ನಾಡಿನ ಪ್ರಜ್ಞಾವಂತರು ಕುಲಪತಿಗಳ ಆಯ್ಕೆಯ ಕುರಿತು ಎತ್ತಿರುವ ಪ್ರಶ್ನೆ ಕೇವಲ ಅವರದ್ದಾಗಿರದೆ ನಮ್ಮೆಲ್ಲರದೂ ಆಗಿದೆ. ಯಾವ ಆಧಾರದ ಮೇಲೆ ರಾಜ್ಯ ಸರಕಾರ ಹೆಸರುಗಳನ್ನು ಶಿಫಾರಸು ಮಾಡುತ್ತದೆ? ರಾಜ್ಯಪಾಲರು ರಾಜ್ಯದ ಜನರಿಂದ ಚುನಾಯಿತವಾದ ಸರಕಾರದ ಶಿಫಾರಸುಗಳನ್ನು ನಿರಾಕರಿಸಲು ಇರುವ ಕಾರಣಗಳು ಏನು? ಇದು ಯಾರೋ ಕೆಲವು ವ್ಯಕ್ತಿಗಳಿಗೆ ಮಾತ್ರ ಸಂಬಂಧಿಸಿದ ಪ್ರಶ್ನೆಯಲ್ಲ. ಇದರಲ್ಲಿ ಜನಪರವಾದ, ಸಮಾಜದಲ್ಲಿ ದುರ್ಬಲರಾದವರ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಯೂ ಅಡಗಿದೆ – ಡಾ.ಉದಯ ಕುಮಾರ ಇರ್ವತ್ತೂರು, ವಿಶ್ರಾಂತ ಪ್ರಾಂಶುಪಾಲರು
ಶಿಕ್ಷಣ ಮತ್ತು ಸಾಂಸ್ಕೃತಿಕ ವಲಯಗಳು ಒಂದು ಸಮಾಜದ ವರ್ತಮಾನ ಮತ್ತು ಭವಿಷ್ಯವನ್ನು ನಿರ್ವಹಿಸುವ, ನಿರ್ಧರಿಸುವ ಪ್ರಮುಖ ಅಂಗಗಳು. ಒಂದರ್ಥದಲ್ಲಿ ಸಮಾಜದ ಚಾರಿತ್ರ್ಯ ಕೂಡಾ ಬಹುತೇಕ ಈ ರಂಗದ ಆಗುಹೋಗುಗಳ ಮೂಲಕವೇ ರೂಪುಗೊಳ್ಳುತ್ತದೆ ಎಂದು ಹೇಳಿದರೂ ತಪ್ಪಾಗಲಾರದು. ನಮ್ಮ ರಾಜ್ಯದ ಇಂತಹ ಪ್ರಮುಖ ವಲಯದಲ್ಲಿ ಕಳೆದ ಹಲವು ವರ್ಷಗಳಿಂದ ನಡೆಯುತ್ತಿರುವ ವಿದ್ಯಮಾನಗಳು ಸಮಾಜದ ಮೇಲೆ ಉಂಟು ಮಾಡಬಹುದಾದ ಪರಿಣಾಮಗಳನ್ನು ನೆನೆಸಿಕೊಂಡರೆ ಸಹಜವಾಗಿಯೇ ತಳಮಳ ತಲ್ಲಣ ಉಂಟಾಗುತ್ತದೆ. ಅದರಲ್ಲಿಯೂ ಶಿಕ್ಷಣ ಕ್ಷೇತ್ರವಂತೂ ದಿನದಿಂದ ದಿನಕ್ಕೆ ಸಮಸ್ಯೆಗಳ ಆಗರವೇ ಆಗುತ್ತಿದೆ.
