ಜಯದೇವ ನಿರ್ದೇಶಕ ಡಾ.ಮಂಜುನಾಥ್ ನಿವೃತ್ತಿ: ನಿರ್ದೇಶಕರ ಹುದ್ದೆಗೆ ಸರ್ಕಾರ ಅರ್ಜಿ ಆಹ್ವಾನ

Most read


ಜಯದೇವ ಸಂಸ್ಥೆಯ ನಿರ್ದೇಶಕ ಡಾ. ಸಿ. ಎನ್. ಮಂಜುನಾಥ್ ನಿವೃತ್ತರಾಗಿದ್ದಾರೆ. ನಿರ್ದೇಶಕ ಹುದ್ದೆಗೆ ಆಹ್ವಾನಿಸಲಾಗಿದ್ದು, 15ಕ್ಕೂ ಅಧಿಕ ಅರ್ಜಿಗಳು ಸಲ್ಲಿಕೆಯಾಗಿದೆ. ಈ ಕುರಿತು ಸರ್ಕಾರ ನೇಮಕಾತಿಯ ಅಂತಿಮ ತೀರ್ಮಾನ ಕೈಗೊಳ್ಳಲಿದೆ.

ಡಾ. ಸಿ. ಎನ್. ಮಂಜುನಾಥ್ 2007ರಿಂದ ಜಯದೇವ ಹೃದ್ರೋಗ ವಿಜ್ಞಾನ ಮತ್ತು ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. 2023ರ ಜುಲೈನಲ್ಲಿಯೇ ಅವರ ಸೇವಾವಧಿ ಮುಕ್ತಾಯಗೊಂಡಿತ್ತು. ಕರೋನಾ ಸಮಯದಲ್ಲಿ ಅತ್ಯುತ್ತಮವಾಗಿ ಕೆಲಸ ನಿರ್ವಹಿಸಿದ್ದಾರೆ. ಕಾಲ ಕಾಲಕ್ಕೆ ಹೃದಯದ ಸಂಬಂಧಿ ಕಾಯಿಲೆಗಳಿಗೆ ಕಾರಣವೇನು ಎಂಬ ಮಾಹಿತಿ ನೀಡಿ ಜನರಿಗೆ ಅರಿವು ಮೂಡಿಸಿದ್ದಾರೆ. ಅವರ ಸೇವಾವಧಿ ವಿಸ್ತರಿಸಿದರೆ ಒಳ್ಳೆ ಕಾರ್ಯ ಆಗುತ್ತದೆ ಎಂದು ಅನೇಕ ಗಣ್ಯರು ಒತ್ತಾಯಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಜಯದೇವ ಸಂಸ್ಥೆಯ ನಿರ್ದೇಶಕರಾಗಿ ಡಾ. ಸಿ. ಎನ್. ಮಂಜುನಾಥ್ ಅವರ ಸೇವೆಯನ್ನು 2024ರ ಜನವರಿ ತನಕ ವಿಸ್ತರಣೆ ಮಾಡಲು ತೀರ್ಮಾನಿಸಿ ಕ್ರಮ ಕೈಗೊಳ್ಳಲಾಗಿತ್ತು. ಈಗ ಜನವರಿ 31ಕ್ಕೆ ಅವಧಿ ಮುಕ್ತಾಯಗೊಂಡಿದ್ದು, ನಿವೃತ್ತರಾಗಿದ್ದಾರೆ.

ಈ ಕುರಿತು ಪತ್ರಕರ್ತರ ಜೊತೆ ಮಾತನಾಡಿರುವ ಡಾ. ಸಿ.ಎನ್. ಮಂಜುನಾಥ್, ಜಯದೇವ ಆಸ್ಪತ್ರೆಯ ಆಡಳಿತ ಮಂಡಳಿಯ ನಿರ್ಧಾರದಂತೆ ಜನವರಿ 31ಕ್ಕೆ ನನ್ನ ಅವಧಿ ಮುಗಿಯುತ್ತದೆ. ಕಳೆದ 16 ವರ್ಷಗಳಿಂದ ನಾನು ಸಂಸ್ಥೆಯ ನಿರ್ದೇಶಕನಾಗಿ ಕರ್ತವ್ಯ ನಿರ್ವಹಿಸಿದ್ದೇವೆ. ಪಂಚತಾರಾ ಖಾಸಗಿ ಆಸ್ಪತ್ರೆ ಆಗಬೇಕೆಂದು ಕನಸ್ಸು ಕಂಡಿದ್ದೆ, ಅದು ನನಸಾಗಿದೆ. 300 ಹಾಸಿಗೆ ಇದ್ದ ಆಸ್ಪತ್ರೆ ನನ್ನ ಅವಧಿಯಲ್ಲಿ ಈಗ 2,000 ಹಾಸಿಗೆಯಾಗಿದೆ. ದಕ್ಷಿಣ ಏಷ್ಯಾದಲ್ಲಿ ಅತಿ ದೊಡ್ಡ ಹೃದ್ರೋಗ ಸಂಸ್ಥೆಯಾಗಿ ಬೆಳೆದು ನಿಂತಿದೆ. ಇಲ್ಲಿ ಬಡಜನರು ಜೊತೆ ಶ್ರೀಮಂತರಿಗೆ ಚಿಕಿತ್ಸೆ ಸಿಗಬೇಕೆಂಬ ನನ್ನ ಕನಸ್ಸು ನನಸಾಗಿದೆ ಎಂದು ಹೇಳಿದ್ದಾರೆ.

More articles

Latest article