ಬೆಂಗಳೂರು: ದೇಶದ ಅತ್ಯುನ್ನತ ನ್ಯಾಯಾಲಯವಾದ ಸುಪ್ರೀಂಕೋರ್ಟ್ ನಿಂದ ಛೀಮಾರಿ ಹಾಕಿಸಿಕೊಂಡಿರುವ ಪತಂಜಲಿ ಸಂಸ್ಥೆಯ ಪರವಾಗಿ ವಕಾಲತು ವಹಿಸುತ್ತಿರುವ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರನ್ನು ತರಾಟೆಗೆ ತೆಗೆದುಕೊಂಡಿರುವ ಸಚಿವ ದಿನೇಶ್ ಗುಂಡೂರಾವ್, ಪತಂಜಲಿಯ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ಆದೇಶಿಸಿರುವುದಕ್ಕೆ ತುರಿಕೆ ರೋಗ ಬಂದವರ ಹಾಗೆ ಆಡುತ್ತಿರುವುದು ಏಕೆ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಈ ಕುರಿತು ಸರಣಿ ಪೋಸ್ಟ್ ಹಾಕಿರುವ ಅವರು ಬಿಜೆಪಿ ನಾಯಕರ ಪ್ರಶ್ನೆಗಳಿಗೆ ನಾನು ಉತ್ತರಿಸುವೆ, ನನ್ನ ಪ್ರಶ್ನೆಗಳಿಗೆ ಅವರು ಉತ್ತರಿಸಲಿ ಎಂದು ಸವಾಲೊಡ್ಡಿದ್ದಾರೆ.
ತಪ್ಪು ಜಾಹೀರಾತು ಮೂಲಕ ದೇಶದ ಜನರ ಆರೋಗ್ಯದ ಜೊತೆ ಚೆಲ್ಲಾಟವಾಡಿದ್ದ ಪತಂಜಲಿಯ ಬಾಬಾ ರಾಮ್‌ದೇವ್ ಹಾಗೂ ಬಾಲಕೃಷ್ಣರವರಿಗೆ ಸುಪ್ರೀಂ ಕೋರ್ಟ್ ತೆರೆದ ನ್ಯಾಯಾಲಯದಲ್ಲಿ ಛೀಮಾರಿ ಹಾಕಿ ನೀರಿಳಿಸಿದೆ.
ಜೊತೆಗೆ ಈ ಇಬ್ಬರೂ ತಾವು ಮಾಡಿದ್ದ ತಪ್ಪಿಗೆ ಬೇಷರತ್ ಕ್ಷಮೆ ಯಾಚಿಸಿದ್ದರೂ ಸುಪ್ರೀಂ ಅವರ ಕ್ಷಮೆಯನ್ನು ಮಾನ್ಯ ಮಾಡಿಲ್ಲ. ಅದರರ್ಥ, ಪತಂಜಲಿ ಎಂಬ ಸಂಸ್ಥೆ ಜನರ ಅರೋಗ್ಯದ ಜೊತೆ ಆಡಿರುವ ಚೆಲ್ಲಾಟ ಕ್ಷಮೆಗೂ ಅರ್ಹವಲ್ಲ ಎಂಬುದು ಸುಪ್ರೀಂ ಅಭಿಪ್ರಾಯ.
ಇದೇ ಕಾರಣಕ್ಕಾಗಿ ರಾಜ್ಯದಲ್ಲಿ ಪತಂಜಲಿ ಉತ್ಪನ್ನಗಳ ಗುಣಮಟ್ಟ ಪರೀಕ್ಷಿಸಲು ಆದೇಶಿಸಿದ್ದೇನೆ ಎಂದು ದಿನೇಶ್ ಗುಂಡೂರಾವ್ ಹೇಳಿದ್ದಾರೆ.
ಮಾನ್ಯ ಅಶೋಕ್ ರವರೆ, ವಿಪಕ್ಷ ನಾಯಕರಾದ ನಿಮಗೆ ಪ್ರಸಕ್ತ ವಿದ್ಯಮಾನಗಳ ಮಾಹಿತಿ ಬೆರಳ ತುದಿಯಲ್ಲೇ ಇರಬೇಕು. ಕೇವಲ ರಾಜ್ಯದ ವಿದ್ಯಮಾನವಲ್ಲ, ದೇಶದಲ್ಲಿ ಏನಾಗುತ್ತಿದೆ ಎಂಬ ಮಾಹಿತಿಯೂ ಇರಬೇಕು. ಯಾಕೆಂದರೆ ವಿಪಕ್ಷ ನಾಯಕ ಎಂಬ ಸ್ಥಾನದ ಮಹತ್ವವೇ ಅಂತದ್ದು.
