ಆಸ್ಪತ್ರೆ ಸೇರಿದ ಗಂಗೆ ಹೆಣ್ಣು ಮಗುವಿಗೆ ಜನ್ಮ ನೀಡುತ್ತಾಳೆ. ಮಗು ನೋಡಲು ಬಂದ ಆಕೆಯ ಅತ್ತೆ ಸ್ವಲ್ಪವೂ ಕನಿಕರ ತೋರದೆ ಬಂದಹಾಗೆಯೇ ಹಿಂದೆ ಹೋಗುತ್ತಾಳೆ. ಗಂಗೆ ಅಳುವ ಮಗುವನ್ನು ಸಮಾಧಾನಿಸಲು ಹೆಣಗುತ್ತಿರುವಾಗಲೇ ಅಜ್ಜಿಯೊಬ್ಬಳು ಜತೆಯಾಗಿ ಆ ಮಗುವನ್ನು ತಾನು ಸಾಕುವುದಾಗಿ ಹೇಳಿ ಗಂಗೆಯಿಂದ ಬೈಸಿಕೊಳ್ಳುತ್ತಾಳೆ…ಗಂಗೆ ಆಸ್ಪತ್ರೆಯಿಂದ ಬಿಡುಗಡೆಗೊಂಡು ಎಲ್ಲಿಗೆ ಹೋದಳು? ಓದಿ, ವಾಣಿ ಸತೀಶ್ ಅವರ ʼತಂತಿ ಮೇಲಣ ಹೆಜ್ಜೆʼಯ ಅರುವತ್ತನೆಯ ಕಂತು.
ಗಂಗೆ ಬಾಣಂತನಕ್ಕೆಂದು ನಾರಿಪುರ ಸೇರಿ ಆಗಲೇ ಎರಡು ಮೂರು ತಿಂಗಳು ಕಳೆದಿತ್ತು. ಆಸ್ಪತ್ರೆಯಿಂದ ಹೆಂಡತಿಯನ್ನು ಕರೆದುಕೊಂಡು ಬಂದು ಬಿಟ್ಟು ಹೋದ ಮೋಹನ ಇದುವರೆಗೂ ಒಮ್ಮೆಯೂ ತಿರುಗಿ ನೋಡಿರಲಿಲ್ಲ. ಅಪ್ಪ ಅವ್ವ ಮಗಳಿಗಾಗಿ ಮಾಡುತ್ತಿದ್ದ ಬಾಣಂತನದ ಧಾರಳ ಖರ್ಚು ವೆಚ್ಚಗಳೆಲ್ಲ ಅಣ್ಣ ತಮ್ಮಂದಿರ ಎದೆಗುದ್ದತೊಡಗಿತ್ತು. ರಾತ್ರಿ ಪೂರ ಬಿಟ್ಟು ಬಿಡದಂತೆ ರಚ್ಚೆ ಹಿಡಿದು ಒಂದೇ ಸಮನೆ ಅಳುತ್ತಿದ್ದ ಕೂಸನ್ನೇ ಒಂದು ನೆಪವಾಗಿಸಿಕೊಂಡ ಚಂದ್ರಹಾಸ, ಗಿರಿಧರ ದೊಡ್ಡ ಕೋಲಾಹಲವನ್ನೇ ಎಬ್ಬಿಸಿ, ಪ್ರತೀ ಹೆಜ್ಜೆಗೂ ಗಂಗೆ ಆ ಮನೆಯಲ್ಲಿ ಉಸಿರು ಕಟ್ಟಿ ನಡೆಯುವಂತೆ ಮಾಡಿದ್ದರು.
