ಹನಿಟ್ರ್ಯಾಪ್‌; ಗೃಹ ಸಚಿವರಿಗೆ ದೂರು ಸಲ್ಲಿಸಿದ ಸಚಿವ ರಾಜಣ್ಣ

Most read

ಬೆಂಗಳೂರು: ತಮ್ಮನ್ನು ಹನಿಟ್ರ್ಯಾಪ್‌ ಗೆ ಕೆಡವಲು ಯತ್ನಿಸಿದ ಪ್ರಕರಣ ಕುರಿತು ಉನ್ನತಮಟ್ಟದ ತನಿಖೆ ನಡೆಸುವಂತೆ ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರು ಗೃಹ ಸಚಿವ ಜಿ. ಪರಮೇಶ್ವರ ಅವರಿಗೆ ಮನವಿ ಸಲ್ಲಿಸಿದ್ದಾರೆ.  ಸದಾಶಿವನಗರದ ಗೃಹ ಸಚಿವರ ಮನೆಯಲ್ಲಿ ಮಂಗಳವಾರ ಸಂಜೆ ಭೇಟಿಯಾಗಿ ಮನವಿ ಸಲ್ಲಿಸಿದರು. ಬಳಿಕ ಪರಮೇಶ್ವರ ಮತ್ತು ರಾಜಣ್ಣ ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಈ ವಿಷಯದಲ್ಲಿ ನಾನು ದೂರನ್ನು ಸ್ವೀಕರಿಸಲು ಸಾಧ್ಯವಿಲ್ಲ. ಪೊಲೀಸ್‌ ಠಾಣೆಯಲ್ಲೇ ದೂರು ಸಲ್ಲಿಸಬೇಕಾಗುತ್ತದೆ. ಈ ಮನವಿಯ ಆಧಾರದ ಮೇಲೆ ಕಾನೂನು ತಜ್ಞರ ಜೊತೆ ಚರ್ಚಿಸಿ, ಅವರ ಸಲಹೆ ಆಧರಿಸಿ ತೀರ್ಮಾನ ಮಾಡುತ್ತೇವೆ ಎಂದು ಸಚಿವ ಪರಮೇಶ್ವರ ತಿಳಿಸಿದರು.

ಸದನದಲ್ಲಿ ನಡೆದ ಘಟನೆ ಮತ್ತು ಅದರ ಮುಂದುವರಿದ ಭಾಗವಾಗಿ ನನಗೆ ದೂರು ನೀಡುವುದಾಗಿ ತಿಳಿಸಿದ್ದರು. ಕಾನೂನು ವ್ಯಾಪ್ತಿಯಲ್ಲಿ ನಮಗೆ ಇರುವ ಅವಕಾಶಗಳ ಕುರಿತು ಕಾನೂನು ತಜ್ಞರು ಹಾಗೂ ಮುಖ್ಯಮಂತ್ರಿಯವರ ಜೊತೆ ಚರ್ಚಿಸಿ ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು. ವಿಷಯ ಈಗ ಸದನದ ಸ್ವತ್ತಾಗಿದೆ. ಈ ಕಾರಣಕ್ಕಾಗಿ ದೂರು ಸಲ್ಲಿಕೆಯಾಗುವವರೆಗೂ ನಾವು ಕಾಯುತ್ತಿದ್ದೆವು ಎಂದು ಸ್ಪಷ್ಟನೆ ನೀಡಿದರು.

ಹನಿಟ್ರ್ಯಾಪ್‌ ಸಂಬಂಧ ನನ್ನ ಹೆಸರನ್ನು ಸದನದಲ್ಲಿ ಪ್ರಸ್ತಾಪಿಸಲಾಗಿತ್ತು. ಆ ಕಾರಣದಿಂದ ನಾನು ದೂರು ಸಲ್ಲಿಸಿದ್ದೇನೆ. ಈ ರೀತಿಯ ಕೆಟ್ಟ ಚಾಳಿ ಸಾರ್ವಜನಿಕ ಜೀವನದಲ್ಲಿ ಮುಂದುವರಿಯಬಾರದು ಎಂಬ ಉದ್ದೇಶದಿಂದ ದೂರು ಸಲ್ಲಿಸಿದ್ದೇನೆ ಎಂದು ಸಚಿವ  ಕೆ.ಎನ್‌. ರಾಜಣ್ಣ ತಿಳಿಸಿದರು. ಮಾಧ್ಯಮಗಳಲ್ಲಿ ತುಮಕೂರಿನ ಸಚಿವರು ಹನಿಟ್ರ್ಯಾಪ್‌ಗೆ ಸಿಲುಕಿದ್ದಾರೆ ಎಂಬ ಸುದ್ದಿ ಪ್ರಸಾರವಾಗಿತ್ತು. ಈ ಬಗ್ಗೆ ಸದನದಲ್ಲಿ ಪ್ರಸ್ತಾಪ ಆಗಿತ್ತು. ಆಗ, ನಾನು ಪ್ರತಿಕ್ರಿಯಿಸಿದ್ದೆ. ದೂರು ನೀಡಿದರೆ ತನಿಖೆ ನಡೆಸುವುದಾಗಿ ಗೃಹ ಸಚಿವರು ಭರವಸೆ ನೀಡಿದ್ದರು. ಆ ಕಾರಣದಿಂದ ದೂರು ಸಲ್ಲಿಸಿರುವುದಾಗಿ ಅವರು ತಿಳಿಸಿದರು.

More articles

Latest article