ಬೆಂಗಳೂರು: ಐಸಿಎಸ್ಇ 10 ಮತ್ತು 12ನೇ ತರಗತಿ ಪರೀಕ್ಷೆಯ ಫಲಿತಾಂಶ ಸೋಮವಾರ ಪ್ರಕಟಗೊಂಡಿದ್ದು, ಗೋಪಾಲನ್ಇಂಟರ್ ನ್ಯಾಷನಲ್ ಸ್ಕೂಲ್ (ಜಿಎನ್ಎಸ್)ನ ವಿದ್ಯಾರ್ಥಿನಿ ಸಹಸ್ರ ಶೇ.99.4ರಷ್ಟು ಫಲಿತಾಂಶದ ಮೂಲಕ ನಗರದ ಟಾಪರ್ ಗಳಲ್ಲಿ ಒಬ್ಬರಾಗಿ ಹೊರಹೊಮ್ಮಿದ್ದಾರೆ.
ವಿದ್ಯಾರ್ಥಿನಿ ಸಹಸ್ರ ಎಲ್ಲಾ ಹಂತಗಳಲ್ಲಿಯೂ ಶಿಕ್ಷಣದ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ತೊಡಗಿಕೊಂಡಿದ್ದಾರೆ. ಈ ಮೂಲಕ ಕಳೆದ ಬಾರಿ 9ನೇ ತರಗತಿ ಫಲಿತಾಂಶದಲ್ಲೂ ಕೂಡ ಉನ್ನತ ಸಾಧನೆ ಮಾಡಿದ್ದರು. ಓದುವುದರ ಜೊತೆಗೆ ಪಠ್ಯೇತರ ಚಟುವಟಿಕೆಗಳಲ್ಲೂ ಸಹಸ್ರ, ಸಹಸ್ರಪಟ್ಟು ಮುಂದಿದ್ದಾರೆ.
ಕಂಪ್ಯೂಟರ್ ವಿಜ್ಞಾನದ ಬಗೆಗೆ ಒಲವು ಇದ್ದ ಕಾರಣ ಶೈಕ್ಷಣಿಕ ಹಂತದಲ್ಲೇ ಹಾವರ್ಡ್ ವಿಶ್ವವಿದ್ಯಾಲಯದಲ್ಲಿ CS50 ಆನ್‌ಲೈನ್ ಕೋರ್ಸ್ ಅನ್ನು ತೆಗೆದುಕೊಂಡು ಅಧ್ಯಯನ ನಡೆಸುತ್ತಿದ್ದರು. ಈ ಸಮಗ್ರ ಕೋರ್ಸ್ ಮೂಲಕ ಕಂಪ್ಯೂಟರ್ ನ ವ್ಯಾಪಕವಾದ ಜ್ಞಾನವನ್ನು ಚಿಕ್ಕ ವಯಸ್ಸಿನಲ್ಲೇ ಗಳಿಸಿಕೊಂಡಿದ್ದಾರೆ.
ಸಹಸ್ರ ಕೇವಲ ಓದಿನಲ್ಲಿ ಮಾತ್ರವಲ್ಲದೆ ಸಂಗೀತದಲ್ಲೂ ಸಾಧನೆ ಮಾಡಿದ್ದಾರೆ. ಗೋಪಾಲನ್ ಇಂಟರ್‌ನ್ಯಾಷನಲ್ ಸ್ಕೂಲ್ ವೆಸ್ಟರ್ನ್ ಬ್ಯಾಂಕ್‌ನ ಜಿಮೈನರ್ಸ್ ನ ಪ್ರಮುಖ ಗಾಯಕರಾಗಿದ್ದಾರೆ. ಇವರು ಭಾಗವಹಿಸುವ ಬ್ಯಾಂಡ್ ಹಲವಾರು ಅಂತರ್ ಶಾಲಾ ಸ್ಪರ್ಧೆಗಳಲ್ಲಿ ಮೊದಲ ಸ್ಥಾನ ಗಳಿಸಿದೆ.
ಸಹಸ್ರ ಅಧ್ಯಯನ ಮತ್ತು ಇತರ ಕ್ಷೇತ್ರಗಳಲ್ಲಿ ಆತ್ಮಸ್ಥೈರ್ಯದಿಂದ ಮುನ್ನುಗ್ಗುತ್ತಾರೆ. ಸ್ಪರ್ಧಾತ್ಮಕ ಮನೋಭಾವವನ್ನು ಹೊಂದಿರುವ ಅವರು ಎಲ್ಲದರಲ್ಲೂ ಪರಿಪೂರ್ಣತೆಯನ್ನು ಬಯಸುತ್ತಾರೆ. ಸಂಗೀತ ಮತ್ತು ಶೈಕ್ಷಣಿಕ ಅಧ್ಯಯನವನ್ನು ಸಮತೋಲನದಿಂದ ತೆಗೆದುಕೊಂಡು ಹೋಗುತ್ತಿರುವ ಸಹಸ್ರ ಮುಂದಿನ ದಿನಗಳಲ್ಲಿ ಅನೇಕ ಸಾಧನೆಗಳನ್ನು ಮಾಡುವ ಮೂಲಕ ಪೋಷಕರಿಗೆ ಮತ್ತು ದೇಶಕ್ಕೆ ಗೌರವ ತಂದುಕೊಡುವ ಹಂಬಲದಲ್ಲಿದ್ದಾರೆ.