ಇದರಿಂದ ಮಾನಸಿಕವಾಗಿ ಜರ್ಜರಿತನಾದ ಅಪ್ಪ ಬೋಪಯ್ಯ ಯಾರಿಗೂ ತಿಳಿಯದಂತೆ ಗಂಗೆಯ ಹೆಸರಿಗೆ ಮೂರು ಎಕ್ಕರೆ ಜಮೀನು ಬರೆದು, ಅಲ್ಲಿಯೆ ಒಂದು ಸಣ್ಣ ಗುಡಿಸಲು ಕಟ್ಟಿ ಮಗಳು ಮೊಮ್ಮಗಳಿಗೆ ಬೆಂಗಾವಲಾಗಿ ನಿಂತ. ಇತ್ತ ಭೋಗನೂರಿನ ತುಂಬಾ ಸದಾ ಗಂಗೆಯ ಗುಣಗಾನ ಮಾಡಿಕೊಂಡು ಓಡಾಡುತ್ತಾ ಅಕ್ಕ, ಚಿಕ್ಕ ತಾಯಮ್ಮನಿಂದ ತಾರಾ ಮಾರ ಉಗಿಸಿಕೊಳ್ಳುತ್ತಿದ್ದ ಮೋಹನನ ಮಾವ ಅಪ್ಪಜ್ಜಣ್ಣ, ಬಾಣಂತಿಯನ್ನು ನೋಡಲು ನಾರಿಪುರದತ್ತ ಬಂದವನು ಅವಳ ಪರಿಸ್ಥಿತಿ ಕಂಡು ಗಂಗೆಯ ಬಲಗೈಯಾಗಿ ಆ ಗುಡಿಸಲಿನಲ್ಲಿಯೇ ಉಳಿದುಬಿಟ್ಟ.
ಹಾಗೂ ಹೀಗೂ ಮೂರು ತಿಂಗಳು ಸರಿದು, ಮಲೆನಾಡಿನ ಮಳೆಗಾಲ ಬಿರುಸಾಗಿಯೇ ಆರಂಭವಾಗಿತ್ತು. ನಾರಿಪುರದಿಂದ ಎಂಟತ್ತು ಕಿಲೋಮೀಟರ್ ದೂರದ ಹುದುಗೂರಿನ ಗುಡ್ಡದ ತಪ್ಪಲಿನಲ್ಲಿದ್ದ ಗಂಗೆಯ ಆ ಗುಡಿಸಲು, ಮಲೆನಾಡಿನ ಬಿರು ಮಳೆಗೆ ನಲುಗುತ್ತಾ ಸಗಣಿ ಬಳಿದುಕೊಂಡ ನೆಲದಿಂದ ಕಟ್ಟಿರುವೆಗಳ ಸಾಲು ನೀರಿನ ಪಸೆಯೊಂದಿಗೆ ಮೇಲೇಳುತ್ತಿತ್ತು. ಯಾವ ಕಿಟನಾಶಕಗಳಿಗೂ ಬಗ್ಗದ ಈ ಕೀಚಕನಂತಹ ಇರುವೆಗಳು ಎಲ್ಲಿರುತ್ತಿದ್ದವೋ ನಿದ್ದೆ ಹತ್ತಿದ ಮಗುವನ್ನು ಮಡಿಲಿನಿಂದ ಕೆಳಗೆ ಹಾಕುತ್ತಿದ್ದಂತೆ ಅದರ ಸುತ್ತಾ ಮುತ್ತಿಗೆ ಹಾಕಿ ಕಿತ್ತು ತಿನ್ನಲು ಮುಂದಾಗುತ್ತಿದ್ದವು.
ಈ ಎಲ್ಲಾ ಪಡಿ ಪಾಟಲುಗಳ ಒಳಗೆ ಮೋಹನನನ್ನು ಕಾಯುತ್ತಾ ದಿನಾ ನೂಕುತ್ತಿದ್ದ ಗಂಗೆಯ ಒಳ ಕೂಗು ಅವನ ಹೃದಯವನ್ನು ತಟ್ಟಿತೋ, ಎನ್ನುವಂತೆ ಜರ್ರನ್ನೇ ಹಿಡಿದ ಮಳೆಗಾಲದ ಒಂದು ರಾತ್ರಿ ಕುಡಿದು ಹಣ್ಣಾದ ಚಂದ್ರಹಾಸನ ಬ್ಯಾಟರಿ ಬೆಳಕಿನಲ್ಲಿ ಮೋಹನ ಗಂಗೆಯ ಗುಡಿಸಲು ಸೇರಿದ. ಅದುವರೆಗೂ ಮಗಳಿಗೆ ತೋರಗೊಡದಂತೆ ಅಳಿಯನ ಬಗ್ಗೆ ಅಸಮಾಧಾನದಿಂದ ಕುದಿಯುತ್ತಿದ್ದ ಅಪ್ಪ, ಅಂದು ಮೋಹನನ ಮುಖ ಕಂಡ ಕೂಡಲೇ ಎಲ್ಲವನ್ನು ಮರೆತು ತಣ್ಣಗೆ ಹಗುರಾಗಿ ನೆಮ್ಮದಿಯ ನಿಟ್ಟುಸಿರು ಬಿಟ್ಟು, ಅಪ್ಪಜ್ಜಣ್ಣನೊಂದಿಗೆ ನಾರಿಪುರದ ಮನೆಯತ್ತ ಹೆಜ್ಜೆ ಹಾಕಿದ್ದ.
