ಬಿಜೆಪಿ ಶಾಸಕ ಸಿ.ಟಿ. ರವಿಗೆ ತರಾಟೆ; ಧ್ವನಿ ಮಾದರಿ ನೀಡಲು ಹೈಕೋರ್ಟ್‌ ತಾಕೀತು

Most read

ಬೆಂಗಳೂರು: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್​ ಅವರನ್ನು ಅವಾಚ್ಯ ಶಬ್ದದಿಂದ ನಿಂದನೆ ಮಾಡಿರುವ ಪ್ರಕರಣದಲ್ಲಿ ಧ್ವನಿ ಮಾದರಿಯನ್ನು ನೀಡುವಂತೆ ಹೈಕೋರ್ಟ್‌ ಬಿಜೆಪಿ ಮುಖಂಡ, ವಿಧಾನಪರಿಷತ್‌ ಸದಸ್ಯ ಸಿ.ಟಿ. ರವಿ ಅವರಿಗೆ ತಾಕೀತು ಮಾಡಿದೆ. ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು.ಮತ್ತೊಂದು ಕಡೆ ಸದನದ ವಿಡಿಯೋವನ್ನು ಎಫ್‌ ಎ ಎಲ್‌ ಪರೀಕ್ಷೆಗೆ ಒಳಪಡಿಸಿದಾಗ ಸಿಟಿ ರವಿ ಅವಾಚ್ಯ ಶಬ್ದ ಬಳಸಿರುವುದು ಫೋರೆನ್ಸಿಕ್ ಪರೀಕ್ಷೆಯಲ್ಲಿ ದೃಢವಾಗಿದೆ ಎಂದು ತಿಳಿದುಬಂದಿದೆ.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿ.ಟಿ.ರವಿ ಧ್ವನಿ ಮಾದರಿ ನೀಡಲು ನಿರಾಕರಿಸಿದ್ದರು. ಆದ್ದರಿಂದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಐಡಿ ಅಧಿಕಾರಿಗಳು ಸಿ.ಟಿ.ರವಿ ತನಿಖೆಗೆ ಸಹಕರಿಸುತ್ತಿಲ್ಲ ಎಂದು ಹೈಕೋರ್ಟ್ ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ಇಂದು ಹೈಕೋರ್ಟ್‌ ವಿಚಾರಣೆ ನಡೆಸಿತು. ಸಿ ಟಿ ರವಿ ಪರ ವಕೀಲರು ಕೋರ್ಟ್ ಗೆ ಹಾಜರಾಗಿದ್ದರು. ಸಿ.ಟಿ. ರವಿಯವರಿಗೆ ಒಂದೇ ದಿನ ಎರಡು ನೋಟಿಸ್ ನೀಡಿದ್ದಾರೆ ಎಂದು ಕೋರ್ಟ್​ಗೆ ಮಾಹಿತಿ ನೀಡಿದರು.

 ವಾಯ್ಸ್ ಸ್ಯಾಂಪಲ್ ಕೊಡಲು ಆಕ್ಷೇಪಣೆ ಏನಿದೆ ? ಆಕ್ಷೇಪಣೆ  ಇಲ್ಲದಿದ್ದರೆ ವಾಯ್ಸ್ ಸ್ಯಾಂಪಲ್ ಕೊಡಿ ಎಂದು ಸಿ.ಟಿ.ರವಿಗೆ ಜನಪ್ರತಿನಿಧಿಗಳ ಕೋರ್ಟ್ ತಾಕೀತು ಮಾಡಿತು. ಒಂದು ವೇಳೆ ತನಿಖೆಗೆ ಸಹಕಾರ ನೀಡದಿದ್ದರೆ ಸುಮ್ಮನಿರಲು ಆಗುವುದಿಲ್ಲ ಎಂದೂ ನ್ಯಾಯಾಲಯ ಗರಂ ಆಯಿತು.  ಷರತ್ತು ವಿಧಿಸಿಯೇ ನಿಮಗೆ ಜಾಮೀನು ನೀಡಲಾಗಿದೆ.  ತನಿಖೆಗೆ ಸಹಕಾರ ನೀಡದಿದ್ದರೆ ಸುಮ್ಮನಿರಲು ಆಗುವುದಿಲ್ಲ  ಎಂದೂ ಹೇಳಿತು.

ನಿಮಗೆ ಅಕ್ಷೇಪಣೆ ಇದ್ದರೆ ಸಲ್ಲಿಸಿ. ಇಲ್ಲ‌ವೇ ಅದೇಶ ಮಾಡುತ್ತೇನೆ. ತನಿಖಾಧಿಕಾರಿಗಳ ಮುಂದೆ ಹೋಗಿ ವಾಯ್ಸ್ ಸ್ಯಾಂಪಲ್‌ ನೀಡಿ ಎಂದು ನ್ಯಾಯಾಧೀಶರು ಖಡಕ್‌ ಮಾತುಗಳಲ್ಲಿ ರವಿ ಅವರಿಗೆ ಹೇಳಿತು. ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ಕೇಳಿದ ರವಿ ಪರ ವಕೀಲರು ವಿಚಾರಣೆ ಮುಂದೂಡಲು ಮನವಿ ಮಾಡಿಕೊಂಡಿದ್ದರಿಂದ ಹೈಕೋರ್ಟ್‌ ಜನವರಿ 22ಕ್ಕೆ ವಿಚಾರಣೆ ಮುಂದೂಡಿದೆ.

ನಾಲ್ಕು ಗಂಟೆಯ ವಿಡಿಯೋ ದಾಖಲೆಯಲ್ಲಿ ಒಟ್ಟು ಏಳು ಬಾರಿ ಅವಾಚ್ಯ ಶಬ್ದ ಬಳಕೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ಖಚಿತಪಡಿಸಿವೆ. ಆದರೆ ತಾನು ಅವಾಚ್ಯ ಶಬ್ದ ಬಳಸಿಲ್ಲ ಎಂದು ಸಿಟಿ ರವಿ ಹೇಳುತ್ತಿದ್ದಾರೆ.

ಬೆಳಗಾವಿ ಚಳಿಗಾಲದ ಅಧಿವೇಶನದ ಕೊನೆಯ ದಿನ ಡಿಸೆಂಬರ್​ 19 ರಂದು ಪರಿಷತ್‌ನಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್‌ ಸದಸ್ಯರ ಮಧ್ಯೆ ಮಾತಿನ ಚಕಮಕಿ ನಡೆದಿತ್ತು. ಮಾತಿನ ಚಕಮಕಿ ನಡುವೆ ಸಿಟಿ ರವಿ ಅವರು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರಿಗೆ ಅಸಂಸದೀಯ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಹಿರೇಬಾಗೇವಾಡಿ ಪೊಲೀಸ್​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿತ್ತು.

More articles

Latest article