ಪತಂಜಲಿ ಸಂಸ್ಥೆಯ ಬಗ್ಗೆ ಅತ್ಯಂತ ಕಟುವಾದ ಅಭಿಪ್ರಾಯ ವ್ಯಕ್ತಪಡಿಸಿರುವುದು ಈ ದೇಶದ ಸರ್ವೋಚ್ಚ ನ್ಯಾಯಾಲಯ ಎಂಬ ಮಾಹಿತಿ ನಿಮಗೆ ಗೊತ್ತಿಲ್ಲದಿರುವುದು ಅತ್ಯಂತ ವಿಷಾದನೀಯ ಹಾಗೂ ದುರದೃಷ್ಟಕರ.
ಸರ್ವೋಚ್ಚ ನ್ಯಾಯಾಲಯ ಓಪನ್ ಕೋರ್ಟ್‌ನಲ್ಲಿ ಬಾಬಾ ರಾಮ್‌ದೇವ್ ಹಾಗೂ ಬಾಲಕೃಷ್ಣರ ಬೆವರಿಳಿಸಿದೆ. ನಿಮ್ಮ ಪ್ರಕಾರ ಸುಪ್ರೀಂ ಕೋರ್ಟ್‌ಗೂ ಪತಂಜಲಿ ಸಂಸ್ಥೆ ಮೇಲೆ ದ್ವೇಷವಿದೆ ಎಂದು ಅರ್ಥವೇ.? ಎಂದು ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ನಿಮ್ಮ ಅಚ್ಚುಮೆಚ್ಚಿನ ಬ್ರ್ಯಾಂಡ್ ಪತಂಜಲಿಯ ವಿನಾಶಕಾರಿ ನಡೆಯ ಬಗ್ಗೆ ಸ್ವತಃ ಸರ್ವೋಚ್ಚ ನ್ಯಾಯಾಲಯವೇ ಕಳವಳ ಪಡಿಸಿದೆ. ಹೀಗಿದ್ದರೂ ನೀವು ಪತಂಜಲಿ ಸಂಸ್ಥೆಯ ಪರ ವಕಾಲತ್ತು ವಹಿಸುತ್ತಿರುವುದು ಯಾಕೆ.,?
ನಿಮಗೆ ಜನರ ಆರೋಗ್ಯಕ್ಕಿಂತ, ಜನರಿಗೆ ವಿಷವುಣಿಸುತ್ತಿರುವ ವ್ಯಕ್ತಿ ಧರಿಸಿದ ಬಟ್ಟೆ ಕೇಸರಿ ಎಂಬುದೇ ಮುಖ್ಯವಾಯಿತೆ.?
ಅಶೋಕ್‌ರವರೆ, ರಾಜ್ಯದ ಜನರ ಆರೋಗ್ಯದ ವಿಚಾರದಲ್ಲಿ ಹುಡುಗಾಟ ಆಡಲು ನಾನು ನಿಮ್ಮ ಪಕ್ಷದ ವಿಶ್ವಗುರು ಅಲ್ಲ. ತಟ್ಟೆ ಬಡಿದರೆ, ದೀಪ ಹಚ್ಚಿದರೆ, ಸೀಟಿ ಊದಿದರೆ ರೋಗಗಳು ವಾಸಿಯಾಗುತ್ತದೆ ಎಂಬ ಮೌಢ್ಯವನ್ನು ಬಿತ್ತಲು ನಾನು ಸೋಕಾಲ್ಡ್ ವಿಶ್ವಗುರು ಅಲ್ಲ.
ಜನರ ಆರೋಗ್ಯದ ವಿಚಾರದಲ್ಲಿ ನಮ್ಮ ಸರ್ಕಾರ ರಿಸ್ಕ್ ತೆಗೆದುಕೊಳ್ಳುವುದಿಲ್ಲ. ಪತಂಜಲಿ ಉತ್ಪನ್ನದ ಗುಣಮಟ್ಟ ಪರೀಕ್ಷೆಯಾಗಲಿ ಬಿಡಿ ಎಂದು ಅವರು ಸವಾಲೆಸೆದಿದ್ದಾರೆ.