ಬೆಂಗಳೂರು: ಕರ್ನಾಟಕ ರಾಜ್ಯದಲ್ಲಿ ಹನಿಟ್ರ್ಯಾಪ್ ಪರಿಚಯಿಸಿದ್ದೇ ಬಿಜೆಪಿ. ಪಕ್ಷದಲ್ಲಿ ಪ್ರಮುಖ ಸ್ಥಾನದಲ್ಲಿರುವ ಅಪ್ಪ, ಮಕ್ಕಳ ವಿರುದ್ಧ ನಿರಂತರವಾಗಿ ಮಾತನಾಡುವ ಬಿಜೆಪಿ ಶಾಸಕರೊಬ್ಬರಿಗೆ ಸಿ.ಡಿ. ಬಿಡುಗಡೆ ಮಾಡುವ ಬೆದರಿಕೆ ಹಾಕಲಾಗಿತ್ತು. ಈ ಸಂಬಂಧ ಆ ಶಾಸಕರು ಏಕೆ ತಡೆಯಾಜ್ಞೆ ತಂದಿದ್ದರು ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.
ಬಿಜೆಪಿಯ ಕೆಲವರು ಸಿ.ಡಿ. ಫ್ಯಾಕ್ಟರಿ ಇಟ್ಟುಕೊಂಡೇ ಮಂತ್ರಿಯಾಗಿದ್ದಾರೆ ಎಂದೂ ಈ ಶಾಸಕರು ಆರೋಪಿಸಿದ್ದರು. ಆಗ ಬಿಜೆಪಿಗೆ ಸಿಬಿಐ ನೆನಪಾಗಲಿಲ್ಲವೇ? ರಾಜ್ಯದ 74 ಪ್ರಕರಣಗಳು ಸಿಬಿಐ ಮುಂದೆ ಬಾಕಿ ಇದ್ದರೂ ಹನಿಟ್ರ್ಯಾಪ್ ಪ್ರಕರಣವನ್ನು ಸಿಬಿಐಗೆ ವಹಿಸಬೇಕು ಎನ್ನುವ ಮೂಲಕ ಬಿಜೆಪಿ ನಾಯಕರು ತಮ್ಮ ತಿಳಿವಳಿಕೆಯ ಕೊರತೆ ಸಾಬೀತು ಮಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಹನಿಟ್ರ್ಯಾಪ್ ಕುರಿತು ಚರ್ಚೆಯಾಗುತ್ತಿದೆಯೇ ಹೊರತು, ಈವರೆಗೆ ದೂರು ದಾಖಲಾಗಿಲ್ಲ, ದೂರು ದಾಖಲಾದರೆ ತನಿಖೆ ನಡೆಸಲು ರಾಜ್ಯದಲ್ಲಿ ಸಮರ್ಥ ಅಧಿಕಾರಿಗಳು ಇದ್ದಾರೆ. ಹನಿಟ್ರ್ಯಾಪ್ ವಿಷಯದ ಬಗ್ಗೆ ಬಿಜೆಪಿ ಇಷ್ಟೊಂದು ಆಸಕ್ತಿ ವಹಿಸಲು ಏನು ಕಾರಣ? ಭಯವೋ, ಕಾಳಜಿಯೋ ಎಂದು ಪ್ರಶ್ನಿಸಿರುವ ಅವರು, ಎಲ್ಲವನ್ನೂ ಸಿಬಿಐಗೆ ಕೊಡಿ ಎನ್ನುವುದು ಬಿಜೆಪಿಗೆ ಚಾಳಿಯಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಮಾನವಸಂಪನ್ಮೂಲದ ಕೊರತೆ ಇದ್ದು, ವಿನಾಕಾರಣ ಪ್ರಕರಣಗಳನ್ನು ವಹಿಸಬೇಡಿ ಎಂದು ಸಿಬಿಐ ಈಗಾಗಲೇ ಹಲವಾರು ಬಾರಿ ಮಾಡಿದೆ. ಇಷ್ಟಕ್ಕೂ ಸಿಬಿಐ ತನಿಖೆಗೆ ವಹಿಸಿದರೆ ಮಾನವ ಸಂಪನ್ಮೂಲವನ್ನು ರಾಜ್ಯ ಸರ್ಕಾರವೇ ಒದಗಿಸಿಕೊಡಬೇಕಾಗುತ್ತದೆ. 2024ರ ಜುಲೈನಲ್ಲೇ ಸಿಬಿಐ, ರಾಜ್ಯ ಸರ್ಕಾರದ ಅಂದಿನ ಮುಖ್ಯ ಕಾರ್ಯದರ್ಶಿಗೆ ಈ ಬಗ್ಗೆ ಪತ್ರ ಬರೆದಿತ್ತು ಎಂದು ನೆನಪಿಸಿದ್ದಾರೆ.