ಶಿವಮೊಗ್ಗದಲ್ಲಿ ಹೈವೋಲ್ಟೇಜ್‌ ಮತ ಸಮರ

Most read

ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮೂವರು ಕಾಂಗ್ರೆಸ್ ಶಾಸಕರೂ ಇರುವುದರಿಂದ, ಸಿದ್ದರಾಮಯ್ಯನವರ ಬೆಂಬಲವೂ ಇರುವುದರಿಂದ, 3.5 ಲಕ್ಷದಷ್ಟಿರುವ ಮುಸ್ಲಿಂ, ಕ್ರಿಶ್ಚಿಯನ್ ಅಲ್ಪಸಂಖ್ಯಾತ ಸಮುದಾಯಗಳ ಸಂಪೂರ್ಣ ಸಹಕಾರವೂ ಸಿಕ್ಕುವುದರಿಂದ ಗೀತಾ ಶಿವರಾಜಕುಮಾರರವರು ಗೆಲ್ಲಬಹುದಾದ ಸಾಧ್ಯತೆಗಳನ್ನು ನಿರ್ಲಕ್ಷಿಸುವಂತಿಲ್ಲ – ಶಶಿಕಾಂತ ಯಡಹಳ್ಳಿ, ರಾಜಕೀಯ ವಿಶ್ಲೇಷಕರು

ಈ ಸಲದ ಲೋಕಸಭಾ ಚುನಾವಣೆಯಲ್ಲೂ ಮತ್ತೆ ಬಿಜೆಪಿ ಬಹುಮತದಿಂದ ಶಿವಮೊಗ್ಗದಲ್ಲಿ ಗೆಲ್ಲುತ್ತದಾ? ಮತ್ತೆ 4 ನೇ ಬಾರಿ ಬಿ.ವೈ.ರಾಘವೇಂದ್ರರವರೇ ಸಂಸದರಾಗಿ ಆಯ್ಕೆ ಆಗ್ತಾರಾ? ಯಡಿಯೂರಪ್ಪನವರ ಜನ ಪ್ರಿಯತೆ ಹಾಗೂ ಮೋದಿಯವರ ವರ್ಚಸ್ಸು ಬಿಜೆಪಿ ಅಭ್ಯರ್ಥಿಯ ಮರು ಆಯ್ಕೆಗೆ ಪ್ರಮುಖ ಕಾರಣವಾಗುತ್ತಾ?  ಬಿಜೆಪಿಯ ಭದ್ರಕೋಟೆ ಅಬಾಧಿತವಾಗಿರುತ್ತಾ?

ಅಥವಾ..

25 ವರ್ಷದಿಂದ ಗೆಲ್ಲದೇ ಇದ್ದ ಈ ಕ್ಷೇತ್ರವನ್ನು ಕಾಂಗ್ರೆಸ್ ಪಕ್ಷ ಮತ್ತೆ ಕೈವಶ ಮಾಡಿಕೊಳ್ಳುತ್ತದಾ? ಅಸೆಂಬ್ಲಿ ಚುನಾವಣೆಯಲ್ಲಾದಂತೆ ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆಗಳು ಕಮಾಲ್ ಮಾಡುತ್ತವಾ? ತಂದೆ ಬಂಗಾರಪ್ಪನವರ ಹೆಸರು, ಅಣ್ಣ ಮಧು ಬಂಗಾರಪ್ಪನವರ ಶ್ರಮ, ಗಂಡ ಶಿವರಾಜಕುಮಾರರವರ ತಾರಾ ವರ್ಚಸ್ಸು ಕಾಂಗ್ರೆಸ್ ಅಭ್ಯರ್ಥಿಯಾದ ಗೀತಾ ಶಿವರಾಜಕುಮಾರರವರ ಗೆಲುವನ್ನು ಸಾಧ್ಯವಾಗಿಸುತ್ತಾ?

