ಪ್ರಪಂಚದ ಪ್ರಮುಖ ಧರ್ಮಗಳಲ್ಲಿ ಬೌದ್ಧ ಧರ್ಮವು ಒಂದಾಗಿದೆ. ಎಲ್ಲಾ ಧರ್ಮಗಳಲ್ಲಿ ಆಯಾಯ ಧರ್ಮದ ರೂಢಿ ಸಂಪ್ರದಾಯಗಳಿಗೆ ಅನುಗುಣವಾಗಿ ಕೆಲವೊಂದು ಧರ್ಮದ ಸಂಕೇತಗಳು, ಚಿನ್ಹೆಗಳು ಜನ ಮಾನಸವನ್ನೇ ಪ್ರತಿಪಾದಿಸುತ್ತವೆ ಎಂದು ಸಾಮಾನ್ಯ ಜನರು ಅಭಿಪ್ರಾಯ ಪಡುತ್ತಾರೆ. ಕೆಲವೊಂದು ಚಿನ್ಹೆಗಳು ವಿವಿಧ ರೀತಿಯ ಅನಿಸಿಕೆಗಳನ್ನು ಸೃಷ್ಟಿಸುತ್ತವೆ, ಇವುಗಳು ಕೆಲವೊಮ್ಮೆ ಮಾನವರನ್ನೇ ಅವುಗಳ ಪರ ಮತ್ತು ವಿರುದ್ಧವಾಗಿ ವಿಭಜಿಸುತ್ತವೆ. ಉದಾಹರಣೆಗೆ ಕ್ರಾಸ್ ಶಿಲುಬೆಯನ್ನು ನೋಡಿದ ಜನರು ಅದನ್ನು ಕ್ರೈಸ್ತ ಧರ್ಮಕ್ಕೆ ಸೇರಿದ ಚಿನ್ಹೆ ಎಂದು ಬಹಳ ಸುಲಭವಾಗಿ ಗುರುತಿಸುತ್ತಾರೆ. ಅದೇ ರೀತಿಯಲ್ಲಿ ತ್ರಿಶೂಲ ನೋಡಿದ ತಕ್ಷಣ ಅದೊಂದು ಹಿಂದೂ ಧರ್ಮದ ದೇವರಾದ ಶಿವನ ಕೈಯಲ್ಲಿರುವ ಆಯುಧವೆಂದು ಹೇಳುತ್ತಾರೆ. ಹಾಗೆಯೇ ಅರ್ಧಚಂದ್ರಾಕೃತಿಯ ನಕ್ಷತ್ರ ಉಳ್ಳ ಚಿನ್ಹೆ ಇಸ್ಲಾಂನ ಗುರುತು, ಅಂಗೈಯಲ್ಲಿ ಲಿಂಗವಿದ್ದರೆ ಲಿಂಗಾಯತ ಧರ್ಮ ಹೀಗೆ ಇನ್ನೂ ಅನೇಕ ವಿವಿಧ ರೀತಿಯಲ್ಲಿ ನಾವು ಧಾರ್ಮಿಕ ಚಿಹ್ನೆಗಳನ್ನು ಕಾಣಬಹುದು.
ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಅಕ್ಟೋಬರ್ 14, 1956ರಲ್ಲಿ ಬೌದ್ಧ ಧರ್ಮ ಸ್ವೀಕಾರ ಮಾಡಿದ ನಂತರ ‘ನನ್ನ ಮುಂದಿನ ಜೀವನ ಪೂರ್ತಿ ಬೌದ್ಧ ಧರ್ಮದ ಪ್ರಚಾರಕ್ಕೆ ಸೀಮಿತವಾಗಿರುತ್ತದೆ’ ಎಂದು ಹೇಳಿ ಅದರಂತೆ ಬಹಳಷ್ಟು ಕೆಲಸಗಳನ್ನು ಮಾಡಿದರು. ಒಂದು ವೇಳೆ ಬಾಬಾಸಾಹೇಬರು ಮತ್ತೂ ಸ್ವಲ್ಪ ಕಾಲ ಬದುಕಿದ್ದರೆ ಖಂಡಿತ ಅವರು ಬೌದ್ಧ ಧರ್ಮದ ಧಾರ್ಮಿಕ ಚಿಹ್ನೆಗಳ ಬಗ್ಗೆ, ಸಂಕೇತಗಳ ಬಗ್ಗೆ ಹಾಗೂ ವಿವಿಧ ಧರ್ಮಗಳ ಚಿಹ್ನೆಗಳ ಬಗ್ಗೆ ಒಂದು ತೌಲನಿಕ ಅಧ್ಯಯನ ಮಾಡಿ ನಮಗೆ ಖಚಿತವಾದ ನಂಬಲರ್ಹ ವಿಚಾರಗಳನ್ನು ತಿಳಿಸುತ್ತಿದ್ದರು. ಆದರೆ ಅದು ಸಾಧ್ಯವಾಗುವ ಮುನ್ನವೇ ನಾವು ಬಾಬಾ ಸಾಹೇಬ್ರನ್ನ ಕಳೆದುಕೊಂಡೆವು. ಆದರೆ ಅವರ ಅನುಯಾಯಿಗಳಾಗಿ ಅವರನ್ನು ಅಧ್ಯಯನ ಮಾಡಿದಾಗ ಬಾಬಾ ಸಾಹೇಬರು ಈ ವಿಷಯದ ಕುರಿತು ಈ ರೀತಿಯಾಗಿ ಯೋಚಿಸಬಹುದಿತ್ತೇ? ಎಂಬ ಸಣ್ಣ ಯೋಚನೆಯೇ ಈ ಲೇಖನಕ್ಕೆ ಸ್ಪೂರ್ತಿ.