2018 – 2023 ರ ಅವಧಿಯಲ್ಲಿ ನಡೆದ ಪಠ್ಯ ಪರಿಷ್ಕರಣೆ, ಹೊಸ ಶಿಕ್ಷಣ ನೀತಿಯ ಅನುಷ್ಠಾನ, ಉನ್ನತ ಶಿಕ್ಷಣದಲ್ಲಿ ಸ್ನಾತಕ ತರಗತಿಗಳಿಗೆ ರಾಜ್ಯಮಟ್ಟದ ಕೇಂದ್ರಿಕೃತ ಪ್ರವೇಶ ನೀತಿ, ಪದವಿ ಪರೀಕ್ಷೆಗಳ ಫಲಿತಾಂಶ ಪ್ರಕಟಣೆಯ ಗೊಂದಲ.. ಇವುಗಳೆಲ್ಲ ವಿದ್ಯಾರ್ಥಿಗಳಿಗೆ, ಹೆತ್ತವರಿಗೆ ಮತ್ತು ಒಟ್ಟಾರೆಯಾಗಿ ಸಂಬಂಧಪಟ್ಟ ಪ್ರತಿಯೊಬ್ಬರಿಗೂ ಉಂಟುಮಾಡಿದ ಸಮಸ್ಯೆಗಳಿಗೆ, ಮಾನಸಿಕ ಒತ್ತಡಗಳಿಗೆ ಲೆಕ್ಕವಿಲ್ಲ. ಈ ಎಲ್ಲಾ ಸಮಸ್ಯೆಗಳನ್ನು ಅರ್ಥಮಾಡಿಕೊಂಡು, ವಿಮರ್ಶಿಸಿ ಪರಿಹರಿಸಬೇಕಾದ ಜವಾಬ್ದಾರಿಯನ್ನು ಹೊರುವ ಹೆಗಲುಗಳೇ ಕಾಣುತ್ತಿಲ್ಲ.
ಇದರ ಮೇಲೆ ಕಾಲೇಜು ಮತ್ತು ವಿಶ್ವವಿದ್ಯಾನಿಲಯಗಳಲ್ಲಿ ತಾತ್ಕಾಲಿಕ ನೆಲೆಯಲ್ಲಿ ಆಗುತ್ತಿರುವ ನೇಮಕಾತಿಗೆ ಸಂಬಂಧಿಸಿದ ಗೊಂದಲಗಳು; ನೇಮಕಾತಿಯಾಗಿ ಕೆಲಸ ಮಾಡುವ ಸಿಬ್ಬಂದಿಗೆ ವೇತನ ಸರಿಯಾಗಿ ಪಾವತಿಯಾಗುತ್ತಿಲ್ಲ, ನಿವೃತ್ತಿಯಾದವರಿಗೆ ಸಿಗಬೇಕಾದ ನಿವೃತ್ತಿಯ ಸೌಲಭ್ಯಗಳು, ಪಿಂಚಣಿಯೂ ಸಿಗುತ್ತಿಲ್ಲ ಎನ್ನುವ ಆರೋಪವೂ ಕೇಳಿಬರುತ್ತಿದೆ. ಇಂದು ಎದುರಿಸುತ್ತಿರುವ ಶೈಕ್ಷಣಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವ ಭರವಸೆಯ ನಾಯಕತ್ವ ವಿಶ್ವವಿದ್ಯಾನಿಲಯಕ್ಕೆ ಯಾಕೆ ಕಂಡು ಬರುತ್ತಿಲ್ಲ? ಇಂತಹ ಪರಿಸ್ಥಿತಿಯಲ್ಲಿ ನಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಹೇಗೆ ಸಿಗುತ್ತದೆ, ಶಿಕ್ಷಣದಲ್ಲಿ ಗುಣಮಟ್ಟ ಆಡಳಿತದಲ್ಲಿ ದಕ್ಷತೆಯನ್ನು ಹೇಗೆ ನಿರೀಕ್ಷೆ ಮಾಡಬಹುದು ಇಂತಹ ಹಲವಾರು ಸವಾಲುಗಳು ನಮ್ಮ ಮುಂದಿವೆ.
