ಹೇಗಿದ್ದ ಕರಾವಳಿ ಹೇಗಾಗಿ ಹೋಯಿತು!ಈಗಲಾದರೂ ಎಚ್ಚೆತ್ತುಕೊಳ್ಳಿ

Most read

ಬನ್ನಿ, ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸೋಣ. ಸಮಾಜದಲ್ಲಿ ಶಾಂತಿ, ಸೌಹಾರ್ದ ಕಾಪಾಡುತ್ತಾ, ನಮ್ಮನ್ನು ಪ್ರಗತಿಯೆಡೆಗೆ ಒಯ್ಯುವ ಸಮರ್ಥ ಅಭ್ಯರ್ಥಿಗಳನ್ನುಆರಿಸೋಣ. ಬದಲಾವಣೆಗೆ ನಮ್ಮ ಮತವಿರಲಿ, ಪ್ರೀತಿಗೆ ನಮ್ಮ ಮತವಿರಲಿ, ನಮ್ಮ ಮತ ಸದಾ ದ್ವೇಷದ ವಿರುದ್ಧವಿರಲಿಶ್ರೀನಿವಾಸ ಕಾರ್ಕಳ

ಇತಿಹಾಸ ಕಾಲದಿಂದಲೂ ಕರ್ನಾಟಕ ಕರಾವಳಿಯ ಈ ದಕ್ಷಿಣ ಭಾಗವು ಮಹತ್ವದ ಸ್ಥಾನವೊಂದನ್ನು ಪಡೆದುಕೊಂಡಿತ್ತು. ಇಲ್ಲಿಗೆ ಭೇಟಿ ನೀಡಿದ ಅನೇಕ ವಿದೇಶೀ ಪ್ರವಾಸಿಗಳು ಆ ಸಂಗತಿಗಳನ್ನು ತಮ್ಮ ಪುಸ್ತಕಗಳಲ್ಲಿ ದಾಖಲಿಸಿದ್ದಾರೆ.

ಇದೇ ಕಡಲ ಕರೆಯಿಂದ ವಿದೇಶಗಳೊಂದಿಗೆ ನಿರಂತರ ಆಮದು ರಫ್ತು ವ್ಯಾಪಾರ ವಹಿವಾಟುಗಳು ನಡೆಯುತ್ತಿದ್ದವು. ಇಲ್ಲಿಂದ ಅಲ್ಲಿಗೆ ಜನ ಹೋಗುತ್ತಿದ್ದರು, ಅಲ್ಲಿಂದ ಇಲ್ಲಿಗೆ ಜನ ಬರುತ್ತಿದ್ದರು. ಫಲವಾಗಿ, ಇಲ್ಲಿ ಬಹುಭಾಷೆ, ಬಹುಧರ್ಮ, ಬಹು ಆಚಾರ ವಿಚಾರಗಳ ಅನನ್ಯ ಬಹುಸಂಸ್ಕೃತಿಯೊಂದು ನೆಲೆಗೊಂಡಿತು. ಅಕ್ಕ ಪಕ್ಕದಲ್ಲಿಯೇ ಇರುವ ಹಿಂದೂಗಳ ದೇವಾಲಯ, ಕ್ರೈಸ್ತರ ಚರ್ಚ್ ಗಳು, ಮುಸ್ಲಿಮರ ಮಸೀದಿ ದರ್ಗಾಗಳು, ದೈವಗಳ ಕೋಲ, ಸಾಂತ್ ಮಾರಿ, ಉರೂಸು ಮೊದಲಾದ ಆಚರಣೆಗಳು ಈ ಮತೀಯ ಸಾಮರಸ್ಯದ ವಿಶೇಷವನ್ನು ಸಾರಿ ಹೇಳುತ್ತಿವೆ. ಸೌಹಾರ್ದ ಸಂಸ್ಕೃತಿಯ ಕಾರಣವಾಗಿಯೇ ಈ ಭಾಗ ಶಿಕ್ಷಣ, ವ್ಯಾಪಾರ ಹೀಗೆ ಎಲ್ಲ ಕ್ಷೇತ್ರಗಳಲ್ಲಿಯೂ ಅಸಾಧಾರಣ ಪ್ರಗತಿ ದಾಖಲಿಸಿತು.

