ಸಮ್ಮೇಳನದಲ್ಲಿ ಸಾಹಿತ್ಯದ್ದೇ ಹಿರಿತನ, ಸಿರಿತನ, ದೊರೆತನದ್ದಲ್ಲ

Most read

ಕನ್ನಡಮ್ಮನ ಕುವರಿಯೊಬ್ಬರು ಕನ್ನಡದ ಕನಸು ಮತ್ತು ಮನಸು ಕಟ್ಟುವ ಕಾಯಕಕ್ಕೆ ಅಡಿಯಿರಿಸಿ ಸಕ್ಕರೆಯ ಸಿಹಿಯನ್ನು, ಕಬ್ಬಿನ ಸವಿಯನ್ನು, ಮಲ್ಲಿಗೆಯ ಕಂಪನ್ನು ಮರಳಿ ತರುವಂತೆ ಕನ್ನಡದ ಜನಮನ ಮಾತಾಡಬೇಕಿದೆ. -ಡಾ.ಉದಯ ಕುಮಾರ ಇರ್ವತ್ತೂರು

ನಾಡು ನುಡಿಯ ಸಾಕ್ಷಿ ಪ್ರಜ್ಞೆಯಾಗಿರುವ ಸಾಹಿತ್ಯ, ಬಳುವಳಿಯಾಗಿ ಪಡೆದ ಪರಂಪರೆ ಸಾಗಿ ಬಂದ ದಾರಿ ವರ್ತಮಾನದ ತವಕ-ತಲ್ಲಣಗಳೊಂದಿಗೆ ಭವಿಷ್ಯದ ಗುರಿ ಮತ್ತು ದಾರಿ ಯನ್ನು ಗುರುತಿಸುವ ಕೆಲಸವನ್ನು ಮಾಡಬೇಕಿರುವ ಮತ್ತು ಮಾಡಬಹುದಾದ ನೈತಿಕ ಪ್ರಜ್ಞೆಯೂ ಹೌದು. ಹಾಗಾಗಿ ಸಾಹಿತ್ಯಕ್ಕೆ ಅಧಿಕಾರ, ರಾಜಕಾರಣ, ಜಾತಿ, ಪಂಗಡ, ತೋಳ್ಬಲ, ಹಣಬಲದ ಹಂಗಿರಬಾರದು. ಸಾಹಿತ್ಯ ಉಂಟು ಮಾಡುವ ಕಲರವ ಇದೆಲ್ಲವನ್ನೂ ಮೀರಿದ, ನೊಂದವರ ನೋವಿಗೆ, ಸದಾಶಯಗಳ ಉಳಿವಿಗೆ, ನಾಲಿಗೆಯೇ ಇಲ್ಲದವರಿಗೆ ಗಂಟಲಾಗುವ ಮೂಲಕ ತನ್ನ ಅಸ್ತಿತ್ವಕ್ಕೊಂದು ಅರ್ಥ ಕಂಡುಕೊಳ್ಳುತ್ತದೆ. ಬಹಿರಂಗದ ಆಡಂಬರ ಮತ್ತು ಅಂತರಂಗದ ಅಹಂಕಾರಗಳನ್ನು ಮೀರಿ, ಮಾನವೀಯ ಅಂತಃಕರಣದಿಂದ ಲೋಕದ ವ್ಯವಹಾರಗಳನ್ನು ಅಳೆದು ತೂಗಿ ಜಳ್ಳು, ಕಾಳುಗಳನ್ನು ವಿಂಗಡಿಸಿ, ಬುದ್ಧಿಯ ಭಾವಕ್ಕೆ ಹಾಡಾಗುವಂತಹದು. ಇದು ನಮ್ಮ ಅಂತರಂಗದ ಧ್ವನಿಗಳನ್ನು ಅನೇಕಾನೇಕ ಪ್ರಕಾರಗಳಲ್ಲಿ ಮುದ್ರಿಸಿ ಕಿವಿ, ಕಣ್ಣುಗಳಿಗಷ್ಟೇ ಕೇಳಿಸದೆ, ತೋರಿಸದೆ ಮತಿಯೊಳಗೆ ಇಳಿದು, ಬುದ್ಧಿಯ ಬಯಲಲ್ಲಿ ಕಾಲದಿಂದ ಕಾಲಕ್ಕೆ ಚಿಗುರುತ್ತಲೇ ಇರುತ್ತದೆ. ಹೀಗೆ ಮಾನವೀಯ ಮೌಲ್ಯಗಳನ್ನು ಬಹು ವಿಧಗಳಲ್ಲಿ ಸೃಜಿಸುವ ಉಳಿಸಿ, ಬೆಳೆಸುವ ಕೆಲಸವನ್ನು ಕನ್ನಡದ ಸಾಹಿತಿಗಳು ಈ ನಾಡಿನಲ್ಲಿ ಬಹಳ ಕಾಲದಿಂದ ಮಾಡುತ್ತಲೇ ಬರುತ್ತಿದ್ದಾರೆ.