ಹಾಸಿದ್ದ ಮಂದಲಿಗೆ ದಾಟಿ ತಣ್ಣಗೆ ಬೆನ್ನು ಕೊರೆಯುತ್ತಿದ್ದ ನೆಲದ ನೀರ ಪಸೆ, ಬುಗಬುಗನೆ ಮೇಲೆಳುತ್ತಿದ್ದ ಇರುವೆಗಳ ಹಿಂಡು, ಅದರಿಂದ ಮಗುವನ್ನು ಜೋಪಾನ ಮಾಡಿಕೊಳ್ಳಲು ಪರದಾಡುತ್ತಿದ್ದ ಗಂಗೆಯ ಒದ್ದಾಟ, ಹೀಗೆ ಇಡೀ ರಾತ್ರಿ ಇವುಗಳನ್ನೆಲ್ಲಾ ನೋಡಿ ಅಧೀರನಾದ ಮೋಹನನ ಮಾತುಗಳು ಸತ್ತು, ಒಂದೇ ಸಮನೆ ಹರಿದ ಅವನ ಕಣ್ಣೀರು ಅವಳ ಎದೆ ತೋಯಿಸಿತ್ತು.
ಆಗಾಗ ಪಾಪ ಪುಣ್ಯಗಳ ಸುಳಿಯಲ್ಲಿ ಸಿಕ್ಕು ಒದ್ದಾಡುತ್ತಿದ್ದ ಮೋಹನ, ಮರುದಿನವೇ ನಿಂತ ಕಾಲಿನ ಮೇಲೆ ಬೆಂಗಳೂರಿನ ಹಾದಿ ಹಿಡಿದ. ತರಾತುರಿಯಲ್ಲಿಯೇ ಅಲ್ಲಿ ಒಂದು ಪುಟ್ಟ ಮನೆ ಮಾಡಿದ. ಮತ್ತೆರಡು ದಿನ ಬಿಟ್ಟು ಬಂದು ತಾನೀಗ ಆ ಎಲ್ಲ ರೀತಿಯ ಬಿಸ್ನೆಸ್ ಗಳನ್ನು ಬಿಟ್ಟಿರುವುದಾಗಿಯೂ, ಕಷ್ಟಪಟ್ಟು ದುಡಿದು ನಿನ್ನನ್ನು ನೋಡಿಕೊಳ್ಳುತ್ತೇನೆ ಎಂಬುದಾಗಿಯೂ ಹೇಳಿ ಗಂಗೆಯನ್ನು ನಂಬಿಸಿ ಮತ್ತೆ ಬೆಂಗಳೂರಿಗೆ ಕರೆದುಕೊಂಡು ಹೊರಟ. ಸದ್ಯ ಗಂಡ ಹೆಂಡತಿ ಚೆನ್ನಾಗಿದ್ದರೆ ಸಾಕೆಂದು ಹಪಹಪಿಸುತ್ತಿದ್ದ ಅಪ್ಪ ಅವ್ವ, ವರ್ಷ ಕಳೆಯುವವರೆಗೂ ಮಗುವನ್ನು ತಾವೇ ಸಾಕಿಕೊಡುವುದಾಗಿ ಹೇಳಿ ತಮ್ಮ ಬಳಿಯೆ ಎಂಟು ತಿಂಗಳ ಕೂಸನ್ನು ಇರಿಸಿಕೊಳ್ಳಲು ನಿರ್ಧರಿಸಿದ್ದರು. ಅದಕ್ಕೆ ಸರಿಯಾಗಿ ಮೋಹನನು ಅವರೊಂದಿಗೆ ದನಿಗೂಡಿಸಿ ತನ್ನ ಸದ್ಯದ ಹೆಗಲ ಭಾರವನ್ನು ಒಂದಷ್ಟು ಇಳಿಸಿ ಬೆಂಗಳೂರಿನತ್ತ ಮುಖ ಮಾಡಿದ.
