ಕರ್ಮಫಲ ಸಾರುವ ನಾಡಿನಲ್ಲಿ ಮರ್ಯಾದೆಗೇಡು ಹತ್ಯೆಯ ಚಾಳಿ

Most read

ಹೊಸ ಸಹಸ್ರಮಾನ 2000 ಬಂದು ಇದೀಗ ಕಾಲು ಶತಮಾನವೇ ಕಳೆದಿದೆ. ಆದರೂ ಕೂಡ ನಾವಿನ್ನೂ ಮೌಢ್ಯ, ಜಾತಿ ಲಿಂಗ ತಾರತಮ್ಯಗಳ ಕೂಪದ ಹಿಂದಿನ ಕತ್ತಲಯುಗದಲ್ಲೇ ಇದ್ದೇವೇನೋ ಅನಿಸುತ್ತಿದೆ.  ಇತ್ತೀಚೆಗಿನ ಹುಬ್ಬಳ್ಳಿಯ ಮಾನ್ಯ ಪ್ರಕರಣದಂತಹ ಎಲ್ಲ ಪ್ರಕರಣಗಳಿಗೂ ಕಡಿವಾಣ ಬೀಳಬೇಕಿದೆ. ಈ ರೀತಿಯ  ಕುಕೃತ್ಯ ಎಸಗಿದವರನ್ನು ಮತ್ತು ಅದನ್ನು ಸಮರ್ಥಿಸುವವರನ್ನೂ ಕೂಡ ಕಾನೂನಿನ ವ್ಯಾಪ್ತಿಯೊಳಗೆ ತರಬೇಕಿದೆ –ಶಂಕರ್‌ ಸೂರ್ನಳ್ಳಿ, ಸಾಮಾಜಿಕ ಕಾರ್ಯಕರ್ತರು.

ಜನರು ವಿದ್ಯಾವಂತರಾದಷ್ಟೂ ನಾಗರೀಕತೆಯನ್ನು ಅಳವಡಿಸಿಕೊಂಡಷ್ಟೂ ಆತ ತನ್ನ ಪ್ರಾಣಿ ಮೂಲದ ಒರಟುತನಗಳನ್ನು ನಿಧಾನಕ್ಕೆ ಕಳಚಿಕೊಳ್ಳುತ್ತಾ ಸಹನಶೀಲ ಮತ್ತು ಸಭ್ಯನಾಗುತ್ತಾನೆ ಎಂದುದೊಂದು ನಂಬಿಕೆ . ಆದರೆ ಇವೆಲ್ಲವೂ ಕೇವಲ ಭ್ರಮೆಗಳಷ್ಟೆ ಎಂಬುದು ದಿನೇ ದಿನೇ ಸಾಬೀತಾಗುತ್ತಲಿವೆ. ಮನುಷ್ಯ ತನ್ನ ವೈಯುಕ್ತಿಕ ಮತ್ತು ಸಾಮಾಜಿಕ ಸುಸೂತ್ರತೆಯ ಬದುಕಿಗಾಗಿ ಕಂಡುಕೊಂಡು ಅಳವಡಿಸಿಕೊಂಡ ವಿದ್ಯೆ, ತಂತ್ರ ಜ್ಞಾನಗಳೆಲ್ಲ ಮಾನವನ ಬೌದ್ಧಿಕ ಮಾಲಿನ್ಯಗಳಿಂದ ಹೊರತಾಗಿಯೇನೂ ಇದೀಗ ಉಳಿದಿಲ್ಲ. ಈ ವಿದ್ಯೆ, ತಂತ್ರಜ್ಞಾನಗಳನ್ನು ಒಳಿತಿನೊಂದಿಗೆ ದ್ವೇಷ ಹರಡುವ, ಬೇಧ ಬಿತ್ತುವ  ಸಾಧನಗಳನ್ನಾಗಿಯೂ ಕೂಡ ಸಾಕಷ್ಟು ಬಳಸಿಕೊಳ್ಳಲಾಗುತ್ತಿದೆ.  ಉದಾಹರಣೆಗೆ ಜಾಲತಾಣಗಳು ಮತ್ತು ಮಾಧ್ಯಮಗಳಲ್ಲಿನ ದ್ವೇಷ ಪ್ರಚೋದಕ ಸಂಗತಿಗಳು, ವಿದ್ಯಾವಂತರೆನಿಸಿ ಕೊಂಡವರನ್ನೂ  ಬಿಡದ ಮರ್ಯಾದಾ ಹತ್ಯೆಗಳಂತಹ ಹೇಯ ಪ್ರಕರಣಗಳು ಇತ್ಯಾದಿ.