ಕಾಲದ ಅವಶ್ಯಕತೆಗೆ ಅನುಗುಣವಾಗಿ ಹೊಸ ಹೊಸ ವಿಶ್ವವಿದ್ಯಾನಿಲಯಗಳನ್ನೇನೋ ಸ್ಥಾಪಿಸಿದ್ದೇವೆ. ಆದರೆ ನಮ್ಮ ವಿಶ್ವವಿದ್ಯಾನಿಲಯಗಳ ಸ್ಥಿತಿಗತಿ ಭರವಸೆ ಮೂಡಿಸುವ ಹಾಗಿದೆಯೇ? ಉತ್ತರ ಅಸ್ಪಷ್ಟ. ಇದರ ನಡುವೆ ನಮ್ಮ ವಿಶ್ವವಿದ್ಯಾನಿಲಯಗಳಲ್ಲಿ ಪೂರ್ಣಕಾಲಿಕ ಕುಲಪತಿಗಳಿಲ್ಲದೇ ದಿನ ದೂಡುವ ಅನಿಶ್ಚಿತತೆ ಮೇಲಿಂದ ಮೇಲೆ ಉಂಟಾಗುತ್ತಿರುವುದನ್ನೂ ಕಾಣಬಹುದಾಗಿದೆ. ವಿಶ್ವವಿದ್ಯಾನಿಲಯದ ನಾಯಕತ್ವಕ್ಕೆ ಸಂಬಂಧಿಸಿದಂತೆ ಇತ್ತೀಚಿನ ಕೆಲವು ವಿದ್ಯಮಾನಗಳ ಹಿನ್ನೆಲೆಯಲ್ಲಿ ಕುಲಪತಿಗಳ ನೇಮಕಾತಿಯ ಸುತ್ತ ನಡೆಯುತ್ತಿರುವ ಚರ್ಚೆಯ ಕುರಿತು ಕೆಲವು ಸಂಗತಿಗಳನ್ನು ಹಂಚಿಕೊಳ್ಳಬಯಸುತ್ತೇನೆ.
ಕುಲಪತಿಗಳ ಆಯ್ಕೆಗೆ ಸಂಬಂಧಿಸಿದಂತೆ “ಆಯ್ಕೆ ಸಮಿತಿ” ಕೆಲವು ಹೆಸರುಗಳನ್ನು ಶಿಫಾರಸು ಮಾಡಿ ಸರಕಾರಕ್ಕೆ ಕಳೆದ 2023 ರ ಆಗಸ್ಟ್ – ಸೆಪ್ಟೆಂಬರಿನಲ್ಲಿ ಸಲ್ಲಿಸಿತ್ತು ಎಂದು ಹೇಳಲಾಗುತ್ತಿದೆ. ಸಾಮಾನ್ಯವಾಗಿ “ಆಯ್ಕೆ ಸಮಿತಿ” ಶಿಫಾರಸು ಮಾಡಿದ ಮೂರು ಹೆಸರುಗಳಲ್ಲಿ ರಾಜ್ಯ ಸರಕಾರ ತನ್ನ ಆದ್ಯತೆ ಯಾರು ಎನ್ನುವುದನ್ನು ಸೂಚಿಸಿ ರಾಜ್ಯಪಾಲರ ಒಪ್ಪಿಗೆ ಪಡೆದು ಕುಲಪತಿಗಳ ನೇಮಕ ಸಾಮಾನ್ಯವಾಗಿ ಆಗಿಬಿಡುತ್ತಿತ್ತು. ಮೊದಲೆಲ್ಲಾ ಒಬ್ಬ ಕುಲಪತಿ ನಿವೃತ್ತರಾದರೆ ತಕ್ಷಣ ಹೊಸಬರು ಅಧಿಕಾರ ವಹಿಸಿಕೊಳ್ಳುತ್ತಿದ್ದರು. ಕಳೆದ ವರ್ಷ ಹೊಸದಾಗಿ ಅಧಿಕಾರಕ್ಕೆ ಬಂದ ಪ್ರಸ್ತುತ ಸರಕಾರದಲ್ಲಿ ಪರಿಸ್ಥಿತಿ ಹಾಗಿಲ್ಲ. ಕಳೆದ ಏಳೆಂಟು ತಿಂಗಳು ಕಳೆದರೂ ಕುಲಪತಿಗಳ ಆಯ್ಕೆ ಪ್ರಕ್ರಿಯೆ ನೆನೆಗುದಿಗೆ ಬಿದ್ದಂತಿತ್ತು. ವಿಶ್ವವಿದ್ಯಾನಿಲಯ ಆಡಳಿತದಲ್ಲಿ ಪ್ರಭಾರ ಕುಲಪತಿಗಳ ಅಧಿಕಾರದ ವ್ಯಾಪ್ತಿಗೆ ಮಿತಿ ಇರುವ ಕಾರಣ ಚುರುಕಾಗಿ ಆಡಳಿತ ನಡೆಸುವುದು ಕಷ್ಟವೆನ್ನುವುದು ಅನುಭವಿಗಳ ಮಾತು. ಹೀಗಿರುವಾಗ ವಿಶ್ವವಿದ್ಯಾನಿಲಯದ ಕುಲಪತಿಗಳ ನೇಮಕ ಇತ್ತೀಚಿನ ದಿನಗಳಲ್ಲಿ ಯಾಕೆ ಈ ರೀತಿ ಕಗ್ಗಂಟಾಗುತ್ತಿದೆ? ಎನ್ನುವುದು ಸಹಜವಾಗಿ ನಮ್ಮನ್ನು ಕಾಡುವ ಪ್ರಶ್ನೆ.
ನಮ್ಮ ನೆರೆಯ ಕೇರಳ ಮತ್ತು ತಮಿಳುನಾಡಿನಲ್ಲಿ ರಾಜ್ಯಪಾಲರು ಮತ್ತು ರಾಜ್ಯ ಸರಕಾರದ ನಡುವೆ ನಡೆಯುತ್ತಿರುವ ಹಗ್ಗ ಜಗ್ಗಾಟವನ್ನು ನೋಡಿದರೆ ಈ ಪ್ರಶ್ನೆಗೆ ಉತ್ತರ ಸ್ಪಷ್ಟವಾಗುತ್ತದೆ. ಕೇಂದ್ರ ಸರಕಾರದ ಶಿಫಾರಸಿನ ಮೇಲೆ ರಾಷ್ಟ್ರಪತಿಗಳಿಂದ ನೇಮಕವಾಗುವ ರಾಜ್ಯಪಾಲರು ಕೇಂದ್ರದಲ್ಲಿ ಅಧಿಕಾರದಲ್ಲಿರುವ ಪಕ್ಷದ ಹಿನ್ನಲೆಯಿಂದ ಬರುವವರು. ಇಂತವರಿಗೆ ರಾಜ್ಯದಲ್ಲಿ ಬೇರೆ ಪಕ್ಷದ ಸರಕಾರವಿರುವಾಗ ಹಿತಾಸಕ್ತಿಯ ಸಂಘರ್ಷ ಉಂಟಾಗುತ್ತಿದೆ. ಸರಕಾರ ಮತ್ತು ರಾಜ್ಯಪಾಲರು ಸಂವಿಧಾನದ ಆಶಯಕ್ಕೆ ಪೂರಕವಾಗಿ ಕೆಲಸ ಮಾಡಬೇಕೇ ಹೊರತು ಪಕ್ಷದ ಹಿತಾಸಕ್ತಿಗೆ ಅನುಗುಣವಾಗಿ ಅಲ್ಲ ಎನ್ನುವುದು ಇವರಿಗೆ ತಿಳಿಯದ ವಿಷಯವೇನಲ್ಲ. ಸರಕಾರ ಸೂಚಿಸುವ ಹೆಸರಿಗೆ ರಾಜ್ಯಪಾಲರ ಸಮ್ಮತಿ ಇಲ್ಲ, ರಾಜ್ಯಪಾಲರ ಆಯ್ಕೆ ರಾಜ್ಯ ಸರಕಾರಕ್ಕೆ ಹಿಡಿಸುವುದಿಲ್ಲ. ಅಂತೂ ಇಂತೂ ಸರಕಾರ ರಾಜ್ಯಪಾಲರ ನಡುವಿನ ಹಗ್ಗ ಜಗ್ಗಾಟದಲ್ಲಿ ನಾಡಿನ ಉನ್ನತ ಶಿಕ್ಷಣದ ಭವಿಷ್ಯ ಮಂಕಾಗುತ್ತಿದೆ.
