ಅಕ್ರಮ ಗಣಿಗಾರಿಕೆ -ಕೋರ್ಟ್‌ ನಿಂದ ಛೀಮಾರಿ ಹಾಕಿಸಿಕೊಂಡ ಧರ್ಮಸ್ಥಳದ ಧಣಿ

Most read

ಧರ್ಮಸ್ಥಳದಲ್ಲಿ ಕೊಲೆ, ಅತ್ಯಾಚಾರ, ಹುಡುಗಿಯರ ನಾಪತ್ತೆ, ಶವಗಳ ಹೂತಿಟ್ಟ ಪ್ರಕರಣಗಳ ಬಗ್ಗೆ ಪ್ರಶ್ನೆ ಕೇಳಿದರೆ ಅದು ದೇವಸ್ಥಾನದ ಮೇಲಿನ ಟಾರ್ಗೆಟ್ ಎನ್ನುವವರು, ಗಣಿಗಾರಿಕೆಯ ಬಗ್ಗೆ ಉತ್ತರ ಕೊಡಬೇಕು. ನಿರ್ಬಂಧಿತ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಿ ನೂರಾರು ದಲಿತರ ಮನೆಗಳು ಕುಸಿಯುವಂತೆ ಮಾಡಿದ್ದೇ ಅಲ್ಲದೆ, ಅದನ್ನು ಪ್ರಶ್ನಿಸಿದವರ ಮೇಲೆ ದೌರ್ಜನ್ಯ ನಡೆಸಿದ್ದು ಧರ್ಮಕಾರ್ಯದಲ್ಲೇ ಬರುತ್ತದೆಯೇ? – ನವೀನ್ ಸೂರಿಂಜೆ, ಪತ್ರಕರ್ತರು.

ಧರ್ಮಸ್ಥಳ ಸಮೀಪದ ಅಂಡಿಂಜೆ ಗ್ರಾಮ ಪಂಚಾಯತ್‌ ನ ದೇವಮಾನವರು ಗಣಿಗಾರಿಕೆ ನಡೆಸುತ್ತಿದ್ದರು. ಗಣಿಗಾರಿಕೆಗೆ ಅವರು ಸ್ಥಳೀಯ ಪಂಚಾಯತ್‌ನಿಂದ ಅನುಮತಿಯನ್ನೂ ಪಡೆದಿದ್ದರು. ಗಣಿಗಾರಿಕೆಯ ಅನುಮತಿ ಪತ್ರದಲ್ಲಿ ‘ಹರ್ಷೇಂದ್ರ ಕುಮಾರ್, ಸನ್ ಆಫ್ ರತ್ನ ವರ್ಮ ಹೆಗ್ಗಡೆ, ಬೀಡು ಮನೆ, ಧರ್ಮಸ್ಥಳ’ ಎಂದು ವಿಳಾಸವನ್ನು ನಮೂದಿಸಲಾಗಿತ್ತು. ಅರ್ಥಾತ್ ಧರ್ಮಾಧಿಕಾರಿಗಳ ಫ್ಯಾಮಿಲಿಯವರು ಅಂಡಿಂಜೆಯ ಅಭಯಾರಣ್ಯದಲ್ಲಿ ಗಣಿಗಾರಿಕೆ ಮಾಡುತ್ತಿದ್ದರು. ಆ ಗಣಿಗಾರಿಕೆಯಿಂದ ಪಕ್ಕದ ದಲಿತ ಕುಟುಂಬಗಳು ವಿಪರೀತ ಸಂಕಟ ಅನುಭವಿಸುತ್ತಿದ್ದರು. ರಾತ್ರೋರಾತ್ರಿ ನಡೆಯುವ ಬಂಡೆ  ಸ್ಫೋಟದಲ್ಲಿ ದಲಿತರ ಹಂಚಿನ ಮನೆಗಳು ಛಿದ್ರಛಿದ್ರವಾಗುತ್ತಿದ್ದವು. ದೇವಮಾನವರ ಕುಟುಂಬ ನಡೆಸುವ ಗಣಿಗಾರಿಕೆಯಾದ್ದರಿಂದ ದಲಿತರು ಎಲ್ಲವನ್ನೂ ಸಹಿಸಿಕೊಂಡು ಸುಮ್ಮನಿರಬೇಕು ಎಂದು ಅವರು ಬಯಸಿದ್ದರು.