ಬೌದ್ಧ ಧರ್ಮವು ಕ್ರಿಸ್ತಪೂರ್ವ ಐದು ಆರನೆಯ ಶತಮಾನದಲ್ಲಿ ಭಗವಾನ್ ಗೌತಮ ಬುದ್ಧರಿಂದ ಬೋಧಿಸಲ್ಪಟ್ಟಿತು. ಸಾಮಾನ್ಯ ಜನರು ಬೌದ್ಧ ಧರ್ಮಕ್ಕೆ ಆಕರ್ಷಿತರಾಗಿ ಹಿಂದು ಮುಂದು ನೋಡದೆ ಧರ್ಮವನ್ನು ಸ್ವೀಕಾರ ಮಾಡಿ ಜೀವನದಲ್ಲಿ ಪಾಲಿಸಿದರು. ರಾಜ ಮಹಾರಾಜರು ಬುದ್ಧರ ಬೋಧನೆಗಳಿಗೆ ಮನಸೋತು ಧಮ್ಮ ಸ್ವೀಕಾರ ಮಾಡಿದ್ದಲ್ಲದೆ, ಬೌದ್ಧ ಧರ್ಮದ ಪ್ರಚಾರಕ್ಕೂ ನೆರವು ನೀಡಿದರು. ಈ ಪ್ರಕ್ರಿಯೆಯಲ್ಲಿ ಬುದ್ಧರ ಬೋಧನೆಗಳಿಂದ ಪ್ರಭಾವಿತರಾದಂತಹ ಕಲಾಕಾರರು, ವೃತ್ತಿಪರ ಕೌಶಲ್ಯವುಳ್ಳ ನಿಪುಣರು, ಕುಸರಿ ಕೆಲಸಗಾರರು ಬುದ್ಧರ ಬೋಧನೆಗಳಲ್ಲಿನ ವಿಚಾರಗಳನ್ನು ಜನರಿಗೆ ಸರಳವಾಗಿ ತಲುಪಿಸುವಂತೆ ಮಾಡಲು ಧರ್ಮದ ಸಂಕೇತಗಳನ್ನು, ಚಿನ್ಹೆಗಳನ್ನು ಸೃಷ್ಟಿಸಿದರು. ಆ ಮೂಲಕ ಧರ್ಮದ ಮುಖ್ಯ ತಿರುಳನ್ನು ಜನರಿಗೆ ಬೋಧಿಸಲು ನೆರವಾದರು.
ಬೌದ್ಧ ಧರ್ಮದ ಪ್ರಮುಖ ಚಿನ್ಹೆಗಳು
ಭಗವಾನ್ ಗೌತಮ ಬುದ್ಧರು ಜ್ಞಾನೋದಯವಾದ ಮೇಲೆ ಸಾರನಾಥದ ಜಿಂಕೆವನದಲ್ಲಿ ಪಂಚವರ್ಗಿಯ ಭಿಕ್ಕುಗಳಿಗೆ ಮೊದಲ ಬಾರಿಗೆ ಧಮ್ಮ ಬೋಧನೆ ಮಾಡಿದರೆಂದು ಐತಿಹಾಸಿಕ ದಾಖಲೆಗಳ ಮೂಲಕ ತಿಳಿದು ಬರುತ್ತದೆ. ಹೀಗೆ ಬೋಧಿಸಿದ ಮೊದಲ ಸುತ್ತವನ್ನು ‘ಧಮ್ಮ ಚಕ್ಕ ಪವತ್ತನ ಸುತ್ತ’ವೆಂದು ಕರೆಯುತ್ತಾರೆ. ಇದನ್ನು ಆಧಾರವಾಗಿಟ್ಟುಕೊಂಡು ಸಾಮ್ರಾಟ ಅಶೋಕನ ಆಡಳಿತದಲ್ಲಿ ಮೊದಲ ಬಾರಿಗೆ ಧಮ್ಮ ಚಕ್ರವನ್ನು ಸ್ಥಾಪಿಸಿ, ತನ್ನ ಸಾಮ್ರಾಜ್ಯದೆಲ್ಲೆಡೆ ಧಮ್ಮ ಪ್ರಚಾರಕ್ಕೆ ನಾಂದಿ ಹಾಡಿದನು. ಇದಕ್ಕೂ ಮೊದಲು ಹೀಗೆ ಸಂಕೇತಗಳನ್ನು, ಚಿಹ್ನೆಗಳನ್ನು ಬಳಸಿದ ಐತಿಹಾಸಿಕ ದಾಖಲೆಗಳು ದೊರೆಯುವುದಿಲ್ಲ. ಈ ಧರ್ಮ ಚಕ್ರದಲ್ಲಿ 24 ಕಡ್ಡಿಗಳನ್ನು ನಾವು ನೋಡಬಹುದು ಇದೊಂದು ಕೇವಲ ಗೆರೆಯಾಗಿರದೆ ಬುದ್ಧರ ಬೋಧನೆಗಳನ್ನ ಒಳಗೊಂಡಿರುವಂತಹ ನೈತಿಕ ಮೌಲ್ಯಗಳಾಗಿರುತ್ತವೆ.
