ನವದೆಹಲಿ: ದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಸರಿಹೋಗಬೇಕೆಂದರೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್‌ಎಸ್‌ಎಸ್) ಅನ್ನು ನಿಷೇಧಿಸೇಕು ಎಂದು ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅಭಿಪ್ರಾಯಪಟ್ಟಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಬಿಜೆಪಿ ಮತ್ತು ಆರ್‌ಎಸ್ಎಸ್ ವಿರುದ್ಧ ವಾಗ್ದಾಳಿ ನಡೆಸಿದರು.
ದೇಶದಲ್ಲಿ ಆರ್‌ಎಸ್ಎಸ್ ಮತ್ತು ಬಿಜೆಪಿಯಿಂದ ಕಾನೂನು ಮತ್ತು ಸುವ್ಯವಸ್ಥೆ ಸಮಸ್ಯೆಗಳು ಉದ್ಭವಿಸುತ್ತಿವೆ. ಆರ್‌ಎಸ್ಎಸ್ ಅನ್ನು ನಿಷೇಧಿಸಿದರೆ ಈ ಸಮಸ್ಯೆಗಳು ತಾನಾಗಿಯೇ ಸರಿಹೋಗುತ್ತವೆ. ಇದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದರು.
ಇಂದು ಪ್ರಧಾನಿ ಮೋದಿ ಅವರು ಗುಜರಾತ್ ನಲ್ಲಿ ಮಾತನಾಡುತ್ತಾ ಇಡೀ ಕಾಶ್ಮೀರವನ್ನು ಭಾರತಕ್ಕೆ ಸೇರಿಸಲು ಸರ್ದಾರ್ ವಲ್ಲಭಬಾಯಿ ಪಟೇಲ್ ಇಚ್ಚಿಸಿದ್ದರು, ಆದರೆ ಅಂದಿನ ಪ್ರಧಾನಿ ಜವಹರಲಾಲ್ ನೆಹರೂ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ಟೀಕಿಸಿದ್ದರು.
ಪ್ರಧಾನಿ ಮೋದಿ ಅವರನ್ನು ಗುರಿಯಾಗಿಸಿಕೊಂಡು ಖರ್ಗೆ ಸುದ್ದಿಗೋಷ್ಠಿ ನಡೆಸಿದರು.
ರಾಷ್ಟ್ರಪಿತ ಮಹಾತ್ಮ ಗಾಂಧಿಯವರ ಹತ್ಯೆಗೆ ಕಾರಣವಾಗುವಂತಹ ಸನ್ನಿವೇಶವನ್ನು ಸಂಘಪರಿವಾರ ಸೃಷ್ಟಿಸಿತ್ತು ಎಂದು ಶ್ಯಾಮ ಪ್ರಸಾದ್ ಮುಖರ್ಜಿ ಅವರಿಗೆ ಸರ್ದಾರ್ ಪಟೇಲ್ ಬರೆದಿದ್ದ ಪತ್ರವನ್ನು ಖರ್ಗೆ ಉಲ್ಲೇಖಿಸಿ ವಾಗ್ದಳಿ ನಡೆಸಿದರು.

 
                                    