ಇದು ಸೌಜನ್ಯ ಅತ್ಯಾಚಾರ-ಕೊಲೆ ನಡೆಯುವುದಕ್ಕೂ ಸರಿಯಾಗಿ ಒಂದು ವರ್ಷದ ಹಿಂದಿನ ಘಟನೆ. ಅಂದರೆ, 2011 ಅಕ್ಟೋಬರ್ ತಿಂಗಳು. ಆಗಿನ್ನೂ ‘ಅವರು’ ದೇವಮಾನವರಾಗಿಯೇ ಇದ್ದರು. 2011 ಜೂನ್ ನಲ್ಲಿ ಬಿ ಎಸ್ ಯಡಿಯೂರಪ್ಪ ಮತ್ತು ಹೆಚ್ ಡಿ ಕುಮಾರಸ್ವಾಮಿಯವರು ಧರ್ಮಸ್ಥಳದಲ್ಲಿ ‘ಆಣೆ ಪ್ರಮಾಣ’ ಮಾಡಿದ್ದರಿಂದ ಆ ‘ದೇವಮಾನವ’ನ ಖ್ಯಾತಿ ರಾಷ್ಟ್ರಮಟ್ಟದಲ್ಲಿ ಮಿಂಚುತ್ತಿದ್ದ ದಿನಗಳವು.

ಧರ್ಮಸ್ಥಳ ಸಮೀಪದ ಬೆಳ್ತಂಗಡಿ ತಾಲೂಕಿನ ಅಂಡಿಂಜೆಯ ಹೋರಾಟಗಾರ ಅಶೋಕ್ ಅಂಡಿಂಜೆಯವರು ಧರ್ಮಸ್ಥಳದ ಮುಂಡಾಸುಧಾರಿಯ ಗಣಿಗಾರಿಕೆಯ ವಿರುದ್ಧ ಹೋರಾಟ ನಡೆಸುತ್ತಿದ್ದರು. ಅದೊಂದು ದಿನ ನನಗೆ ಕರೆ ಮಾಡಿದ ಅಶೋಕ್ ಅಂಡಿಂಜೆಯವರು ‘ಮುಂಡಾಸುಧಾರಿಯ ಗಣಿಗಾರಿಕೆಯನ್ನು ಯಾರೂ ವರದಿ ಮಾಡುತ್ತಿಲ್ಲ. ಯಾವ ಪತ್ರಕರ್ತರೂ ಇಲ್ಲಿಗೆ ಭೇಟಿ ನೀಡುತ್ತಿಲ್ಲ. ಪತ್ರಕರ್ತರು ಬಿಡಿ, ಹಣ ಕೊಡುತ್ತೇನೆ ಎಂದರೂ ಯಾವ ಸ್ಟುಡಿಯೋಗಳೂ ಗಣಿಗಾರಿಕೆಯ ಫೋಟೋ ತೆಗೆದುಕೊಡಲೂ ಸಿದ್ಧರಿಲ್ಲ. ಹಾಗಾಗಿ ಗಣಿ ಇಲಾಖೆ, ಲೋಕಾಯುಕ್ತಕ್ಕೆ ದೂರು ಕೊಡಲು ಕನಿಷ್ಠ ಫೋಟೋಗಳೂ ನಮ್ಮ ಬಳಿ ಇಲ್ಲ’ ಎಂದರು. 2011 ಅನ್ನೋದು ಇನ್ನೂ ಎಲ್ಲರ ಕೈಗೂ ಅ್ಯಂಡ್ರಾಯ್ಡ್ ಫೋನ್‌ಗಳು ಬಂದಿಲ್ಲದ ಕಾಲ.

ಅಂದು ನಾನು- ಕ್ಯಾಮರಾ ಜರ್ನಲಿಸ್ಟ್ ಮತ್ತು ದಿ ಹಿಂದೂ ಪತ್ರಿಕೆಯಲ್ಲಿದ್ದ ಗೆಳತಿ ಅನಿಶಾ ಶೇಟ್ ಬೆಳ್ತಂಗಡಿ ಅಭಯಾರಣ್ಯದಲ್ಲಿರುವ ಅಂಡಿಂಜೆಯತ್ತ ಹೊರಟೆವು. ಕೆಲ ಹೊತ್ತಿನಲ್ಲೇ ನಾವು ಮುಂಡಾಸುಧಾರಿಯ ಕುಟುಂಬ ಗಣಿಗಾರಿಕೆ ನಡೆಸುತ್ತಿದ್ದ ಅಂಡಿಂಜೆಯ ದೊಡ್ಡ ಬಂಡೆಗಲ್ಲಿನ ತುತ್ತತುದಿಯಲ್ಲಿದ್ವಿ. ಆ ಬಂಡೆಯ ಬುಡದಲ್ಲಿ ಗಣಿಗಾರಿಕೆ ನಡೆಯುತ್ತಿತ್ತು. ಗಣಿಗಾರಿಕೆ ನಡೆಯುತ್ತಿದ್ದ ಬಂಡೆಯ ಮೇಲೆ ನಿಂತು ನೋಡಿದರೆ ಕುದುರೆಮುಖ ರಾಷ್ಟ್ರೀಯ ಉದ್ಯಾನವನದ ವಿಹಂಗಮ ನೋಟ ಕಾಣುತ್ತಿತ್ತು. ನಾವು ನಿಂತಿದ್ದ ಕಲ್ಲಿನಲ್ಲಿಯೇ ನಿನ್ನೆ ‘ಪಟ್ಟೆ ಹುಲಿ’ ಕೂತಿತ್ತು ಎಂದು ಸ್ಥಳೀಯರು ಮಾಹಿತಿ ನೀಡಿದ್ದರು. ಅಳಿವಿನಂಚಿನಲ್ಲಿರುವ ಪಟ್ಟೆ ಹುಲಿಯಂತಹ ಸ್ವಲ್ಪ ಸಣ್ಣ ಗಾತ್ರದ ಪಶ್ಚಿಮ ಘಟ್ಟದ ಕಾಡಿನ ಹುಲಿಗಳು ವಾಸವಾಗುವಂತಹ ಪ್ರದೇಶದಲ್ಲಿ ದೇವಮಾನವರು ಗಣಿಗಾರಿಕೆ ನಡೆಸುತ್ತಿದ್ದರು. ತನ್ನ ದನವನ್ನು ಬೇಟೆಯಾಡುತ್ತೆ ಎಂದು ಹುಲಿಗಳಿಗೆ ವಿಷಪ್ರಾಶನ ಮಾಡಿದ ರೈತರನ್ನು ವಿಲನ್‌ಗಳಂತೆ ನೋಡುವವರು, ನೂರಾರು ಪಟ್ಟೆ ಹುಲಿಯ ವಿನಾಶಕ್ಕೆ ಕಾರಣರಾದ ಗಣಿ ಮಾಲೀಕರನ್ನು ‘ದೇವ ಮಾನವರು’ ಎಂದು ಸಂಬೋಧಿಸುತ್ತಾರೆ. ರಾಷ್ಟ್ರೀಯ ಉದ್ಯಾನವನದೊಳಗೆ ಮಲೆಕುಡಿಯರು ಸೇರಿದಂತೆ ಯಾವುದೇ ಆದಿವಾಸಿಗಳು ವಾಸಿಸಬಾರದು ಎನ್ನುವ ವಿದೇಶಿ ವ್ಯವಹಾರದ ಎನ್‌.ಜಿ.ಒಗಳು ಮತ್ತು ಸರ್ಕಾರ ದೇವಮಾನವರ ಗಣಿಗಾರಿಕೆಯ ಬಗ್ಗೆ ಮಾತನಾಡುವುದಿಲ್ಲ.