ಮೇ 7 ರಂದು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಮತದಾನ ಇದೆ. ಇಡೀ ಕರ್ನಾಟಕದಲ್ಲೇ ಈ ಕ್ಷೇತ್ರ ಅತ್ಯಂತ ಪ್ರತಿಷ್ಟೆಯ ಹೈ ವೋಲ್ಟೇಜ್ ರಣಕಣವಾಗಿದೆ‌. ಶಿವಮೊಗ್ಗ ಜಿಲ್ಲೆಯ ಎರಡು ಪ್ರತಿಷ್ಠಿತ ರಾಜಕೀಯ ಕುಟುಂಬಗಳ ಹಣಾಹಣಿಗೆ ಕಳೆದ 25 ವರ್ಷದಿಂದ ಶಿವಮೊಗ್ಗದ ಜನರು ಸಾಕ್ಷಿಯಾಗಿದ್ದಾರೆ. 2009 ಕ್ಕೂ ಮುಂಚೆ 4 ಬಾರಿ ಸಂಸದರಾಗಿ  ಬಂಗಾರಪ್ಪನವರು ಆಯ್ಕೆಯಾಗಿ ತಮ್ಮ ಪ್ರಾಬಲ್ಯ ಮೆರೆದಿದ್ದರು. 2009 ರ ನಂತರ ಒಂದು ಸಲ ಯಡಿಯೂರಪ್ಪನವರು ಹಾಗೂ ಮೂರು ಸಲ ಅವರ ಪುತ್ರ ರಾಘವೇಂದ್ರರವರು ಸಂಸದರಾಗಿ ಆಯ್ಕೆಯಾಗಿ ಶಿವಮೊಗ್ಗ ಕ್ಷೇತ್ರವು ಯಡಿಯೂರಪ್ಪನವರ ಕುಟುಂಬದ ನಿಯಂತ್ರಣದಲ್ಲೇ ಉಳಿಯಿತು. ಈಗ 2024 ರ ಚುನಾವಣೆಯಲ್ಲೂ ಸಹ ಗೆಲುವು ರಾಘವೇಂದ್ರರವರಿಗೆ ಸುಲಭವಾಗಿ ಒಲಿಯುವ ಎಲ್ಲಾ ಸಾಧ್ಯತೆಗಳೂ ಇತ್ತು. ಆದರೆ ಬಿಜೆಪಿಯ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪನವರ ಬಂಡಾಯ ಸ್ಪರ್ಧೆಯಿಂದ ರಾಘವೇಂದ್ರರವರ ಸ್ಪರ್ಧೆ ಕಠಿಣವಾಯ್ತು.

ಕಳೆದ ಸಲ ಅಸೆಂಬ್ಲಿ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ತಪ್ಪಿಸಿದ ಯಡಿಯೂರಪ್ಪನವರ ಮೇಲೆ ಈಶ್ವರಪ್ಪ ತೀವ್ರವಾದ ಅಸಮಾಧಾನ ಹೊಂದಿದ್ದರು. ಈಗ ಲೋಕಸಭಾ ಚುನಾವಣೆಯಲ್ಲಿ ಅವರ ಪುತ್ರ ಕಾಂತೇಶರವರಿಗೆ ಹಾವೇರಿ ಕ್ಷೇತ್ರದ ಟಿಕೆಟ್ ಸಿಗದೇ ಇರುವುದಕ್ಕೂ ಯಡಿಯೂರಪ್ಪನವರೇ ಕಾರಣ ಎಂದು ಈಶ್ವರಪ್ಪ ಸೇಡಿನ ಬೆಂಕಿಯಲ್ಲಿ ಕುದಿಯ ತೊಡಗಿದರು. ‘ರಾಜಕೀಯ ಕ್ಷೇತ್ರದಲ್ಲಿ ಯಡಿಯೂರಪ್ಪ ತಮ್ಮನ್ನು ಹಾಗೂ ತಮ್ಮ ಕುಟುಂಬವನ್ನು ತುಳಿದು ಮೂಲೆಗುಂಪು ಮಾಡುತ್ತಿದ್ದಾರೆ’ ಎಂದು ಆರೋಪಿಸಿ ಹೈಕಮಾಂಡ್ ಆದೇಶ ಹಾಗೂ ಓಲೈಕೆಗಳನ್ನೂ ನಿರ್ಲಕ್ಷಿಸಿ ಪಕ್ಷೇತರ ಅಭ್ಯರ್ಥಿಯಾಗಿ ರಾಘವೇಂದ್ರರ ವಿರುದ್ಧ ಈಶ್ವರಪ್ಪನವರು ಸ್ಪರ್ಧಿಸಿದ್ದಾರೆ. ಚುನಾವಣೆಯಲ್ಲಿ ತಾವು ಗೆಲ್ಲದೇ ಹೋದರೂ ಯಡಿಯೂರಪ್ಪನವರ ಮಗನನ್ನು ಸೋಲಿಸಲೇಬೇಕು ಎನ್ನುವ ಹಠ ಈಶ್ವರಪ್ಪನವರದ್ದು. ಹೀಗಾಗಿ ಶಿವಮೊಗ್ಗ ಕ್ಷೇತ್ರ ಈ ಬಾರಿ ತುರುಸಿನ  ತ್ರಿಕೋನ ಸ್ಪರ್ಧೆಗೆ ಸಿದ್ಧವಾಗಿದೆ.

ರಾಘವೇಂದ್ರ, ಗೀತಾ, ಈಶ್ವರಪ್ಪ

ಕಳೆದ ಎರಡು ದಶಕಗಳಿಂದ ಶಿವಮೊಗ್ಗವು ಹಿಂದುತ್ವದ ಪ್ರಯೋಗ ಶಾಲೆಯಾಗಿದೆ. ಅನೇಕ ಕೋಮು ಸಂಘರ್ಷಗಳು ಸೃಷ್ಟಿಗೊಂಡು ಬಿಜೆಪಿ ಪರವಾಗಿ ಹಿಂದೂ ಮತಗಳು ಕ್ರೋಢೀಕರಣಗೊಂಡಿವೆ. ಹಿಂದುಳಿದ ವರ್ಗಗಳ ಮತದಾರರೂ ಸಹ ಮೋದಿ ಮೋಡಿಗೊಳಗಾಗಿ ಬಿಜೆಪಿಯನ್ನು ಬೆಂಬಲಿಸುತ್ತಾ ಬಂದಿದ್ದಾರೆ. ಉಗ್ರ ರಾಷ್ಟ್ರೀಯವಾದ, ಅನ್ಯ ಧರ್ಮದ್ವೇಷ, ಮತಾಂಧತೆಗೆ ಮರುಳಾದ ಹಿಂದೂ ಯುವಕರು ಬಿಜೆಪಿ ಪಕ್ಷದ ಪರವಾಗಿ ತಮ್ಮ ಅದಮ್ಯ ಬೆಂಬಲವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ.

ಆದರೆ, ಶಿವಮೊಗ್ಗ ಜಿಲ್ಲೆಯಲ್ಲಿ ಬಿಜೆಪಿ ಪಕ್ಷದ ಏಕಾಧಿಪತ್ಯಕ್ಕೆ ಕಳೆದ ಅಸೆಂಬ್ಲಿ ಚುನಾವಣೆಯಲ್ಲಿ ಕಾಂಗ್ರೆಸ್ ಏಟು ಕೊಟ್ಟಿತು. ಬಿಜೆಪಿಯ ಭದ್ರ ನೆಲೆಯಾಗಿದ್ದ ಸಾಗರ ಹಾಗೂ ಭದ್ರಾವತಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದು ಬಿಜೆಪಿ ಪ್ರಾಬಲ್ಯವನ್ನು ಛಿದ್ರ ಮಾಡಿತು. ಜೊತೆಗೆ ಸೊರಬದಲ್ಲೂ ಕಾಂಗ್ರೆಸ್ ಗೆಲುವಿನ ನಗೆ ಬೀರಿತು. ಒಟ್ಟು ಶಿವಮೊಗ್ಗ ಲೋಕಸಭೆ ವ್ಯಾಪ್ತಿಯ ಎಂಟು ವಿಧಾನಸಭೆ ಕ್ಷೇತ್ರದಲ್ಲಿ ಕಾಂಗ್ರೆಸ್ ೦3 ಸ್ಥಾನ ಗೆದ್ದರೆ ಜೆಡಿಎಸ್ ೦1 ಕಡೆ ಗೆದ್ದಿತ್ತು. ಬಿಜೆಪಿ 4 ಕಡೆ ಗೆಲುವು ಸಾಧಿಸಿ ಸಮಾಧಾನ ಪಟ್ಟಿತ್ತು. ಒಟ್ಟಾರೆ ಚಲಾವಣೆಯಾದ ಮತಗಳಲ್ಲಿ ಬಿಜೆಪಿ 5.81 ಲಕ್ಷ ಪಡೆದರೆ ಕಾಂಗ್ರೆಸ್ 5.04 ಲಕ್ಷ ಪಡೆದಿತ್ತು. ಕಾಂಗ್ರೆಸ್ಸಿನ ಗ್ಯಾರಂಟಿ ಆಶ್ವಾಸನೆಗಳು ಕಾಂಗ್ರೆಸ್ ಗೆಲುವಿಗೆ ಪ್ರಮುಖ ಕಾರಣವಾಗಿತ್ತು.