ಮುಸ್ಲಿಮರ ಪ್ರವೇಶದಿಂದ ಕರಾವಳಿಯು ವಾಣಿಜ್ಯ ದೃಷ್ಟಿಯಿಂದ ಬೆಳೆದರೆ, ಕ್ರಿಶ್ಚಿಯನ್ ಮಿಷನರಿಗಳ ಪ್ರವೇಶದ ಕಾರಣ ಶಿಕ್ಷಣ, ಕೈಗಾರಿಕೆ, ವೈದ್ಯಕೀಯ ಇತ್ಯಾದಿ ರಂಗಗಳಲ್ಲಿಯೂ ಅಪಾರ ಸಾಧನೆ ಮಾಡಿತು. ಸ್ವಾತಂತ್ರ್ಯ ಹೋರಾಟ ಕಾಲದಲ್ಲಿಯೂ ಇಲ್ಲಿನ ಹಿಂದೂ ಮುಸ್ಲಿಂ, ಎಲ್ಲ ಮತೀಯರೂ ಹೆಗಲಿಗೆ ಹೆಗಲು ಕೊಟ್ಟು ದುಡಿದರು.

ಅಭಿವೃದ್ಧಿಯ ಹಾದಿಯಲ್ಲಿ ದಾಪುಗಾಲು

ಕರಾವಳಿ

ಜನರ ಉದ್ಯಮ ಶೀಲತೆಯ ಕಾರಣ, ಇಲ್ಲಿ ಸಿಂಡಿಕೇಟ್ ಬ್ಯಾಂಕ್, ಕೆನರಾ ಬ್ಯಾಂಕ್, ವಿಜಯಾ ಬ್ಯಾಂಕ್, ಕರ್ನಾಟಕ ಬ್ಯಾಂಕ್, ಕಾರ್ಪೋರೇಶನ್ ಬ್ಯಾಂಕ್ ಗಳು ಉದಯಿಸಿದವು. ಸಹಕಾರ ಚಳುವಳಿಯಂತೂ ಈ ಭಾಗದ ಜನರ ಜೀವನದಲ್ಲಿ ತಂದ ಬದಲಾವಣೆ ವಿಶೇಷವಾದುದು. ಈ ಭಾಗದಿಂದ ಜನರು ಮುಂಬೈ, ವಿದೇಶಗಳಿಗೆ ಹೋಗಿ ದುಡಿದು ಅಲ್ಲಿನ ಗಳಿಕೆಯಲ್ಲಿ ಊರನ್ನು ಆರ್ಥಿಕವಾಗಿ ಸಮೃದ್ಧಗೊಳಿಸಿದರು.

ದೇಶಕ್ಕೆ ಸ್ವಾತಂತ್ರ್ಯ ಬಂದ ಕಾಲಕ್ಕೆ ಇಲ್ಲಿನ ಅನೇಕ ಕಾಂಗ್ರೆಸ್ ನಾಯಕರು ರಾಷ್ಟ್ರ ರಾಜಕಾರಣದಲ್ಲಿ ಪ್ರಭಾವಿಗಳಾಗಿದ್ದರು. ಶ್ರೀನಿವಾಸ ಮಲ್ಯರಂಥವರು ಮೊದಲ ಪ್ರಧಾನಿ ಜವಾಹರಲಾ‍ಲ್ ನೆಹರೂ ಅವರ ನಿಕಟವರ್ತಿಗಳಾಗಿದ್ದರಿಂದ ಇಲ್ಲಿನ ಬೆಳವಣಿಗೆಗಳಿಗೆ ವಿಶೇಷ ಸಹಾಯವಾಯಿತು. ಆನಂತರದ ಎಲ್ಲ ರಾಜ್ಯ ಮತ್ತು ಕೇಂದ್ರ ಸರಕಾರಗಳಲ್ಲೂ ಕರಾವಳಿಯ ರಾಜಕಾರಣಿಗಳು ಮಹತ್ವದ ಸ್ಥಾನ ಪಡೆದಿದ್ದರು.

