ಹಗರಣಗಳ ಆರೋಪ ಮಾಡುತ್ತಾ, ಆಪ್ ನಾಯಕರನ್ನು ಜೈಲಿಗೆ ಕಳುಹಿಸುತ್ತಾ ದೆಹಲಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದಿರುವಂತೆ ನೋಡಿಕೊಳ್ಳುವುದರ ಮೂಲಕ ಜನರಲ್ಲಿ ಆಳುವ ಪಕ್ಷದ ಮೇಲೆ ನಕಾರಾತ್ಮಕ ಅಭಿಪ್ರಾಯ ಹುಟ್ಟಿಸಿ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವುದು ಬಿಜೆಪಿ ಪಕ್ಷದ ಶಡ್ಯಂತ್ರವಾಗಿದೆ. ಆ ಶಡ್ಯಂತ್ರದ ಭಾಗವಾಗಿಯೇ ಕೈಲಾಶ್ ಗೆಹ್ಲೋಟ್ ರವರ ಪಕ್ಷಾಂತರ ಮಾಡಿಸಲಾಗಿದೆ -ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು.
ಬಿಜೆಪಿಯ ವಿಶೇಷ ಅದ್ಭುತ ವಿಶ್ವ ಪ್ರಸಿದ್ದ ಕೊಳೆ ತೊಳೆಯುವ ಶುದ್ಧೀಕರಣ ಯಂತ್ರ ಮತ್ತೆ ಕ್ರಿಯಾಶೀಲವಾಗಿದೆ. ದೆಹಲಿಯ ಆಪ್ ಪಾರ್ಟಿಯ ಪ್ರಭಾವಿ ನಾಯಕ ಕೈಲಾಶ್ ಗೆಹ್ಲೋಟ್ ರವರನ್ನು ತನ್ನ ಮಿರಾಕಲ್ ವಾಶಿಂಗ್ ಮಶಿನ್‌ನಲ್ಲಿ ಹಾಕಿ ತಾನೇ ಮೆತ್ತಿದ್ದ ಕೊಳೆಯನ್ನೆಲ್ಲಾ ತೊಳೆದು ಶುಭ್ರಗೊಳಿಸಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಲಾಗಿದೆ.
ಕಳೆದ ಸಲದ ದೆಹಲಿಯ ಚುನಾವಣೆಯಲ್ಲಿ ಮೂರನೇ ಬಾರಿಗೆ ಆಪ್ ಪಕ್ಷವು ತನ್ನ ಪೊರಕೆಯಿಂದ ಬಿಜೆಪಿ ಪಕ್ಷವನ್ನು ಸೋಲಿಸಿ ಬಹುಮತದಿಂದ ಅಧಿಕಾರದ ಚುಕ್ಕಾಣಿ ಹಿಡಿದಿತ್ತು. ಆಪರೇಶನ್ ಕಮಲಕ್ಕೂ ದಕ್ಕದಷ್ಟು ಹೆಚ್ಚುವರಿ ಸೀಟುಗಳು ಆಮ್ ಆದ್ಮಿ ಪಕ್ಷಕ್ಕೆ ದಕ್ಕಿದ್ದರಿಂದಾಗಿ ಶಾಸಕರ ಖರೀದಿ ಸಾಧ್ಯವಾಗದೆ ಬಿಜೆಪಿಗೆ ನಿರಾಸೆಯಾಗಿತ್ತು. ಪ್ಲಾನ್ ಎ ಫೇಲಾದರೇನಾಯ್ತು, ಪ್ಲಾನ್ ಬಿ ಯತ್ತ ಮೋದಿಶಾ ಗಳ ಚಿತ್ತ ಹರಿಯಿತು. ಅಬಕಾರಿ ಹಗರಣದ ನೆಪದಲ್ಲಿ ಆಪ್ ಪಕ್ಷದ ಪ್ರಮುಖರಾದ ಮನೀಶ್ ಸಿಸೋಡಿಯಾ ಹಾಗೂ ಸತ್ಯೆಂದ್ರ ಜೈನ್ ರವರನ್ನು ಸುದೀರ್ಘ ಕಾಲ ಜೈಲಿಗೆ ಕಳುಹಿಸಲಾಯ್ತು ಈ ಇಬ್ಬರಾದರೂ ಆಮ್ ಆದ್ಮಿ ಪಕ್ಷವನ್ನು ಇಬ್ಬಾಗ ಮಾಡಿ ಮಹಾರಾಷ್ಟ್ರದ ಏಕನಾಥ ಶಿಂಧೆ ರೀತಿಯಲ್ಲಿ ಬಿಜೆಪಿ ಜೊತೆ ಕೈಜೋಡಿಸಿ ಸರಕಾರ ರಚಿಸಿದ್ದರೆ ಇವರಿಗೆ ಜೈಲುವಾಸ ತಪ್ಪುತ್ತಿತ್ತು. ಹಾಗೂ ಅಬಕಾರಿ ಹಗರಣದ ಕೊಳೆತೆಗೆದು ಇವರನ್ನು ಶುಭ್ರಗೊಳಿಸಲು ಬಿಜೆಪಿ ಯ ವಾಶಿಂಗ್ ಮಷಿನ್ ಸಿದ್ಧವಾಗಿತ್ತು. ಆದರೆ ಯಾವ ಆಸೆ ಆಮಿಷ ಬ್ಲಾಕ್ಮೇಲ್ ಗಳಿಗೆ ಈ ಇಬ್ಬರು ಒಳಗಾಗದೇ ಇರುವುದರಿಂದ ಜೈಲು ಪಾಲಾಗಬೇಕಾಯ್ತು.
ಇಷ್ಟಾದರೂ ದೆಹಲಿ ಸಿಎಂ ಆಗಿ ಕೇಜ್ರಿವಾಲ್ ರವರು ತಮ್ಮ ಅಭಿವೃದ್ಧಿ ಕೆಲಸ ಮುಂದುವರೆಸಿಕೊಂಡು ಹೋಗಿದ್ದನ್ನು ಸಹಿಸದ ಕೇಂದ್ರ ಸರಕಾರ ತನ್ನ ಇಡಿ ಇಲಾಖೆಯ ಮೂಲಕ ಕೇಜ್ರಿವಾಲ್ ರವರನ್ನು ಬಂಧಿಸಿ ಜೈಲಿಗೆ ಕಳುಹಿಸಿತು. ನ್ಯಾಯಾಲಯ ಕೇಜ್ರಿವಾಲ್ ರವರಿಗೆ ಜಾಮೀನು ಕೊಟ್ಟಿತಾದರೂ ಕೇಂದ್ರದ ಇನ್ನೊಂದು ಸಾಕು ಸಂಸ್ಥೆ ಸಿಬಿಐ ಮೂಲಕ ಮತ್ತೆ ಜೈಲಿನಲ್ಲೇ ಕೊಳೆಯುವಂತೆ ಮಾಡಲಾಯ್ತು. ಕೊನೆಗೆ ಅಂತೂ ಇಂತೂ ಸುಪ್ರೀಂ ಕೋರ್ಟ್ ಮೂಲಕ ಜಾಮೀನು ಪಡೆದು ಸಿಸೋಡಿಯಾ, ಸತ್ಯೆಂದ್ರ ಜೈನ್ ಹಾಗೂ ಅರವಿಂದ್ ಕೇಜ್ರಿವಾಲ್ ಈ ಮೂವರೂ ಬಿಡುಗಡೆಯಾದರು.