ಮಗ ಕಾಂತೇಶ ಮತ್ತು ಈಶ್ವರಪ್ಪ

ಈ ಸಲದ ಲೋಕಸಭಾ ಚುನಾವಣೆ ಹಿಂದಿನ ಹಾಗೆ ಸಂಪೂರ್ಣವಾಗಿ ಬಿಜೆಪಿ ಪರವಾಗಿಲ್ಲ. ಈಶ್ವರಪ್ಪನವರು ಬಿಜೆಪಿಯ ಹಿಂದೂ ಮತಬ್ಯಾಂಕಿಗೆ ಕೈಹಾಕಿದ್ದಾರೆ. ಅವರು ರಾಘವೇಂದ್ರರ ಪರವಾಗಿರುವ ಎಷ್ಟು ಮತಗಳನ್ನು ಸೆಳೆದು ಕೊಳ್ಳುತ್ತಾರೆ ಎನ್ನುವುದರ ಮೇಲೆ ಬಿಜೆಪಿಯ ಸೋಲು ಗೆಲುವು ನಿರ್ಧಾರವಾಗುತ್ತದೆ. ಶಿವಮೊಗ್ಗದಂತಹ ನಗರ ಪ್ರದೇಶವನ್ನು ಹೊರತು ಪಡಿಸಿ ಬೇರೆಲ್ಲಾ ಅಸೆಂಬ್ಲಿ ಕ್ಷೇತ್ರಗಳಲ್ಲೂ ಮೋದಿ ಅಲೆ ಮೊದಲಿನಂತಿಲ್ಲ. ವಯಸ್ಸಿನ ಕಾರಣಕ್ಕೆ ಯಡಿಯೂರಪ್ಪನವರೂ ಮೊದಲಿನಂತೆ ಮತದಾರರಲ್ಲಿ ಮಿಂಚಿನ ಸಂಚಾರ ಹರಿಸುವ ಸಾಧ್ಯತೆಗಳಿಲ್ಲ. ಆರೆಸ್ಸೆಸ್ ಕಾರ್ಯಕರ್ತರು ಜಿಲ್ಲೆಯಲ್ಲಿ ಆಕ್ಟೀವ್ ಆಗಿಲ್ಲ. ಕುಮಾರ ಬಂಗಾರಪ್ಪನವರು ಸೋಲಿನ ಹತಾಶೆಯಿಂದ ಇನ್ನೂ ಹೊರಬಂದಿಲ್ಲ. ಪ್ರಜ್ವಲ್ ಲೈಂಗಿಕ ಹಗರಣದಿಂದಾಗಿ ಜೆಡಿಎಸ್ ನಾಯಕರು ಹಾಗೂ ಕಾರ್ಯಕರ್ತರು ಮುಂಚೂಣಿಯಲ್ಲಿಲ್ಲ. ಯಡಿಯೂರಪ್ಪನವರ ವಿರೋಧಿಗಳು ಕೊಡುವ ಒಳ ಏಟುಗಳು ನಿಲ್ಲುವುದಿಲ್ಲ.  ಈಶ್ವರಪ್ಪನವರ ಸ್ಪರ್ಧೆಯಿಂದಾಗಿ ಹಿಂದೂ ಮತಗಳ ವಿಭಜನೆ ನಿಲ್ಲಿಸಲು ಸಾಧ್ಯವಿಲ್ಲ. ಹೀಗಾಗಿ ಈ ಸಲ ರಾಘವೇಂದ್ರರವರ ಗೆಲುವಿಗೆ ಯಡಿಯೂರಪ್ಪನವರು ನಾಲ್ವರು ಬಿಜೆಪಿ ಶಾಸಕರ ಬೆಂಬಲದೊಂದಿಗೆ ಸಾಕಷ್ಟು ಬೆವರು ಹರಿಸಬೇಕಿದೆ. ಯಡಿಯೂರಪ್ಪ ಮತ್ತು ಮಕ್ಕಳಿಗೆ ಇದು ಮಾಡು ಇಲ್ಲವೆ ಮಡಿ ಎನ್ನುವ ಚುನಾವಣೆಯಾಗಿದೆ. ಯಡಿಯೂರಪ್ಪನವರ ವರ್ಚಸ್ಸು ಪ್ರಭಾವ ಉಳಿಯ ಬೇಕೆಂದರೆ, ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಮುಂದುವರೆಯ ಬೇಕೆಂದರೆ ರಾಘವೇಂದ್ರರವರನ್ನು ಗೆಲ್ಲಿಸಲೇಬೇಕಿದೆ.

