ದಾಳಿಕೋರ ಪ್ರವೃತ್ತಿಯ ಮರಾಠಾ ಪೇಶ್ವೆಗಳು ಶೃಂಗೇರಿ ಪೀಠದ ಮೇಲೆ ದಾಳಿ ನಡೆಸಿ ಅಲ್ಲಿ ಲೂಟಿಗೈದು ಹಾನಿಯನ್ನೆಸಗಿ ಹೋದಾಗ ಮೈಸೂರನ್ನು ಆಳುತ್ತಿದ್ದ ಟಿಪ್ಪು ಸುಲ್ತಾನ ಶೃಂಗೇರಿಯಲ್ಲಿ ನಡೆದಂತಹ ಅನಾಹುತಕ್ಕೆ ಶ್ರೀಗಳಲ್ಲಿ ವಿಷಾದ ವ್ಯಕ್ತಪಡಿಸಿ ಪತ್ರಬರೆದು ಶಾರದಾ ಪೀಠದಲ್ಲಿ ನಡೆಸಲಾದ ಹಾನಿಯನ್ನು ತಾನೇ ಮುತುವರ್ಜಿಯಿಂದ ಸರಿಪಡಿಸುವ ಕೆಲಸಕ್ಕೆ ತಕ್ಷಣವೇ ಮುಂದಡಿಯಿಡುತ್ತಾನೆ. ಇಲ್ಲಿ ಯಾರೂ ಕೂಡ ನೀನ್ಯಾವನೋ ನಮ್ಮ ವಿಷಯಕ್ಕೆ ನಿನ್ನಂತಹ ಸಾಬರವನು ಮೂಗು ತೂರಿಸುವುದು ಬೇಕಾಗಿಲ್ಲ ಅಂದಿಲ್ಲ – ಶಂಕರ್ ಸೂರ್ನಳ್ಳಿ, ಸಾಮಾಜಿಕ ಕಾರ್ಯಕರ್ತರು.
ಇವತ್ತು ಸಾಕಷ್ಟು ಅಪವ್ಯಾಖ್ಯಾನಗೊಂಡ ಪದಗಳಲ್ಲಿ ’ಧರ್ಮ” ಎನ್ನುವ ಪದವೂ ಒಂದು. ಪ್ರಸ್ತುತ ಇಂದಿನ ದಿನಗಳಲ್ಲಿ ಅವರವರ ಮೂಗಿನ ನೇರಕ್ಕೆ ಮತ್ತು ಸಾಂದರ್ಭಿಕ ಅನುಕೂಲಕ್ಕೆ ತಕ್ಕಂತೆ ಈ ಧರ್ಮ ಎಂಬ ಪದವನ್ನು ಸಾಕಷ್ಟು ಎಳೆದಾಡಲಾಗುತ್ತಿದೆ. ಧರ್ಮ ಎಂದರೆ ಮತ ಎಂಬರ್ಥದಲ್ಲಿ ಹೋದರೆ ಆಗುವ ಪರಿಣಾಮಕ್ಕೂ ಧರ್ಮ ಎಂದರೆ ಸಹಕಾರ, ಸಹೃದಯತೆ, ಆತ್ಮಸಾಕ್ಷಿಗೆ ವಿರುದ್ಧವಲ್ಲದ ಪ್ರಾಮಾಣಿಕ ಜೀವಪರ ನಡೆ ಎಂಬರ್ಥದಲ್ಲಿ (ಉದಾ: ಆತ ಧರ್ಮಾತ್ಮ… ಇತ್ಯಾದಿ) ಹೋದರೆ ಹೊರ ಹೊಮ್ಮುವಂತಹ ಭಾವಗಳೇ ಬೇರೆ ತೆರನಾದದ್ದು. ಒಂದರಲ್ಲಿ ನನ್ನ ಧರ್ಮ, ನನ್ನ ಮತ ಎಂಬ ಸ್ವಾರ್ಥ ಪರ ಆಲೋಚನೆಗೆ (ನಾಗರೀಕ ಮಾನವನ ಈ ’ತಮ್ಮವೇ ಶ್ರೇಷ್ಠ” ಎಂಬ ಹೊಯ್ದಾಟಗಳು ಹೊಸತೇನಲ್ಲ; ಮುಂಚಿನಿಂದಲೂ ಇವು ಇದ್ದದ್ದೇ. ಅನೇಕ ಕಚ್ಚಾಟಗಳು, ಯುದ್ಧ, ಸಾವು ನೋವುಗಳಿಗೆ ಇಂತಹ ಹೊಯ್ದಾಟಗಳ ಕೊಡುಗೆಯೂ ದೊಡ್ಡದೇ) ಅವಕಾಶವಿದ್ದರೆ ಇನ್ನೊಂದರಲ್ಲಿ ಇವಕ್ಕೂ ಮೀರಿದ ಮಾನವೀಯತೆಯ ಹೂರಣವಿದೆ. ಇದೇ ಹಿನ್ನೆಲೆಯಲ್ಲಿ ಬಸವಣ್ಣನಂತವರು ದಯೆಯೇ ಧರ್ಮದ ಮೂಲವಯ್ಯ ಎಂದು ಸಾರಿದ್ದು. ಅಂದರೆ ದಯೆ ಮತ್ತು ಜೀವಪರತೆಯ ಹೊರತಾದ ಧರ್ಮಾಚರಣೆಗೆ ಯಾವ ಅರ್ಥವೂ ಇಲ್ಲ ಎಂದು.