- ಕಡ್ಡಿಗಳ ಅರ್ಥ ಏನೆಂದರೆ…
1. ಕಾನೂನು ಮತ್ತು ಧರ್ಮ
ಅಶೋಕ ಚಕ್ರವು ಶಾಶ್ವತ ಕಾನೂನಿನ ಚಕ್ರವನ್ನು ಪ್ರತಿನಿಧಿಸುತ್ತದೆ. ಪ್ರತಿಯೊಂದು ಗೆರೆಯು ಧರ್ಮದ ಮೂಲಭೂತ ತತ್ವವನ್ನ ಸಂಕೇತಿಸುತ್ತದೆ. ಇದು ಆಡಳಿತದಲ್ಲಿ ಸದಾಚಾರ ಮತ್ತು ನ್ಯಾಯದ ಮಹತ್ವವನ್ನು ಪ್ರತಿಬಿಂಬಿಸುತ್ತದೆ.
2. ಕ್ರಿಯಾತ್ಮಕ ಚಲನೆ
ಚಕ್ರವು ಚಲನೆ ಮತ್ತು ಪ್ರಗತಿಯನ್ನು ಸೂಚಿಸುತ್ತದೆ. ಜೀವನವು ಬೆಳವಣಿಗೆ ಮತ್ತು ಸುಧಾರಣೆಯ ನಿರಂತರ ಪ್ರಯಾಣವಾಗಿರಬೇಕು ಎಂಬ ಕಲ್ಪನೆಯನ್ನು ಸಂಕೇತಿಸುತ್ತದೆ.
3. ಜೀವನಚಕ್ರ
ಕಡ್ಡಿಗಳನ್ನು ಜೀವನಚಕ್ರ ಮತ್ತು ಎಲ್ಲ ಜೀವಿಗಳ ಪರಸ್ಪರ ಸಂಬಂಧವನ್ನು ಪ್ರತಿನಿಧಿಸುತ್ತವೆ ಎಂದು ಅರ್ಥೈಸಿದ್ದಾರೆ.
4. ಸಮಯ
24 ಕಡ್ಡಿಗಳು ದಿನದ 24 ಗಂಟೆಗಳನ್ನು ಸಂಕೇತಿಸುತ್ತದೆ. ಮಾನವ ಜೀವನದಲ್ಲಿ ಸಮಯದ ಮಹತ್ವವನ್ನು ಮತ್ತು ಪ್ರತಿಕ್ಷಣವನ್ನು ಸದುಪಯೋಗ ಪಡಿಸಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳುತ್ತದೆ.
5. ಏಕತೆ ಮತ್ತು ವೈವಿಧ್ಯತೆ
ಸಮಾನಾಂತರದ ಕಡ್ಡಿಗಳು ವೈವಿಧ್ಯತೆಯ ಹೊರತಾಗಿಯೂ ಏಕತೆಯನ್ನು ಸೂಚಿಸುತ್ತವೆ. ಇದು ವಿಭಿನ್ನ ಸಂಸ್ಕೃತಿಗಳು ಮತ್ತು ಧರ್ಮಗಳು ಸಹಬಾಳ್ವೆ ನಡೆಸುವ ಭಾರತೀಯ ನೀತಿಯ ಮೂಲ ತತ್ವವಾಗಿದೆ.
6. ಹುಟ್ಟು ಸಾವಿನ ಭವಚಕ್ರ
ಬುದ್ಧರ ‘ಪತಿಚ್ಚ ಸಮುಪಾದ’ದ ಸಾರವಾಗಿದೆ. ಅಂದರೆ ಮನುಷ್ಯನ ಹುಟ್ಟು ಸಾವಿನ ಭವಚಕ್ರದ ಸಂಕೇತವಾಗಿಯೂ ಧಮ್ಮಚಕ್ರ ಪ್ರತಿನಿಧಿಸುತ್ತದೆ.
ಹೀಗೆ ನಾನಾ ರೀತಿಗಳಲ್ಲಿ ಅರ್ಥಪೂರ್ಣವಾಗಿ, ವೈಚಾರಿಕವಾಗಿ ಸಾಮಾನ್ಯ ಜನರಿಗೆ ಬುದ್ಧರ ವಿಚಾರಗಳನ್ನ ತಲುಪಿಸುವಲ್ಲಿ ಚಕ್ರದ ಮಹತ್ವ ಎದ್ದು ಕಾಣುತ್ತದೆ. ಸಾಮ್ರಾಟ ಅಶೋಕನ ಕಾಲದಲ್ಲಿ ಸ್ಥಾಪಿಸಿದ ಪ್ರಮುಖ ಸ್ತೂಪಗಳಲ್ಲಿಯೂ ಅಂದರೆ ಸಾಂಚಿ ಸ್ತೂಪ, ಅಮರಾವತಿ ಮತ್ತು ಕರ್ನಾಟಕದ ಸನ್ನತಿಯ ಕನಗನಹಳ್ಳಿಯ ಧರ್ಮಚಕ್ರದ ಸಂಕೇತಗಳು ದೊರಕಿವೆ. ಇವು ಭಾರತದ ಆರ್ಕಿಯಾಲಜಿಯವರು ಇದುವರೆಗೂ ಶೋಧಿಸಿದ ಪ್ರಮುಖ ಬೌದ್ಧ ಸ್ತೂಪಗಳಾಗಿವೆ . ಸಾಮ್ರಾಟ ಅಶೋಕರು ಅವರ ಕಾಲಾವಧಿಯಲ್ಲಿ 84,000 ಸ್ತೂಪಗಳನ್ನು, ಸಾವಿರಾರು ವಿಹಾರಗಳನ್ನು, ಶಾಸನಗಳನ್ನು ನಿರ್ಮಿಸಿದ್ದಾರೆ. ಆದರೆ ಇದುವರೆಗೂ ನಮಗೆ ದೊರೆತಿರುವ ಸ್ತೂಪಗಳು, ಶಾಸನಗಳು, ವಿಹಾರಗಳು ಮತ್ತು ಪಿಲ್ಲರ್ ಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ. ಇನ್ನೂ ದೊರೆಯದ ಸಾಕಷ್ಟು ಸ್ತೂಪಗಳು ಶಾಸನಗಳು ವಿಹಾರಗಳು ಹೊರಗೆ ಬಾರದೆ ಹಾಗೆಯೇ ಉಳಿದಿವೆ.