ನಮ್ಮ ನಡುವೆ ಇವತ್ತಿಗೂ ಬಹಳ ಅರ್ಹರಾದ ದಕ್ಷರಾದ, ಸಚ್ಚಾರಿತ್ರ್ಯವಂತರಾದ ಶಿಕ್ಷಣ ತಜ್ಞರೂ ಜ್ಞಾನದಾಹಿಗಳೂ ಆಗಿರುವ ಪ್ರಾಧ್ಯಾಪಕರೇ ಇಲ್ಲವೆನ್ನುವ ಹಾಗಿಲ್ಲ, ಇದ್ದಾರೆ. ಆದರೆ ಅವರು ಸರಸ್ವತೀ ಪುತ್ರರು, ಅವಕಾಶ ದೊರೆತರೆ ಕೆಲಸ ಮಾಡಿಯಾರು, ಆದರೆ ತಮ್ಮ ಪರ ಲಾಬಿ ನಡೆಸುವ ಜನಬಲ, ಧನಬಲ ಅವರಲ್ಲಿರುವುದಿಲ್ಲ. ಸಮಸ್ಯೆ ಇರುವುದು ಇಲ್ಲಿಯೇ. ಇತ್ತೀಚಿನ ದಿನಗಳಲ್ಲಿ ಸಿದ್ಧಾಂತ, ಪಂಗಡ, ಜಾತಿ ಎನ್ನುವ ಮಾತುಗಳು ಎಷ್ಟೇ ಓಡಾಡಿದರೂ ಲಕ್ಷ್ಮೀ ಕಟಾಕ್ಷವಾಗದೆ ಆಯಕಟ್ಟಿನ ಹುದ್ದೆಗಳಿಗೆ ನೇಮಕಾತಿ ಸುಲಭದಲ್ಲಿ ಆಗುವುದಿಲ್ಲ ಎನ್ನುವ ಮಾತು ಎಲ್ಲ ಕಡೆ ಕೇಳಿ ಬರುತ್ತಿದೆ. ಇಂತಹ ಅಂತೆ ಕಂತೆಗಳ ಕಾರಣ ಸೌಜನ್ಯ, ಸರಳತೆ ಉಳಿಸಿಕೊಂಡಿರುವ ಕುಲಪತಿಗಳೂ ಮುಜುಗರ ಪಡುವಂತಾಗಿದೆ. ಉನ್ನತ ಶಿಕ್ಷಣದ ಜವಾಬ್ದಾರಿಯ, ಗೌರವದ ಹುದ್ದೆಯೊಂದರ ನೇಮಕಾತಿಯ ಕುರಿತು ಯಾವುದೇ ಗೊಂದಲಗಳಿಗೆ ಅವಕಾಶವಿಲ್ಲದಂತೆ ಮಾಡಿ, ಇಡೀ ಆಯ್ಕೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಿಕೊಡುವ ನೈತಿಕ ಹೊಣೆಗಾರಿಕೆ ಸರಕಾರದ ಮೇಲಿದೆ ಎನ್ನುವುದನ್ನು ಮರೆಯಬಾರದು.