ಇದೇ ಕಾರಣದಿಂದ, ಇಲ್ಲಿ 75 ವರ್ಷಗಳ ಹಿಂದೆಯೇ ಇಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯಾಯಿತು. ನವ ಮಂಗಳೂರು ಬಂದರು, ರೈಲ್ವೆ ವಿಸ್ತರಣೆ, ಹೆದ್ದಾರಿಗಳು, ಸೇತುವೆಗಳು…  ಆನಂತರ ಸುರತ್ಕಲ್ ನಲ್ಲಿ ಕರ್ನಾಟಕ ರೀಜನಲ್ ಇಂಜಿನಿಯರಿಂಗ್ ಕಾಲೇಜ್, ಮಣಿಪಾಲದ ವೈದ್ಯಕೀಯ ಸಂಸ್ಥೆಗಳು, ಎಂಸಿಎಫ್, ಎಂ ಆರ್ ಪಿ ಎಲ್, ಬಿ ಎ ಎಸ್ ಎಫ್, ಉಷ್ಣ ವಿದ್ಯುತ್ ಸ್ಥಾವರ, ವಿಶೇಷ ಆರ್ಥಿಕ ವಲಯ, ಇನ್ಫೋಸಿಸ್ ಇವೆಲ್ಲ ದೇಶದ ಪ್ರಗತಿ ನಕಾಶೆಯಲ್ಲಿ ಕರ್ನಾಟಕ ಕರಾವಳಿಯು ಎದ್ದು ಕಾಣುವಂತೆ ಮಾಡಿದವು. ಶಿಕ್ಷಣ, ವ್ಯಾಪಾರ ವ್ಯವಹಾರ, ಉದ್ಯಮ ಎಂದು ಹೊರ ನಾಡುಗಳಿಂದ ಜನರು ದೊಡ್ಡ ಸಂಖ್ಯೆಯಲ್ಲಿ ಬರತೊಡಗಿದರು. ಅಭಿವೃದ್ಧಿಯ ಹಾದಿಯಲ್ಲಿ ಕರಾವಳಿ ದಾಪುಗಾಲು ಹಾಕ ತೊಡಗಿತು. ಇವೆಲ್ಲವೂ ಆದುದು ಕಾಂಗ್ರೆಸ್ ಕಾಲದಲ್ಲಿ ಮತ್ತು ಶಾಂತಿ, ಸಾಮರಸ್ಯ ನೆಲೆಗೊಂಡಿದ್ದ ಕಾಲದಲ್ಲಿ.

ನವ ಮಂಗಳೂರು ಬಂದರು

ಬದಲಾದ ಪರಿಸ್ಥಿತಿ

ಇಂತಹ ಒಂದು ಹೆಮ್ಮೆಯ ಪರಿಸ್ಥಿತಿ ಬದಲಾದುದು ಸರಿ ಸುಮಾರು 35 ವರ್ಷಗಳ ಹಿಂದೆ. ದೇಶದಲ್ಲಿ ಮತೀಯ ರಾಜಕಾರಣ ಬಲಗೊಳ್ಳುತ್ತಾ ಹೋದಾಗ ಅದರ ಪರಿಣಾಮ ಇಲ್ಲೂ ಕಾಣಿಸಿಕೊಳ್ಳಲಾರಂಭಿಸಿತು. ಕರಾವಳಿಯು ಬಿಜೆಪಿಯ ತೆಕ್ಕೆಗೆ ಸೇರಿತು. ರಾಜಕೀಯ ಲಾಭಕ್ಕಾಗಿ ಮತೀಯ ನೆಲೆಯಲ್ಲಿ ಜನರನ್ನು ಒಡೆಯುವ ಕೆಲಸ ಆರಂಭವಾದಾಗ ಕರಾವಳಿಯ ಶಾಂತಿ, ಮತೀಯ ಸೌಹಾರ್ದಕ್ಕೆ ಬಲವಾದ ಏಟು ಲಭಿಸಿತು. ಕರಾವಳಿಯು ಕೋಮು ಪ್ರಯೋಗಾಲಯವಾಯಿತು.