ಮೊನ್ನೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಈ ಅಮಾನವೀಯ ಮರ್ಯಾದೆಗೇಡು ಹತ್ಯೆಗಳ ವಿರುದ್ಧ ವಿಶೇಷ ಕಾಯ್ದೆಯನ್ನು ತರಲಾಗುವುದು ಎಂದು ತಮ್ಮ ಎಕ್ಸ್‌ ಖಾತೆಯಲ್ಲಿ ಹೇಳಿಕೊಂಡಿದ್ದಾರೆ. ಹೌದು ತಜ್ಞರ  ಜೊತೆ ಸಮಾಲೋಚಿಸಿ ಇಂತಹ ಅನಾಗರಿಕ ಕೃತ್ಯಗಳನ್ನು ತಡೆಯುವ ಸಲುವಾಗಿ ಕ್ಷಿಪ್ರ ಕಾರ್ಯಪ್ರಕ್ರಿಯೆಯ ಕಠಿಣ ಕಾನೂನು ಜಾರಿಯ ಅವಶ್ಯಕತೆಯಿದೆ.

ಮರ್ಯಾದೆಗೇಡು ಹತ್ಯೆಗೆ ಬಲಿಯಾದ ಮಾನ್ಯ

ಹೊಸ ಸಹಸ್ರಮಾನ 2000 ಬಂದು ಇದೀಗ ಕಾಲು ಶತಮಾನವೇ ಕಳೆದಿದೆ. ಆದರೂ ಕೂಡ ನಾವಿನ್ನೂ ಮೌಢ್ಯ, ಜಾತಿ ಲಿಂಗ ತಾರತಮ್ಯಗಳ ಕೂಪದ ಹಿಂದಿನ ಕತ್ತಲ ಯುಗದಲ್ಲೇ  ಇದ್ದೇವೇನೋ ಅನಿಸುತ್ತಿದೆ.  ಇತ್ತೀಚೆಗಿನ ಹುಬ್ಬಳ್ಳಿಯ ಮಾನ್ಯ ಪ್ರಕರಣ, ತನ್ನ ಮಗಳು ದಲಿತನೊಬ್ಬನನ್ನು ಪ್ರೀತಿಸಿ ಮದುವೆಯಾದದ್ದನ್ನು ತಿಳಿದ ತಂದೆ ತನ್ನ ಸ್ವಂತ ಮಗಳನ್ನೇ  ಆಕೆ ಗರ್ಭಿಣಿ ಎಂದು ತಿಳಿದೂ ಸಹ ಕೊಲ್ಲುವ ನೀಚ ಮನಸ್ಥಿತಿ ಮತ್ತು ಇದನ್ನು ಮತ್ತು ಇಂಥವನ್ನು ಸಮರ್ಥಿಸುವ (ಆ ತಂದೆ ಮಾಡಿದ್ದು ಸರಿಯೇ ಇದೆ ಎಂಬಿತ್ಯಾದಿಯಾಗಿ) ಜಾಲತಾಣಗಳ ಕೊಳಕು ಮನಸ್ಸುಗಳು.. ಇಂತವುಗಳಿಗೆಲ್ಲದಕ್ಕೂ ಕಡಿವಾಣ ಬೀಳಬೇಕಿದೆ. ಈ ರೀತಿಯ  ಕುಕೃತ್ಯ ಎಸಗಿದವರನ್ನು ಮತ್ತು ಅದನ್ನು ಸಮರ್ಥಿಸುವವರನ್ನೂ ಕೂಡ ಈ ಕಾನೂನಿನ ವ್ಯಾಪ್ತಿಯೊಳಗೇ ತರಬೇಕಿದೆ.

