ಬೆಂಗಳೂರು: ಒಂದು ಸೈದ್ಧಾಂತಿಕ ಬದ್ಧತೆ ಇಲ್ಲದೆ ಎಲ್ಲವನ್ನೂ ರಾಜಕೀಯ ‘ಲಾಭ’ದ ಲೆಕ್ಕಾಚಾರದಲ್ಲಿ ನೋಡಿದರೆ ಹೇಗಿರುತ್ತದೆ? ಈ ಬಿಜೆಪಿ ನಾಯಕರ ಬೀದಿ ನಾಟಕಗಳಂತೆ ಇರುತ್ತದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ವ್ಯಂಗ್ಯವಾಡಿದ್ದಾರೆ. ಸಾಮಾಜಿಕ ಜಲತಾಣ ಎಕ್ಸ್ ನಲ್ಲಿ ಅವರು ಬಿಜೆಪಿಯ ಎರಡು ಬಗಳು ಅಸ್ತಿತ್ವಕ್ಕಾಗಿ ಕಿತ್ತಾಡುತ್ತಿವೆ ಎಂದು ಟೀಕಿಸಿದ್ದಾರೆ.
ಬಿಜೆಪಿಯ ಬಣಗಳು ಎತ್ತು ಏರಿಗೆ ಎಳೆದರೆ, ಕೋಣ ನೀರಿಗೆ ಎಳೆದಂತೆ ಪರಸ್ಪರ ವಿರುದ್ಧ ದಿಕ್ಕಿನಲ್ಲೇ ಸಾಗುವುದು. ಒಂದು ಬಣ ಸೌಜನ್ಯ ಸಾವಿಗೆ ನ್ಯಾಯ ಕೊಡಿಸುತ್ತೇವೆ ಎಂದರೆ, ಇನ್ನೊಂದು ಬಣ ಧಮಸ್ಥಳದ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ ಎಂದು ಹೋರಾಡುತ್ತದೆ.
ಒಂದು ಬಣ, ಸೌಜನ್ಯ ಮನೆಗೆ ಭೇಟಿ ನೀಡಿ ನ್ಯಾಯ ಕೊಡಿಸುವ ನಾಟಕವಾಡಿದರೆ, ಇನ್ನೊಂದು ಬೀದಿಯಲ್ಲಿ ಧರ್ಮ ರಕ್ಷಣೆಯ ಹಾಡು, ಕುಣಿತ ಮಾಡುತ್ತದೆ. ಒಟ್ಟಿನಲ್ಲಿ ಈ ಬಣಗಳಿಗೆ ಬೇಕಿರುವುದು ‘ಸೌಜನ್ಯ’ ಕೇಸಿನ ನ್ಯಾಯವೂ ಅಲ್ಲ. ಧರ್ಮ ರಕ್ಷಣೆಯೂ ಅಲ್ಲ. ತಮ್ಮ ತಮ್ಮ ಬಣದ ಶಕ್ತಿ ಪ್ರದರ್ಶನವಷ್ಟೇ! ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.