ಅಹಮದಾಬಾದ್: ಪಾವಾಗಡ್ ಬೆಟ್ಟದ ಮೇಲೆ 500 ವರ್ಷಗಳ ಹಿಂದೆ ಸ್ಥಾಪಿಸಲಾದ ಜೈನ ತೀರ್ಥಂಕರ ನೇಮಿನಾಥರ ಮೂರ್ತಿಗಳನ್ನು ಹಿಂದೂ ಮಂದಿರ ಟ್ರಸ್ಟ್ ತೆರವುಗೊಳಿಸಿದ ಹಿನ್ನೆಲೆಯಲ್ಲಿ ಜೈನ ಸಮುದಾಯ ಬೀದಿಗಿಳಿದು ಪ್ರತಿಭಟಿಸುತ್ತಿದೆ.
ಪಾವಾಗಡ್ ಬೆಟ್ಟದ ಮೇಲಿರುವ ಹಿಂದೂಗಳ ಮಹಾಕಾಳಿ ಮಂದಿ ಕ್ಷೇತ್ರವನ್ನು ನವೀಕರಿಸಲಾಗುತ್ತಿದ್ದು ಬೆಟ್ಟ ಹತ್ತುವ ಮೆಟ್ಟಿಲುಗಳ ಎರಡೂ ಬದಿಗಳಲ್ಲಿ ಇದ್ದ ನೇಮಿನಾಥರ ಮೂರ್ತಿಗಳನ್ನು ತೆರವುಗೊಳಿಸಲಾಗಿದೆ.
ಮಹಾಕಾಳಿ ಮಂದಿರ ಟ್ರಸ್ಟ್ ಈ ಕೃತ್ಯದ ವಿರುದ್ಧ ಜೈನ ಸಮುದಾಯ ಸಿಟ್ಟಿಗೆದ್ದು ಪ್ರತಿಭಟನೆ ನಡೆಸುತ್ತಿದೆ. ಮೂರ್ತಿಗಳನ್ನು ತೆರವು ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತಿದೆ.
ನಮ್ಮ ತೀರ್ಥಂಕರರನ್ನು ಉಳಿಸಿಕೊಳ್ಳಲು ನಾವು ಪದೇ ಪದೇ ಬೀದಿಗೆ ಬಂದು ಹೋರಾಡಬೇಕೇ? ನಮಗೆ ನೋವಾಗಿದೆ, ಸಂಕಟವಾಗುತ್ತಿದೆ, ಆಕ್ರೋಶ ಹುಟ್ಟುತ್ತಿದೆ. ನಮ್ಮ ಮೇಲೆ ಯಾಕಿಷ್ಟು ದ್ವೇಷ? ನಮ್ಮ ತೀರ್ಥಂಕರರ ಮೇಲೆ ಅವರಿಗೆ ಯಾಕೆ ಇಷ್ಟು ಅಸಹನೆ? ಎಂದು ಜೈನ ಸಮುದಾಯದ ಮುಖ್ಯಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ತೀರ್ಥಂಕರರ ಮೂರ್ತಿಗಳನ್ನು ತೆರವುಮಾಡಿದವರ ಮೇಲೆ ಕೂಡಲೇ ಎಫ್ ಐಆರ್ ದಾಖಲಾಗಬೇಕು. ಗೌರವಪೂರ್ವಕವಾಗಿ ಮತ್ತೆ ಅದೇ ಜಾಗಗಳಲ್ಲಿ ಮೂರ್ತಿಗಳನ್ನು ಸ್ಥಾಪಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಕಳೆದ ಇಪ್ಪತ್ತು ದಿನಗಳಿಂದ ಮಹಾಕಾಳಿ ಮಂದಿರದ ನವೀಕರಣ ಕಾರ್ಯ ನಡೆಯುತ್ತಿದ್ದು ಇದರ ಭಾಗವಾಗಿಯೇ ಜೈನ ತೀರ್ಥಂಕರ ನೇಮಿನಾಥರ ಮೂರ್ತಿಗಳನ್ನು ತೆರವುಗೊಳಿಸಲಾಗಿದೆ. ಜೈನ ಸಮುದಾಯದ ಪ್ರತಿಭಟನೆ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಪ್ರತಿಕ್ರಿಯಿಸಿದ್ದು, ಮೂರ್ತಿಗಳನ್ನು ಪುನರ್ ಪ್ರತಿಷ್ಠಾಪಿಸಲಾಗುವುದು ಎಂದು ಭರವಸೆ ನೀಡಿದೆ.