷ್ಟಿಕತೆಯಿಂದ 637 ಮಿಲಿಯನ್ ಜನರು ಬಳಲುತ್ತಿದ್ದಾರೆ. 579 ಮಿಲಿಯನ್ ನಾಗರೀಕರಿಗೆ ವಿದ್ಯುತ್ ಸಂಪರ್ಕ ಇಲ್ಲ. 590 ಮಿಲಿಯನ್ ಜನರಿಗೆ ಶಿಕ್ಷಣದ ಕೊರತೆ ಇದ್ದರೆ 513 ಮಿಲಿಯನ್ ಜನರಿಗೆ ಕುಡಿಯುವ ನೀರು ಇಲ್ಲವಾಗಿದೆ.
ಒಟ್ಟು ಬಡವರಲ್ಲಿ ಶೇ.83.7ರಷ್ಟು ಮಂದಿ ಗ್ರಾಮೀಣ ಪ್ರದೇಶಗಳಲ್ಲಿ ವಾಸಿಸುತ್ತಿದ್ದಾರೆ. ಇಡೀ ಜಗತ್ತಿನಾದ್ಯಂತ ನಗರ ಪ್ರದೇಶಗಳ ಜನರಿಗಿಂತ ಗ್ರಾಮೀಣ ಪ್ರದೇಶಗಳ ಜನರೇ ಅತಿ ಹೆಚ್ಚು ಬಡವರಾಗಿದ್ದಾರೆ. ನಗರ ಪ್ರದೇಶಗಳ ಶೇ.6.6ರಷ್ಟು ಮಂದಿ ಬಡವರಾಗಿದ್ದರೆ ಗ್ರಾಮೀಣ ಪ್ರದೇಶಗಳ ಶೇ.28ರಷ್ಟು ಮಂದಿ ಬಡತನದಿಂದ ಬಳಲುತ್ತಿದ್ದಾರೆ.
2010 ರಿಂದಲೂ ಯು ಎನ್ ಡಿಪಿ ಮತ್ತು ಮಲ್ಟಿ ಮೀಡಿಯಾ ಬಡತನ ಕುರಿತ ಬಹು ಆಯಾಮದ ವರದಿಯನ್ನು ಅಧ್ಯಯನ ನಡೆಸಿ ಬಿಡುಗಡೆ ಮಾಡುತ್ತಾ ಬಂದಿದೆ. 112 ದೇಶಗಳ 6.3 ಬಿಲಿಯನ್ ಜನರ ಅಂಕಿಅಂಶಗಳನ್ನು ಸಂಗ್ರಹಿಸಿ ವರದಿಯನ್ನು ಸಿದ್ಧಪಡಿಸುತ್ತಿದೆ. ಇದಕ್ಕಾಗಿ ಆಯಾ ದೇಶಗಳ ವಸತಿ, ಸ್ವಚ್ಛತೆ, ವಿದ್ಯುತ್, ಪೌಷ್ಠಿಕತೆ, ಅಡುಗೆ ಅನಿಲ ಮತ್ತು ಶಾಲಾ ಹಾಜರಾತಿ ಮೊದಲಾದ ಅಂಶಗಳನ್ನು ಸಂಗ್ರಹಿಸುತ್ತದೆ.
ಮಾರುತಿ ಎಚ್
ಹಿರಿಯ ಪತ್ರಕರ್ತರು
ಇದನ್ನೂ ಓದಿ- ನ್ಯಾಯದೇವತೆಯ ಸ್ವರೂಪ ಬದಲಾದರೆ ನ್ಯಾಯಾಂಗ ವ್ಯವಸ್ಥೆ ಬದಲಾದೀತೆ?