ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಪರಿಣಾಮವಾಗಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ನಿನ್ನೆ ಮಧ್ಯರಾತ್ರಿಯಿಂದ ಮಳೆ ಸುರಿಯುತ್ತಿದೆ.
ಬೆಳಿಗ್ಗೆ 7-45ರವರೆಗೆ ದಕ್ಷಿಣ ಕನ್ನಡದಲ್ಲಿ ಅತಿಹೆಚ್ಚು ಅಂದರೆ 148 ಮಿ.ಮೀ ನಷ್ಟು ಮಳೆಯಾಗಿದ್ದರೆ ಉಡುಪಿಯಲ್ಲಿ 9.5 ಮಿ.ಮೀ ಮಳೆಯಾಗಿದೆ.
ಶಿವಮೊಗ್ಗ, ಮಂಡ್ಯ, ಮೈಸೂರು, ಕೊಡಗು, ಚಿಕ್ಕಮಗಳೂರು, ದಾವಣಗೆರೆ, ಬೆಂಗಳೂರು, ಚಾಮರಾಜನಗರ, ತುಮಕೂರು, ಚಿತ್ರದುರ್ಗ, ಹಾವೇರಿ, ರಾಯಚೂರು, ರಾಮನಗರ,ಕಲ್ಬುರ್ಗಿ, ಹಾಸನ, ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳಲ್ಲಿ ಕಳೆದ 24 ಗಂಟೆಗಳಲ್ಲಿ ಉತ್ತಮ ಮಳೆಯಾಗಿದೆ. ಮಳೆ ಮಾರುತಗಳು ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳನ್ನೂ ಪ್ರವೇಶಿಸಿದ್ದು ಮುಂದಿನ ಮೂರು-ನಾಲ್ಕು ದಿನಗಳಲ್ಲಿ ಹೆಚ್ಚಿನ ಮಳೆಯಾಗುವ ಸಂಭವವಿದೆ.
ನಿನ್ನೆ ನಡುರಾತ್ರಿಯಿಂದ ಬೆಂಗಳೂರಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಇಂದು ಬೆಳಿಗ್ಗೆ ಕೆಲಸ ಕಾರ್ಯಗಳಿಗೆ ಹೋಗುವ ಜನರು ಮಳೆಯಿಂದಾಗಿ ಪರದಾಡುವಂತಾಯಿತು.
ಮುಂದಿನ ಐದು ದಿನಗಳ ಕಾಲ
ರಾಜ್ಯದ ಕರಾವಳಿ ಮತ್ತು ಕರಾವಳಿ ಜಿಲ್ಲೆಗಳಿಗೆ ಹೊಂದಿಕೊಂಡಂತಿರುವ ಮಲೆನಾಡು ಜಿಲ್ಲೆಗಳಿಗೆ ಮತ್ತು ದಕ್ಷಿಣ ಒಳನಾಡು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಎಚ್ಚರಿಕೆಯನ್ನು ಘೋಷಿಸಿದೆ.
ಅಕ್ಟೋಬರ್ 17 ರಂದು ಗುಡುಗು ಮಿಂಚು & ಜೋರಾದ ಗಾಳಿಯೊಂದಿಗೆ ಭಾರೀ ಪ್ರಮಾಣದಲ್ಲಿ ಮಳೆಯಾಗುವ ಸಾಧ್ಯತೆಯಿದೆ ಎಂದು ಇಲಾಖೆ ಹೇಳಿದ್ದು ಆರೆಂಜ್ಅಲರ್ಟ್ ಘೋಷಿಸಿದೆ.