ಬೆಂಗಳೂರು ಟರ್ಫ್ ಕ್ಲಬ್‌ನಲ್ಲಿ (ರೇಸ್ ಕೋರ್ಸ್) ರಾಜ್ಯ ಸರ್ಕಾರ ವಿಧಿಸಿರುವ ಷರತ್ತುಗಳ ಅನ್ವಯ ಕುದುರೆ ಪಂದ್ಯಗಳನ್ನು ಆಯೋಜಿಸಲು ಅನುಮತಿ ನೀಡಿ ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ಕುದುರೆ ಪಂದ್ಯಗಳ ಆಯೋಜನೆ ಅನುಮತಿ ನಿರಾಕರಿಸಿ ರಾಜ್ಯ ಸರ್ಕಾರ 2024ರ ಜೂ.6ರಂದು ಹೊರಡಿಸಿದ್ದ ಆದೇಶ ಪ್ರಶ್ನಿಸಿ ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ (ಬಿಟಿಸಿ), ಕರ್ನಾಟಕ ಟ್ರೈನರ್ಸ್ ಅಸೋಸಿಯೇಷನ್ಸ್, ಕರ್ನಾಟಕ ರೇಸ್ ಕುದುರೆ ಮಾಲೀಕರ ಸಂಘ, ಕರ್ನಾಟಕ ಜಾಕಿಗಳ ಸಂಘ ಸೇರಿದಂತೆ ಮತ್ತಿತರರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.
ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೃಷ್ಣಕುಮಾರ್ ಅವರ ನ್ಯಾಯಪೀಠ, 2024ರ ಮಾರ್ಚ್ ತಿಂಗಳಲ್ಲಿ ಆನ್ ಕೋರ್ಸ್ ಮತ್ತು ಆಫ್ ಕೋರ್ಸ್ ಕುದುರೆ ಪಂದ್ಯ ಮತ್ತು ಬೆಟ್ಟಿಂಗ್ ಚಟುವಟಿಕೆಗಳನ್ನು ನಡೆಸಲು ಸರ್ಕಾರ ನೀಡಿದ್ದ ಪರವಾನಗಿಯ ಷರತ್ತಿನಂತೆ ಕುದುರೆ ಪಂದ್ಯ ಆಯೋಜಿಸಬಹುದು ಎಂದು ತಿಳಿಸಿ ನ್ಯಾಯಪೀಠ ಮಂಗಳವಾರ ಮಧ್ಯಂತರ ಆದೇಶ ಮಾಡಿದೆ.
ಯಾವುದೇ ಅಡತಡೆ ಹಾಗೂ ಅಡಚಣೆ ರಹಿತವಾಗಿ ಪಂದ್ಯ ಆಯೋಜಿಸಲು ಅರ್ಜಿದಾರಿಗೆ ರಾಜ್ಯ ಸರ್ಕಾರ ಅನುಮತಿ ನೀಡಬೇಕು. ಕುದುರೆ ಪಂದ್ಯ ಹಾಗೂ ಬೆಟ್ಟಿಂಗ್ ಚಟುವಟಿಕೆಗಳ ಮೇಲ್ವಿಚಾರಣೆ ಮತ್ತು ನಿಯಂತ್ರಿಸುವ ಸ್ವಾತಂತ್ರ್ಯ ರಾಜ್ಯ ಸರ್ಕಾರಕ್ಕೆ ಇರಲಿದೆ. ಈ ಮಧ್ಯಂತರ ಆದೇಶ ಅರ್ಜಿಗಳ ಕುರಿತ ಅಂತಿಮ ಆದೇಶಕ್ಕೆ ಬದ್ಧವಾಗಿರುತ್ತದೆ ಎಂದು ನಿರ್ದೇಶಿಸಿದ ನ್ಯಾಯಪೀಠ, ಅರ್ಜಿಗಳ ವಿಚಾರಣೆಯನ್ನು ನಾಲ್ಕು ವಾರಗಳ ನಂತರಕ್ಕೆ ಮುಂದೂಡಿದೆ.
ಇದರ ಬೆನ್ನಲ್ಲೇ, ಬೆಂಗಳೂರು ಟರ್ಫ್ ಕ್ಲಬ್ ಲಿಮಿಟೆಡ್ (ಬಿಟಿಸಿ) ಜೂ.22ರಂದು ಬೇಸಿಗೆ ಪಂದ್ಯ ಆಯೋಜನೆ ಮಾಡಿದೆ.