ಪ್ರತಿಯೊಂದನ್ನೂ ಧರ್ಮ ಅರ್ಥಾತ್ ಮತ ಇನ್ನೂ ಹೇಳಬೇಕೆಂದರೆ ನನ್ನಧರ್ಮ ನಿನ್ನಧರ್ಮ ಎನ್ನುವ ಸಂಕುಚಿತ ಮನೋಭಾವದ ತಕ್ಕಡಿಯಿಟ್ಟು ನೋಡುವಂತಹ ಇಂದಿನ ಸಂದರ್ಭದಲ್ಲಿ ಪ್ರತಿಯೊಂದಕ್ಕೂ ಕೂಡ ಯೋಚಿಸಿಯೇ ಹೆಜ್ಜೆಯಿಡಬೇಕಾದಂತಹ ಅನಿವಾರ್ಯತೆ ಸೃಷ್ಟಿಯಾಗಿರುವುದು ಮಾತ್ರ ದುರದೃಷ್ಟಕರ. ಯಾರೋ ಸುಕನ್ಯಾ ಎಂಬ ಬಾಲಕಿಯ ದುರಂತಕ್ಕೆ ಮತ್ಯಾವನೋ ಮರುಗಿದನಂತೆ. ಎಲ್ಲವೂ ಸರಿಯಿತ್ತು. ಆದರೆ, ತನ್ನ ಹೆಸರೇ ಆತನಿಗೆ ಒಂದು ವರ್ಗದಿಂದ ಮುಂದೆ ಸಮಸ್ಯೆಗೆ ಕಾರಣವೆನಿಸಿಬಿಟ್ಟಿತು.
ಕೆಲ ಶತಮಾನದ ಹಿಂದೆ ಬಾರಕೂರನ್ನು ಅರಸೊತ್ತಿಗೆ ಆಳುತ್ತಿದ್ದ ಕಾಲದಲ್ಲಿ ನಡೆದಂತಹ ಘಟನೆಯೊಂದು ಅಂದಿನ ಶಾಸನಗಳಲ್ಲೂ ದಾಖಲಾಗಿದೆ. ಬಾರಕೂರಿನಿಂದ 25-30 ಕಿ.ಮೀ ದೂರದಲ್ಲಿರುವ ಕೋಟೇಶ್ವರ ಎಂಬಲ್ಲಿ ಪ್ರಸಿದ್ಧವಾದ ಕೋಟಿಲಿಂಗೇಶ್ವರ ಎನ್ನುವ ದೇಗುಲವಿದೆ. ಆ ಕಾಲದಲ್ಲಿ ಸುತ್ತಮುತ್ತಲಿನ ಪರಿಸರದಲ್ಲಿನ ಪ್ರಮುಖ (ಗೋಕರ್ಣ, ಉಡುಪಿ, ಸುಬ್ರಹ್ಮಣ್ಯಗಳನ್ನೊಳಗೊಂಡ ಸಪ್ತಕ್ಷೇತ್ರಗಳೆಂದು ಕರೆಯಲ್ಪಡುವ ಆಗಿನ ಪುಣ್ಯ ಕ್ಷೇತ್ರಗಳ ಪಟ್ಟಿಯಲ್ಲಿ ಬರುವ) ದೇಗುಲವಾಗಿದ್ದ ಈ ದೇಗುಲದ ವಾರ್ಷಿಕ ಜಾತ್ರೆ ಕೊಡಿ ಹಬ್ಬವೆಂದೇ ಖ್ಯಾತಿ ಪಡೆದಿತ್ತು (ಕೋಟ ಶಿವರಾಮ ಕಾರಂತರ ಕೃತಿಗಳಲ್ಲಿ ಈ ದೇಗುಲ ಮತ್ತು ಅಲ್ಲಿನ ಪ್ರಸಿದ್ಧ ಕೊಡಿ ಹಬ್ಬದ ಗೌಜಿನ ಕುರಿತಾದ ಉಲ್ಲೇಖಗಳು ಕಾಣಸಿಗುತ್ತವೆ). ಹಲವಾರು ದಿವಸಗಳ ಕಾಲ ಬಾರೀ ವಿಜೃಂಭಣೆಯಿಂದ ನಡೆಯುವ ಈ ಜಾತ್ರೆಯ ಸಂದರ್ಭದಲ್ಲಿ ಹಿಂದೊಮ್ಮೆ ನಡೆದಂತಹ ಮನಸ್ತಾಪಗಳಿಂದ ಕೆಲವಾರು ಹತ್ಯೆಗಳು ನಡೆದು ತದನಂತರ ಕೆಲವು ವರ್ಷಗಳ ಕಾಲ ಈ ಜಾತ್ರೆಯೇ ಸಂಪೂರ್ಣವಾಗಿ ನಿಂತು ಬಿಟ್ಟಿತ್ತು. ಇಂತಹ ಸಂದರ್ಭದಲ್ಲಿ ಈ ಮನಸ್ತಾಪದ ನಿವಾರಣೆಗಾಗಿ ಮುತುವರ್ಜಿಯಿಂದ ಕೋಟೇಶ್ವರಕ್ಕೆ ಧಾವಿಸಿ ಸೂಕ್ತರೀತಿಯ ಸಂಧಾನವನ್ನು ನಡೆಸಿ ಈ ಪ್ರಸಿದ್ಧವಾದ ಹಿಂದೂ ದೇವರ ಜಾತ್ರೆಯನ್ನು ಮರಳಿ ಆರಂಭಿಸಲು ಕಾರಣೀ ಕರ್ತನಾದವನ ಹೆಸರು ಎಕದಲಖಾನ್. ಇಸ್ಲಾಮ್ ಧರ್ಮ ಅನುಸರಿಸುತ್ತಿದ್ದ ಆತ ಆಗ ಸಾಮಂತನಾಗಿ ಬಾರಕೂರನ್ನು ಆಳುತ್ತಿದ್ದ.
ದಾಳಿಕೋರ ಪ್ರವೃತ್ತಿಯ ಮರಾಠಾ ಪೇಶ್ವೆಗಳು ಶೃಂಗೇರಿ ಪೀಠದ ಮೇಲೆ ದಾಳಿ ನಡೆಸಿ ಅಲ್ಲಿ ಲೂಟಿಗೈದು ಹಾನಿಯನ್ನೆಸಗಿ ಹೋದಾಗ ಮೈಸೂರನ್ನು ಆಳುತ್ತಿದ್ದ ಟಿಪ್ಪು ಸುಲ್ತಾನ ಶೃಂಗೇರಿಯಲ್ಲಿ ನಡೆದಂತಹ ಅನಾಹುತಕ್ಕೆ ಶ್ರೀಗಳಲ್ಲಿ ವಿಷಾದ ವ್ಯಕ್ತಪಡಿಸಿ ಪತ್ರಬರೆದು ಶಾರದಾ ಪೀಠದಲ್ಲಿ ನಡೆಸಲಾದ ಹಾನಿಯನ್ನು ತಾನೇ ಮುತುವರ್ಜಿಯಿಂದ ಸರಿಪಡಿಸುವ ಕೆಲಸಕ್ಕೆ ತಕ್ಷಣವೇ ಮುಂದಡಿಯಿಡುತ್ತಾನೆ. ಇಲ್ಲಿ ಯಾರೂ ಕೂಡ ನೀನ್ಯಾವನೋ ನಮ್ಮ ವಿಷಯಕ್ಕೆ ನಿನ್ನಂತಹ ಸಾಬರವನು ಮೂಗು ತೂರಿಸುವುದು ಬೇಕಾಗಿಲ್ಲ ಅಂದಿಲ್ಲ. ಅಂದು ರಾಜ್ಯಾಡಳಿತದ ಕಾಲ. ಆ ಧರ್ಮ ಈ ಧರ್ಮ ಎಣಿಸದೇ ಇವನ್ನೆಲ್ಲ ಮಾಡುವುದು ಒಳ್ಳೆಯ ರಾಜಾಧಿಕಾರದ ಲಕ್ಷಣವೂ ಹೌದು. ಆದರೆ ಇವತ್ತು ಪ್ರಜಾಪ್ರಭುತ್ವದ ಕಾಲಘಟ್ಟದಲ್ಲಿದ್ದೇವೆ. ಅನ್ಯಾಯ ನಡೆದಾಗ ಅದಕ್ಕೆ ಸ್ಪಂದಿಸುವುದು ಪ್ರತಿಯೊಬ್ಬ ಪ್ರಜೆಯ ಕರ್ತವ್ಯ ಅದು ಯಾರೇ ಆಗಿದ್ದರೂ ಕೂಡ.