ಗಂಡನ ಮಾತಿಗೆ ಕಟ್ಟು ಬಿದ್ದು ಮಗುವನ್ನು ಬಿಡಲಾರದೆ ಬಿಟ್ಟು ಬೆಂಗಳೂರು ಸೇರಿದ ಗಂಗೆಗೆ ಹೆಚ್ಚು ದಿನ ತನ್ನೊಡಲ ಕುಡಿಯನ್ನು ಬಿಟ್ಟಿರಲಾಗಲಿಲ್ಲ. ಗಂಡನೊಂದಿಗೆ ಇರುತ್ತಿದ್ದ ಸುಖದ ಗಳಿಗೆಗಳಲ್ಲೆಲ್ಲ ಧುತ್ತನೆ ಮಗುವಿನ ನೆನಪಾಗಿ ಎದೆ ಕಟ್ಟಿದಂತಾಗಿ ಬಿಡುತ್ತಿತ್ತು. ಕೂದಲು ಕೊಂಕದಂತೆ ಬಹಳ ಮುಚ್ಚಟೆಯಿಂದ ನೋಡಿಕೊಳ್ಳುತ್ತಿದ್ದ ಗಂಡನನ್ನು ಮತ್ತಷ್ಟು ನಂಬಿದ ಗಂಗೆ, ಮೂರು ತಿಂಗಳು ಕಳೆಯುವುದರೊಳಗೆ ಹಠಹಿಡಿದು ನಾರಿಪುರದಿಂದ ಮಗುವನ್ನು ಕರೆಸಿಯೇ ಬಿಟ್ಟಳು.
ಮಗುವನ್ನು ಬಿಟ್ಟು ಹೋಗಲು ಬಂದ ಗಂಗೆಯ ತಮ್ಮ ಶಂಕರನನ್ನು ಕೆಲವು ದಿನಗಳ ಮಟ್ಟಿಗೆ ತಮ್ಮೊಂದಿಗೆ ಇರಿಸಿಕೊಂಡ ಮೋಹನ, ನಿಧಾನವಾಗಿ ತನ್ನ ಮೊದಲಿನ ಚಾಳಿ ಆರಂಭಿಸಿದ. ಹೊಸ ಏರಿಯ ವಾದ್ದರಿಂದ ಮೊದಮೊದಲು ಗಂಗೆ ಒಬ್ಬಳನ್ನೆ ಬಿಟ್ಟು ಅತ್ತಿತ್ತ ಹೋಗಲು ಹಿಂಜರಿಯುತ್ತಿದ್ದ ಮೋಹನ, ಶಂಕರ ಮನೆಗೆ ಬಂದ ಮೇಲೆ ಬಿಡುಬೀಸಾಗಿ ಓಡಾಡಿ ಕೊಂಡು, ಎರಡು ಮೂರು ದಿನಕ್ಕೊಮ್ಮೆ ಮನೆಯತ್ತ ಬಂದು ಹೋಗುತ್ತಿದ್ದ. ಆಗಾಗ ಬಾವನ ಹಿಂದೆ ಬೈಕಿನಲ್ಲಿ ಕೂತು ಜಾಲಿ ರೌಂಡ್ ಹೊಡೆಯುತ್ತ ಬೆಂಗಳೂರಿನ ಗಲ್ಲಿಗಳು, ಲಾಡ್ಜ್ ಗಳನ್ನು ಹೊಕ್ಕಾಡಿ ಅಲ್ಲಿ ತೆರೆದು ಕೊಳ್ಳುತ್ತಿದ್ದ ವಿಸ್ಮಯ ಜಗತ್ತಿಗೆ ಬೆರಗುಗೊಳ್ಳುತ್ತಿದ್ದ ಶಂಕರ, ಕೆಲವೇ ದಿನದಲ್ಲಿ ಮೋಹನನ ಬಲಗೈ ಬಂಟನಂತೆ ಲಾಡ್ಜ್ ಗಳ ಮುಂದೆ ಕಲೆಕ್ಷನ್ನಿಗೆ ನಿಲ್ಲ ತೊಡಗಿದ್ದ. ಇದರ ವಾಸನೆ ಹಿಡಿದ ಗಂಗೆ ನಿಂತ ಕಾಲಿನ ಮೇಲೆ ಶಂಕರನನ್ನು ನಾರಿಪುರಕ್ಕೆ ಸಾಗಹಾಕಿದಳು.
ಪ್ರತೀ ದಿನ ಎದ್ದಾಗಿನಿಂದ ಕೈ ಬಿಡದೆ ಒಂದೇ ಸಮನೆ ರಚ್ಚೆ ಹಿಡಿದು ಕೂರುತ್ತಿದ್ದ ಮಗುವನ್ನು ಕಟ್ಟಿಕೊಂಡು ಹೈರಾಣಗುತ್ತಿದ್ದ ಗಂಗೆ ವಾರವಾದರು ಇತ್ತ ತಲೆಹಾಕದ ಗಂಡನ ಬಗ್ಗೆ ಮುನಿದು ನಿಂತಳು. ಮೊದಲಿನಷ್ಟು ಸಮಾಧಾನವಾಗಲಿ, ಕಾಯುವ ತಾಳ್ಮೆಯಾಗಲಿ ಅವಳಲ್ಲಿ ಉಳಿದಿರಲಿಲ್ಲ. ಕೈಯಲ್ಲಿ ಬಿಡಿಗಾಸು ಇಲ್ಲದ ಆ ಒಂದು ದಿನ, ಜ್ವರದಿಂದ ನರಳಿ ಬೆಂಡಾಗಿದ್ದ ಮಗುವನ್ನು ಕಂಕುಳಲ್ಲಿ ಹಿಡಿದು ಎರಡು ಮೂರು ಬಸ್ಸು ಬದಲಾಯಿಸಿ ಸುಕನ್ಯಾಳ ಮನೆಯ ಕದ ತಟ್ಟಿದಳು. ಮೊದಲಿನ ಬಿಸಿ ಇಲ್ಲದೆ ತಣ್ಣಗಾಗಿದ್ದ ಬಿಸಿನೆಸ್ ನಿಂದಾಗಿ ಸುಕನ್ಯಾ ಆ ದೊಡ್ಡ ಮನೆಯನ್ನು ತೊರೆದು ಮುಂದಿನ ಬೀದಿಯಲ್ಲಿದ್ದ ಚಿಕ್ಕ ಮನೆ ಹಿಡಿದಿದ್ದ ವಿಷಯ ತಿಳಿದು, ಗಂಗೆಯ ಮನಸ್ಸಿಗೆ ತುಸು ನೆಮ್ಮದಿ ಎನ್ನಿಸಿತಾದರು, ಒಳಗೊಳಗೆ ಗಂಡ ಮತ್ಯಾವ ಮಾರ್ಗ ಹಿಡಿದಿರುವನೋ ಎನ್ನುವ ಆತಂಕ ಹೆಡೆಯಾಡುತ್ತಿತ್ತು.
ಇವೇ ಆತಂಕ, ಗೊಂದಲಗಳೊಂದಿಗೆ ಅಳುಕುತ್ತಲೇ ಸುಕನ್ಯಾಳ ಮನೆಯ ಬಾಗಿಲು ತಟ್ಟಿದಳು ಗಂಗೆ. ಮಗು ಹಿಡಿದು ತನ್ನೆದುರು ನಿಂತ ಗಂಗೆಯನ್ನು ನೋಡಿದ ಸುಕನ್ಯಾಳಿಗೆ ಗರಬಡಿದಂತಾಯಿತು. ತನಗೆ ಒಂದು ಮಾತು ಹೇಳದೆ ಗಂಗೆಯನ್ನು ಮರಳಿ ಕರೆದುಕೊಂಡು ಬಂದಿರುವ ಮೋಹನನ ಬಗ್ಗೆ ನಖಶಿಖಾಂತ ಉರಿದು ಹೋದಳು. ಗಂಡನನ್ನು ವಿಚಾರಿಸಿದ ಗಂಗೆಯನ್ನು ಬಾಗಿಲಲ್ಲಿಯೇ ನಿಲ್ಲಿಸಿ ಹೀನಮಾನವಾಗಿ ಬೈದು ಹಿಂದಕ್ಕಟ್ಟಲು ನೋಡಿದಳು ಸುಕನ್ಯಾ. ಮಗುವಿನ ಜ್ವರದ ತಾಪ ಗಂಗೆಯನ್ನು ಸುಮ್ಮನಿರಲು ಬಿಡಲಿಲ್ಲ. ಕಂಕುಳಿನಲ್ಲಿದ್ದ ಕೈಗೂಸನ್ನು ಒಂದು ಬದಿಗೆ ಕೂರಿಸಿ, ಸುಕನ್ಯಾಳ ಮುಂದಲೆ ಜಗ್ಗಿ ಬಾಗಿಲ ಹೊರಗೆ ಎಳೆದು ಹಾಕಿದ ಗಂಗೆ, ಮೋಹನನಿಗಾಗಿ ಮನೆಯನ್ನೆಲ್ಲ ತಡಕಾಡಿದಳು.
ಮತ್ತೆ ಅದೇ ಸ್ಥಿತಿಗೆ ಬಂದು ನಿಂತ ತನ್ನ ಬದುಕನ್ನು ನೆನೆದು ಕ್ಷಣ ಹುಚ್ಚಿಯಂತಾದಳು. ಒಂದು ಕಡೆಯಿಂದ ಆ ಮನೆಯ ಸಾಮಾನು ಸರಂಜಾಮಗಳನ್ನೆಲ್ಲ ಚೆಲ್ಲಾಪಿಲ್ಲಾಗಿಸಿದಳು. ಕೈಗೆ ಸಿಕ್ಕ ಒಂದಷ್ಟು ಪುಡಿಗಾಸನ್ನು ತೆಗೆದುಕೊಂಡು, ಉಸಿರುಗಟ್ಟಿ ಅಳುತ್ತಿದ್ದ ಮಗುವನ್ನೆತ್ತಿ ಕೊಂಡು ಆ ಮನೆಯ ಒಂದೆರಡು ಬೀದಿಯಾಚೆಗಿದ್ದ ಕ್ಲಿನಿಕ್ಕಿನತ್ತ ಧಾವಿಸಿದಳು. ಡಾಕ್ಟರ್ ಕೊಟ್ಟ ಔಷಧಿ ಖರೀದಿಸಿ ಮಗುವಿಗೆ ಕುಡಿಸಿದಳು. ಪಕ್ಕದಲ್ಲಿಯೇ ಇದ್ದ ಬೇಕರಿಗೆ ಹೋಗಿ ಒಂದೆರಡು ಬನ್ ಕೊಂಡು ಹಾಲಿನೊಂದಿಗೆ ಅದ್ದಿ ಮಗುವಿಗೂ ತಿನ್ನಿಸಿ ತಾನು ತಿಂದಳು.
ಆ ಅಪರಿಚಿತ ಊರು, ಜನ, ಕೊಳಚೆ ಗುಂಡಿಯಲ್ಲಿ ಬಿದ್ದಂತಹ ತನ್ನ ಬದುಕು ಎಲ್ಲವೂ ಗಂಗೆಯನ್ನು ಹೈರಾಣಗೊಳಿಸಿತ್ತು. ಆ ಕ್ಷಣ ತನ್ನ ಜೀವವನ್ನು ನೀಗಿಕೊಂಡು ಬಿಡಬೇಕೆಂಬ ಉತ್ಕಟವಾದ ಹಂಬಲ ಅವಳೊಳಗೆ ಹೆಡೆ ಎತ್ತಿ ನಿಂತಿತು. ಜ್ವರ ಮತ್ತು ಹಸಿವಿನಿಂದ ಬಳಲಿ ಆಗಷ್ಟೇ ತಣ್ಣಗೆ ತನ್ನ ಹೆಗಲ ಮೇಲೆ ಕಣ್ಣು ಮುಚ್ಚಿದ್ದ ಮೊಗುವನ್ನೊಮ್ಮೆ ನೋಡಿ ಕೊಂಡಳು. ಕರುಳು ಕಿತ್ತು ಬಂದಂತಾಯ್ತು.