ಬೋಧಿಸತ್ವ ಬಾಬಾ ಸಾಹೇಬ್ ಡಾ. ಬಿ.ಆರ್. ಅಂಬೇಡ್ಕರ್ ರವರು ಧಮ್ಮ ಸ್ವೀಕಾರ ಮಾಡಿದ್ದು, ಧರ್ಮಚಕ್ರ ಪ್ರವರ್ತನ ದಿನದಂದೇ ಎಂಬುದನ್ನು ನಾವು ಮರೆಯುವಂತಿಲ್ಲ. ಈ ಧರ್ಮಚಕ್ರದಲ್ಲಿ ನಾಲ್ಕು ಸಿಂಹಗಳು ಸಹ ಇವೆ. ಇದನ್ನ ಬಾಬಾ ಸಾಹೇಬರು ಐತಿಹಾಸಿಕ ಪ್ರಜ್ಞೆಯಿಂದ ನಮ್ಮ ಭಾರತದ ತ್ರಿವರ್ಣ ಧ್ವಜದಲ್ಲಿ ಅಳವಡಿಸುವಂತೆ ಮಾಡಿದರು ಹಾಗೂ ನಾಲ್ಕು ಸಿಂಹಗಳುಳ್ಳ ಚಿಹ್ನೆಯನ್ನು ರಾಷ್ಟ್ರ ಲಾಂಛನವಾಗಿ ಅಳವಡಿಸಿಕೊಳ್ಳುವಂತೆ ಜಾಗ್ರತೆ ವಹಿಸಿದರು. ಈ ನಾಲ್ಕು ಸಿಂಹಗಳುಳ್ಳ ಚಿನ್ಹೆಯು ಈ ಹಿಂದೆ ಮೌರ್ಯ ಸಾಮ್ರಾಜ್ಯದ ಲಾಂಛನವಾಗಿತ್ತು ಎಂಬುದು ನಮ್ಮ ಭಾರತೀಯರೆಲ್ಲರ ಹೆಮ್ಮೆಯ ವಿಷಯ.
ತಾವರೆ ಹೂ Lotus Flower
ತಾವರೆ ಹೂವಿಗೆ ಬೌದ್ಧ ಧರ್ಮದಲ್ಲಿ ಪ್ರಮುಖ ಸ್ಥಾನವಿದೆ. ಬುದ್ಧರು ‘ತಾವರೆ ಸೂತ್ರ’ ಎಂಬ ಒಂದು ದೊಡ್ಡ ಪ್ರವಚನವನ್ನೇ ನೀಡಿದ್ದಾರೆ. ತಾವರೆಯು ಮಣ್ಣಿನ ಬುದುರೆಯೊಳಗೆ ಹುಟ್ಟಿ ಬಂದರೂ, ನೀರಿಗೆ ಮತ್ತು ಮಣ್ಣಿಗೆ ಎಂದೂ ಅಂಟಿಕೊಳ್ಳದೆ ತನ್ನ ಶುದ್ಧತೆಯ ಸೊಬಗನ್ನ ತೋರಿ, ನೀರಿನಿಂದ ಹಾಗೂ ಮಣ್ಣಿನಿಂದ ಮೇಲೆ ಬಂದು ಅರಳಿ ತನ್ನ ಸೌಂದರ್ಯದ ಸೊಬಗನ್ನ ಜಗತ್ತಿಗೆ ತೋರಿಸುತ್ತದೆ. ಅದೇ ರೀತಿಯಲ್ಲಿ ಸಾಮಾನ್ಯ ಜನರು ಲೋಕದ ಸಾಂಸಾರಿಕ ಜೀವನದಲ್ಲಿ ಮುಳುಗಿರುತ್ತಾರೆ. ಅವರು ಆ ತಾವರೆ ಹೂವಿನ ರೀತಿಯಲ್ಲಿ ಯಾವುದಕ್ಕೂ ಅಂಟಿಕೊಳ್ಳದೆ, ಯಾವುದೇ ಕಳಂಕಗಳಿಲ್ಲದೆ, ಶುದ್ಧ ಜೀವನ ಮಾರ್ಗವನ್ನು ಅನುಸರಿಸಿ ಉತ್ತಮ ಜೀವನ ಸುಖವನ್ನು ಅನುಭವಿಸುವಂತೆ ಆಗಬೇಕೆಂದು ಬುದ್ಧರು ಹೇಳಿದ್ದಾರೆ. ಈ ಕಾರಣದಿಂದ ಬುದ್ಧರನ್ನ ತಾವರೆಯ ಹೂವಿನ ಮೇಲೆ ಕುಳಿತು ಧ್ಯಾನ ಮಾಡುತ್ತಿರುವಂತೆ ಚಿತ್ರಿಸಲಾಗಿದೆ. ಇದೊಂದು ಕಲ್ಪನಾ ಚಿತ್ರವಾಗಿದ್ದರೂ ಅದು ಹೊಮ್ಮಿಸುವ ಅರ್ಥ ಬಹಳ ಮುಖ್ಯವಾದದ್ದು ಎಂಬುದನ್ನ ಸಾಂಕೇತಿಕವಾಗಿ, ರೂಪಕವಾಗಿ ತೋರಿಸುವ ಪ್ರಯತ್ನದ ಭಾಗವಾಗಿ ಮಾತ್ರವಷ್ಟೇ ನಾವು ಅದನ್ನ ನೋಡಬೇಕು. ತಾವರೆ ಹೂವು ನಾನಾ ರೀತಿಯ ಬಣ್ಣಗಳಲ್ಲಿ ಹೂವುಗಳನ್ನು ಬಿಡುತ್ತದೆ. ಅವುಗಳಲ್ಲಿ ಬಿಳಿ ಬಣ್ಣದ ಹೂವುಗಳು ಕೆಂಪು ಬಣ್ಣದ ಮತ್ತು ನೀಲಿ ಬಣ್ಣದ ಹೂವುಗಳು ಪ್ರಮುಖವಾಗಿವೆ. ಇವುಗಳಲ್ಲಿ ಬಿಳಿ ಬಣ್ಣವು ಮಾನಸಿಕ ಶುದ್ಧತೆಯನ್ನು ಪ್ರತಿನಿಧಿಸುತ್ತದೆ ಹಾಗೆಯೇ ಕೆಂಪು ಬಣ್ಣವು ಕರುಣೆ ಮೈತ್ರಿಯನ್ನು ಪ್ರತಿನಿಧಿಸುತ್ತದೆ ಮತ್ತು ನೀಲಿ ಬಣ್ಣವು ಜ್ಞಾನ, ಪ್ರಬುದ್ಧತೆಯನ್ನು ಪ್ರತಿನಿಧಿಸುತ್ತದೆ. ಯೋಗದಲ್ಲಿಯೂ ಕೂಡ ಕುಳಿತುಕೊಳ್ಳುವ ಒಂದು ಭಂಗಿ ಇದೆ. ಅದನ್ನ ಪದ್ಮಾಸನ ಎಂದು ಕರೆಯುತ್ತಾರೆ. ಈ ಎಲ್ಲಾ ಕಾರಣಗಳಿಗಾಗಿ ತಾವರೆ ಹೂವು ಬೌದ್ಧ ಧರ್ಮದ ಸಾಹಿತ್ಯದಲ್ಲಿ ತನ್ನದೇ ಆದ ಅಸ್ತಿತ್ವವನ್ನು ಹೊಂದಿದೆ.
ಸ್ತೂಪ
ಸ್ತೂಪದ ಕಲ್ಪನೆಯು ಬೌದ್ಧ ಧರ್ಮ ಹುಟ್ಟುವ ಮೊದಲು ಜಾರಿಯಲ್ಲಿತ್ತು. ಆದರೆ ಅದರ ಉದ್ದೇಶಗಳು ಬೇರೆ ಇತ್ತು. ಈಜಿಪ್ಟ್ ನಲ್ಲಿ ಈ ರೀತಿಯ ಸ್ತೂಪಗಳನ್ನು ಮಮ್ಮಿಗಳೆಂದು ಕರೆಯುತ್ತಿದ್ದರು. ಈ ಸ್ತೂಪಗಳ ಒಳಗೆ ಸತ್ತ ಮನುಷ್ಯರನ್ನು ಇಟ್ಟು ಅವರಿಗೆ ಇಷ್ಟವಾದ ವಸ್ತುಗಳನ್ನು ಇಟ್ಟು ಪೂಜಿಸುತ್ತಿದ್ದರು. ಆದರೆ ಬೌದ್ಧ ಧರ್ಮದಲ್ಲಿ ಸ್ತೂಪಗಳಿಗೆ ಅದಕ್ಕಿಂತಲೂ ಶ್ರೇಷ್ಠವಾದ ಸ್ಥಾನವನ್ನು ನೀಡಿದ್ದಾರೆ. ಸಾಮ್ರಾಟ ಅಶೋಕನ ಕಾಲದಲ್ಲಿ ಬುದ್ಧರು ಎಲ್ಲೆಲ್ಲಿ ಬೋಧನೆ ಮಾಡಿದ್ದಾರೆಯೋ ಅವುಗಳನ್ನ ಆಧರಿಸಿ, ಆ ಸ್ಥಳದ ಮಹತ್ವದ ನೆನಪಿಗಾಗಿ ಎಂಬತ್ತು ನಾಲ್ಕು ಸಾವಿರ ಸ್ತೂಪಗಳನ್ನ ನಿರ್ಮಿಸಿದ. ಈ ಸ್ತೂಪಗಳು ಬೌದ್ಧ ಧರ್ಮದ ವಿಚಾರಗಳನ್ನು, ಬುದ್ಧರ ಜೀವನ ಚರಿತ್ರೆಗೆ ಸಂಬಂಧಿಸಿದ ಪ್ರಮುಖ ಘಟನೆಗಳನ್ನು, ಬುದ್ಧರ ತಂದೆ ತಾಯಿಗಳು ಗುರುಗಳು ಅವರ ಪ್ರಮುಖ ಶಿಷ್ಯರು ಮುಂತಾದ ಘಟನೆಗಳನ್ನು ಒಳಗೊಂಡಿದೆ. ಅಷ್ಟೇ ಅಲ್ಲದೆ ಬುದ್ಧರು ಬೋಧನೆ ಮಾಡುತ್ತಿರುವ, ಧ್ಯಾನ ಮಾಡುತ್ತಿರುವ ನಾನಾ ರೀತಿಯ ಶಿಲ್ಪಗಳನ್ನು ಕೆತ್ತಲಾಗಿದೆ. ಬುದ್ಧದಮ್ಮದ ಅನೇಕ ವಿಚಾರಗಳನ್ನು ಸಾಮಾನ್ಯ ಜನರಿಗೆ ಅರ್ಥ ಮಾಡಿಸಲು ಈ ರೀತಿಯ ಸ್ತೂಪಗಳನ್ನು ನಿರ್ಮಿಸಿದ್ದಾರೆ. ಈ ಸ್ತೂಪಗಳಲ್ಲಿ ಬುದ್ಧರು ಜ್ಞಾನೋದಯ ಪಡೆದ, ನಿಬ್ಬಾಣ ಹೊಂದಿದ ಚಿತ್ರಗಳನ್ನು ಸಹ ಒಳಗೊಂಡಿದೆ. ಈ ಸ್ತೂಪಗಳು ಬುದ್ಧರ ಜ್ಞಾನೋದಯ ಕಾನೂನಿನ ಚಕ್ರವಾಗಿದೆ ಮತ್ತು ಬಿಡುಗಡೆಯ ಮಾರ್ಗವಾಗಿಯೂ ಕೂಡ ಅರ್ಥ ಬರುವಂತೆ ಚಿತ್ರಿಸಿದ್ದಾರೆ. ಸ್ತೂಪದೊಳಗಡೆ ಬುದ್ಧರಿಗೆ ಸೇರಿದೆ ಎನ್ನಲಾದ ಮೂಳೆಗಳು, ಕೂದಲು ಮತ್ತು ಉಗುರು ಇವುಗಳನ್ನ ಇಟ್ಟು ಕಟ್ಟಿಸುವ ರೂಡಿ ಮುನ್ನೆಲೆಗೆ ಬಂದಿದೆ.
ವಜ್ರ Diamond
ಬೌದ್ಧ ಧರ್ಮದಲ್ಲಿ ಬುದ್ಧರ ಮಹಾಪರಿನಿಬ್ಬಾಣವಾದ ನಂತರ ಹಲವಾರು ಪಂಥಗಳು ಅಸ್ತಿತ್ವಕ್ಕೆ ಬಂದವು. ಹೀನಯಾನ ಮಹಾಯಾನ ವಜ್ರಯಾನ ಮತ್ತು ತಾಂತ್ರಿಕಯಾನ ಇನ್ನೂ ಮುಂದುವರಿದು ಶ್ರೀಲಂಕಾ ದೇಶದಲ್ಲಿ ಥೇರವಾದ ಹಾಗೆಯೇ ಭಾರತದಲ್ಲಿ ಬೋಧಿ ಸತ್ವ ಬಾಬಾ ಸಾಹೇಬರ ನಿಬ್ಬಾಣನಂತರ ನವಯಾನ ಎಂಬ ಪಂಥಗಳು ಚಾಲ್ತಿಗೆ ಬಂದವು. ಮೂಲದಲ್ಲಿ ಇವುಗಳೆಲ್ಲ ಬುದ್ಧರ ತತ್ವಗಳನ್ನೇ ಬೋಧಿಸಿದರೂ ಹೋಗುವ ಮಾರ್ಗ ಭಿನ್ನವಾಗಿದೆ. ಈ ಎಲ್ಲ ಪಂಥಗಳು ಬುದ್ಧರ ಪಂಚಶೀಲಗಳನ್ನು ಅಷ್ಟಾಂಗ ಮಾರ್ಗವನ್ನು ಮತ್ತು ದಶಪಾರಮಿತಗಳನ್ನು ಒಪ್ಪಿಕೊಂಡಿವೆ. ಆದರೆ ಬುದ್ಧರನ್ನು ಪೂಜಿಸುವ ಆರಾಧಿಸುವ ಅನುಸರಿಸುವ ಪ್ರತಿನಿಧಿಸುವ ಸಂಕೇತಗಳಲ್ಲಿ ಮಾತ್ರ ಭಿನ್ನ-ಭಿನ್ನವಾಗಿವೆ.
ವಜ್ರಕ್ಕೆ ಸಂಬಂಧಿಸಿದಂತೆ ಹೇಳುವುದಾದರೆ ವಜ್ರವು ಫಳ ಫಳವೆಂದು ಹೊಳೆಯುತ್ತದೆ. ಮಾನವನ ಬುದ್ಧಿಶಕ್ತಿಯು ಈ ವಜ್ರದಂತೆ ಹೊಳೆಯಬೇಕೆಂಬುದೇ ಇದರ ಅರ್ಥ. ವಜ್ರವನ್ನು ಸಾಂಕೇತಿಕವಾಗಿ, ರೂಪಕವಾಗಿ ಬೌದ್ಧ ಧರ್ಮದಲ್ಲಿ ಬುದ್ಧರ ವಿಚಾರಗಳನ್ನ ತಿಳಿಸುವುದಕ್ಕಾಗಿ ಈ ರೀತಿಯಲ್ಲಿ ಬಳಸಿದ್ದಾರೆ.
