ಬೆಂಗಳೂರು: ಹಾಸನ ಸಂಸದ ಹಾಗೂ ಬಿಜೆಪಿ-ಜೆಡಿಎಸ್ ಅಬ್ಯರ್ಥಿ ಪ್ರಜ್ವಲ್ ರೇವಣ್ಣ ಹಲವಾರು ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ನಡೆಸಿ ತಾನೇ ವಿಡಿಯೋ ಮಾಡಿಕೊಂಡಿರುವ ಹಗರಣದ ತನಿಖೆಯನ್ನು ಸಿಬಿಐಗೆ ( CBI ) ಒಪ್ಪಿಸುವ ಪ್ರಶ್ನೆಯೇ ಇಲ್ಲ ಎಂದು ಗೃಹಸಚಿವ ಜಿ.ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, SIT ತಂಡ ಈ ಪ್ರಕರಣದ ತನಿಖೆಗೆ ಸಮರ್ಥವಾಗಿದೆ. ಹೀಗಾಗಿ ಸಿಬಿಐಗೆ ವಹಿಸುವ ಪ್ರಶ್ನೆ ಉದ್ಭವಿಸುವುದಿಲ್ಲ ಎಂದರು.
ಸಂತ್ರಸ್ತೆಯೋರ್ವಳನ್ನು ಕಿಡ್ನಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಶಾಸಕ ರೇವಣ್ಣ ಬಂಧಿಸಲಾಗಿದೆ. ರೇವಣ್ಣ ಜತೆ ಇನ್ನೂ ಮೂವರನ್ನು ಬಂಧಿಸಲಾಗಿದೆ. ಎಸ್ ಐಟಿಯಿಂದ ಎಲ್ಲವೂ ತನಿಖೆ ನಡೆಯುತ್ತಿದೆ. ಪ್ರಜ್ವಲ್ ಬಂಧನಕ್ಕಾಗಿ 196 ದೇಶಗಳಿಗೆ ಇಂಟರ್ ಪೋಲ್ ನಿಂದ ನೋಟಿಸ್ ಹೋಗಿದೆ. ನೋಟಿಸ್ ಗೆ ಸ್ಪಂದಿಸಿ ಆತ ಅಡಗಿ ಕುಳಿತಿರುವ ದೇಶದಿಂದ ಮಾಹಿತಿ ಸಿಗಲಿದೆ ಎಂದು ಅವರು ಹೇಳಿದರು.
ಪ್ರಜ್ವಲ್ ಬರುವವರೆಗೂ ವಿಚಾರಣೆ ನಡೆಯೋದು ಕಷ್ಟ. ಬಂಧಿತರಿಂದ, ಸಂತ್ರಸ್ತೆಯರಿಂದ ಹೇಳಿಕೆ ಪಡೆಯಲಾಗಿದೆ. ತನಿಖೆ ನಡೆಯುವಾಗ ಹೆಚ್ಚಿನ ಮಾಹಿತಿ ಹೇಳುವುದಕ್ಕೆ ಸಾಧ್ಯವಿಲ್ಲ ಎಂದರು.
ನಿನ್ನೆ ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಪ್ರಕರಣದ ತನಿಖೆ ಎಸ್ ಐಟಿ ಸರಿಯಾಗಿ ನಡೆಸುತ್ತಿಲ್ಲ, ಸಿಬಿಐಗೆ ವಹಿಸಿ ಎಂದು ಹೇಳ್ತಿದ್ದಾರೆ. ನಮ್ಮ ಎಸ್ ಐಟಿ ಅಧಿಕಾರಿಗಳು ಸಮರ್ಥರಿದ್ದಾರೆ. ಹಾಗಾಗಿ ಪ್ರಕರಣವನ್ನ ಸಿಬಿಐಗೆ ಕೊಡುವುದಿಲ್ಲ ಎಂದು ಅವರು ಹೇಳಿದರು.