ಬೆಂಗಳೂರು: ರಾಜ್ಯದ ಜಲಾಶಯಗಳು ತುಂಬಿ, ನದಿಗೆ ನೀರು ಬಿಡುತ್ತಿರುವ ಹಿನ್ನೆಲೆಯಲ್ಲಿ ನದಿ ಪಾತ್ರದ ಜನರು ತಮ್ಮ ಮನೆಗಳಿಂದ ಹೊರಬಂದು ಗಂಜಿಕೇಂದ್ರ ಸೇರುವಂತೆ ಅಧಿಕಾರಿಗಳು ಸಾರ್ವಜನಿಕರ ಮನವೊಲಿಸುತ್ತಿದ್ದಾರೆ.
ಆಲಮಟ್ಟಿ ಜಲಾಶಯದ ಹೊರ ಹರಿವು ಹೆಚ್ಚಳವಾದ ಹಿನ್ನೆಲೆಯಲ್ಲಿ ಕೃಷ್ಣಾ ನದಿ ಪಾತ್ರದ ಜನರ ಸ್ಥಳಾಂತರಕ್ಕೆ ಸೂಚನೆ ನೀಡಲಾಗಿದೆ. ಡಂಗೂರ ಬಾರಿಸುವ ಮೂಲಕ ಗ್ರಾಮಸ್ಥರಿಗೆ ಎಚ್ಚರಿಕೆ ನೀಡಲಾಗುತ್ತಿದೆ. ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲೂಕಿನ ವರಗುಡದಿನ್ನಿ, ಕಜಗಲ್ ಗ್ರಾಮಗಳಲ್ಲಿ ಜಾಗೃತಿ ಕಾರ್ಯ ನಡೆಯುತ್ತಿದೆ.
ಹಾಸನ ಜಿಲ್ಲೆ ಸಕಲೇಶಪುರದ ಆಜಾದ್ ರಸ್ತೆ ಸೇರಿದಂತೆ ಹಲವು ತಗ್ಗುಪ್ರದೇಶಗಳಿಗೆ ಅಧಿಕಾರಿಗಳು ತೆರಳಿ ಮನೆ ಖಾಲಿ ಮಾಡುವಂತೆ ಸೂಚಿಸುತ್ತಿದ್ದಾರೆ. ಮನೆ ಮುಂದೆ ನೀರು ಬಂದರೂ ಸ್ಥಳೀಯರು ಮನೆ ಬಿಟ್ಟು ಹೊರಡದ ಹಿನ್ನೆಲೆಯಲ್ಲಿ ಎಲ್ಲರನ್ನು ಬಲವಂತವಾಗಿ ಹೊರಹಾಕಿ ಬಾಗಿಲುಗಳಿಗೆ ಬೀಗ ಜಡಿಯುವುದಾಗಿ ತಹಸೀಲ್ದಾರ್ ಮೇಘನಾ ಸ್ಥಳಕ್ಕೆ ತೆರಳಿ ಎಚ್ಚರಿಸಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಬ್ರಹ್ಮಗಿರಿ ತಪ್ಪಲು ಪ್ರದೇಶದಲ್ಲೂ ಭಾರೀ ಮಳೆಯಾಗುತ್ತಿದ್ದು, ಚಲಿಸುತ್ತಿದ್ದ ಕಾರಿನ ಮೇಲೆ ಮರವೊಂದು ಉರುಳಿಬಿದ್ದು ಕಾರು ಜಖಂಗೊಂಡಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಕೊಡಗಿನ ಮಡಿಕೇರಿ ತಾಲ್ಲೂಕು ಭಾಗಮಂಡಲದ ತ್ರಿವೇಣಿ ಸಂಗಮ ಭರ್ತಿಯಾಗಿದೆಮ ಕಾವೇರಿ ತನ್ನ ಉಗಮ ಸ್ಥಾನದಲ್ಲೇ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.
ಕೃಷ್ಣಾ ನದಿ – ಘಟಪ್ರಭಾ ನದಿ ಪ್ರವಾಹ ಹಿನ್ನೆಲೆಯಲ್ಲಿ ಜಮಖಂಡಿ ಉಪವಿಭಾಗದ ಜಮಖಂಡಿ, ರಬಕವಿ, ಬನಹಟ್ಟಿ, ಮುಧೋಳ ತಾಲ್ಲೂಕುಗಳ ಶಾಲೆಗಳಿಗೆ ಉಪವಿಭಾಗಾಧಿಕಾರಿ ಶ್ವೇತಾ ಬೀಡಿಕರ್ ಆದೇಶ ಹೊರಡಿಸಿದ್ದಾರೆ. ಮುಧೋಳ ತಾಲೂಕಿನ ಮಿರ್ಜಿ, ಜಾಲಿಭೇರಿ, ಚೆನ್ನಾಳ, ಅಂತಾಪುರದ ಕಿರು ಸೇತುವೆಗಳು ಜಲಾವೃತಗೊಂಡಿವೆ. ಪ್ರವಾಹದಲ್ಲಿ ಸಿಲುಕಿದ್ದ ಮಿರ್ಜಿ ಗ್ರಾಮದ 6 ಕುಟುಂಬಗಳನ್ನು ಸ್ಥಳಾಂತರಗೊಳಿಸಿ ಕಾಳಜಿ ಕೇಂದ್ರದಲ್ಲಿ ಊಟ ಮತ್ತು ವಸತಿ ವ್ಯವಸ್ಥೆ ಒದಗಿಸಲಾಗಿದೆ.
ಮಹಾಮಳೆಯಿಂದಾಗಿ ಬೆಳಗಾವಿಯ ಹಿಡಕಲ್ ಡ್ಯಾಂ ತುಂಬಿದ್ದು, ಎಲ್ಲ ಗೇಟ್ ಗಳನ್ನು ತೆರೆದು ನೀರು ಬಿಡಲಾಗುತ್ತಿದೆ.
ಶಿವಮೊಗ್ಗ ಜಿಲ್ಲೆಯಾದ್ಯಂತ ಮಳೆಯ ಆರ್ಭಟ ಮುಂದುವರೆದಿದ್ದು, ಹೊಸನಗರ, ಸಾಗರ ತಾ. ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಹಾಸನ ಜಿಲ್ಲೆ ಬೇಲೂರಿನಲ್ಲಿ ನಿರಂತರ ಮಳೆಗೆ ಮನೆಗೋಡೆ ಕುಸಿದು ಅವಘಡ ಸಂಭವಿಸಿದೆ. ಬೇಲೂರು ತಾ. ಅರೇಹಳ್ಳಿ ಗ್ರಾಮದಲ್ಲಿ ಆಸಿಯಾ ಬಾನು ಎಂಬುವವರ ಮನೆ ಕುಸಿದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.