ಇಂದಿರಾ ಗಾಂಧಿ ಈಗ ಇದ್ದಿದ್ದರೆ ಇಸ್ರೇಲ್ – ಪ್ಯಾಲೇಸ್ತಿನ್ ಯುದ್ಧ ಆಗ್ತಾ ಇರಲಿಲ್ಲ: ವೀರಪ್ಪ ಮೊಯಿಲಿ

Most read

ಪಟೇಲ್ ಅವರು ಕೇಂದ್ರ ಗೃಹ ಸಚಿವರಾಗಿದ್ದ ಸಮಯದಲ್ಲಿಯೇ ಮಹಾತ್ಮ ಗಾಂಧಿ ಅವರ ಹತ್ಯೆಯಾದ ಕಾರಣಕ್ಕೆ ಸಾಕಷ್ಟು ನೊಂದಿದ್ದರು. ಇದರಿಂದ ಆರ್ ಎಸ್ ಎಸ್ ಅನ್ನು ನಿಷೇದ ಮಾಡುವ ಕಾನೂನು ತಂದಿದ್ದರು ಎಂದು ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿ ನಡೆದ ಇಂದಿರಾಗಾಂಧಿ ಯವರ ಪುಣ್ಯ ಸ್ಮರಣೆ ಹಾಗೂ ಸರ್ದಾರ್ ವಲ್ಲಭಬಾಯಿ ಪಟೇಲ್ ಅವರ ಜನ್ಮದಿನದ ಅಂಗವಾಗಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ಈ ದೇಶದ ಸಮಗ್ರತೆ ಹಾಗೂ ಐಕ್ಯತೆಗಾಗಿ ಸದಾ ದುಡಿಯುತ್ತಿದ್ದ ಮನುಷ್ಯ. ದೇಶಕ್ಕೆ ಶಕ್ತಿ ನೀಡಿದ ಮಹಾನ್ ಚೇತನ ಎಂದಿದ್ದಾರೆ.

ಇಂದಿರಾ ಗಾಂಧಿ ಅವರು ಅಂತರರಾಷ್ಟೀಯ ಮಟ್ಟದಲ್ಲಿ ದೇಶಕ್ಕೆ ಮಾನ್ಯತೆ ತಂದು ಕೊಟ್ಟವರು. ಕೇವಲ ಕಾಂಗ್ರೆಸ್ ಪಕ್ಷವನ್ನು ಗಟ್ಟಿ ಮಾಡಲಿಲ್ಲ. ಈ ದೇಶದ ಜನರನ್ನು ಬಲಿಷ್ಠ ಮಾಡಿದರು ಎಂದು ಹೇಳಿದ್ದಾರೆ.

ವಾಜಪೇಯಿ ಅವರು ಇಂದಿರಾಗಾಂಧಿ ಅವರನ್ನು ದುರ್ಗೆ ಎಂದು ಕರೆದಿದ್ದರು. ನಾವು ರಾಜಕೀಯಕ್ಕೆ ಬರಲು ಇಂದಿರಾ ಗಾಂಧಿ ಅವರ ಹಾಗೂ ದೇವರಾಜ ಅರಸು ಅವರ ಪ್ರಗತಿಪರ ಧೋರಣೆ ಕಾರಣ. ಈ ಇಬ್ಬರ ಚಿಂತನೆಗಳು ಇಲ್ಲದಿದ್ದರೆ ನಾವುಗಳು ಕಾಂಗ್ರೆಸ್ ಪಕ್ಷವನ್ನು ಸೇರುತ್ತಿರಲಿಲ್ಲ ಎಂದಿದ್ದಾರೆ.

ಭಾರತದ ಆತ್ಮವನ್ನು ಚೆನ್ನಾಗಿ ಅರ್ಥ ಮಾಡಿಕೊಂಡವರು ಇಂದಿರಾಗಾಂಧಿ. ದೊಡ್ಡ, ದೊಡ್ಡ ಸಮಾಜಘಾತುಕ ಶಕ್ತಿಗಳನ್ನು ಸದೆಬಡಿದವರು. ನಾನು ಜವಳಿ ಇಲಾಖೆಗೆ 5 ಕೋಟಿ ಹಣ ಬೇಕು ಎಂದಾಗ, ಅದನ್ನು ನೀಡಿ ಪ್ರೋತ್ಸಾಹ ಮಾಡಿದ್ದರು.

ಅನಿವಾರ್ಯ ಕಾರಣಗಳಿಗೆ ತುರ್ತು ಪರಿಸ್ಥಿತಿ ಹೇರಿದರು. 2 ವರ್ಷಗಳ ನಂತರ ಅದನ್ನು ವಾಪಾಸ್ ಪಡೆದರು. ಪ್ರಜಾಪ್ರಭುತ್ವದ ಮೇಲೆ ನಂಬಿಕೆಯಿಟ್ಟು ಈಗ ಇರುವುದಕ್ಕಿಂತ ಪಾರದರ್ಶಕವಾದ ಚುನಾವಣೆ ನಡೆಸಿದರು. ಇಂದಿರಾ ಗಾಂಧಿ ಅವರು ಈಗ ಇದ್ದಿದ್ದರೆ. ಇಸ್ರೇಲ್ ಮತ್ತು ಪ್ಯಾಲೇಸ್ತಿನ್ ಯುದ್ಧವನ್ನು ನಡೆಯಲು ಬಿಡುತ್ತಿರಲಿಲ್ಲ. ಅದನ್ನು ನಿಲ್ಲಿಸುವ ಶಕ್ತಿ ಅವರಲ್ಲಿ ಇತ್ತು ಎಂದು ಹೇಳಿದ್ದಾರೆ.

ವಿಶ್ವದ ಸಮಾಜವಾದಿ ಒಕ್ಕೂಟಕ್ಕೆ ಶಕ್ತಿ ಕೊಟ್ಟವರು. ವಿಶ್ವಸಂಸ್ಥೆ ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂದು ಮೂರನೇ ರಾಷ್ಟ್ರಗಳ ಒಕ್ಕೂಟ ರಚನೆ ಮಾಡಿ ಬಡ ಹಾಗೂ ಹಿಂದುಳಿದ ದೇಶಗಳ ಪರವಾಗಿ ನಿಂತವರು. ಇವರ ಘರ್ಜನೆಗೆ ಅಮೇರಿಕ ನಡುಗುತ್ತಿತ್ತು. ಇಂತಹ ಶ್ರೇಷ್ಠ ನಾಯಕತ್ವ ಇಡೀ ಪ್ರಪಂಚ ಹಾಗೂ ಭಾರತದಲ್ಲಿ ಇಲ್ಲ.

ಮಹಾತ್ಮಾ ಗಾಂಧಿ ಅವರನ್ನು ದುಷ್ಟರು ಸಂಚು ಮಾಡಿ ಕೊಂದ ರೀತಿ ಇಂದಿರಾಗಾಂಧಿ ಅವರನ್ನು ಕೊಲ್ಲಲಾಯಿತು.

More articles

Latest article