ಭಾರತೀಯರು ಪುನರ್ಜನ್ಮವನ್ನು ನಂಬುವಂತವರು. ಹಿಂದೆ ನಾವೇನು ಮಾಡಿದ್ದೇವೋ ಒಳ್ಳೆಯದೋ ಕೆಟ್ಟ ಕಾರ್ಯಗಳೋ ಒಟ್ಟಾರೆ ನಮ್ಮ ಪೂರ್ವಜನ್ಮದ ಕರ್ಮಗಳಿಗೆ ಅನುಸಾರವಾಗಿ ನಂತರದ ಜನ್ಮವೆತ್ತುವಂತೆ ಈ ಪೂರ್ವಜನ್ಮದ ಸಂಬಂಧಗಳು ಮತ್ತು ಅದರಲ್ಲಿನ ಕರ್ಮಫಲಗಳು ನಮ್ಮನ್ನು ಇಂದಿನ ಜೀವನದುದ್ದಕ್ಕೂ ಕಾಡುತ್ತಿರುತ್ತವೆ ಎಂಬುದು ನಮ್ಮ ನಂಬಿಕೆ. ನಮ್ಮ ತಂದೆ, ತಾಯಿ, ಮಕ್ಕಳು, ಸಂಬಂಧಿಗಳು, ಮನೆ, ಆಸ್ತಿ, ಬದುಕಿನ ಸೋಲು ಗೆಲುವು ಎಲ್ಲವುಗಳಿಗೂ ಪೂರ್ವ ಜನ್ಮದ ನಂಟಿರುತ್ತವೆಯೇ ವಿನಹ ಒಂದು ಹುಲ್ಲು ಕಡ್ಡಿಯೂ ಕೂಡ ನಿಯತಿಯ ಅಣತಿಗೆ ಹೊರತಾಗಿಲ್ಲ ಎಂಬುದನ್ನು ನಾವು ನಂಬುತ್ತೇವೆ. ಜೀವನದ ಪ್ರತಿಯೊಂದು ಘಟನೆಗೂ ಕಾರ್ಯಾಕಾರಣ ಇದ್ದೇ ಇರುತ್ತದೆ. (ಇದೇ ಸಿದ್ಧಾಂತದ ಹಿನ್ನೆಲೆಯಲ್ಲೇ ಕಮಲಹಾಸನ್ ರವರ ’ದಶಾವತಾರಂ” ಎಂಬ ಚಲನ ಚಿತ್ರ ತೆರೆ ಕಂಡಿತ್ತು. ಸಣ್ಣದೋ ದೊಡ್ಡದೋ ಪ್ರತಿಯೊಂದು ಘಟನೆಗಳಿಗೂ ಒಂದಕ್ಕೊಂದು ಸಂಬಂಧವಿದೆ ಎಂದು ತಿಳಿಸುವ ಕತೆಯನ್ನಾಧರಿಸಿದ ಚಿತ್ರವದು)

ಹೀಗಿರುವಾಗ, ಮನುಷ್ಯನೇ ಅದರಲ್ಲೂ ಹಿಂದುವೇ ಆಗಿರುವ ಯುವಕನನ್ನು ಪ್ರೀತಿಸಿದ ಮಾತ್ರಕ್ಕೆ ಅದು ಘೋರ ಅಪರಾಧ ಎಷ್ಟೆಂದರೆ, ತಾನೇ ತುತ್ತು ಕೊಟ್ಟು ಇಪ್ಪತ್ತು ವರ್ಷ ಸಾಕಿ ಸಲಹಿದ ಮಗಳನ್ನು ನಿರ್ದಾಕ್ಷಿಣ್ಯವಾಗಿ ಕೊಲ್ಲುವಷ್ಟು ಎಂಬಂತಿದ್ದರೆ ಅದನ್ನು ಏನೆಂದು ಹೇಳುವುದೋ ಸುಲಭಕ್ಕೆ ತೋಚದು.  ಹುಬ್ಬಳ್ಳಿಯ ಮಾನ್ಯಾ ಪ್ರಕರಣದಂತಹ ಘಟನೆಗಳು ದೇಶಾದ್ಯಂತ ತೀರಾ ಸಾಮಾನ್ಯವೆಂಬಂತೆ ನಡೆಯುತ್ತಿವೆ. ಕೇವಲ ಜಾತಿಯ ಸಂಬಂಧಗಳ ಕಾರಣಕ್ಕೆ  ಕೊಲೆ, ಹಲ್ಲೆ, ಹಿಂಸೆಯಂತಹ ಪ್ರಕರಣಗಳು ಯಾರ ಅಥವಾ ಯಾವ ಕಾನೂನಿನ ಭಯದ ಹಂಗೂ ಇಲ್ಲದೇ ರಾಜಾರೋಷವಾಗಿ ನಡೆಯುತ್ತಿವೆ.  ಪುತ್ತೂರಿನ ’ಶ್ರೀಕೃಷ್ಣಗಾರುಡಿ” ಕೇಸು ಕೂಡ ಇದಕ್ಕೆ ಹೊರತಲ್ಲ.