ಬುದ್ಧರು ‘ವಜ್ರ ಸೂತ್ರ’ ಎಂಬ ಒಂದು ದೊಡ್ಡ ಪ್ರವಚನವನ್ನು ನೀಡಿದ್ದಾರೆ. ಮನಸ್ಸಿನ ಬುದ್ಧಿಶಕ್ತಿ ಮತ್ತು ಶುದ್ಧತೆಯ ರೂಪಕವಾಗಿ ಈ ವಜ್ರವು ಸಂಕೇತಿಸುತ್ತದೆ. ಯೋಗದಲ್ಲಿಯೂ ಕೂಡ ಒಂದು ಆಸನವಿದೆ. ಅದನ್ನ ವಜ್ರಾಸನ ಎಂಬ ಎಂದು ಕರೆಯುತ್ತಾರೆ.
ತ್ರಿಕೋನಾಕಾರದ ವಜ್ರ
ಭಾರತದ ಒಡಿಸ್ಸಾದಲ್ಲಿ ರತ್ನಗಿರಿ ಲಲಿತ ಗಿರಿ ಮತ್ತು ಉದಯಗಿರಿ ಎಂಬ ಮೂರು ಬಹಳ ಮುಖ್ಯವಾದ ಕೇಂದ್ರಗಳಿವೆ. ಇವು ವಜ್ರಯಾನ ಬೌದ್ಧ ಧರ್ಮದ ಕೇಂದ್ರಗಳಾಗಿವೆ. ಬಿಹಾರದ ಬೋಧಗಯಾದಲ್ಲಿ ವಜ್ರಾಸನದಲ್ಲಿ ಕುಳಿತ ಬುದ್ಧರ ಕಲ್ಲಿನ ಮೂರ್ತಿ ಇದೆ. ಬುದ್ಧರು ಅರಳಿ ಮರದ ಕೆಳಗೆ ಜ್ಞಾನೋದಯ ಪಡೆದಾಗ ಅವರು ಕುಳಿತ ಭಂಗಿಯು ವಜ್ರಾಸನವಾಗಿತ್ತು ಎಂದು ಬೌದ್ಧ ಧರ್ಮದ ಗ್ರಂಥಗಳಲ್ಲಿ ಉಲ್ಲೇಖವಾಗಿದೆ. ಅಜಂತ ಗುಹೆಗಳಲ್ಲಿಯೂ ಕೂಡ ವಜ್ರಾಸನದಲ್ಲಿ ಕುಳಿತ ಬುದ್ಧರ ಶಿಲ್ಪಗಳು ದೊರೆತಿವೆ.
ಜಿಂಕೆ ಆನೆ ಮತ್ತು ನಾಗರಹಾವು
ಬೌದ್ಧ ಧರ್ಮದಲ್ಲಿ ಜಿಂಕೆ ಆನೆ ಮತ್ತು ನಾಗರಹಾವಿಗೆ ವಿಶೇಷವಾದ ಸ್ಥಾನವಿದೆ. ಬುದ್ಧರು ಮೊದಲು ಪ್ರವಚನ ನೀಡಿದ್ದು ಸಾರನಾಥದ ಜಿಂಕೆವನದಲ್ಲಿ. ತದನಂತರ ಅಲ್ಲಿ ಬೌದ್ಧ ಧರ್ಮದ ವಿಚಾರಗಳನ್ನ ಬೋಧಿಸುವ ಕೇಂದ್ರವಾಗಿ ಅದು ಮುಂದುವರಿಯಿತು.
ಪ್ರಾಣಿ ಪಕ್ಷಿಗಳಿಗೆ ಬುದ್ಧರು, ಮನುಷ್ಯರಿಗೆ ನೀಡಿದಷ್ಟೇ ಪ್ರಾಮುಖ್ಯತೆಯನ್ನು ನೀಡಿದ್ದರು. ಇವುಗಳನ್ನು ಅವರ ಜೀವನ ಚರಿತ್ರೆಯ ಅಥವಾ ಬೋಧನೆಯಲ್ಲಿ ಬರುವ ಹಲವಾರು ಕಥೆಗಳಲ್ಲಿ ನಾವು ನೋಡಬಹುದು. ಹಂಸಪಕ್ಷಿ ಮತ್ತು ದೇವದತ್ತ ಹಾಗೂ ಸಿದ್ದಾರ್ಥ ಗೌತಮರ ನಡುವೆ ನಡೆದ ಘಟನೆಯು ಒಂದು ಪ್ರಸಿದ್ಧ ಕಥೆಯಾಗಿ ಜನಪ್ರಿಯವಾಗಿದೆ. ನಾಲಗಿರಿ ಎಂಬ ಆನೆಯನ್ನು ದೇವದತ್ತ ಬುದ್ಧರನ್ನ ಹತ್ಯೆ ಮಾಡಲು ಕಳಿಸುತ್ತಾನೆ. ಆದರೆ ಆ ಮದವೇರಿದ ಆನೆಯೂ ಬುದ್ಧರ ಬಳಿ ಬಂದು ಶರಣಾಗಿ ಬುದ್ಧರಿಗೆ ನಮಸ್ಕಾರ ಮಾಡುತ್ತದೆ ಎಂಬ ಕಥೆಯು ಕೂಡ ತುಂಬಾ ಜನಪ್ರಿಯವಾಗಿದೆ. ಗೌತಮ ಸಿದ್ದಾರ್ಥ ಮಹಾಮಾಯೆಯ ಗರ್ಭದಲ್ಲಿರುವಾಗ ಐರಾವತ ಆನೆಗಳು ಆ ಮಹಾಮಾಯೆಯನ್ನು ಮೇಲಕ್ಕೆತ್ತಿಕೊಂಡು ಹೋಗುವ ಪ್ರಸಂಗವಿದೆ ಇದು ಕೂಡ ಅತ್ಯಂತ ಜನಪ್ರಿಯವಾದ ಕಥೆಯಾಗಿದೆ.