ಮಂಡ್ಯದಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಲಾಂಛನ

ಬದಲಾಗುತ್ತಾ ಬಂದ ಕಾಲದೊಂದಿಗೆ ಸಾಹಿತ್ಯದ ತಾಳಮೇಳಗಳಲ್ಲಿಯೂ ಬದಲಾವಣೆಗಳು ಆಗುತ್ತಿರುವುದನ್ನು ನಾವು ನೀವು ಗಮನಿಸಬಹುದು. ಬದಲಾವಣೆ ಜಗದ ನಿಯಮ, ಅದನ್ನು ತಡೆಯಲಾಗದು. ತಡೆಯುವ ಅಗತ್ಯವೂ ಇಲ್ಲ. ಪ್ರಾಜ್ಞರು ಹೇಳಿದ ಹಾಗೆ ನಾವು ಮನೆ ಮನಗಳನ್ನು ತೆರೆದಿಟ್ಟು ಹೊಸತನಕ್ಕೆ ಒಗ್ಗಿಕೊಳ್ಳುವುದರಿಂದ ನಮಗೆ ನಾವು, ನಿಮಗೆ ನಾವು, ನಮಗೆ ನೀವು ಅರ್ಥವಾಗಿ ಸರಿದುಹೋಗುವ ಕಾಲ ಉಂಟುಮಾಡಬಹುದಾದ ಗೊಂದಲದ ಕಾರಣಗಳಿಂದ ಗಳಿಸಿದ ಬುದ್ಧಿ, ವಿವೇಕಗಳು ಬಲಿಯಾಗದಂತೆ ನೋಡಿಕೊಳ್ಳ ಬಹುದಾಗಿದೆ. ತಲೆಮಾರುಗಳ ನಡುವಿರಬಹುದಾದ ಮಾರು ದೂರವನ್ನು ಮೀರಿ ನಡೆಯುವ ಈ ಪರಿಯನ್ನು “ತುಂಬಿದ ಹರಿಗೋಲು, ಅದಕ್ಕೊಂಬತ್ತು ಚಿತ್ತಗಳು” ಎಂಬಂತೆ, ನಿರ್ವಹಿಸುವುದು ತುಸು ಕಷ್ಟಕರವೇ. ಆದರೆ ಹುಟ್ಟು ಒಂದಿದ್ದರೆ ಯಾವ ಜುಟ್ಟನ್ನಾದರೂ ಹಿಡಿದು ದಡ ಸೇರಬಹುದು.

