Saturday, July 27, 2024

ನಡೆದು ಬಂದ ಹಾದಿಯನ್ನು ನಾನು ಯಾವತ್ತೂ ಮರೆಯುವುದಿಲ್ಲ: ಕೆ.ವಿ.ಪ್ರಭಾಕರ್

Most read

ಕೋಲಾರ ಫೆ 19: ನಾನು ಮೊದಲು ಪತ್ರಕರ್ತರ ಪ್ರತಿನಿಧಿ. ಎಷ್ಟೇ ಉನ್ನತ ಸ್ಥಾನಕ್ಕೆ ಹೋದರೂ ನಾನು ನಡೆದು ಬಂದ ದಾರಿಯನ್ನು ಯಾವತ್ತೂ ಮರೆಯುವುದಿಲ್ಲ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ. ಪ್ರಭಾಕರ್ ನುಡಿದರು.

ಈ ಬಾರಿಯ ಬಜೆಟ್‌ನಲ್ಲಿ ಗ್ರಾಮೀಣ ಪತ್ರಕರ್ತರಿಗೆ ಉಚಿತ ಬಸ್ ಪಾಸ್ ಸವಲತ್ತು ಘೋಷಣೆ ಮಾಡಿಸಿದ್ದಕ್ಕಾಗಿ ಕೋಲಾರ ಪತ್ರಕರ್ತರ ಸಂಘದಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ನಾನು ಕೋಲಾರದಲ್ಲಿ ಪತ್ರಿಕಾ ವೃತ್ತಿ ನಿರ್ವಹಿಸುತ್ತಿದ್ದಾಗ ಅಂತರಗಂಗೆ ಬೆಟ್ಟಕ್ಕೆ ನಿಯಮಿತವಾಗಿ ಹೋಗುತ್ತಿದ್ದೆ. ಬೆಟ್ಟ ಹತ್ತಿದ ಬಳಿಕ ನಾನು ಹತ್ತಿ ಬಂದ ಹಾದಿಯನ್ನು ಹಿಂದಿರುಗಿ ನೋಡುತ್ತಿದ್ದೆ. ನನ್ನ ವೃತ್ತಿ ಬದುಕಿನ ಪಯಣದಲ್ಲೂ ನಾನು ಇದೇ ರೀತಿ ಹಿಂದೆ ತಿರುಗಿ ನೋಡುವುದನ್ನು ರೂಡಿಸಿಕೊಂಡಿದ್ದೇನೆ ಎಂದರು.

ಉಚಿತ ಬಸ್ ಪಾಸ್ ಸೌಲಭ್ಯ ದೊರಕಿಸಿಕೊಡುವುದರ ಮೂಲಕ ಸರ್ಕಾರ ಮತ್ತು ಮುಖ್ಯಮಂತ್ರಿಗಳು ಗ್ರಾಮೀಣ ಪತ್ರಕರ್ತರ ಸೇವೆಯನ್ನು ಗುರುತಿಸಿದೆ, ಗೌರವಿಸಿದೆ. ಪತ್ರಕರ್ತರ ಸಮಸ್ಯೆಗಳ ವಿಚಾರದಲ್ಲಿ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಅರಿವು ಇದೆ ಎಂದು ಕೆ.ವಿ.ಪ್ರಭಾಕರ್ ಮೆಚ್ಚುಗೆ ಸೂಚಿಸಿದರು.

ನಿವೃತ್ತ ಪತ್ರಕರ್ತರಿಗೆ ನೀಡುವ ಮಾಸಾಶನವನ್ನು 3 ಸಾವಿರ ರೂಗಳಿಂದ 12 ಸಾವಿರಕ್ಕೆ ಹೆಚ್ಚಿಸಿದ್ದೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು. ಈ ಮೊತ್ತವನ್ನು ಹಂತ ಹಂತವಾಗಿ 25 ಸಾವಿರಕ್ಕೆ ತಲುಪಿಸಬೇಕು ಎನ್ನುವುದು ನನ್ನ ಗುರಿ. ಇದಕ್ಕಾಗಿ ನಿರಂತರವಾಗಿ ಶ್ರಮಿಸುತ್ತಲೇ ಇರುತ್ತೇನೆ ಎಂದು ಭರವಸೆ ನೀಡಿದರು.

ಮುಖ್ಯಮಂತ್ರಿಗಳು ಬಜೆಟ್ ನಲ್ಲಿ ಘೋಷಿಸಿರುವ ಉಚಿತ ಬಸ್ ಪಾಸ್ ಸೌಲಭ್ಯ ನಿಜವಾದ ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಇದಕ್ಕಾಗಿ ಮಾಧ್ಯಮ ಸಂಸ್ಥೆಗಳು ಹಾಗೂ ನಾವು ನೀವು ಕಾಳಜಿ ವಹಿಸಬೇಕು ಎಂದು ಕರೆ ನೀಡಿದರು.

ರಾಜ್ಯ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಲೋಕೇಶ್ ಕುಮಾರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

More articles

Latest article