ನಾಗ ಜನರು ಬೌದ್ಧ ಧರ್ಮವನ್ನು ಇಡೀ ಏಷ್ಯಾ ಖಂಡಕ್ಕೆ ಪ್ರಚಾರ ಮಾಡಿದರು ಎಂಬುದಕ್ಕೆ ಐತಿಹಾಸಿಕ ದಾಖಲೆಗಳನ್ನು ಬಾಬಾ ಸಾಹೇಬರು ತಮ್ಮ ಗ್ರಂಥಗಳಲ್ಲಿ ಉಲ್ಲೇಖಿಸಿದ್ದಾರೆ. ನಾಗಾ ಜನರ ಚಿನ್ಹೆ ನಾಗರಹಾವು. ನಾಗಕನ್ನಿಯರು ನಾಗರಾಜರು ಈ ದೇಶ ಆಳಿದ ಮೂಲ ನಿವಾಸಿಗಳು. ಮಚ್ಚಿಲಿಂದ ಎಂಬ ನಾಗರಾಜ ಬುದ್ಧರ ವಿಚಾರಗಳಿಗೆ ಮಾನ್ಯತೆ ನೀಡಿದ ಒಂದು ಕಥೆಯು ತುಂಬಾ ಜನಪ್ರಿಯವಾಗಿದೆ. ಹೀಗೆ ಬೌದ್ಧ ಧರ್ಮದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಈ ಪ್ರಾಣಿಗಳು ಮಾನ್ಯತೆ ಪಡೆದಿರುವುದು ತಿಳಿದು ಬರುತ್ತದೆ. ಇವೆಲ್ಲವನ್ನೂ ಒಂದು ರೂಪಕವಾಗಿ ಕಥೆಗಳಾಗಿ ಜನಮಾನಸದಲ್ಲಿ ಬೌದ್ಧ ಧರ್ಮದ ವಿಚಾರಗಳನ್ನು ತಲುಪಿಸಲು ಬಳಸಲಾಗಿದೆ ಎಂಬುದು ನಮಗೆ ತಿಳಿದು ಬರುವ ವಿಚಾರವಾಗಿದೆ.
ಇನ್ನು ಹಲವಾರು ಚಿನ್ಹೆಗಳು ಸಂಕೇತಗಳು ಬೌದ್ಧ ಧರ್ಮದಲ್ಲಿ ಬರುತ್ತವೆ. ಆದರೆ ಅತಿ ಹೆಚ್ಚು ಮತ್ತು ಪ್ರಮುಖ ಪ್ರಭಾವ ಬೀರಿದ ಚಿನ್ಹೆಗಳನ್ನ ಮತ್ತು ಸಂಕೇತಗಳನ್ನ ಮಾತ್ರ ಇದುವರೆಗೂ ವಿಶ್ಲೇಷಿಸಲಾಗಿದೆ. ಈ ಚಿನ್ಹೆಗಳು ಮತ್ತು ಸಂಕೇತಗಳು ಜನರ ಮೇಲೆ ಇಂದಿಗೂ ತಮ್ಮ ಪ್ರಭಾವ ಬೀರುತ್ತಿರುವ ಧಾರ್ಮಿಕ ಸಂಕೇತಗಳಾಗಿವೆ . ಈ ಸಂಕೇತಗಳನ್ನು ಇನ್ನೂ ಪರಿಣಾಮಕಾರಿಯಾಗಿ ಬಳಸುವಲ್ಲಿ ಆಧುನಿಕ ತಂತ್ರಜ್ಞಾನ ತುಂಬಾ ಉಪಕಾರಿಯಾಗಿದೆ. ಪ್ರಪಂಚದ ಬೌದ್ಧರೆಲ್ಲರನ್ನೂ ಒಗ್ಗೂಡಿಸುವ ಪ್ರತಿನಿಧಿಸುವ ಮಾದರಿಗಳಾಗಿ ಈ ಚಿಹ್ನೆಗಳು ಮತ್ತು ಸಂಕೇತಗಳು ಕೆಲಸ ಮಾಡಬಹುದಾದ ಸಾಧ್ಯತೆ ಹೆಚ್ಚಿದೆ. ಈ ಕಡೆಗೆ ಬೌದ್ಧ ಸಂಘಗಳು ಗಮನ ನೀಡಬೇಕಾಗಿದೆ.
ಡಾ ನಾಗೇಶ್ ಮೌರ್ಯ
ಬೌದ್ಧ ಚಿಂತಕರು, ಹಿರಿಯ ಪ್ರಬಂಧಕರು, ಕೆನರಾ ಬ್ಯಾಂಕ್ ಬೆಂಗಳೂರು
ಮೊ : 9743907399
ಇದನ್ನೂ ಓದಿ- http://“ಪುನರ್ಜನ್ಮ ಅಲ್ಲ ಪುನರ್ಭವ” https://kannadaplanet.com/punrjama-alla-punarbhava/