ಪುತ್ತೂರಿನ ಕೃಷ್ಣ

ತನಗಿಂತ ಕೆಳಜಾತಿಯ ಹುಡುಗಿಯನ್ನು ಪ್ರೀತಿಸಿ ದೈಹಿಕ ಸಂಬಂಧ ಬೆಳೆಸಿದ ಮಗನ ಗೆಳತಿಯ ಹೊಟ್ಟೆಯೊಳಗಿರುವ ಏಳು ತಿಂಗಳ ಬೆಳೆದ ಮಗುವನ್ನು ಇಬ್ಬರ ಜೀವಕ್ಕೂ {ತಾಯಿ ಮಗು) ಅಪಾಯವಿದ್ದರೂ ತೆಗೆಸುವ ಪ್ರಯತ್ನವೂ ನಡೆದಿತ್ತು.  ಆದರೆ, ಯಾವ ಆಮಿಷ ಹಾಗು ಬೆದರಿಕೆಗಳಿಗೆ ಜಗ್ಗದ ಸಂತ್ರಸ್ತೆಯ ಗಟ್ಟಿಗಿತ್ತಿ ತಾಯಿ ಮತ್ತು ಆಕೆಯ ಬೆಂಬಲಕ್ಕೆ ನಿಂತ ಸಂಘಟನೆಗಳು ಮಾಧ್ಯಮಗಳ ಬೆಂಬಲದ ಕಾರಣಕ್ಕೆ ಮಗುವೇನೋ ಜೀವಂತವಾಗಿ ಜಗತ್ತಿಗೆ ಕಾಲಿಟ್ಟಿದೆ. ಆದರೆ, ಮನುಸ್ಮೃತಿಯ ಮೇಲು ಕೀಳುಗಳ ’ವರ್ಣಸಂಕರ” ವಾದದ ಪ್ರಕಾರ ಕೀಳು ಜಾತಿಯ ಈ (ಮೊಮ್) ಮಗುವನ್ನು ಗಂಡಿನ ಮನೆಯವರು ಯಾವ ಕಾರಣಕ್ಕೂ ಸ್ವೀಕರಿಸುವುದಿಲ್ಲವಂತೆ. ಸಂತ್ರಸ್ತೆಗೆ ಐವತ್ತು ಲಕ್ಷ ಪರಿಹಾರ ಕೊಟ್ಟು ಮಗುವನ್ನು ಅನಾಥಾಶ್ರಮಕ್ಕೆ ರವಾನಿಸಲಾಗುವುದಂತೆ. ಎಂಥಾ ಮಾನಸಿಕ ದಾರಿದ್ರ್ಯ!. ತಮ್ಮದೇ ಮಗನ ರಕ್ತ (ವಂಶವಾಹಿನಿ) ಹೊತ್ತ ಕುಡಿಯೊಂದು ಜಾತಿ ಮೇಲರಿಮೆಯ ಕಾರಣಕ್ಕೆ ತಂದೆ ಹಾಗು ಅಜ್ಜ ಅಜ್ಜಿಯರ ಪ್ರೀತಿಯಿಂದ ವಂಚಿತನಾಗಿ ಅನಾಥವಾಗಿ ಬೆಳೆಯುವುದಂತೆ. ಜಾತಿಯ ಕಾರಣಕ್ಕೆ ಬೆಳೆಯುವ ಇಂತಹ ಹೀನ ಚಿಂತನೆಗಳಿಗೆಲ್ಲಕ್ಕೂ ಕಡಿವಾಣ ಬೀಳಲೇ ಬೇಕಾಗಿದೆ.

ಶಂಕರ್ ಸೂರ್ನಳ್ಳಿ

ಸಾಮಾಜಿಕ ಹೋರಾಟಗಾರರು. 

ಇದನ್ನೂ ಓದಿ- ಅದೊಂದು ದೊಡ್ಡ ಕಥೆ-ಆತ್ಮಕಥನ ಸರಣಿ 13-ಪ್ರಾಥಮಿಕ ಶಾಲೆಗೆ ವಿದಾಯ

More articles

Latest article