ಸ್ವರ್ಗ, ನರಕ, ಪುನರ್ಜನ್ಮ, ಪಿತೃಗಳು, ಆತ್ಮ, ಪರಮಾತ್ಮ ಇತ್ಯಾದಿಗಳಲ್ಲಿ ಬಲವಾದ ನಂಬಿಕೆಯುಳ್ಳ ಹಿಂದೂ ಧರ್ಮದಲ್ಲಿ ಸಾವಿನ ನಂತರದ ಬದುಕು ಮತ್ತು ಅದಕ್ಕನುಗುಣವಾದ ಸಂಸ್ಕಾರಗಳಿಗೆ ಅದರದ್ದೇ ಆದಂತಹ ಮಹತ್ವಗಳಿವೆ. ಆದರೆ ಕೆಲ ವರ್ಷಗಳ ಹಿಂದೆ ಬಹುತೇಕ ಇಡೀ ಜಗತ್ತಿಗೆ ಜಗತ್ತೇ ಕೆಲ ಸಮಯ ಬೀಗ ಜಡಿದುಕೊಂಡು ಹೆದರಿ ಮಲಗಿತ್ತು. ಕಾರಣ ಕೊರೋನಾ ಎಂಬ ರೋಗದ ಬಗ್ಗೆ ಹಬ್ಬಿದಂತಹ ವಿಪರೀತ ಭಯ. ಯಾರು ಯಾರನ್ನೂ ಮಾತನಾಡಿಸಲಾರದಂತಹ ಎಲ್ಲೂ ಹೋಗಲಾರದಂತಹ ವಿಪರೀತ ನಿರ್ಬಂಧಗಳಿಂದ ಬಂಧಿಯಾದಂತಹ ಪರಿಸ್ಥಿತಿ ಅದು. ರೋಗ ಪೀಡಿತರು ಮತ್ತು ಆ ರೋಗದಿಂದ ಸತ್ತವರನ್ನು ಸಂಬಂಧಿಕರೇ ಜೀವ ಭಯದಿಂದ ಮುಟ್ಟ ಹೋಗದಂತಹ ಪರಿಸ್ಥಿತಿಯಲ್ಲಿ ಸ್ವತಹ ಮಕ್ಕಳೇ ಅಪ್ಪನ ಶವವನ್ನು ನೀವೇ ದಫನ (ಸಂಸ್ಕೃತಿ ದಹನದ್ದಾದರೂ) ಮಾಡಿ ಬಿಡಿ ಎಂದು ಆಸ್ಪತ್ರೆಗೇ ಬಿಡುತ್ತಿದ್ದರು. ಇಂತಹ ಸಂದರ್ಭದಲ್ಲಿ ಎಷ್ಟೋ ಮುಸಲ್ಮಾನರುಗಳು ಹಿಂದೂಗಳ ಶವವನ್ನು ಅವರ ಸಂಸ್ಕೃತಿಗೆ ಚ್ಯುತಿ ಬಾರದಂತೆ ದಫನ ಮಾಡಿದ ಪ್ರಕರಣಗಳು ದೇಶಾದ್ಯಂತ ನಡೆದಿದ್ದವು. ವರ್ಷದ ಹಿಂದೆ ಬಂದಂತಹ ತುಳು ಸಿನಿಮಾದ ಹಾಸ್ಯ ಸಂಭಾಷಣೆಯೊಂದು ಹೀಗಿದೆ. ತನ್ನ ಮುಸಲ್ಮಾನ (ಬ್ಯಾರಿ) ಸಹವರ್ತಿಯಲ್ಲಿ ಮತ್ತೊಬ್ಬ ತನ್ನ ಗೋಳನ್ನು ಹೀಗೆ ಹೇಳಿಕೊಳ್ತಾನೆ “ಸಾಯೋಣ ಅಂತ ಹೊಳೆಗೆ ಹಾರಿದ್ರೆ ನಿಮ್ಮವರದ್ದು ಉಪದ್ರವ ಮಾರಾಯ ಎತ್ತಿ ಆಚೆ ಹಾಕ್ತಾರೆ…” ಅಂತ. ಬಂಟ್ವಾಳದ ಪಾಣೆಮಂಗಳೂರು ಸೇತುವೆಯಿಂದ ಆತ್ಮಹತ್ಯೆಗೆ ಯತ್ನಿಸುವವರನ್ನು ಅಲ್ಲಿನ ಸ್ಥಳೀಯ ಮುಸಲ್ಮಾನರು ಎತ್ತಿ ಆಚೆ ಹಾಕೋದು ಅಲ್ಲಿನ ಮಾಮೂಲಿ ಸಂಗತಿ. ಮೊನ್ನೆ ಮೊನ್ನೆ ಉಪವಾಸ ವೃತದಲ್ಲಿದ್ದ ಮುಸಲ್ಮಾನನೊಬ್ಬ ಇಂತಹ ಕಾರ್ಯಕ್ಕಿಳಿದು ಸುದ್ದಿಯಾಗಿದ್ದ. ಇವರೆಲ್ಲ ಅನ್ಯಾಯಕ್ಕೊಳಗಾದವರ, ಅಮಾಯಕರುಗಳ ಧರ್ಮ ಹುಡುಕುವ ಪ್ರವೃತ್ತಿಯವರಾಗಿದ್ದರೆ ಮಾನವೀಯತೆ ಎಂಬುವುದಕ್ಕೆ ಖಂಡಿತ ಬೆಲೆಯೇ ಇರುತ್ತಿರಲಿಲ್ಲ.
ಪ್ರತಿದಿನ ಲಕ್ಷಾಂತರ ಜನರು ಸಾಯುತ್ತಾರೆ, ದೌರ್ಜನ್ಯಕ್ಕೊಳಗಾಗುತ್ತಾರೆ. ಸುಕನ್ಯಾಳ ಘಟನೆ ಅಂತಹದ್ದರಲ್ಲೊಂದು ಎಂದು ಮರೆತು ಬಿಡುವಂತಹ ವಿಚಾರವಿದೇನಲ್ಲ. ಅಪ್ರಾಪ್ತ ವಯಸ್ಸಿನ ಆಕೆ ಅತ್ಯಾಚಾರಕ್ಕೊಳಗಾಗಿದ್ದು, ಅಮಾನುಷ ರೀತಿಯಲ್ಲಿ ಕೊಲೆಯಾಗಿದ್ದದ್ದು ಹಗಲಿನಷ್ಟೇ ಸತ್ಯ. ಹಾಗಿದ್ದಲ್ಲಿ ಆ ದೌರ್ಜನ್ಯ ಎಸೆಗಿದಾತ ಒಬ್ಬ ಇದ್ದಿರಲೇ ಬೇಕಲ್ಲವೇ !? ಪ್ರಶ್ನೆ ಇರುವುದೇ ಇಲ್ಲಿ. ಎಂಥೆಂತಹ ಕ್ಲಿಷ್ಟಕರ ಕೇಸುಗಳನ್ನೆಲ್ಲ ಭೇದಿಸಿದವರಿಗೆ ಸುಕನ್ಯಾ ಮಾತ್ರ ಇನ್ನೂ ಬಿಡಿಸಲಾಗದ ಒಗಟಾಗಿದ್ದಾದರೂ ಹೇಗೆ?. ಇದು ಎಂಥವರನ್ನೂ ಸಹ ಕಾಡದೇ ಇರದು. ಇದನ್ನೇ ತನ್ನದೇ ಆದ ರೀತಿಯಲ್ಲಿ ಒಬ್ಬಾತ ಪ್ರಶ್ನಿಸಿದರೆ ವಿಚಾರವನ್ನು ಸುಕನ್ಯಾಳನ್ನು ಬಿಟ್ಟು ಎಲ್ಲೆಲ್ಲಿಗೋ ಎಳೆದಾಡಿಸಲಾಗುತ್ತಿದೆ. ಯಾಕೆ ಸುಕನ್ಯಾ ಹಿಂದೂ ಹೆಣ್ಣು ಮಗಳಲ್ಲವೇ !?
ಶಂಕರ್ ಸೂರ್ನಳ್ಳಿ
ಸಾಮಾಜಿಕ ಕಾರ್ಯಕರ್ತರು
ಇದನ್ನೂ ಓದಿ- http://“ದಿ ಗರ್ಲ್ ವಿಥ್ ದಿ ನೀಡಲ್” ಶಿಶು ಹಂತಕಿಯ ಕಾರ್ಯ; ಬೆಚ್ಚಿ ಬೀಳಿಸುವ ಕ್ರೌರ್ಯ https://kannadaplanet.com/the-girl-with-the-needle-film-review/