ನಾವು ಬಂಡೆಯ ತುದಿಯಲ್ಲಿ ನಿಂತು ಗಣಿಗಾರಿಕೆ ಮತ್ತು ಅಭಯಾರಣ್ಯದ ದಟ್ಟ ಕಾಡನ್ನು ಚಿತ್ರೀಕರಣ ಮಾಡುತ್ತಿರಬೇಕಾದರೆ ಒಂದು ದೊಡ್ಡ ಗೂಂಡಾಪಡೆ ಬಂಡೆ ಏರುತ್ತಿತ್ತು. ಅಪಾಯದ ಮುನ್ಸೂಚನೆ ಇದ್ದರೂ ನಾನು ಅನಿಶಾ ಧೃತಿಗೆಡದೇ ಗೂಂಡಾಗಳಿದ್ದ ಕಡೆಗೇ ಕೆಳಗಿಳಿದೆವು. ನಮಗೂ ಗೂಂಡಾಗಳಿಗೂ ಮಾತಿನ ಚಕಮಕಿ ಆಯ್ತು. ನಾವು ಅಭಯಾರಣ್ಯ ಎಂಬುದಕ್ಕೂ, ಗಣಿಗಾರಿಕೆ ಎಂಬುದಕ್ಕೂ ದಾಖಲೆಗಳನ್ನು ತೋರಿಸುತ್ತಿದ್ದೆವು. ಇನ್ನೇನು ಹಲ್ಲೆ ನಡೆಸುತ್ತಾರೆ ಎಂದುಕೊಳ್ಳುವಾಗಲೇ ಗಣಿಗಾರಿಕೆಯ ಸುತ್ತಲಿದ್ದ ದಲಿತ ಕುಟುಂಬಗಳು ಎದ್ದು ಭಾರೀ ಪ್ರತಿರೋಧ ತೋರಿಸಿದರು. ದೇವಮಾನವ ಎಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತರಾಗಿದ್ದವರಿಗೆ ಹಿಗ್ಗಾಮುಗ್ಗ ಬೈಯ್ದು, ರೌಡಿಗಳನ್ನು ಓಡಿಸಿದರು. ಈ ಎಲ್ಲಾ ದೃಶ್ಯಾವಳಿಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದವು.

ಗಣಿಗಾರಿಕೆಯ ಬಗ್ಗೆ ಮಾತಾಡುತ್ತಿರುವ ಗ್ರಾಮಸ್ಥರು

ನಾನು ಗಣಿಗಾರಿಕೆಯ ದೃಶ್ಯಾವಳಿಯನ್ನು ಪೆನ್ ಡ್ರೈವ್ ಗೆ ಹಾಕಿ ಗ್ರಾಮಸ್ಥರಿಗೆ ನೀಡಿದೆ. ಹೈಕೋರ್ಟ್ ನ ಹಿರಿಯ ವಕೀಲರಾಗಿದ್ದ, ಹೋರಾಟಗಾರ, ಚಿಂತಕ ಡಾ ಸಿ ಎಸ್ ದ್ವಾರಕಾನಾಥ್ ರವರ ದೂರವಾಣಿ ಸಂಖ್ಯೆ ನೀಡಿ ಸಂಪರ್ಕ ಮಾಡುವಂತೆ ಗ್ರಾಮಸ್ಥರಿಗೆ ಹೇಳಿದೆವು. ಮರುದಿನ ಅನಿಶಾ ಈ ಬಗ್ಗೆ ಬರೆದ ವರದಿ “ದ ಹಿಂದೂ” ಪತ್ರಿಕೆಯ ರಾಜ್ಯಪುಟದಲ್ಲಿ ಪ್ರಕಟವಾಯಿತು. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಅರಣ್ಯದೊಳಗೆ ಗಣಿಗಾರಿಕೆ ನಡೆಯುತ್ತಿರುವುದು ಈ ಮೂಲಕ ಲೋಕಾಯುಕ್ತರ ಗಮನಕ್ಕೆ ಬಂತು. ಲೋಕಾಯುಕ್ತರ ಸೂಚನೆಯ ಮೇರೆಗೆ ಗಣಿ ಮತ್ತು ಭೂವಿಜ್ಞಾನ ಇಲಾಖೆಯು ದೇವಮಾನವರ ಗಣಿಗಾರಿಕೆಯ ಲೈಸೆನ್ಸ್ ರದ್ದು ಮಾಡಿದರು.

ನವೀನ್‌ ಸೂರಿಂಜೆ

ಪತ್ರಕರ್ತರು

ಇದನ್ನೂ ಓದಿ- http://ಧರ್ಮಸ್ಥಳದಲ್ಲಿ ಹೂತಿಟ್ಟ ತಲೆಬುರುಡೆಗಳು ಹೇಳುತ್ತಿರುವ ನೋವಿನ ಕಥೆಗಳು….https://kannadaplanet.com/the-skulls-buried-in-dharmasthala-tell-painful-stories/

More articles

Latest article