ʼಮಂಡ್ಯದಲ್ಲಿ ನಡೆಯುತ್ತಿರುವ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟದ ವ್ಯವಸ್ಥೆ ಮಾಡದಿದ್ದರೆ, ನಾವೇ ಮನೆಗೊಂದು ಕೋಳಿ ಸಂಗ್ರಹಿಸಿ ಮಾಂಸದೂಟ ಹಾಕಿಸುತ್ತೇವೆʼ ಎಂದು ಮಂಡ್ಯದ ಬಾಡೂಟ ಬಳಗದ ಸದಸ್ಯರು ತಿಳಿಸಿದರು.
ಮಂಡ್ಯದಲ್ಲಿನ ಕಾವೇರಿ ಉದ್ಯಾನವನದಲ್ಲಿ ಸಭೆ ಸೇರಿದ ವಿವಿಧ ಸಂಘಟನೆಗಳ ಮುಖಂಡರು, ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಜಿಲ್ಲಾಡಳಿತವು ಸಮ್ಮೇಳನದಲ್ಲಿ ಮಾಂಸದೂಟವನ್ನು ಹಾಕಿಸದಿದ್ದರೆ, ನಾವೇ ಸ್ವಯಂಪ್ರೇರಿತವಾಗಿ ಸಮ್ಮೇಳನದ ಮೊದಲ ದಿನ ಮೊಟ್ಟೆ, 2ನೇ ದಿನ ಮುದ್ದೆ-ನಾಟಿ ಕೋಳಿ ಸಾರು, 3ನೇ ದಿನ ಚಿಕನ್ ಬಿರಿಯಾನಿಯನ್ನು ಬಡಿಸುವ ಬಗ್ಗೆ ಚಿಂತನೆ ನಡೆಸಲಾಗುವುದು. ಇದಕ್ಕೆ ಪೂರಕವಾಗಿ ಮನೆಗೊಂದು ಕೋಳಿಯನ್ನು ಸಂಗ್ರಹಿಸುವ ಅಭಿಯಾನ ನಡೆಸಲಾಗುವುದು ಎಂಬ ತೀರ್ಮಾನವನ್ನು ಕೈಗೊಂಡರು.
ಸಾಹಿತ್ಯ ಸಮ್ಮೇಳನದಲ್ಲಿ ಬಾಡೂಟ ನೀಷೆಧಿಸಲಾಗಿರುವುದನ್ನು ಒಕ್ಕೊರಲಿನಿಂದ ಖಂಡಿಸಿದರು. ಕಸಾಪದವರು ಮಾಂಸಾಹಾರ ಅಪರಾಧ ಎಂಬಂತೆ ಬಿಂಬಿಸಿದ್ದಾರೆ. ದೇಶದ ಬಹುಜನರ ಆಹಾರ ಪದ್ಧತಿಯನ್ನೇ ಅವಮಾನ ಮಾಡಿರುವ ವಿರುದ್ಧ ಬೇಸರ ಹೊರಹಾಕಿದರು.
ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಬೇರೆ ರಾಜ್ಯ ಹಾಗೂ ದೇಶಗಳಿಂದ ಬರುತ್ತಿರುವವರಿಗೆ ದಕ್ಷಿಣ ಕರ್ನಾಟಕ ಶೈಲಿಯ ಆಹಾರವನ್ನು ಬಡಿಸುವುದಾಗಿ ಆಹಾರ ಸಮಿತಿ ಹೇಳಿದ್ದರು, ಮಂಡ್ಯ ನೆಲದ ಆಹಾರ ಸಂಸ್ಕೃತಿಯಾದ ಮಾಂಸಾಹಾರವನ್ನು ನಿಷೇಧಿಸಿರುವುದು ಅನ್ಯಾಯ ಎಂದು ವಿವಿಧ ಸಂಘಟನೆಗಳ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಮಂಡ್ಯ ಎಂದರೇ, ನಾಟಿ ಕೋಳಿ ಸಾರು ಮುದ್ದೆಗೆ ವಿಶೇಷ ಹೆಸರಿದೆ. ಈ ಆಹಾರ ಸಂಸ್ಕೃತಿ ನಾಡಿನೆಲ್ಲೆಡೆ ತಿಳಿಸುವ ಉದ್ದೇಶದಿಂದ ಮತ್ತು ನಮ್ಮ ನೆಲದ ಆಹಾರ ಸಂಸ್ಕೃತಿಯನ್ನು ಎತ್ತಿಹಿಡಿಯುವ ಉದ್ದೇಶದಿಂದ ಇದನ್ನು ಒತ್ತಾಯಿಸುತ್ತಿದ್ದೇವೆ ಎಂದು ಟಿ ಎಲ್ ಕೃಷ್ಣೇಗೌಡ, ಎಲ್ ಸಂದೇಶ್, ಎಂ ಬಿ ನಾಗಣ್ಣಗೌಡ, ಸಿ ಕುಮಾರಿ , ಪೂರ್ಣಿಮಾ ಒಕ್ಕೊರಲಿನಿಂದ ಹೇಳಿದರು.
ಈ ವಿಷಯವನ್ನು ಜಿಲ್ಲಾಡಳಿತಕ್ಕೆ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಮಹೇಶ್ ಜೋಷಿ ಜೊತೆಗೆ ಸ್ವಾಗತ ಸಮಿತಿಯ ಅಧ್ಯಕ್ಷರು ಮತ್ತು ಮಂಡ್ಯ ಉಸ್ತುವಾರಿ ಸಚಿವರಾದ ಎನ್.ಚಲುವರಾಯಸ್ವಾಮಿ ಅವರ ಗಮನಕ್ಕೆ ತರಲಾಗುವುದು ಎಂದು ಟಿ.ಲಕ್ಷ್ಮಣ್ ಚೀರನಳ್ಳಿ, ಸುಂಡಹಳ್ಳಿ ಮಂಜುನಾಥ್ ಹೇಳಿದರು.
ವಿವಿಧ ಸಂಘಟನೆಗಳ ಮುಖಂಡರಾದ ಟಿ.ಡಿ.ನಾಗರಾಜು, ಸಿ.ಎಂ.ದ್ಯಾವಪ್ಪ, ಸಿ.ಆರ್.ರಮೇಶ್, ಎಚ್.ಡಿ.ಜಯರಾಂ, ಶಂಕರಲಿಂಗೇಗೌಡ, ನೆಲದನಿ ಲಂಕೇಶ್, ಕೀಲಾರ ಕೃಷ್ಣೇಗೌಡ, ಚಂದಗಾಲು ವಿಜಯಕುಮಾರ್, ಅರವಿಂದ ಪ್ರಭು, ಸಂತೋಷ್, ನರಸಿಂಹಮೂರ್ತಿ, ಜಿ.ಎನ್.ಕೆಂಪರಾಜು, ಶಿವರಾಂ ಭಾಗವಹಿಸಿದ್ದರು.