ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಶುಕ್ರವಾರ ಮಧ್ಯಾಹ್ನ ಸಂಭವಿಸಿದ ಸ್ಫೋಟದ ಕುರಿತು ಸಿಎಂ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ಸ್ಫೋಟವು ಭಾರೀ ಸುಧಾರಿತ ಸ್ಫೋಟಕ ( IED) ವಸ್ತುಗಳನ್ನು ಬಳಸಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಖಚಿತಪಡಿಸಿದ್ದಾರೆ.
ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಮೇಶ್ವರಂ ಕೆಫೆಯಲ್ಲಿ ವ್ಯಕ್ತಿಯೊಬ್ಬ ಅಪರಿಚಿತ ಬ್ಯಾಗನ್ನು ಬಿಟ್ಟು ಹೋಗುತ್ತಿರುವುದು ಸಿಸಿಟಿವಿಯಲ್ಲಿ ಕಂಡು ಬಂದಿದೆ. ಭಾರೀ ಸುಧಾರಿತ ವಸ್ತುಗಳನ್ನು ಬಳಸಿ ಸ್ಫೋಟ ಮಾಡಿದ್ದಾರೆ. ಓರ್ವ ವ್ಯಕ್ತಿ ಬ್ಯಾಗ್‌ನಲ್ಲಿ ಈ ಸ್ಫೋಟಕ ತಂದಿಟ್ಟಿದ್ದಾನೆ. ಯಾರು ಏನು ಎಂಬುದು ಇನ್ನೂ ಅಧಿಕೃತವಾಗಿ ಸ್ಪಷ್ಟವಾಗಿಲ್ಲ ಎಂದರು.
ನನಗೆ ಪ್ರತಿ ಹಂತದ ಮಾಹಿತಿ ಕೊಡುವಂತೆ ಪೊಲೀಸ್ ಆಯುಕ್ತರಿಗೆ ತಿಳಿಸಿದ್ದೇನೆ. ಗೃಹ ಸಚಿವರಿಗೂ ಸ್ಥಳಕ್ಕೆ ಹೋಗುವಂತೆ ಹೇಳಿದ್ದೇನೆ. ಘಟನಾ ಸ್ಥಳಕ್ಕೆ ರಾಜ್ಯ ಗೃಹ ಸಚಿವ ಜಿ.ಪರಮೇಶ್ವರ್ ಭೇಟಿ ನೀಡಲಿದ್ದಾರೆ. ಸ್ಫೋಟದ ರುವಾರಿಗಳು ಯಾರು ಎಂದು ಗೊತ್ತಾದ ಮೇಲೆ ತನಿಖೆಯನ್ನು ಯಾವ ಹಂತದಲ್ಲಿ ನಡೆಸಬೇಕು ಎಂಬುದನ್ನು ತೀರ್ಮಾನಿಸುತ್ತೇವೆ. ಸದ್ಯಕ್ಕೆ ಘಟನೆಯ ಬಗ್ಗೆ ಮೇಲ್ನೋಟದ ಮಾಹಿತಿಗಳು ಮಾತ್ರ ಲಭ್ಯವಿದೆ ಎಂದು ತಿಳಿಸಿದರು.
ಗಾಯಾಳುಗಳಿಗೆ ಪರಿಹಾರ ಕೊಡುವ ವಿಚಾರದಲ್ಲೂ ಪರಿಶೀಲನೆ ಮಾಡುತ್ತಿದ್ದೇವೆ. ಈಗ ನಾನು ಹೇಳುತ್ತಿರುವುದು ಆರಂಭಿಕ ಹಂತದ ಮಾಹಿತಿ. ಯಾರು ಮಾಡಿದರು? ಯಾಕೆ ಮಾಡಿದರು? ಎಂಬುದೆಲ್ಲಾ ಇನ್ನು ಸದ್ಯಕ್ಕೆ ವಿಚಾರಣೆಯ ಹಂತದಲ್ಲಿದೆ. ವ್ಯಕ್ತಿಯೊಬ್ಬ ಹೋಟೆಲ್‌ನಲ್ಲಿ ಟೋಕನ್ ಪಡೆದು ಬ್ಯಾಗ್ ಇಟ್ಟಿದ್ದಾನೆ. ಸಿಸಿಟಿವಿ ದೃಶ್ಯಗಳನ್ನು ವಶಕ್ಕೆ ಪಡೆದು ಪರಿಶೀಲನೆ ನಡೆಸಲಾಗುತ್ತಿದೆ ಎಂದರು.