ಇದನ್ನು ಓದಿದ್ದೀರಾ? ಇವು ಬರೀ ಶಾಲೆಗಳಲ್ಲ-ನಮ್ಮ ನಾಳೆಗಳು ಕೂಡಾ
ಇಂದು ಸಾರ್ವಜನಿಕ ಶಿಕ್ಷಣ ಸಂಸ್ಥೆಗಳು ಎದುರಿಸುತ್ತಿರುವ ಸಮಸ್ಯೆಗಳು ಸಾವಿರಾರು ಇವೆ. ಅದರೊಡನೆಯೇ ದೊಡ್ಡ ಮಟ್ಟದಲ್ಲಿ ಹೊಸ ಹೊಸ ವಿಶ್ವವಿದ್ಯಾನಿಲಯಗಳು ಖಾಸಗೀ ರಂಗದಲ್ಲಿ ಹುಟ್ಟಿಕೊಳ್ಳುತ್ತಿವೆ. ಖಾಸಗೀ ವಲಯಕ್ಕಿರುವ ಅನುಕೂಲ ಮತ್ತು ಅನಾನುಕೂಲಗಳ ನಡುವೆ ಅವು ಮೌಲ್ಯಾಂಕನ ಮಾನದಂಡಗಳಿಗೆ ಅನುಗುಣವಾಗಿ ಬೇಕಾದ್ದನ್ನು ಮಾಡಿ ಉತ್ತಮ ಗ್ರೇಡಿಂಗ್ ಪಡೆದು ಶಿಕ್ಷಣ ಮಾರುಕಟ್ಟೆಯಲ್ಲಿ ಖರೀದಿ ಮಾಡಬಲ್ಲ ಒಳ್ಳೆಯ ಗ್ರಾಹಕರನ್ನು ಆಕರ್ಷಿಸುತ್ತವೆ. ಬಡ, ಮಧ್ಯಮ ವರ್ಗದ ಮಕ್ಕಳು ದುಬಾರಿ ಫೀಸು ನೀಡಿ ಇಂತಹ ಖಾಸಗೀ ವಿಶ್ವವಿದ್ಯಾನಿಲಯಗಳಲ್ಲಿ ಉನ್ನತ ಶಿಕ್ಷಣ ಪಡೆಯುವುದು ದೂರದ ಮಾತಾಯಿತು. ಹೇಳಿ ಕೇಳಿ ಖಾಸಗೀ ವಲಯದಲ್ಲಿ ಸಾಮಾಜಿಕ ನ್ಯಾಯ, ಮೀಸಲಾತಿಯ ಪ್ರಶ್ನೆಗಳೇ ಅಪ್ರಸ್ತುತ. ಇಂತಹ ಸಂಧಿಗ್ಧ ಸ್ಥಿತಿಯಲ್ಲಿ ಸರಕಾರಿ ಒಡೆತನದಲ್ಲಿರುವ ವಿಶ್ವವಿದ್ಯಾನಿಲಯಗಳು ಮತ್ತು ಕಾಲೇಜುಗಳನ್ನು ಉಳಿಸಬೇಕು ಮತ್ತು ಬೆಳೆಸಬೇಕು. ಇಲ್ಲಿ ಬರುವ ವಿದ್ಯಾರ್ಥಿಗಳು ತಮ್ಮ ಭವಿಷ್ಯ ನಿರ್ಮಾಣ ಮಾಡಿಕೊಳ್ಳುವ ಗುರಿಯಿಂದ ವಿಚಲಿತವಾಗುವಂತಹ ವಿದ್ಯಮಾನಗಳಿಗೆ ಅಂತ್ಯ ಕಾಣಿಸಬೇಕಿದೆ.