ಗೀತಾ ಅವರ ಪರ ನಟ ಶಿವರಾಜ್‌ ಕುಮಾರ್‌ ಪ್ರಚಾರ

ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾಗಿರುವ ಗೀತಾ ಶಿವರಾಜಕುಮಾರರವರು ಈ ಹಿಂದೆ 2014 ರಲ್ಲಿ ಜೆಡಿಎಸ್ ಪಕ್ಷದಿಂದ ಲೋಕಸಭೆಗೆ ಸ್ಪರ್ಧಿಸಿ ಪರಾಭವ ಹೊಂದಿದ್ದರು. ಜೆಡಿಎಸ್ ಪಕ್ಷದಿಂದ ಸ್ಪರ್ಧಿಸಿದ್ದ ಗೀತಾರವರ ಸಹೋದರ ಮಧು ಬಂಗಾರಪ್ಪ ಕೂಡಾ ಎರಡು ಸಲ ಸೋತಿದ್ದರು. ಈ ಸೋಲುಗಳ ಸಹಾನುಭೂತಿ ಸಹ ಮತಗಳನ್ನು ತಂದು ಕೊಡಬಹುದಾಗಿದೆ. ಈ ಕ್ಷೇತ್ರದಲ್ಲಿ ಮಹಿಳಾ ಮತದಾರರೇ ಹೆಚ್ಚಾಗಿರುವುದರಿಂದ ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿರುವ ಮಹಿಳೆಯರ ಮತಗಳೂ ಕಾಂಗ್ರೆಸ್ ಪಾಲಾಗಬಹುದು. ಸಿನೆಮಾ ಸ್ಟಾರ್ ಗಳು ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವುದು ಹಾಗೂ ನಟ ಶಿವರಾಜಕುಮಾರರವರೇ ಚುನಾವಣಾ ಪ್ರಚಾರಕ್ಕೆ ಧುಮುಕಿರುವುದು ಒಂದಿಷ್ಟು ಅಭಿಮಾನಿಗಳ ಮತವನ್ನೂ ಗಳಿಸಬಹುದಾಗಿದೆ. ಜಾತಿ ಕಾರಣಕ್ಕೆ ಈಡಿಗರು ಬಿಲ್ಲವರು, ದೀವರು ಸಮುದಾಯದ ಬೆಂಬಲವೂ ಗೀತಾರವರಿಗೆ ದೊರೆಯ ಬಹುದಾಗಿದೆ. ಕ್ಷೇತ್ರದಲ್ಲಿ ಮೂವರು ಕಾಂಗ್ರೆಸ್ ಶಾಸಕರು ಇರುವುದರಿಂದ, ಸಿದ್ದರಾಮಯ್ಯನವರ ಬೆಂಬಲವೂ ಇರುವುದರಿಂದ, 3.5 ಲಕ್ಷದಷ್ಟಿರುವ ಮುಸ್ಲಿಂ ಕ್ರಿಶ್ಚಿಯನ್ ಅಲ್ಪಸಂಖ್ಯಾತ ಸಮುದಾಯಗಳ ಸಂಪೂರ್ಣ ಸಹಕಾರವೂ ಸಿಕ್ಕುವುದರಿಂದ ಗೀತಾ ಶಿವರಾಜಕುಮಾರರವರು ಗೆಲ್ಲಬಹುದಾದ ಸಾಧ್ಯತೆಗಳನ್ನು ನಿರ್ಲಕ್ಷಿಸುವಂತಿಲ್ಲ.

ಒಟ್ಟಾರೆಯಾಗಿ ಈ ಸಲ ಶಿವಮೊಗ್ಗ ಲೋಕಸಭಾ ಕ್ಷೇತ್ರವು ಅತ್ಯಂತ ಹೈ ವೋಲ್ಟೇಜ್ ಮತಸಮರದ ಕ್ಷೇತ್ರವಾಗಿದ್ದು ಎರಡು ಪ್ರತಿಷ್ಠಿತ ರಾಜಕೀಯ ಕುಟುಂಬಗಳ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಸೋಲು ಗೆಲುವು ಮೂರನೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಈಶ್ವರಪ್ಪನವರು ತೆಗೆದುಕೊಳ್ಳಬಹುದಾದ ಮತಗಳನ್ನು ಆಧರಿಸಿದೆ. ಫಲಿತಾಂಶಕ್ಕಾಗಿ ಜೂನ್ 4 ರ ವರೆಗೆ ಕಾಯಬೇಕಿದೆ.

ಶಶಿಕಾಂತ ಯಡಹಳ್ಳಿ

ರಾಜಕೀಯ ವಿಶ್ಲೇ಼ಷಕರು

ಇದನ್ನೂ ಓದಿ- http://ಉತ್ತರ ಕನ್ನಡ ಕ್ಷೇತ್ರದಲ್ಲಿ ಹಿಂದುಳಿದವರ ಒಗ್ಗಟ್ಟು: ಡಾ. ಅಂಜಲಿ ನಿಂಬಾಳ್ಕರ್ ಗೆಲುವಿನತ್ತ ದಾಪುಗಾಲು https://kannadaplanet.com/uttara-kannada-constituency-dr-anjali-nimbalkar-strides-to-victory/

More articles

Latest article