Sunday, July 14, 2024

ಎರಡೆರಡು ಸೂಪರ್ ಓವರ್: ವೀರೋಚಿತ ಹೋರಾಟ ನಡೆಸಿಯೂ ಸೋತ ಅಫ್ಘಾನಿಸ್ತಾನ

Most read

ಭಾರತದ ವಿರುದ್ಧ ಮೊದಲ ಗೆಲುವು ದಾಖಲಿಸುವ ಅಫಘಾನಿಸ್ತಾನ ಕ್ರಿಕೆಟ್ ತಂಡದ ಕನಸು ಕೊನೆಗೂ ನನಸಾಗಲಿಲ್ಲ. ಅದ್ಭುತ ಪ್ರದರ್ಶನ ತೋರಿದ ಅಫಘಾನಿಸ್ತಾನ ಎರಡೆರಡು ಸೂಪರ್ ಓವರ್ ಗಳ ಹೋರಾಟದಲ್ಲಿ ಕೊನೆಗೂ ಸೋತು ಶರಣಾಯಿತು.

ಎರಡನೇ ಸೂಪರ್ ಓವರ್ ಹೋರಾಟದಲ್ಲಿ ಬೌಲಿಂಗ್ ಮಾಡಿದ ರವಿ ಬಿಷ್ಣೋಯ್ ಎರಡು ಎಸೆತಗಳಲ್ಲಿ ಎರಡು ವಿಕೆಟ್ ಗಳಿಸುವುದರೊಂದಿಗೆ ಭಾರತ ಕೊನೆಗೂ ಗೆಲುವಿನ ನಗೆ ಬೀರಿತು.

ಭಾರತ ಒಡ್ಡಿದ 213ರನ್ ಗಳ ಬೃಹತ್ ಮೊತ್ತವನ್ನು ಚೇಸ್ ಮಾಡಿದ ಅಫಘಾನಿಸ್ತಾನ ಆರು ವಿಕೆಟ್ ಗಳ ನಷ್ಟಕ್ಕೆ 212 ರನ್ ಗಳಿಸಿತು. ತಂಡಗಳ ಸ್ಕೋರ್ ಸಮಸಮವಾದ ಹಿನ್ನೆಲೆಯಲ್ಲಿ ಸೂಪರ್ ಓವರ್ ಆಡಿಸಲಾಯಿತು. ಸೂಪರ್ ಓವರ್ ನಲ್ಲೂ ಭಾರತ ಮತ್ತು ಅಫಘಾನಿಸ್ತಾನ ತಂಡಗಳು ಸಮವಾದ ಸ್ಕೋರ್ ಗಳಿಸಿದವು. ಹೀಗಾಗಿ ಎರಡನೇ ಬಾರಿ ಸೂಪರ್ ಓವರ್ ಆಡಿಸಲಾಯಿತು.

ಅಫಘಾನಿಸ್ತಾನ ಪರ ಆರಂಭಿಕ ಆಟಗಾರರಾದ ರಹಮುತ್ತುಲ್ಲಾ ಗುರ್ಬಾಜ್ ಮತ್ತು ಇಬ್ರಾಹಿಂ‌ ಜರ್ದಾನ್ ತಲಾ 50 ರನ್ ಗಳಿಸಿ ಅತ್ಯುತ್ತಮ ಆರಂಭ ನೀಡಿದರು. ನಂತರ ನಯ್ಯಬ್ (54) ಮತ್ತು ನಬಿ (34) ರನ್ ಗಳಿಸಿ ಅಫಘಾನಿಸ್ತಾನ ತಂಡವನ್ನು ಗೆಲುವಿನ ಅಂಚಿಗೆ ತಂದು ನಿಲ್ಲಿಸಿದರು. ಆದರೆ ಭಾರತ ನೀಡಿದ ಸವಾಲನ್ನು ದಾಟಲು ಸಾಧ್ಯವಾಗದೆ ಸಮಬಲ‌ ಸಾಧಿಸಿದ ಹಿನ್ನೆಲೆಯಲ್ಲಿ ಸೂಪರ್ ಓವರ್ ಆಡಿಸಲಾಯಿತು. ಮೊದಲ ಸೂಪರ್ ಓವರ್ ಹಣಾಹಣಿಯಲ್ಲಿ ಉಭಯ ತಂಡಗಳು ಮತ್ತೆ ಸಮಬಲದ ಸ್ಕೋರ್ ಮಾಡಿದ ಹಿನ್ನೆಲೆಯಲ್ಲಿ ಮತ್ತೊಂದು ಸೂಪರ್ ಓವರ್ ಆಡಿಸಲಾಯಿತು.

ಎರಡನೇ ಸೂಪರ್ ಓವರ್ ನಲ್ಲಿ ಭಾರತ ಎರಡು ವಿಕೆಟ್ ಕಳೆದುಕೊಂಡು 11 ರನ್ ಗಳಿಸಲಷ್ಟೇ ಸಾಧ್ಯವಾಯಿತು. ಇದಕ್ಕೆ ಪ್ರತ್ಯುತ್ತರವಾಗಿ ಅಫಘಾನಿಸ್ತಾನ ಕೇವಲ ಒಂದು ರನ್ ಗೆ ಎರಡು ವಿಕೆಟ್ ಕಳೆದುಕೊಂಡು ಆಲ್ ಔಟ್ ಆಯಿತು.