ದ್ವೇಷ, ಹಿಂಸೆಯ ಮೂಲಕ ಅಧಿಕಾರ ಹಿಡಿದವರು ಅಧಿಕಾರ ಉಳಿಸಿಕೊಳ್ಳಲೂ ಅದನ್ನು ಅವಲಂಬಿಸುವುದು ಅನಿವಾರ್ಯ. ಜನರ ಬದುಕಿಗೆ ಅತ್ಯಗತ್ಯವಾದ ವಿಷಯಗಳಲ್ಲಿ ಪ್ರಗತಿಯ ಕೆಲಸ ಮಾಡುವ ಬದಲು, ಅವರನ್ನು ಭಾವನಾತ್ಮಕ ವಿಷಯಗಳಲ್ಲಿ ಮೈಮರೆಯುವಂತೆ ಮಾಡಲಾಯಿತು. ದ್ವೇಷ ಭಾಷಣಗಳು. ಕೋಮು ಗಲಭೆಗಳು, ಕೋಮು ದಾಳಿಗಳು, ಕೋಮು ಕೊಲೆಗಳು ನಿತ್ಯದ  ಮಾತಾದವು. ಪದೇ ಪದೇ ಸೆಕ್ಷನ್ 144 ನಂತಹ ನಿಷೇಧಾಜ್ಞೆಗಳು, ಲಾಠಿ ಛಾರ್ಜ್, ಕಂಡಲ್ಲಿ ಗುಂಡು, ಕರ್ಫ್ಯೂಗಳು  … ಪರಿಣಾಮವಾಗಿ ಕರಾವಳಿಯ ಬಗ್ಗೆ ಹೊರಗಡೆ ಒಂದು ಕೆಟ್ಟ ಇಮೇಜ್ ನಿರ್ಮಾಣವಾಯಿತು. ‘ಮಂಗಳೂರೋ? ಬೇಡಪ್ಪ.. ಅಲ್ಲಿ ಹುಡುಗ ಹುಡುಗಿ ಜತೆಯಾಗಿದ್ದರೆ ಹೊಡೆಯುತ್ತಾರಂತೆ, ಮೋರಲ್ ಪೊಲೀಸಿಂಗ್ ವ್ಯಾಪಕವಾಗಿದೆಯಂತೆ…’ ಎಂದು ಪೋಷಕರು ಮಕ್ಕಳನ್ನು ಓದಲು ಕಳಿಸಲು ಹಿಂದೇಟು ಹಾಕಿದರು. ‘ಅಲ್ಲಿ ಯಾವಾಗ ನೋಡಿದರೂ ಗಲಾಟೆ, ಬಂದ್, ನಾವು ಹೂಡಿಕೆ ಮಾಡಿದರೆ ನಷ್ಟ ಗ್ಯಾರಂಟಿ…’ ಎಂದು ವ್ಯಾಪಾರಿಗಳು ಉದ್ಯಮಿಗಳು ಇಲ್ಲಿ ಹೂಡಿಕೆ ನಡೆಸಲು ಹಿಂದೆ ಮುಂದೆ ನೋಡಿದರು.  ಪಬ್ ದಾಳಿ, ಹೋಂ ಸ್ಟೇ ದಾಳಿಯ ಮೂಲಕ ಮಂಗಳೂರು  ವಿದೇಶದಲ್ಲೂ ಕೆಟ್ಟ ಕಾರಣಕ್ಕೆ ಸುದ್ದಿಯಾಯಿತು.  

ದ್ವೇಷ ಮತ್ತು ಹಿಂಸೆಯ ರಾಜಕಾರಣದ ಕಾರಣ, ಇಲ್ಲಿ ಅಭಿವೃದ್ಧಿ ಚಟುವಟಿಕೆಗಳು ನಿಂತು ಮೂರೂವರೆ ದಶಕಗಳಾದವು. ಏನು ಅಭಿವೃದ್ಧಿ ಕಾರ್ಯ ನಡೆದಿದೆ ಎಂದು ಯಾರಾದರೂ ಕೇಳಿದರೆ ತೋರಿಸಲು ಏನೂ ಇಲ್ಲದಂತಹ ಪರಿಸ್ಥಿತಿ. ಆಗಬೇಕಾಗಿದ್ದ ಕೆಲಸಗಳ ಪಟ್ಟಿ ಮಾಡಿದರೆ ಅದಕ್ಕೆ ಕೊನೆಯೆಂಬುದು ಇರಲಾರದು, ಹಾಗಾಗಿದೆ.

ಎಚ್ಚರ ತಪ್ಪದಿರೋಣ, ತಪ್ಪದೆ ಮತ ಚಲಾಯಿಸೋಣ

ಈಗ ಮತ್ತೆ ಲೋಕಸಭಾ ಚುನಾವಣೆ ಬಂದಿದೆ. ಮತದಾರರಾದ ನಮಗೆ ಅಸಮರ್ಥ ಜನಪ್ರತಿನಿಧಿಗಳನ್ನು ಹಿಂದಕ್ಕೆ ಕರೆಸಿಕೊಳ್ಳುವ ಅಧಿಕಾರ ಇಲ್ಲ. ಆದರೆ ಸಮರ್ಥ ಅಭ್ಯರ್ಥಿಯನ್ನು ಆರಿಸುವ ಸಾಂವಿಧಾನಿಕ ಅಧಿಕಾರವಾದ ಓಟು ಇದೆ.

