ರಾಯ್‌ಬರೇಲಿ: ಉತ್ತರ ಪ್ರದೇಶದ ರಾಯ್ ಬರೇಲಿ ಜಿಲ್ಲೆಯಲ್ಲಿ ಕಳ್ಳನೆಂದು ಭಾವಿಸಿ, ದಲಿತ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಲಾದ ಪ್ರಕರಣ ಅಕ್ಟೋಬರ್ 2ರಂದು ನಡೆದಿತ್ತು. ಈ ಪ್ರಕರಣ ರಾಜ್ಯ ಬಿಜೆಪಿ ಸರ್ಕಾರದ ಮೇಲೆ ದಲಿತರ ಆಕ್ರೋಶಕೂ ಕಾರಣವಾಗಿತ್ತು. ವರದಿಯಾಗಿತ್ತು. ಕಾಂಗ್ರೆಸ್ ಮುಖಂಡ, ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಇಂದು ಮೃತ ವ್ಯಕ್ತಿಯ ಕುಟುಂಬದ ಸದಸ್ಯರನ್ನು ಭೇಟಿಯಾಗಿ ಸಾಂತ್ವನ ಹೇಳಿದ್ದಾರೆ.
ಮೃತ ವ್ಯಕ್ತಿಯನ್ನು ಫತೇಪುರ ಜಿಲ್ಲೆಯ ಹರಿ ಓಂ ಎಂದು ಗುರುತಿಸಲಾಗಿದೆ. ನಂತರ ಮಾತನಾಡಿದ ಅವರು ಬಿಜೆಪಿ ಸರ್ಕಾರದ ವಿರುದ್ಧ ಹರಿಹಾಯ್ದರು.
ನನ್ನನ್ನು ಭೇಟಿ ಮಾಡದಂತೆ ಮೃತ ವ್ಯಕ್ತಿಯ ಕುಟುಂಬದವರಿಗೆ ಬೆದರಿಕೆ ಹಾಕಲಾಗಿದೆ. ಅವರು ನನ್ನನ್ನು ಭೇಟಿ ಮಾಡುವುದು ಮುಖ್ಯ ಅಲ್ಲ. ಅವರು ಅಪರಾಧಿಗಳಲ್ಲ ಎನ್ನುವುದಷ್ಟೇ ಮುಖ್ಯ ಎಂದು ಟೀಕಿಸಿದ್ದಾರೆ.
ಸಂತ್ರಸ್ತ ಕುಟುಂಬಕ್ಕೆ ಸಾಧ್ಯವಿರುವ ಎಲ್ಲ ನೆರವನ್ನು ಕಾಂಗ್ರೆಸ್ ಪಕ್ಷ ಒದಗಿಸಲಿದೆ ಎಂದು ರಾಹುಲ್ ಭರವಸೆ ನೀಡಿದ್ದಾರೆ. ದೇಶದ ಯಾವುದೇ ಭಾಗದಲ್ಲಿ ದಲಿತರ ವಿರುದ್ಧ ದೌರ್ಜನ್ಯ ನಡೆದರೆ ಕಾಂಗ್ರೆಸ್ ಅವರ ಬೆಂಬಲಕ್ಕೆ ನಿಲ್ಲಲಿದೆ. ಅವರ ಪರವಾಗಿ ಹೋರಾಟ ನಡೆಸುತ್ತೇವೆ ಎಂದು ತಿಳಿಸಿದ್ದಾರೆ..
ದಲಿತ ವ್ಯಕ್ತಿಯ ಕೊಲೆ ಪ್ರಕರಣ ಬಹಿರಂಗವಾಗುತ್ತಿದ್ದಂತೆ ಯೋಗಿ ಆದಿತ್ಯನಾಥ ನೈಕತ್ವದ ಬಿಜೆಪಿ ಸರಕಾರದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ಪ್ರತಿಪಕ್ಷಗಳಾದ ಕಾಂಗ್ರೆಸ್ ಹಾಗೂ ಸಮಾಜವಾದಿ ಪಕ್ಷ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದು, ದಲಿತರನ್ನು ರಕ್ಷಿಸುವಲ್ಲಿ ಬಿಜೆಪಿ ವಿಫಲವಾಗಿದೆ ಎಂದು ಆರೋಪಿಸಿವೆ.
ದಲಿತ ವ್ಯಕ್ತಿಯ ಹತ್ಯೆಗೆ ಸಂಬಂಧಪಟ್ಟಂತೆ ಪೊಲೀಸರು ಈವರೆಗೆ 14 ಮಂದಿಯನ್ನು ಬಂಧಿಸಿದ್ದಾರೆ. ಪ್ರಕರಣ ನಿರ್ವಹಿಸುವಲ್ಲಿ ಕರ್ತವ್ಯ ಲೋಪ ಎಸಗಿದ ಆರೋಪದಡಿ ಇಬ್ಬರು ಸಬ್ ಇನ್‌ಸ್ಪೆಕ್ಟರ್ ಮತ್ತು ಐವರು ಕಾನ್ ಸ್ಟೇಬಲ್‌ಗಳನ್ನು ಅಮಾನತು ಮಾಡಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಕಳ್ಳರ ಗುಂಪೊಂದು ಓಡಾಡುತ್ತಿದೆ ಎಂಬ ವದಂತಿ ಹಬ್ಬಿದ್ದರಿಂದ ಉಂಚಹಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರದೇಶದಲ್ಲಿ ಹಲವು ಗ್ರಾಮಗಳ ಜನರು ರಾತ್ರಿ ವೇಳೆ ಕಟ್ಟೆಚ್ಚರ ವಹಿಸಿದ್ದರು. ಅಕ್ಟೋಬರ್ 2ರಂದು, ಹರಿ ಓಂ ಜಮುನಾಪುರ ರೈಲ್ವೆ ಕ್ರಾಸಿಂಗ್ ಹತ್ತಿರ ನಡೆದುಕೊಂಡು ಹೋಗುತ್ತಿದ್ದರು. ಇವರನ್ನು ಕಂಡ ಕೆಲವರು, ಕಳ್ಳ ಎಂದು ಭಾವಿಸಿ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು.