ವಾಷಿಂಗ್ಟನ್:ಅಮೆರಿಕಕ್ಕೆ ವಲಸೆ ಬರುವವರನ್ನು ನಿಯಂತ್ರಿಸುವ ಉದ್ದೇಶದಿಂದ ಅಮೆರಿಕದಲ್ಲಿ ನೆಲಸಲು ಮತ್ತು ಉದ್ಯೋಗಕ್ಕೆ ಬರುವ ಭಾರತೀಯರು ಸೇರಿದಂತೆ ವಿದೇಶಿಯರು ಬಳಸುವ ಎಚ್–1ಬಿ ವೀಸಾ ಮೇಲೆ ವಾರ್ಷಿಕ 1 ಲಕ್ಷ ಅಮೆರಿಕನ್ ಡಾಲರ್ ಶುಲ್ಕ ವಿಧಿಸುವ ಪ್ರಸ್ತಾವನೆಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸಮ್ಮತಿ ಸೂಚಿಸಿದ್ದಾರೆ. ಈ ಕ್ರಮದಿಂದ ವಿಶೇಷವಾಗಿ ಭಾರತೀಯ ಉದ್ಯೋಗಿಗಳು ಉದ್ಯೋಗ ಕಳೆದುಕೊಳ್ಳುವ ಸಾಧ್ಯಗಳೇ ಹೆಚ್ಚು ಎಂದು ವಿಶ್ಲೇಷಿಸಲಾಗುತ್ತಿದೆ.
ಎಚ್–1ಬಿ ವೀಸಾ ಯೋಜನೆಯ ದುರುಪಯೋಗವು ರಾಷ್ಟ್ರೀಯ ಭದ್ರತೆಗೆ ಸವಾಲಾಗಿ ಪರಿಣಮಿಸಿದೆ. ಆದ್ದರಿಂದ 1 ಲಕ್ಷ ಅಮೆರಿಕನ್ ಡಾಲರ್ ಪಾವತಿಸಿ ಎಚ್–1ಬಿ ವೀಸಾ ಪಡೆಯದ ಹೊರತು ಅಮೆರಿಕದಲ್ಲಿ ನೆಲಸಲು ಅನುಮತಿ ನೀಡುವುದಿಲ್ಲ ಎಂದು ಟ್ರಂಪ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕದ ತಂತ್ರಜ್ಞಾನ ಕಂಪನಿಗಳು ಭಾರತ ಸೇರಿದಂತೆ ವಿವಿಧ ದೇಶಗಳ ಸಾವಿರಾರು ನೌಕರರನ್ನು ಪ್ರತಿ ವರ್ಷ ನೇಮಕ ಮಾಡಿಕೊಳ್ಳುತ್ತಿವೆ. ಅದರಲ್ಲೂ ತಾಂತ್ರಿಕ ಪರಿಣತ ಕ್ಷೇತ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ನೇಮಕ ಮಾಡಿಕೊಳ್ಳಲಾಗುತ್ತಿದೆ. ಕ್ರಮಕ್ಕೆ ಎಚ್–1ಬಿ ವೀಸಾ ಅಗತ್ಯವಾಗಿರುತ್ತದೆ.
ಎಚ್–1ಬಿ ವಲಸೆರಹಿತ ವೀಸಾ ಕಾರ್ಯಕ್ರಮವು ಕಡಿಮೆ ಸಂಬಳ, ಕಡಿಮೆ ಕೌಶಲ್ಯದ ಕಾರ್ಮಿಕರೊಂದಿಗೆ ಅಮೆರಿಕನ್ ಕಾರ್ಮಿಕರನ್ನು ಬದಲಿಸಲು ಉದ್ದೇಶಪೂರ್ವಕವಾಗಿ ಬಳಸಿಕೊಳ್ಳಲಾಗುತ್ತಿದೆ. ಬದಲಾಗಿ ತಾತ್ಕಾಲಿಕ ಕಾರ್ಮಿಕರನ್ನು ಅಮೆರಿಕಕ್ಕೆ ಕರೆತಂದು ಹೆಚ್ಚಿನ ಕೌಶಲ್ಯದ ಕೆಲಸಗಳನ್ನು ಮಾಡಿಸಿಕೊಳ್ಳಲಾಗುತ್ತಿದೆ ಎನ್ನುವುದು ಟ್ರಂಪ್ ಆಪಾದನೆಯಾಗಿದೆ.
ಈ ಪ್ರಮಾಣದ ವೀಸಾ ಶುಲ್ಕವನ್ನು ಪಾವತಿಸುವುದು ಕಷ್ಟ ಸಾಧ್ಯವೇ ಸರಿ. ಇದು ಎಲ್ಲ ಹಂತದ ಉದ್ಯೋಗಿಗಳಗೆ ಸಾಧ್ಯವಾಗುವುದಿಲ್ಲ. ಹಾಗಾಗಿ ಅಮೆರಿಕದಲ್ಲಿರುವ ಲಕ್ಷಾಂತರ ಭಾರತೀಯ ಸಾಫ್ಟ್ ವೇರ್ ಇಂಜಿನಿಯರ್ ಗಳು ಭಾರತಕ್ಕೆ ಮರಳಬೇಕಾಗಿ ಬರಬಹುದು ಎಂದು ಹೇಳಲಾಗುತ್ತಿದೆ.

 
                                    
