ಬೆಂಗಳೂರು: ‘ಹನಿ ಟ್ರ್ಯಾಪ್’ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹಕಾರ ಸಚಿವ ಕೆ.ಎನ್.ರಾಜಣ್ಣ ಅವರು ಯಾರ ಹೆಸರನ್ನೂ ಹೇಳಿಲ್ಲ. ಹೇಳಿದ್ದರೆ ಕ್ರಮ ತೆಗೆದುಕೊಳ್ಳಬಹುದಿತ್ತು. ಈ ಪ್ರಕರಣದಲ್ಲಿ ತಪ್ಪೆಸಗಿರುವ ಯಾರನ್ನೂ ರಕ್ಷಿಸುವ ಪ್ರಶ್ನೆಯೇ ಇಲ್ಲ ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
ಪರಿಶಿಷ್ಟ ವರ್ಗದ ನಾಯಕರೂ ಆಗಿರುವ ಸಚಿವ ರಾಜಣ್ಣ ಮಾಡಿರುವ ಆರೋಪಕ್ಕೆ ಈಗಾಗಲೇ ಗೃಹ ಸಚಿವರು ಉತ್ತರ ನೀಡಿದ್ದಾರೆ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಕಾನೂನಿನ ಪ್ರಕಾರ ಶಿಕ್ಷೆ ಆಗಲೇಬೇಕು. ಸಚಿವರು ದೂರು ಕೊಟ್ಟರೆ ಉನ್ನತ ಮಟ್ಟದ ತನಿಖೆ ಮಾಡಿಸಲಾಗುತ್ತದೆ ಎಂದು ಪರಮೇಶ್ವರ ಹೇಳಿದ್ದಾರೆ. ಹನಿ ಟ್ರ್ಯಾಪ್ ಯಾರೇ ಮಾಡಿಸಿದರೂ ಅದು ತಪ್ಪು ಎಂದರು.
ಸಚಿವ ರಾಜಣ್ಣ ಅವರು ಹನಿ ಟ್ರ್ಯಾಪ್ ಸಂಬಂಧಿಸಿದಂತೆ ದೂರು ಕೊಡುತ್ತೇನೆ ಎಂದು ಗುರುವಾರ ಹೇಳಿದ್ದರು. ಆದರೆ, ಈವರೆಗೂ ದೂರು ಕೊಟ್ಟಿಲ್ಲ. ದೂರು ಕೊಟ್ಟ ಮೇಲೆ ತನಿಖೆಗೆ ಆದೇಶಿಸುತ್ತೇವೆ. ನಿಮ್ಮ ಸಲಹೆಗಳನ್ನೂ ಪರಿಣಿಸುತ್ತೇವೆ ಎಂದು ಗೃಹ ಸಚಿವ ಪರಮೇಶ್ವರ ಹೇಳಿದ್ದರು.
ಹನಿಟ್ರ್ಯಾಪ್ ಆರೋಪ ಕುರಿತು ವಿಧಾನ ಪರಿಷತ್‌ನಲ್ಲಿ ಪ್ರತಿಕ್ರಿಯಿಸಿದ ಮುಖ್ಯಮಂತ್ರಿಗಳು ಈ ಪ್ರಕರಣ ಕುರಿತು ದೂರು ಬಂದರೆ ಖಂಡಿತವಾಗಿಯೂ ತನಿಖೆ ನಡೆಸುತ್ತೇವೆ. ಇದರಲ್ಲಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಯಾವುದೇ ಪಕ್ಷದವರು ಭಾಗಿಯಾಗಿದ್ದರೂ ಕ್ರಮ ಜರುಗಿಸಲು ಹಿಂಜರಿಯುವುದಿಲ್ಲ ಎಂದು ಪುನರುಚ್ಚರಿಸಿದರು.