ಇಂದಿನ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡ ಕೇವಲ 22 ರನ್ ಗಳಿಗೆ 4 ವಿಕೆಟ್ ಕಳೆದುಕೊಂಡು ಚಿಂತಾಜನಕ ಸ್ಥಿತಿಗೆ ತಲುಪಿತ್ತು.‌ ಸಂದರ್ಭದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಭಾರತ ತಂಡವನ್ನು ಪಾರುಮಾಡಿದ ನಾಯಕ ರೋಹಿತ್ ಶರ್ಮಾ ಮತ್ತು ಭಾರತ ಕ್ರಿಕೆಟ್ ನ ಹೊಸ ತಾರೆ ರಿಂಕು ಸಿಂಗ್ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ರನ್ ಹೊಳೆಯನ್ನೇ ಹರಿಸಿದರು. ಕೊನೆಯ ಓವರ್ ನಲ್ಲಿ 36 ರನ್ ಬಾಚಿದ ಭಾರತ ಅಂತಿಮವಾಗಿ ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 212 ರನ್ ಗಳಿಸಿತು.

ಅಫಘಾನಿಸ್ತಾನ‌ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯ ಕೊನೆಯ ಪಂದ್ಯದಲ್ಲಿ ಗೆಲ್ಲಲು ಅಫಘಾನಿಸ್ತಾನ 213 ರನ್ ಗಳಿಸುವ ಸವಾಲು ನೀಡಿತು.

ನಾಯಕ ರೋಹಿತ್ ಶರ್ಮಾ ಇಂದು ಬೇರೆಯದೇ ಮೂಡ್ ನಲ್ಲಿದ್ದರು. ಕೊನೆಯ ಹತ್ತು ಓವರ್ ಗಳಲ್ಲಿ ಆಕ್ರಮಣಕಾರಿಯಾದ ರೋಹಿತ್ ಮೈದಾನದ ಎಲ್ಲ ಕಡೆ ಬ್ಯಾಟ್ ಬೀಸಿದರು. ಅವರ ಅದ್ಭುತ ಶತಕದಲ್ಲಿ 8 ಸಿಕ್ಸರ್, 11 ಬೌಂಡರಿಗಳಿದ್ದವು. ಓಟಾಗದೆ 121 ರನ್ ಗಳಿಸಿದ ರೋಹಿತ್ ತಮ್ಮ ಈ ಮನಮೋಹಕ ಆಟಕ್ಕೆ ತೆಗೆದುಕೊಂಡು ಕೇವಲ 69 ಎಸೆತಗಳನ್ನು ಮಾತ್ರ.

ನಾಲ್ಕು ವಿಕೆಟ್ ಗಳು ಪತನವಾದಾಗ ಆಡಲು ಬಂದ ರಿಂಕೂ ಸಿಂಗ್ ಆರಂಭದಲ್ಲಿ ಎಚ್ಚರಿಕೆಯ ಆಟವಾಡಿದರೂ ನಂತರ ರನ್ ಗತಿ ಏರಿಸುತ್ತ ಹೋದರು. ರಿಂಕೂ ಬ್ಯಾಟ್ ನಿಂದ ಸಿಡಿದ ಸಿಕ್ಸರ್ ಗಳ ಸಂಖ್ಯೆ 6. ಕೇವಲ 39 ಎಸೆತಗಳಲ್ಲಿ ರಿಂಕೂ ಸಿಂಗ್ 69 ರನ್ ಗಳಿಸಿ ಔಟಾಗದೇ ಉಳಿದರು.

ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಟೀಂ ಇಂಡಿಯಾಗೆ ಸಾಲು ಸಾಲು ಆರಂಭಿಕ ಆಘಾತಗಳು ಕಾದಿದ್ದವು.. ಯಶಸ್ವಿ ಜೈಸ್ವಾಲ್​​ ಕೇವಲ 4 ರನ್​ಗೆ ಔಟ್​ ಆದರೆ, ವಿರಾಟ್​ ಕೊಹ್ಲಿ ಮತ್ತು ಶೂನ್ಯಕ್ಕೆ ಔಟಾದರು. ಮೂರೂ ಬ್ಯಾಟ್ಸ್ ಮನ್ ಗಳು ಒಂದೇ ರೀತಿಯ ಹೊಡೆತ ಹೊಡೆಯಲು ಹೋಗಿ ಔಟಾದರು. ಇನ್ನು ಮೊದಲ ಎರಡು ಪಂದ್ಯಗಳ ಹೀರೋ ಶಿವಂ ದುಬೆಯವರ ಬ್ಯಾಟ್ ಕೂಡ ಹೆಚ್ಚು ಮಾತಾಡಲಿಲ್ಲ.

ಮೂರು ಪಂದ್ಯಗಳ ಸರಣಿಯಲ್ಲಿ ಭಾರತ ಎಲ್ಲ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ವೈಟ್ ವಾಶ್ ಮಾಡಿದೆ. ಕೊನೆಯ ಪಂದ್ಯದಲ್ಲಿ ಗೆಲ್ಲುವ ಅವಕಾಶ ಇದ್ದರೂ ವೀರೋಚಿತ ಹೋರಾಟ ಮಾಡಿದ ಅಫಘಾನಿಸ್ತಾನ ಸೋಲು ಅನುಭವಿಸಿದೆ.

More articles

Latest article