ನಮ್ಮ ನಾಡಿನ ಮುಂದಣ ಅಬ್ಬರದ ನಡುವೆಯೂ ಹಿಂದಣ ಪಡಸಾಲೆಯಲ್ಲಿ ನಡೆಯುತ್ತಲೇ ಇದ್ದ ನಿರಂತರ ಜ್ಞಾನ ಯಜ್ಞದ ಕಾರಣದಿಂದ ಕನ್ನಡದ ಸಾರಸ್ವತ ಲೋಕಕ್ಕೆ ಎಂಟು ಜ್ಞಾನಪೀಠ ಸಿಕ್ಕಿದ್ದಲ್ಲ ದಕ್ಕಿದ್ದು. ಲೋಕವನ್ನು, ಲೋಕದ ಎಲ್ಲಾ ಶೋಕಗಳನ್ನು ಶ್ಲೋಕಗಳನ್ನು ಅರಿಯುವ, ಮನುಷ್ಯನ ಅಹಂಕಾರವನ್ನು ಮುರಿದು ಕಟ್ಟುತ್ತಲೇ ಬಂದ “ಅರಿವಿನ” ಹಣತೆಗಳ ಸಾಲು ಕನ್ನಡ ನಾಡಿನಲ್ಲಿ ನಿತ್ಯ, ದೀಪಾವಳಿಯ ಸಡಗರವನ್ನು ಸಂಭ್ರಮಿಸುವಂತೆ ಮಾಡಿದ್ದು ಕೂಡಾ ಸತ್ಯವೇ. ಭುವನೇಶ್ವರಿಯ ಗುಡಿಯೊಳಗಿನ ಜ್ಞಾನದ ಪೀಠದಲ್ಲಿ ಕಾರಂತ, ಕುವೆಂಪು, ಕಾರ್ನಾಡ್, ಕಂಬಾರ, ಮಾಸ್ತಿ, ಬೇಂದ್ರೆ, ಗೋಕಾಕ್, ಅನಂತ ಮೂರ್ತಿ ಇವರೆಲ್ಲ ಹಚ್ಚಿದ ನಿತ್ಯ ನಂದಾದೀಪದ ಬೆಳಕಲ್ಲಿ ಇಡೀ ವಿಶ್ವದ ಸಾಹಿತ್ಯವೂ ಓದಬಹುದಾಗಿದೆ ಎನ್ನುವುದು ಕನ್ನಡಿಗರೆಲ್ಲರ ಹೆಮ್ಮೆ. ಮಿಕ್ಕುಳಿದ ಕನ್ನಡದ ರಾಯಭಾರಿಗಳೇನು ಕಡಿಮೆಯಲ್ಲ. ಅವರು ಬಿತ್ತಿದ ಬೆಳಕಿನ ಬೀಜಗಳು ಬಡವ ಬಲ್ಲಿದರೆನ್ನುವ ಬೇಧವಿಲ್ಲದೆ ಕನ್ನಡದ ಎಲ್ಲ ಮನೆಮನದಂಗಳವನ್ನು ಬೆಳಗುತ್ತಲೇ ಇವೆ. ಕಾವ್ಯ, ಕಾದಂಬರಿ, ಗದ್ಯ, ಪದ್ಯ, ಚುಟುಕುಗಳೆಲ್ಲ ಜಗಿದಷ್ಟು ರಸಸೂಸುವ ಕಬ್ಬಿನ ಜಲ್ಲೆಗಳು. ಇಂತಹ ಕಬ್ಬಿಗರು ಕಟ್ಟಿದ ಸಾಹಿತ್ಯಕ್ಕೊಂದು ಸೌಧವಾದದ್ದು ಪರಿಷತ್ತು, ತನ್ನ ಹುಟ್ಟಿನ ಕಾರಣ ಕನ್ನಡದ ಜನಮನದೊಡನೆ ನಡೆಸುವ ಮಾತು-ಕತೆಯಾಗುತ್ತಲೇ ಜಾತ್ರೆ ಉತ್ಸವವಾಗುವ ಉತ್ಸಾಹ, ಸಂಭ್ರಮ, ಸಡಗರ ನಾಡಿನ ಜನಮನದ ಕನಸಾಗಿತ್ತು. ಹಾಗಾಗಿಯೇ “ಸಾಹಿತ್ಯ ಸಮ್ಮೇಳನಗಳು” ಕನ್ನಡದ ಕಾರ್ಯ ಕಾರಣಗಳು ನಿಜವಾಗುವ, ನೆನಪಾಗುವ ಯಾಗವೂ ಯೋಗವೂ ಆಗಿದೆ. ಈ ಸಂಭ್ರಮ ಕಳೆಗುಂದಬಾರದು. ಜನಮನದ ಆಶೋತ್ತರಗಳ ಕೂಸಾದ ಸಾಹಿತ್ಯ ಸಮ್ಮೇಳನಕ್ಕೆ ನಾಡಿನ ಸಾಕ್ಷಿ ಪ್ರಜ್ಞೆಯ ಪರಿಚಯದ ಪುರುಷೋತ್ತಮರು/ಮನೋರಮೆಯರು, ಸಾರಥ್ಯವಹಿಸಿ ಕನ್ನಡವನ್ನು ಮುನ್ನಡೆಸುವ ಹಿರಿಮೆ ಇದೆ. ಇಂತಹ ಹಿರಿತನದ ಗರಿಮೆಯ ಕೊಡೆಯಡಿ ನಡೆಯುವ ಮನದ ಮಾತುಗಳು, ಮತಿಯ ಮಂಥನಗಳು, ಕಲೆಯ ಸಿಂಚನಗಳು ಬರಗಾಲದಲ್ಲಿಯೂ ನಾಡು ನುಡಿಯ ಬಗ್ಗೆ ನಿರೀಕ್ಷೆಗಳು ಚಿಗುರುವಂತೆ ಮಾಡುತ್ತಲೇ ಬಂದಿದೆ.

ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್‌ ಜೋಶಿ

ಅದ್ಯಾಕೋ ಕಾಲ ಬದಲಾಗುತ್ತಿದೆ, ತಾಳ ಬದಲಾಗುತ್ತಿದೆ, ಮೇಳವೂ ಬದಲಾಗುತ್ತಿದೆ; ಕನ್ನಡಿಗರ ಕೈಗನ್ನಡಿಯೂ ಬದಲಾಗುತ್ತಿದೆಯೇ ಎನ್ನುವ ಅನುಮಾನ ಹೆಡೆಯಾಡುತ್ತಿದೆ. ಸಾಹಿತ್ಯದ, ಸಾಮರಸ್ಯದ, ಸಹಜೀವನದ ಜೀವ ತಂತುಗಳನ್ನು ಮೀಟ ಬೇಕಿರುವ ಶಾರದೆಯ ಬೆರಳುಗಳ ಸದ್ದಡಗಿ, ಏನೇನೂ ಅಪಸ್ವರ ಹೊರಡಿಸುವ ಕೊರಳುಗಳು ಚಿಗುರುತ್ತಿರುವಂತೆ ಅನುಮಾನಗಳು. ಈ ಅಬ್ಬರದ ಬೊಬ್ಬೆಗಳ ನಡುವಿಂದ ಹೊರಬಂದು ಹೊರಳಿ ನೋಡಿದರೆ, ಕನ್ನಡದ ತೇರು ಸೇರುವ ಗುರಿ ತಲುಪುವ ದಾರಿ ಎಲ್ಲೊ ಕಳೆದು ಹೋದಂತಹ “ಅನು-ಭವ”. ಹೊಟ್ಟೆ ಬಟ್ಟೆಯ ಬೆರಗು, ಹಬ್ಬದಡುಗೆಯ ಸವಿಗೆ ಮಾತು ಹೊರಡದೆ ಮೌನ ಅಡರಿದರೆ ಸುಡುಮದ್ದಿನ ಸಡಗರದ ನಡುವೆ ಸಾಗಿದ್ದೇ ದಾರಿ ಮುಟ್ಟಿದ್ದೇ ಗುರಿ ಎಂಬಂತೆ ಆಗಬಾರದು. ಇದ್ಯಾವುದರ ಪರಿವೆಯಿಲ್ಲದೇ ಕಾಲವೂ ಒಂದೇ ಸಮನೆ ಓಡುತ್ತಿದೆ. ಸಕ್ಕರೆ ನಾಡಿನಲ್ಲಿ ಅಕ್ಕರೆಯೇ ಮರೆಯಾಗಿ ಬರೀ ಬಿಕ್ಕಳಿಕೆಯೇ ಕೇಳುತ್ತಿದೆ. ಯಾಕೆ ಹೀಗಾಗುತ್ತಿದೆ?. ಪ್ರಶ್ನೆಗಳದೇ ಮೆರವಣಿಗೆ. ಉತ್ತರದ ಬರವಣಿಗೆ ಕೇವಲ ಬೆರಳೆಣಿಕೆಯಷ್ಟೇ? ಸಾಹಿತ್ಯ ರಚನೆ ಔದಾರ್ಯದ ಉರುಳಿಗೆ ಸಿಕ್ಕಿದರೆ ಅದು ಸತ್ವರಹಿತ ತತ್ವದಂತೆ, ಹೇಳುವುದನ್ನು ಹೇಳಲಾಗದ, ನೋಡಬೇಕಾದುದನ್ನು ನೋಡಲಾಗದ, ಯಾರನ್ನೂ ಮುಟ್ಟದ, ಏನನ್ನೂ ತಟ್ಟದ ಮಾತಿನ ಮಲ ಬದ್ಧತೆಯಾಗಿ ಬಿಡಬಹುದು.