ಅಬಕಾರಿ ಹಗರಣದಲ್ಲಿ ಇನ್ನೊಬ್ಬ ಆಪ್ ಪಕ್ಷದ ಪ್ರಭಾವಿ ಮಂತ್ರಿ ಕೈಲಾಶ್ ಗೆಹ್ಲೋಟ್ ವಿರುದ್ಧವೂ ಬಿಜೆಪಿ ಆರೋಪ ಮಾಡಿತ್ತು. 2020 ರಲ್ಲಿ ಅದೇ ತಾನೇ ಆಪ್ ಪಕ್ಷ ಚುನಾವಣೆಯಲ್ಲಿ ಮತ್ತೊಮ್ಮೆ ಜಯಭೇರಿ ಬಾರಿಸಿ ದೆಹಲಿ ಗದ್ದುಗೆಗೆ ಏರಿತ್ತು. ಆಗ ಬಿಜೆಪಿ ಪಕ್ಷವು ಮೊದಲು ಆರೋಪ ಮಾಡಿದ್ದೇ ಸಾರಿಗೆ ಸಚಿವ ಕೈಲಾಶರವರ ಮೇಲೆ. ದೆಹಲಿ ರಸ್ತೆ ಸಾರಿಗೆ ಸಂಸ್ಥೆಯ ಒಂದು ಸಾವಿರ ಬಸ್ಸುಗಳ ಖರೀದಿ ಮತ್ತು ನಿರ್ವಹಣೆಯ ರೂ. 4,500 ಕೋಟಿ ಮೊತ್ತದ ಗುತ್ತಿಗೆಯಲ್ಲಿ ಗೆಹ್ಲೋಟ್ ರವರು ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪ ಹೊರಿಸಿದ ಬಿಜೆಪಿ ನಾಯಕರುಗಳು ಗೆಹ್ಲೋಟ್ ರಾಜೀನಾಮೆ ಹಾಗೂ ತನಿಖೆಗೆ ಒತ್ತಾಯಿಸ ತೊಡಗಿದರು. ಕೇಂದ್ರ ಸರಕಾರದ ಆಣತಿಯಂತೆ ಸಿಬಿಐ ಪ್ರಕರಣ ದಾಖಲಿಸಿತು. ಅದರ ಹಿಂದೆಯೇ ಇಡಿ ಎಂಟ್ರಿ ಕೊಟ್ಟಿತು. ಸರಕಾರದ ಆಡಳಿತದಲ್ಲಿ ಮೂಗು ತೂರಿಸಿದ ಲೆಫ್ಟ್ ನೆಂಟ್ ಗವರ್ನರ್ ಅನಿಲ್ ಬೈಜಾಲ್ ರವರು ಬಸ್ ನಿರ್ವಹಣೆಯ ಗುತ್ತಿಗೆಯನ್ನೇ ರದ್ದುಪಡಿಸಿದರು. ಅಬಕಾರಿ ನೀತಿಯ ಪರಿಷ್ಕರಣೆಯಲ್ಲಿ ಗೆಹ್ಲೋಟ್ ಪಾತ್ರವೂ ಇದೆಯೆಂದು ಕೇಂದ್ರದ ತನಿಖಾ ಸಂಸ್ಥೆಗಳು ಆರೋಪಿಸಿದವು.
ಇಷ್ಟೆಲ್ಲಾ ಆರೋಪ ಬಂದರೂ ಸಿಎಂ ಕೇಜ್ರಿವಾಲ್ ರವರು ಗೆಹ್ಲೋಟ್ ಬೆಂಬಲಕ್ಕೆ ನಿಂತರು. ಆದರೆ ಸಿಸೋಡಿಯಾ, ಜೈನ್, ಕೇಜ್ರಿವಾಲ್ ರವರಿಗಿದ್ದ ಆತ್ಮಸ್ಥೈರ್ಯ ಹಾಗೂ ಹೋರಾಟದ ಮನೋಭಾವ ಗೆಹ್ಲೋಟ್ ರವರಿಗೆ ಇರಲಿಲ್ಲ. ಹೀಗಾಗಿ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡು ವಾಷಿಂಗ್ ಮಷಿನ್ ಪ್ರವೇಶಿಸಿ ಆರೋಪ ಮುಕ್ತರಾಗಲು ಸಮಯಕ್ಕೆ ಕಾಯತೊಡಗಿದರು. ಹೇಗೂ ಕುರಿ ತಮ್ಮ ಹಳ್ಳಕ್ಕೆ ಬಿತ್ತು ಎಂಬುದು ಕನ್ ಫರ್ಮ್ ಆದ ಕೂಡಲೇ ಬಿಜೆಪಿ ನಾಯಕರು ಗೆಹ್ಲೋಟ್ ಅವರ ರಾಜೀನಾಮೆ ಕೇಳಲಿಲ್ಲ. ಇಡಿ ಹಾಗೂ ಸಿಬಿಐ ಅವರನ್ನು ಬಂಧಿಸಲು ಪ್ರಯತ್ನಿಸಲಿಲ್ಲ. ಕೊನೆಗೂ ನವೆಂಬರ್ 17 ರಂದು ಗೆಹ್ಲೋಟ್ ರವರು ಆಪ್ ಪಕ್ಷಕ್ಕೆ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬಿಜೆಪಿಯ ಮಿರಾಕಲ್ ಕೊಳೆ ನಾಶಕ ಯಂತ್ರವನ್ನು ಪ್ರವೇಶಿಸಿ ಪರಿಶುದ್ಧತೆಯ ಪ್ರಮಾಣಪತ್ರದೊಂದಿಗೆ ಶಾಸ್ತ್ರೋಕ್ತವಾಗಿ ಬಿಜೆಪಿ ಸೇರಿದರು. ಇನ್ನು ಮೇಲೆ ತನಿಖಾ ಸಂಸ್ಥೆಗಳು ಗೆಹ್ಲೋಟ್ ರಿಗೆ ಕ್ಲೀನ್ ಚಿಟ್ ಕೊಡುವುದಂತೂ ಗ್ಯಾರಂಟಿ.
ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಕೊಟ್ಟು, ಗೆಲ್ಲಿಸಿ, ಸಚಿವರನ್ನಾಗಿ ಮಾಡಿ ಅಧಿಕಾರ ಕೊಟ್ಟ ಆಪ್ ಪಕ್ಷ ಬಿಟ್ಟು ಯಾಕೆ ಬಿಜೆಪಿ ಸೇರಿದ್ರಿ ಎಂದು ಕೇಳಿದವರಿಗೆ “ಆಪ್ ಪಕ್ಷ ಈಗ ಮೊದಲಿನಂತಿಲ್ಲ. ಏಕ ವ್ಯಕ್ತಿ ಪಕ್ಷವಾಗಿದೆ. ಹೀಗಾಗಿ ಪಕ್ಷವನ್ನು ತೊರೆದು ಬಿಜೆಪಿ ಸೇರಿದ್ದೇನೆ” ಎಂದು ಸಮರ್ಥನೆ ಕೊಟ್ಟರು. ಆದರೆ ದೆಹಲಿ ರಾಜಕೀಯದ ಕುರಿತು ಅರಿವು ಇರುವ ಎಲ್ಲರಿಗೂ ಗೊತ್ತಿದೆ ಕೇಂದ್ರ ಸರಕಾರದ ಬ್ಲಾಕ್ಮೇಲ್ ತಂತ್ರಕ್ಕೆ ಹೆದರಿ, ತನಿಖಾ ಸಂಸ್ಥೆಗಳ ಒತ್ತಡಕ್ಕೆ ಈಡಾಗಿ ಗೆಹ್ಲೋಟ್ ಬಿಜೆಪಿ ಸೇರಿದ್ದಾರೆಂದು. ಆದರೆ ಬಿಜೆಪಿ ಸಹ ಏಕವ್ಯಕ್ತಿ ಸರ್ವಾಧಿಕಾರಿ ಪಕ್ಷವೆಂದು ಗೆಹ್ಲೋಟ್ ರವರಿಗೂ ಗೊತ್ತಿದೆ. ಆದರೆ ಜೈಲಿಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಬಿಜೆಪಿಯ ವಾಷಿಂಗ್ ಮಶಿನ್ ಎಂಟ್ರಿ ಬಿಟ್ಟರೆ ಬೇರೆ ದಾರಿ ಇಲ್ಲವಾಗಿದೆ.
ಶಾಸಕರ ಖರೀದಿ ಅಸಾಧ್ಯವಾದರೆ ತನಿಖಾ ಸಂಸ್ಥೆಗಳ ಮೂಲಕ ಬ್ಲಾಕ್ಮೇಲ್ ಮಾಡುವ ಮೋದಿ ಶಾ ತಂತ್ರಗಾರಿಕೆ ಗೆಹ್ಲೋಟ್ ವಿಷಯದಲ್ಲೂ ವರ್ಕೌಟ್ ಆಗಿದೆ. ಇನ್ನೊಂದು ವರ್ಷದ ಒಳಗೆ ಮತ್ತೆ ದೆಹಲಿಯ ಚುನಾವಣೆ ಬರುವುದಿದೆ. ಅಷ್ಟರಲ್ಲಿ ಆಮ್ ಆದ್ಮಿ ಪಕ್ಷದ ಪ್ರಮುಖರ ಮೇಲೆ ಸಾಧ್ಯವಾದಷ್ಟೂ ಆರೋಪಗಳನ್ನು ಮಾಡುವುದು, ಸುಳ್ಳು ಕೇಸುಗಳಲ್ಲಿ ಜೈಲಿಗೆ ಕಳುಹಿಸಿ ತೇಜೋವಧೆ ಮಾಡುವುದು. ಇದಕ್ಕೆಲ್ಲಾ ಹೆದರಿದವರನ್ನು ಕೊಳೆನಾಶಕ ಯಂತ್ರದ ಮೂಲಕ ಶುದ್ಧಿಕರಣ ಮಾಡಿ ಬಿಜೆಪಿ ಪಕ್ಷಕ್ಕೆ ಸೇರಿಸಿಕೊಳ್ಳುವುದು ಕಮಲ ಪಕ್ಷದ ಮಹಾ ತಂತ್ರಗಾರಿಕೆಯಾಗಿದೆ. ಹೀಗೆ ಹಗರಣಗಳ ಆರೋಪ ಮಾಡುತ್ತಾ, ಆಪ್ ನಾಯಕರನ್ನು ಜೈಲಿಗೆ ಕಳುಹಿಸುತ್ತಾ ದೆಹಲಿಯಲ್ಲಿ ಯಾವುದೇ ಅಭಿವೃದ್ಧಿ ಕೆಲಸಗಳು ಆಗದಿರುವಂತೆ ನೋಡಿಕೊಳ್ಳುವುದರ ಮೂಲಕ ಜನರಲ್ಲಿ ಆಳುವ ಪಕ್ಷದ ಮೇಲೆ ನಕಾರಾತ್ಮಕ ಅಭಿಪ್ರಾಯ ಹುಟ್ಟಿಸಿ ಮುಂದಿನ ಚುನಾವಣೆಯಲ್ಲಿ ಗೆದ್ದು ಅಧಿಕಾರ ಹಿಡಿಯುವುದು ಬಿಜೆಪಿ ಪಕ್ಷದ ಶಡ್ಯಂತ್ರವಾಗಿದೆ. ಆ ಶಡ್ಯಂತ್ರದ ಭಾಗವಾಗಿಯೇ ಕೈಲಾಶ್ ಗೆಹ್ಲೋಟ್ ರವರ ಪಕ್ಷಾಂತರ ಮಾಡಿಸಲಾಗಿದೆ. ಗೆಹ್ಲೋಟ್ ಮೂಲಕ ಆಪ್ ಪಕ್ಷದ ತೇಜೋವಧೆ ಮಾಡಿಸುವ ಹುನ್ನಾರ ಆರಂಭವಾಗಿದೆ. ಮತ್ತೆ ಮುಂದಿನ ಬಲಿಪಶುವಿಗಾಗಿ ಬಿಜೆಪಿಯ ವಾಷಿಂಗ್ ಮಶಿನ್ ಕಾಯುತ್ತಿದೆ.
ಶಶಿಕಾಂತ ಯಡಹಳ್ಳಿ
ರಾಜಕೀಯ ವಿಶ್ಲೇಷಕರು
ಇದನ್ನೂ ಓದಿ- ಇಂಡಿಯಾಗೆ ಬೇಕಿದೆ ಇಂದಿರಾ ಐಡಿಯಾ