ದೇಶ ಇದೀಗ ಅತ್ಯಂತ ಅಪಾಯಕಾರಿ ಘಟ್ಟವೊಂದನ್ನು ಹಾದುಹೋಗುತ್ತಿದೆ. ದೇಶದ ಸಂವಿಧಾನ ಮತ್ತು ಪ್ರಜಾತಂತ್ರ ಗಂಡಾಂತರದಲ್ಲಿದೆ. ಆದ್ದರಿಂದಲೇ ಇದು ಅತ್ಯಂತ ಮಹತ್ವದ ಒಂದು ಚುನಾವಣೆ. ನಾವು ಸಮರ್ಥ ಅಭ್ಯರ್ಥಿಗಳನ್ನು ಆರಿಸಿ ಸಂಸತ್ತಿಗೆ ಕಳುಹಿಸಬೇಕಾಗಿದೆ. ಈ ಬಾರಿ ಕರಾವಳಿಯಲ್ಲಿ ಡಾ. ಅಂಜಲಿ ನಿಂಬಾಳ್ಕರ್, ಜಯಪ್ರಕಾಶ ಹೆಗ್ಡೆ, ಪದ್ಮರಾಜ್ ರಂಥಹ ಸಭ್ಯರು, ಸಮರ್ಥರು, ಸುಶಿಕ್ಷಿತರು ಅಭ್ಯರ್ಥಿಗಳಾಗಿ ನಮ್ಮ ಮುಂದಿದ್ದಾರೆ.

ಪದ್ಮರಾಜ್‌ ಮತ್ತು ಜಯಪ್ರಕಾಶ್‌ ಹೆಗ್ದೆ

ಸೌಹಾರ್ದ, ಪ್ರಗತಿಶೀಲ, ಸೌಹಾರ್ದ ಕರಾವಳಿಯ ಗತವೈಭವವನ್ನು ಮರಳಿ ಪಡೆಯಲು ನಮಗೆ ಇದೊಂದು ಸುವರ್ಣಾವಕಾಶ ಮತ್ತು ಕೊನೆಯ ಅವಕಾಶ. ನಮ್ಮ ಭವಿಷ್ಯಕ್ಕೆ ನಾವೇ ಹೊಣೆಗಾರರು. ನಮಗೆ ಸಂವಿಧಾನ ನೀಡಿದ ವಿಶೇಷ ಅಧಿಕಾರವಾದ ಮತ ಚಲಾವಣೆಯನ್ನು ಮಾಡದೆ ನಮಗೆ ಬೇರೆಯವರನ್ನು ದೂರುವ ನೈತಿಕತೆಯಿಲ್ಲ. ನಮ್ಮ ಕರ್ತವ್ಯವನ್ನು ನಿರ್ವಹಿಸಿ ಬಳಿಕ ಹಕ್ಕನ್ನು ಕೇಳೋಣ.

ಬನ್ನಿ ದೊಡ್ಡ ಸಂಖ್ಯೆಯಲ್ಲಿ ಮತ ಚಲಾಯಿಸೋಣ. ಬುದ್ಧಿವಂತರ ಜಿಲ್ಲೆ ತನ್ನ ಹೆಸರು ಉಳಿಸಿಕೊಳ್ಳುವ ರೀತಿಯಲ್ಲಿ ಮತ ಚಲಾಯಿಸೋಣ. ಸಮಾಜದಲ್ಲಿ ಶಾಂತಿ, ಸೌಹಾರ್ದ ಕಾಪಾಡುತ್ತಾ, ನಮ್ಮನ್ನು ಪ್ರಗತಿಯೆಡೆಗೆ ಒಯ್ಯುವ ಸಮರ್ಥ ಅಭ್ಯರ್ಥಿಗಳನ್ನುಆರಿಸೋಣ.

ಬದಲಾವಣೆಗೆ ನಮ್ಮ ಮತವಿರಲಿ, ಪ್ರೀತಿಗೆ ನಮ್ಮ ಮತವಿರಲಿ, ನಮ್ಮ ಮತ ಸದಾ ದ್ವೇಷದ ವಿರುದ್ಧವಿರಲಿ.

ಶ್ರೀನಿವಾಸ ಕಾರ್ಕಳ

ಚಿಂತಕರು

ಇದನ್ನೂ ಓದಿ-ಕರ್ನಾಟಕದ ಕನ್ನಡ, ತುಳು, ಕೊಂಕಣಿ, ಕೊಡವ, ಬಂಜಾರ ಹಾಗೂ ಇತರೆಲ್ಲಾ ಭಾಷೆ, ಸಮುದಾಯಗಳ ಬಂಧುಗಳಲ್ಲಿ ನಮ್ರ ವಿನಂತಿ.

More articles

Latest article