ಸಾಹಿತ್ಯದರಮನೆಯನ್ನು ಆವರಿಸುವ ಅಧಿಕಾರದ ಸಮೀಕರಣಗಳಿಗೆ ನೊಂದವರ ನೋವು, ಬೆಂದವರ ಬೇಗೆ, ಕೇಳುವುದು ನಿಂತು ಬರೀ ತಿಂದವರ ತೇಗಿನ ನಾದಸ್ವರಕ್ಕೆ ತಲೆಯಾಡಿಸಿದರೆ ಸಾಹಿತ್ಯವುಳಿಯುವ ಪರಿಯಾದರೂ ಹೇಗೆ? ಕಳೆದುದೆಲ್ಲವನ್ನು ಮತ್ತೆ ಗಳಿಸಬೇಕು, ಉಳಿಸಬೇಕು ಎಂದು ಕೊಳ್ಳುತ್ತಿರುವಾಗಲೇ ಕನಸು ಕಟ್ಟುವ ಪಟ್ಟಕ್ಕೆ ಯಾವುದೋ ತೆರೆಯ ಮರೆಯ ಅದೃಶ್ಯ ವೇಷದ ಪ್ರವೇಶಕ್ಕೆ ಅಬ್ಬರದ ತಾಳದ ಸದ್ದು. ಕನ್ನಡಾಂಬೆಯ ಕನಸು ಕನ್ನಡಿಗರ ಮನೆಮನದಿಂದ ದೂರವಾಗುವ ಮೊದಲು ಎಚ್ಚೆತ್ತುಕೊಳ್ಳುವುದು ಒಳ್ಳೆಯದು. ಕನ್ನಡಮ್ಮನ ಕುವರಿಯೊಬ್ಬರು ಕನ್ನಡದ ಕನಸು ಮತ್ತು ಮನಸು ಕಟ್ಟುವ ಕಾಯಕಕ್ಕೆ ಅಡಿಯಿರಿಸಿ ಸಕ್ಕರೆಯ ಸಿಹಿಯನ್ನು, ಕಬ್ಬಿನ ಸವಿಯನ್ನು, ಮಲ್ಲಿಗೆಯ ಕಂಪನ್ನು ಮರಳಿ ತರುವಂತೆ ಕನ್ನಡದ ಜನಮನ ಮಾತಾಡಬೇಕಿದೆ. ಕೇಳಿ ಮುದ್ದಣನ ಮುಂಗೋಳಿ ಕೂಗುತ್ತಿದೆ, ಏಳಿ ಎದ್ದೇಳಿ, ಹೇಳಿ ಸಾಹಿತ್ಯ ಸಮ್ಮೇಳನಕ್ಕೆ ಸಾಹಿತಿಯದ್ದೇ ಹಿರಿತನ, ಸಿರಿತನ, ದೊರೆತನವಲ್ಲ.

ಡಾ. ಉದಯ ಕುಮಾರ ಇರ್ವತ್ತೂರು

ವಿಶ್ರಾಂತ ಪ್ರಾಂಶುಪಾಲರು 

ಇದನ್ನೂ ಓದಿ- ಸಾಹಿತ್ಯ ಜಾತ್ರೆಗೆ ಸಾಹಿತ್ಯೇತರ ರಾಜಕಾರಣದ ಲಗ್ಗೆ

More articles

Latest article