ಇನ್ನೇನು ಬಾರಿನ ಮುಂದೆ ಸರಿದು ಹೋಗಬೇಕು ಎನ್ನುವಾಗ, ಯಾವಾಗಲೂ ಚಂದ್ರಹಾಸ ಹೇಳುತ್ತಿದ್ದ “ಹೆಂಡ ನೋವುನ್ನೆಲ್ಲ ಮಾಯ್ಸೋ ಮಾಯ್ಕಾರ” ಎನ್ನುವ ಮಾತು ತಟ್ಟನೆ ನೆನಪಾಯಿತು. ಉಳಿದ ಇಪ್ಪತ್ತು ರೂಪಾಯಿಗಳನ್ನು ಹಿಡಿದು ಬಾರಿನತ್ತ ಹೆಜ್ಜೆ ಹಾಕಿದಳು, ತನ್ನ ಕೈಲಿದ್ದ ಹಣವನ್ನೆಲ್ಲ ಕೌಂಟರಿನಲ್ಲಿದ್ದವನ ಕೈಗೆ ಕೊಟ್ಟು “ಇದುಕ್ಕೆ ಎಷ್ಟ್ ಬತ್ತದೊ ಅಷ್ಟು ಬ್ರಾಂಡಿ ಕೊಡಣ್ಣ” ಎಂದು ಕೇಳಿ ಅವನು ಕೈಗೆ ರವಾನಿಸುವ ಮುಂಚೆಯೆ ಕಿತ್ತುಕೊಂಡು ಗಟಗಟನೆ ಇಡೀ ಬಾಲಿಯನ್ನೆ ಮೇಲೆತ್ತಿ ಮುಗಿಸಿ ಪಕ್ಕಕ್ಕೆಸೆದಳು. ಸ್ವಲ್ಪ ಹೊತ್ತಿಗೆ ಕಣ್ಣೆಲ್ಲ ಮಂಜಾಗಿ ತಲೆ ಗಿರುಗುಟ್ಟ ತೊಡಗಿತ್ತು ” ಇವತ್ತೊಂದ್ ಕತೆ ಆಗೆ ಬುಡ್ಲಿ ಆ ಸೂಳೆ ಮುಂಡೆನ ಸುಮ್ನೆ ಬುಡಕಿಲ್ಲ. ನನ್ ಗಂಡುನ್ನ ಅದೆಂಗ್ ಕೂಡಾಕೊತಳೊ ನಾನು ನೋಡೆ ಬುಡ್ತಿನಿ. ಆ ಬಡ್ಡಿ ಮಗುನ್ ಕೆಪ್ ಕೆಪಾಲುಕ್ಕೆ ಹೊಡ್ಕೊಂಡು ಎಳ್ಕೊಂಡೋಯ್ತಿನಿ ” ಎಂದು ತೊದಲುತ್ತಾ ಅಡರು ಬಡರು ಕಾಲಾಕುತ್ತಾ ಸುಕನ್ಯಾಳ ಮನೆಯತ್ತ ಹೊರಟಳು….
ವಾಣಿ ಸತೀಶ್
ಕನ್ನಡ ಸಾಹಿತ್ಯ ಮತ್ತು ಭರತನಾಟ್ಯದಲ್ಲಿ ಸ್ನಾತಕೋತ್ತರ ಪದವಿ ಹಾಗೂ ನೀನಾಸಂನಲ್ಲಿ ರಂಗ ಶಿಕ್ಷಣ ಪಡೆದಿದ್ದಾರೆ. ಸದ್ಯ ತಿಪಟೂರಿನ ʼಭೂಮಿ ಥಿಯೇಟರ್ʼ ಹಾಗೂ ಶ್ರೀ ನಟರಾಜ ನೃತ್ಯ ಶಾಲೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಹಿಂದಿನ ಕಂತು-http://“ಹಾಳ್ ಮನೆ ದೇವ್ರುಗೊಳೆ ಎಲ್ರು ಎತ್ತಗೋಗ್ ಸತ್ತಿದಿರೋ…https://kannadaplanet.com/hal-mane-devrugole-elru-ettagog-sattidiro/