ಇಂತಹ ಹೊತ್ತಲ್ಲಿ (ಸಾಮಾಜಿಕ ನ್ಯಾಯದ ಪ್ರಶ್ನೆಯನ್ನು ಇಟ್ಟುಕೊಂಡೇ) ಸಂಸ್ಥೆಗಳಿಗೆ ಅತ್ಯುತ್ತಮ ನಾಯಕತ್ವ ನೀಡಬಲ್ಲ ಹೆಗಲುಗಳ ಹುಡುಕಾಟವಾಗಬೇಕೆ ಹೊರತು ಉಳಿದ ರಾಜಕೀಯ ಲೆಕ್ಕಾಚಾರಗಳಲ್ಲ. ಒಂದು ಕಾಲದಲ್ಲಿ ಸಮಾಜಮುಖಿಯಾಗಿದ್ದ, ಪ್ರಜಾಪ್ರಭುತ್ವ ಮತ್ತು ಸಾಮಾಜಿಕ ನ್ಯಾಯದ ಪರವಾಗಿದ್ದ ಪ್ರಜ್ಞಾವಂತ ಶಿಕ್ಷಕರು ಇವತ್ತು ಬಹುತೇಕ ಮಾತು ಮರೆತ ಭಾರತೀಯರಾಗುತ್ತಿದ್ದಾರೇನೋ? ಶಿಕ್ಷಣ ಸಂಸ್ಕೃತಿಯ ವಿಚಾರದಲ್ಲಿ ಸಾಮಾಜಿಕ ಬದ್ಧತೆ ಮೆರೆಯುತ್ತಿದ್ದ ಮಾಧ್ಯಮ ಇಂದು ಮೌನವಾಗಿದೆ. ಇಂತಹ ಹೊತ್ತಲ್ಲಿ ನಾಡಿನ ಪ್ರಜ್ಞಾವಂತರು ಕುಲಪತಿಗಳ ಆಯ್ಕೆಯ ಕುರಿತು ಎತ್ತಿರುವ ಪ್ರಶ್ನೆ ಕೇವಲ ಅವರದ್ದಾಗಿರದೆ ನಮ್ಮೆಲ್ಲರದೂ ಆಗಿದೆ. ಯಾವ ಆಧಾರದ ಮೇಲೆ ರಾಜ್ಯ ಸರಕಾರ ಹೆಸರುಗಳನ್ನು ಶಿಫಾರಸು ಮಾಡುತ್ತದೆ? ರಾಜ್ಯಪಾಲರು ರಾಜ್ಯದ ಜನರಿಂದ ಚುನಾಯಿತವಾದ ಸರಕಾರದ ಶಿಫಾರಸುಗಳನ್ನು ನಿರಾಕರಿಸಲು ಇರುವ ಕಾರಣಗಳು ಏನು? ಇದು ಯಾರೋ ಕೆಲವು ವ್ಯಕ್ತಿಗಳಿಗೆ ಮಾತ್ರ ಸಂಬಂಧಿಸಿದ ಪ್ರಶ್ನೆಯಲ್ಲ. ಇದರಲ್ಲಿ ಜನಪರವಾದ, ಸಮಾಜದಲ್ಲಿ ದುರ್ಬಲರಾದವರ ಮತ್ತು ಸಾಮಾಜಿಕ ನ್ಯಾಯದ ಪ್ರಶ್ನೆಯೂ ಅಡಗಿದೆ. ರಾಜ್ಯಪಾಲರಿಗೆ ಮತ್ತು ಸರಕಾರಗಳಿಗೆ ಆಯ್ಕೆಯ ಸ್ವಾತಂತ್ರ್ಯ ಮಾತ್ರ ಇದೆ, ಆದರೆ ನಾಗರಿಕರಾದ ನಮಗೆ ಅವರ ಆಯ್ಕೆಗೆ ಕಾರಣ ಕೇಳುವ ಸ್ವಾತಂತ್ರ್ಯದ ಜೊತೆಗೆ ಸಾಂವಿಧಾನಿಕ ಹಕ್ಕೂ ಇದೆ ಎನ್ನುವುದನ್ನು ಮರೆಯದಿರೋಣ.
ಡಾ. ಉದಯಕುಮಾರ ಇರ್ವತ್ತೂರು
ವಿಶ್ರಾಂತ ಪ್ರಾಂಶುಪಾಲರು