Thursday, June 13, 2024

ಕುವೆಂಪು ವಿಶ್ವ ಮಾನವ ಸಂದೇಶ ಜಗತ್ತಿಗೇ ಮಾದರಿ: ಶಾಸಕ ಎಂ.ಕೃಷ್ಣಪ್ಪ

Most read

ಬೆಂಗಳೂರು: ರಾಷ್ಟ್ರಕವಿ ಕುವೆಂಪು ಸಾರಿರುವ ವಿಶ್ವ ಮಾನವ ಸಂದೇಶವು ಜಗತ್ತಿಗೇ ಮಾದರಿಯಾದದ್ದು. ಯಾವುದೆ, ಜಾತಿ, ಧರ್ಮ, ಭಾಷೆ, ಬಣ್ಣದ ತಾರತಮ್ಯವಿಲ್ಲದೆ ನಾವೆಲ್ಲರೂ ಒಂದಾಗಿ ಬಾಳಬೇಕು ಎಂಬುದೇ ವಿಶ್ವಮಾನವ ಸಂದೇಶವಾಗಿದೆ ಎಂದು ಶಾಸಕ ಎಂ.ಕೃಷ್ಣಪ್ಪ ಹೇಳಿದರು.

ವಿಶ್ವ ಮಾನವ ಬಳಗವು ಹಂಪಿನಗರದಲ್ಲಿರುವ ಶ್ರೀ ವಿದ್ಯಾರಣ್ಯ ಭವನದಲ್ಲಿ ಆಯೋಜಿಸಿದ್ದ ರಾಷ್ಟ್ರಕವಿ ಕುವೆಂಪುರವರ ೧೧೯ನೆ ಜನ್ಮದಿನಾಚರಣೆ ಹಾಗೂ ಸಂಸ್ಮರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಕುವೆಂಪು, ಕೆಂಪೇಗೌಡ, ಬಾಲಗಂಗಾಧರನಾಥ ಸ್ವಾಮಿಯವರನ್ನು ನಾವು ಸ್ಮರಿಸಿಕೊಳ್ಳುತ್ತೇವೆ. ಆದರೆ, ಅವರು ಹೇಳಿರುವುದನ್ನು ಆಚರಣೆಗೆ ತರುವುದು ನಮ್ಮ ಮೇಲಿರುವ ಜವಾಬ್ದಾರಿಯಾಗಿದೆ ಎಂಬುದನ್ನು ಮರೆತು ಬಿಡುತ್ತೇವೆ. ಜಾತಿ, ಧರ್ಮಕ್ಕಾಗಿ ಏನು ಬೇಕಾದರೂ ಮಾಡಲು ಸಿದ್ಧ ಎನ್ನುವವರು, ಅದೇ ಧರ್ಮದ ಗುರುಗಳು ಹೇಳಿರುವ ಬೋಧನೆಗಳನ್ನು ಪಾಲನೆ ಮಾಡಲು ಮುಂದಾಗುವುದಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.

ಕುವೆಂಪು ವಿಚಾರಧಾರೆ ಕುರಿತು ಮಾತನಾಡಿದ ಬೆಂಗಳೂರು ನಗರ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಶ್ರ.ದೇ.ಪಾರ್ಶ್ವನಾಥ, ಹಿಂದೆ ಕಸಾಪ ಅಧ್ಯಕ್ಷರಾಗಿದ್ದ ಹರಿಕೃಷ್ಣ ಪೂನರೂರು ಎಂಬುವರು ಕುವೆಂಪು ರಚಿಸಿದ ಗೀತೆಯೇ ಯಾಕೆ ನಾಡಗೀತೆ ಆಗಬೇಕು ಎಂದು ಅವಹೇಳನಕಾರಿಯಾಗಿ ಮಾತನಾಡಿದಾಗ ಪ್ರತಿಭಟನೆ ಮಾಡಿ, ಪ್ರಕರಣಗಳನ್ನು ಹಾಕಿಸಿಕೊಂಡ ಘಟನೆಯನ್ನು ನೆನಪಿಸಿಕೊಂಡರು.

ಸಭೆಯೊಂದರಲ್ಲಿ ಹರಿಕೃಷ್ಣ ಅವರ ಪಂಚೆಯನ್ನು ಕನ್ನಡಪರ ಹೋರಾಟಗಾರರು ಎಳೆದಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಕನ್ನಡ ಸಂಘರ್ಷ ಸಮಿತಿಯಲ್ಲಿದ್ದ ರಾಮಣ್ಣ ಕೋಡಿಹೊಸಹೊಳ್ಳಿ, ಸಮೀವುಲ್ಲಾ ಖಾನ್ ಹಾಗೂ ನನ್ನ ವಿರುದ್ಧ ಪ್ರಕರಣ ದಾಖಲಾಯಿತು. ಆದರೆ, ಪೊಲೀಸರು ಬಂಧಿಸಿದ್ದು ಸಮೀವುಲ್ಲಾ ಖಾನ್‌ರನ್ನು ಮಾತ್ರ. ಮುಸ್ಲಿಮನೊಬ್ಬ ಕನ್ನಡದ ಕೆಲಸ ಮಾಡುವುದು ಅವರಿಂದ ಸಹಿಸಲು ಆಗಿರಲಿಲ್ಲ ಎಂದು ಅವರು ಟೀಕಿಸಿದರು.

ನಮ್ಮದು ಇನ್ನೂ ಮೈಸೂರು ರಾಜ್ಯ ಎಂದು ಇರುವಾಗಲೆ ಕುವೆಂಪು ತಮ್ಮ ೨೧ನೆ ವಯಸ್ಸಿನಲ್ಲೆ ರಚಿಸಿದ ಈ ಗೀತೆಯಲ್ಲಿ ಕರ್ನಾಟಕ ಮಾತೆ ಎಂದು ಬರೆದಿದ್ದರು. ನಾಡಗೀತೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಎಂಬ ವಾಕ್ಯವನ್ನು ಬರೆದಿದ್ದಾರೆ. ಇಂದು ಕನ್ನಡ ವಿವಿ ಸಂಶೋಧನಾ ವಿದ್ಯಾರ್ಥಿನಿ ಹಾಜಿರಾ ಖಾನಮ್ ಶ್ರೀ ರಾಮಾಯಣ ದರ್ಶನಂ ಗದ್ಯವನ್ನು ಕಾವ್ಯರೂಪದಲ್ಲಿ ಪ್ರಸ್ತುತ ಪಡಿಸಿದ್ದು ಶ್ಲಾಘನೀಯವಾದದ್ದು ಎಂದು ಅವರು ಹೇಳಿದರು.

ವಿಶ್ವ ಮಾನವ ಬಳಗದ ಅಧ್ಯಕ್ಷ ಸಿ.ಆರ್.ಗೋಪಾಲಸ್ವಾಮಿ ಮಾತನಾಡಿ, ಕುವೆಂಪು ತಮ್ಮ ಸಾಹಿತ್ಯದ ಮೂಲಕ ಮನುಷ್ಯನಲ್ಲಿ ಇರುವಂತಹ ನಕಾರಾತ್ಮಕ ಚಿಂತನೆಗಳನ್ನು ತೊಲಗಿಸಿ, ಸಕಾರಾತ್ಮಕವಾಗಿ ಜೀವನ ರೂಪಿಸುವ ಕುರಿತು ಸಂದೇಶಗಳನ್ನು ನೀಡಿದ್ದಾರೆ. ನಮ್ಮ ವಿಶ್ವ ಮಾನವ ಬಳಗದ ವತಿಯಿಂದ ಪ್ರತಿ ವರ್ಷ ಇಂತಹ ಅಪರೂಪದ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಮಠದ ಸೌಮ್ಯನಾಥ ಸ್ವಾಮಿ ದಿವ್ಯಸಾನ್ನಿಧ್ಯವನ್ನು ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಅ.ದೇವೇಗೌಡ, ಅಖಿಲ ಕರ್ನಾಟಕ ಮಹಮ್ಮದೀಯರ ವೇದಿಕೆಯ ಅಧ್ಯಕ್ಷ ಸಮೀವುಲ್ಲಾ ಖಾನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

More articles

Latest article